ಜೋಕಾಲಿ ಹಬ್ಬ, ಉ೦ಡಿಯ ಹಬ್ಬ,ಅಣ್ಣ ತಂಗಿಯರ ಹಬ್ಬ ಜೊತೆಗೆ ವರ್ಷದ ಮೊದಲ ಹಬ್ಬ ಎಂಬ ಗರಿ ಇರುವ ಪಂಚಮಿ ಹಬ್ಬ, ಜನಪದರ ಪಾಲಿಗೆ ಸಂಭ್ರಮ ಸಡಗರದ ಹಬ್ಬ.
ಜನಮೇಜಯ ರಾಜನ ಸರ್ಪಯಜ್ಞ ಮುಗಿದ ದಿನ ಶ್ರಾವಣದ ಪಂಚಮಿ.ಬಾಲ ಕೃಷ್ಣ ಕಾಳಿಂಗಮರ್ದನ ಮಾಡಿದ್ದು ಕೂಡ ಅಂದೇ.ಜೊತೆಗೆ ಇನ್ನೂ ಹಲವಾರು ಕಥೆಗಳು ಪುರಾಣಗಳಲ್ಲಿ ಉಲ್ಲೇಖವಾಗಿದೆ. ನಮ್ಮ ಜನಪದರು ತಮ್ಮ ಒಕ್ಕಲುತನದ ಮೂಲ ಉದ್ಯೋಗದಲ್ಲಿ ಸರ್ಪದ ಸಾಂಗತ್ಯವನ್ನು ಹೊಂದಿರುತ್ತಾರೆ.ಎಷ್ಟೋ ಬಾರಿ ಅವರ ಹೊಲದಲ್ಲಿ ಹಾವು ಇದ್ದರೆ ಅಲ್ಲಿ ಕಳ್ಳಕಾಕರ ಭಯ ಕಡಿಮೆ ಜೊತೆಗೆ ಹುಳ ಹುಪ್ಪಟೆಗಳನ್ನು ಹಾವು ತಿನ್ನುವುದರಿಂದ ಬೆಳೆಯ ರಕ್ಷಣೆ ಕೂಡ ಸಾಧ್ಯ.ಹಾಗಾಗಿ ರೈತ ಹಾವಿಗೆ ಕೃತಜ್ಞತೆ ಸಲ್ಲಿಸಲು ಈ ಹಬ್ಬವನ್ನು ಆಚರಿಸುತ್ತಾನೆ ಎಂಬುದು ಜನಪದರ ಅಭಿಮತ.
ಕಲ್ಲಿನ ನಾಗರ ಹಾವಿಗೆ ಮೊದಲ ದಿನ ತನಿ ಎರೆಯುವ ಮೂಲಕ ಎರಡನೇ ದಿನ ಹಾಲು ಹಾಕುವುದರ ಮೂಲಕ ಮತ್ತು ಕಡಲೆ ಉಸುಳಿ, ಅರಳಿಟ್ಟು ಒಗ್ಗರಣೆ ಹಲಬಗೆಯ ಸೇಂಗಾ ಎಳ್ಳು ಮತ್ತು ಕೊಬ್ಬರಿಯ ಚಿಗಳಿಗಳನು ನೈವೇದ್ಯವಾಗಿರಿಸಿ ಈ ಹಬ್ಬವನ್ನು ಆಚರಿಸುತ್ತಾರೆ.
ಸತತ 3ದಿನಗಳ ಆಚರಣೆಯ ಈ ಹಬ್ಬಕ್ಕೆ ತಯಾರಿ ಹಲವು ದಿನಗಳದು.ಇಡೀ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ತೊಳೆದು, ಸುಣ್ಣ ಕೆಮ್ಮಣ್ಣಿನ ಪಟ್ಟಿ ಬಳಿದು ಲಕಲಕ ಎನ್ನುವಂತೆ ಮಾಡುತ್ತಾರೆ.ಹಾಸಿಗೆ ಹೊದಿಕೆಗಳನ್ನು ತೊಳೆದು ಸ್ವಚ್ಛ ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಸೋಮವಾರ, ಮಂಗಳವಾರ, ಶುಕ್ರವಾರಗಳಂದು ರೊಟ್ಟಿ ಮಾಡದೆ ಇರುವ ಕಾರಣ ರೊಟ್ಟಿಯೇ ಮುಖ್ಯವಾದ ಆಹಾರವಾಗಿರುವ ಉತ್ತರ ಕರ್ನಾಟಕದ ಜನರು ಜೋಳದ ಮತ್ತು ಸಜ್ಜೆ ಹಿಟ್ಟಿನ ಎಳ್ಳು ಹಚ್ಚಿದ ರೊಟ್ಟಿ ಗಳನ್ನು ತಯಾರಿಸಿ ಎತ್ತಿಟ್ಟುಕೊಳ್ಳುತ್ತಾರೆ. ಹುರಿದ ಸೇಂಗಾ, ಗುರೆಳ್ಳು, ಅಗಸಿ ಮತ್ತು ಪುಠಾಣಿಗಳ ಒಣ ಚಟ್ನಿಪುಡಿಗಳನ್ನು ಮಾಡಿಕೊಳ್ಳುತ್ತಾರೆ .ಹುರಿದ ಶೇಂಗಾ, ಡಾಣಿ, ಗುಳಿಗೆ ಮತ್ತು ಎಳ್ಳಿನ ಉಂಡಿಗಳನ್ನು ತಯಾರಿಸುತ್ತಾರೆ.ಇನ್ನೂ ಅದೇ ಹುರಿದ ಶೇಂಗಾ ಎಳ್ಳು ಮತ್ತು ಕೊಬ್ಬರಿಯ ಚಿಗಳಿಗಳನ್ನು ಕೂಡ ತಯಾರಿಸಿಟ್ಟುಕೊಳ್ಳುತ್ತಾರೆ.ಈ ಹಬ್ಬದ ಕುರಿತು ಒಂದು ಗಾದೆಯೇ ಇದೆ 'ಪಂಚಮಿ ಹಬ್ಬದ ಸಲುವಾಗಿ ಮಗನನ್ನೇ ಮಾರಿ ಹಬ್ಬಕ್ಕೆ ತಯಾರಿ ಮಾಡಿಕೊಂಡ ತಾಯಿ ನಾಗಪ್ಪನಿಗೆ ಹಾಲು ಹಾಕುವಾಗ ಮಗನಿಗಾಗಿ ಆಸೆ ಪಟ್ಟಳ೦ತೆ' ಎಂದು. ಅತಿಶಯವೆನಿಸಿದರೂ ಪಂಚಮಿ ಹಬ್ಬ ಕೊಂಚ ದುಬಾರಿ.
ಇನ್ನು ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳಿಗೆ ಮೊತ್ತಮೊದಲ ಬಾರಿ ಪಂಚಮಿ ಹಬ್ಬಕ್ಕೆ ತವರಿಗೆ ಕರೆದುಕೊಂಡು ಬರುತ್ತಾರೆ.ಇದು ಆಕೆಯ ಮತ್ತು ಆಕೆಯ ಗಂಡನ ಪಾಲಿಗೆ ಮೊದಲ ಹಬ್ಬ. ಮನೆಯ ಮಗಳು ಮತ್ತು ಅಳಿಯನನ್ನು ಕರೆಸಿ ಅಮವಾಸ್ಯೆಯ ನಂತರದ ಮೂರನೇ ದಿನ ರೊಟ್ಟಿ ಪಂಚಮಿ ಹಬ್ಬವನ್ನು ಆಚರಿಸುತ್ತಾರೆ.ಅಂದು ವಿಶೇಷವಾಗಿ ಎಳ್ಳು ಹಚ್ಚಿದ ರೊಟ್ಟಿ ಮಡಕೆ ಅಥವಾ ಹೆಸರು ಕಾಳಿನ ಉಸುಳಿ, ಹಿಟ್ಟಿನ ಝುಣಕ, ಎಣ್ಣೆ ಬದನೆಕಾಯಿ, ಶೇಂಗಾ ಚಟ್ನಿ ಅಗಸಿ ಚಟ್ನಿ ಗುರೆಳ್ಳ ಚಟ್ನಿ ಗಟ್ಟಿ ಮೊಸರು ಮತ್ತು ಹಲವಾರು ಹಸಿ ತರಕಾರಿಗಳು ಸೇರಿಸಿ ಮಾಡಿದ ಪಚ್ಚಡಿ ಹೀಗೆ ತರಾವರಿ ಅಡುಗೆಗಳನ್ನು ಮಾಡಿ ದೇವರಿಗೆ ಸಮರ್ಪಿಸಿ ಅಕ್ಕ ಪಕ್ಕದ ಮನೆಗಳಿಗೂ ಹಂಚಿ ಮನೆ ಮಂದಿಯೆಲ್ಲ ಊಟ ಮಾಡುತ್ತಾರೆ .
ಮರುದಿನ ಚೌತಿ...ಹುತ್ತದ ನಾಗಕ್ಕೆ ಹಾಲೆರೆದು, ಹಲವು ವಿಧದ ಉಂಡಿಗಳನ್ನು, ಕರಿದ ತಿಂಡಿಗಳನ್ನು ಭೂರಿಭೋಜನದೊಂದಿಗೆ ಹೊಸ ಮದು ಮಕ್ಕಳಿಗೆ ಹಬ್ಬದ ಊಟ ಮಾಡಿಸಿ ಮರಕ್ಕೋ, ಮನೆಯ ಜಂತಿಗೋ ಹಗ್ಗದ ಜೋಕಾಲಿಯನ್ನು ಕಟ್ಟಿ ಆಡುತ್ತಾರೆ.ಕೊಬ್ಬರಿ ಗಿಟುಕಿನಿಂದ ಬುಗುರಿಯನ್ನು ತಯಾರಿಸಿ ಆಡುತ್ತಾರೆ.ಜೋಕಾಲಿಯನ್ನು ಯಾರು ಜೋರಾಗಿ ಜೀಕುವರು ಎಂದು ಬಾಜಿ ಕಟ್ಟುತ್ತಾರೆ.
ಮಧ್ಯಾಹ್ನದ ಊಟದ ನಂತರ ಹಲವು ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಜೀಕುವ ಸ್ಪರ್ಧೆ, ಹೆಚ್ಚು ಉಂಡಿ ತಿನ್ನುವ ಸ್ಪರ್ಧೆ ಹೆಣ್ಣು ಮಕ್ಕಳಿಗೂ ಕೂಡ ಹಲವಾರು ಸ್ಪರ್ಧೆಗಳನ್ನು ಇಟ್ಟು ಎಲ್ಲರೂ ಹಾಡಿ ನಲಿಯುತ್ತಾರೆ. ಹಬ್ಬದ ಮೂರನೆಯ ದಿನವೇ ಪಂಚಮಿ.ಅಂದು ಮನೆಯಲ್ಲೇ ಮಣ್ಣಿನಲ್ಲಿ ತಯಾರಿಸಿದ ನಾಗಪ್ಪನ ಮೂರ್ತಿಗೆ ಪೂಜೆ ಮಾಡಿ ಕೇದಿಗೆ,ಗೋಧಿಯ ಸಸಿ ಮತ್ತು ಹಂಗನೂಲು ತಯಾರಿಸಿ ಹಾಕುತ್ತಾರೆ . ಕೊಬ್ಬರಿ ಗಿಟುಕದಲ್ಲಿ ಬೆಲ್ಲವಿಟ್ಟು , ನಂತರ ತೆಂಗಿನ ಹಾಲಿನಿಂದಲೂ ಅಮ್ಮನ ಪಾಲು ಅಪ್ಪನ ಪಾಲು ಮನೆಯ ಹಿರಿಯರ ಪಾಲು ಮಕ್ಕಳ ಪಾಲು ಮನೆಯ ಸಾಕು ಪ್ರಾಣಿಗಳವರೆಗೆ ಎಲ್ಲರ ಹೆಸರು ಹೇಳುತ್ತಾ ಹಾಲನ್ನೆರೆಯುತ್ತಾರೆ. ಕಡಲೆ ಉಸುಳಿ,ಹಬೆಯಲ್ಲಿ ಬೇಯಿಸಿದ ಕಡುಬು, ಅರಳಿಟ್ಟು ನೈವೇದ್ಯ ಮಾಡಿ ಅದನ್ನೇ ಸೇವಿಸುತ್ತಾರೆ.ಪಂಚಮಿ ಹಬ್ಬದ ಜೊತೆ ಜೊತೆಗೆ ಹೊಸದಾಗಿ ಮದುವೆಯಾದ ಮುತ್ತೈದೆಯರು ಮಂಗಳಗೌರಿ, ಶುಕ್ರಗೌರಿ, ವರಮಹಾಲಕ್ಷ್ಮಿ ವ್ರತಗಳನ್ನು ಪ್ರತಿವಾರವೂ ಶ್ರಾವಣದಲ್ಲಿ ಆಚರಿಸುತ್ತಾರೆ. ಪುರಾಣಗಳ ಪ್ರಕಾರ ಪಂಚಮಿ ಎಂಬ ತಿಥಿಗೆ ಸರ್ಪವೇ ಅಧಿದೇವತೆ. ಆಶ್ಲೇಷಾ ನಕ್ಷತ್ರಕೂ ಸರ್ಪನೇ ಅಧಿಪತಿ. ಹಾವಿನ ಮೈ ಬಿಸಿ ಆಗುವುದರಿಂದ ಪಂಚಾಮೃತ ಮತ್ತು ಎಳನೀರಿನ ಅಭಿಷೇಕ ಮಾಡುವುದು ಅದರ ದೇಹವನ್ನು ತಂಪಾಗಿಸುವದಕ್ಕೆ.ಇದನ್ನೇ ತನಿ ಎರೆಯುವುದು ಎಂದು ಹೇಳುತ್ತಾರೆ.
ಯೋಗಶಾಸ್ತ್ರದ ಸೂತ್ರಗಳನ್ನು ರಚಿಸಿದ ಪತಂಜಲಿ ಮಹರ್ಷಿಗಳು ಕೂಡ ಆದಿಶೇಷನ ಅಪರಾವತಾರ.ಕಶ್ಯಪ ಬ್ರಹ್ಮನ ಪತ್ನಿ ಕದ್ರುವಿನ ಹೊಟ್ಟೆಯಲ್ಲಿ ಜನಿಸಿದ ಅನಂತ ನೇ ಈ ಪತಂಜಲಿ ಮಹರ್ಷಿ ಎಂಬ ಪ್ರತೀತಿ ಇದೆ.
ಇನ್ನೂ ಜನಪದರ ದೃಷ್ಟಿಯಲ್ಲಿ ಹೇಳುವುದಾದರೆ ಶ್ರಾವಣ ಮಾಸ ದಲ್ಲಿ ರೈತರು ಆಗತಾನೆ ತಮ್ಮ ಹೊಲದಲ್ಲಿ ಬಿತ್ತನೆಯ ಕೆಲಸ ಮುಗಿಸಿ ಕೊಂಚ ಬಿಡುವನ್ನು ಅನುಭವಿಸುತ್ತಿರುತ್ತಾರೆ.ಮನಸ್ಸನ್ನು ಪುರಾಣ, ಪುಣ್ಯ ಶ್ರವಣ,ನಾಟಕ, ಭಜನೆ ಮುಂತಾದ ದೈವಿಕ ಕಾರ್ಯಗಳಲ್ಲಿ ತೊಡಗಿಸುತ್ತ ದೈವಾರಾಧನೆ,ಸಾತ್ವಿಕ ಆಹಾರ ಸೇವನೆಯಲ್ಲಿ ತೊಡಗುತ್ತಾರೆ.ಇನ್ನೂ ಕೊಂಚ ಅನುಕೂಲವಿದ್ದರೆ ಪುಣ್ಯಕ್ಷೇತ್ರಗಳ ದರ್ಶನಕ್ಕೆಂದು ಕುಟುಂಬ ಸಹಿತ ಹೊರಡುತ್ತಾರೆ .ಮನೆದೇವರು ಇಷ್ಟದೇವರು ಹೀಗೆ ಹಲವಾರು ಕ್ಷೇತ್ರದರ್ಶನಗಳನ್ನು ಕೂಡ ಈ ತಿಂಗಳಲ್ಲಿ ಮಾಡಿದರೆ ಪುಣ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆ ನಮ್ಮ ಜನಪದರಲ್ಲಿದೆ.
ಎಷ್ಟೇ ಕಾಲ ಬದಲಾಗಿದ್ದರೂ ,ಕೆಲ ಮೂಢನಂಬಿಕೆಗಳನ್ನು ಹೊರತುಪಡಿಸಿ ನಾವೆಲ್ಲರೂ ಸಹ ನಾಗರ ಪಂಚಮಿ ಹಬ್ಬವನ್ನು ಆಚರಿಸುತ್ತಾ ಹಬ್ಬಕ್ಕೆ ಕಳೆ ತರೋಣ ಮನೆಮನಗಳ ಕೊಳೆ ಕಳೆಯೋಣ ಎಂಬ ಆಶಯದೊಂದಿಗೆ
-ವೀಣಾ ಹೇಮಂತ್ ಗೌಡ ಪಾಟೀಲ, ಮುಂಡರಗಿ ಗದಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ