ಭಾಸ್ಕರ ಹೆಚ್ಚೋ.? ಚಂದಿರ ಹೆಚ್ಚೊ.?
ಕಡಲು ಹಿರಿದೊ? ಹೊನಲು ಹಿರಿದೊ.?
ತಾಯಿ ಹೆಚ್ಚೋ.? ತಂದೆ ಹೆಚ್ಚೋ.?
ಗದ್ಯ ಹಿರಿದೋ.? ಪದ್ಯ ಹಿರಿದೋ.?
ಸ್ನೇಹವೋ ಮುಖ್ಯ? ಪ್ರೀತಿ ಮುಖ್ಯ?
ಯೋಗ ವೇದ್ಯವೋ? ಯೋಗ್ಯತೆ ವೇದ್ಯ.?
ತೈಲವೋ ಮುಖ್ಯ.? ಬತ್ತಿಯೇ ಮುಖ್ಯ.?
ನುಡಿ ವೇದ್ಯವೊ.? ನಡೆಯೇ ವೇದ್ಯ.?
ಉತ್ತರಿಸಲಾಗದ ಇಕ್ಕಟ್ಟು ಬಿಕ್ಕಟ್ಟು
ಕಾರಣ ಪ್ರಶ್ನೆಯಲ್ಲಿಯೇ ಎಡವಟ್ಟು
ಏಕೀ ಬೇಡದ ಗೋಜಲು ಗೊಂದಲ
ಅರಿತರೆ ಮಹತ್ವ ಉತ್ತರಗಳು ಸಲಿಲ.!
ಹಗಲಿಗೆ ಸೂರ್ಯ ಇರುಳಿಗೆ ಚಂದ್ರ
ಮಮತೆಗೆ ಅಮ್ಮ ಭದ್ರತೆಗೆ ಅಪ್ಪ
ಅವರವರಿಗೆ ಅವರದೆ ಸತ್ವ ಮಹತ್ವ
ಅರ್ಥೈಸಿ ತಿಳಿದರೆ ಸಾಕು ಪ್ರಕೃತಿತತ್ವ.!
ಉರಿಯಲು ಬತ್ತಿ ಪೊರೆಯಲು ತೈಲ
ತಲುಪಲು ಹಾದಿ ಕ್ರಮಿಸಲು ನಡಿಗೆ
ಪ್ರತಿಯೊಂದಕು ಉಂಟಿಲ್ಲಿ ಪ್ರಾಶಸ್ತ್ಯ
ಆಯಾ ಘಳಿಗೆಗೆ ಅದರದೇ ಮೌಲ್ಯ.!
ಇಲ್ಲಿ ಯಾವುದು ಕೀಳಿಲ್ಲ ಮೇಲಿಲ್ಲ
ಕನಿಷ್ಟ ಗರಿಷ್ಟಗಳ ಭೇದವೇ ಇಲ್ಲಿಲ್ಲ
ನಮ್ಮಿಂದಷ್ಟೇ ಇಲ್ಲ ಸಲ್ಲದ ಹೋಲಿಕೆ
ತುಲನೆ ತಾರತಮ್ಯದ ನಿತ್ಯ ಚಡಪಡಿಕೆ.!
ಬುವಿಯಲಿ ಪ್ರತಿ ಜೀವ ಚರಾಚರಕೂ
ಬದುಕಲಿ ಪ್ರತಿ ಭಾವ ಬಾಂಧವ್ಯಕೂ
ಇಹುದು ತನ್ನದೇ ಸ್ಥಾನಮಾನ ಗೆಳೆಯ
ಮತ್ತೇಕೆ ತೂಗಿ ನೋಡುವ ತಾಪತ್ರಯ.!
ಸೃಷ್ಟಿ ಹಿಂದಿನ ನಿಯಾಮಕ ಬಲುಚತುರ
ಕಣ ಕಣದಲ್ಲಿಹುದು ಪಕ್ಕಾ ಲೆಕ್ಕಾಚಾರ
ಅಂದಾಜಿಸಲಾಗದ ಬುದ್ದಿವಂತ ವಿಧಾತ
ಅಣುಅಣುವಲು ಇಟ್ಟಿಹ ಮರ್ಮ ಅನಂತ.!
-ಎ.ಎನ್. ರಮೇಶ್ ಗುಬ್ಬಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ