ನಾಗಾರಾಧನೆಯ ಪರ್ವಕಾಲ: "ನಾಗರ ಪಂಚಮಿ"

Upayuktha
0

ಪಂಚಮಿ ಹಬ್ಬವೆಂದರೆ ಸಾಕು ಹೆಣ್ಣು ಮಕ್ಕಳಿಗೆ ಅದೇನೋ ಖುಷಿ.ಮನಸ್ಸು ತವರಿನ ಸುತ್ತಾ ಗಿರಿಕೀ ಹೊಡೆಯುತ್ತಿರುತ್ತದೆ. ತವರಿನ ಪ್ರತಿನಿಧಿ ಅಣ್ಣ ಬರುವನೆಂಬ ಸಂತೋಷದಿಂದ ಕಾಯುತ್ತಿರುತ್ತದೆ ಮನ. ಮನೆಯ ಸೂರಿನಲ್ಲಿ ತೊಟ್ಟಿಕ್ಕುವ ಮುಂಗಾರಿನ ತುಂತುರು ಹನಿಯನ್ನು ಅಣ್ಣ ತಂಗಿಯೊಂದಿಗೆ ಆಡಿದ ನೆನಪಿನ ದೋಣಿ ಆಟ, ಅಮ್ಮ ಡಬ್ಬಿಯ ತುಂಬಾ ಮಾಡಿಟ್ಟ ಉಂಡೆಯನ್ನು ಯಾರಿಗೂ ಕಾಣದಂತೆ ಕದ್ದು ತಿಂದ ತುಂಟತನ ಒಮ್ಮೆಲೇ ಕಣ್ಣ ಮುಂದೆ ಬಣ್ಣದ ಚಿತ್ತಾರದ ಹಾಗೆ ಸುಳಿದು ಹೋಗುವುದು. ಹಬ್ಬದ ದಿನ ಅಕ್ಕ- ತಂಗಿಯರು ಗೆಳತಿಯರು ಸೇರಿ ಆಡಿದ ಜೋಕಾಲಿ ಆಟ, ಪಟವ ಮಾಡಿ ಗಾಳಿಯಲ್ಲಿ ಹಾರಿ ಬಿಟ್ಟ ಆ ದಿನ ಮರೆಯಲು ಸಾಧ್ಯವೇ?


ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಸನಾತನ ಸಂಪ್ರದಾಯದಲ್ಲಿ ಬರುವ ಹಬ್ಬ- ಹರಿದಿನಗಳಲ್ಲಿ "ನಾಗರಪಂಚಮಿ" ಅಥವಾ "ಗರುಡ ಪಂಚಮಿ" ಹಬ್ಬಕ್ಕೆ ಬಹು ಮುಖ್ಯ ಸ್ಥಾನವಿದೆ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪಡುವ ಈ ಹಬ್ಬ ಮುಂದೆ ಬರಲಿರುವ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ಊರಿನ ಜಾತ್ರೆಗೆ, ಎಲ್ಲ ಶುಭ ಆಚರಣೆಗಳಿಗೆ ಮೊದಲ ಮೆಟ್ಟಿಲು.


ಶಿವನ ಆಭರಣ, ವಿಷ್ಣುವಿನ ಹಾಸಿಗೆ, ಗಣಪತಿಯ ಹೊಟ್ಟೆಯ ಪಟ್ಟಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜದ ಚಿಹ್ನೆಯಾಗಿ ಕಾಣಿಸಿಕೊಳ್ಳುವ ನಾಗದೇವರನ್ನು.....


“ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ”


ಎಂಬ ಶ್ಲೋಕದೊಂದಿಗೆ ನಾಗ ದೇವನ ವಿವಿಧ ಹೆಸರುಗಳಾದ  ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುವ ಶುಭ ಪರ್ವದಿನ.


ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಈ ವ್ರತವನ್ನು, ಅಕ್ಕಿಯ ಹಿಟ್ಟಿನಿಂದ ಒಂದು ತೊಟ್ಟಿಲು ಅಥವಾ ಬಟ್ಟಲನ್ನು ಮಾಡಿ, ಅದರಲ್ಲಿ ಹಿಟ್ಟಿನಿಂದ ಮಾಡಿದ ಒಂದು ದೊಡ್ಡ ಮತ್ತು ಒಂದು ಚಿಕ್ಕ ನಾಗದೇವತಾ ವಿಗ್ರಹವನ್ನು ಇರಿಸಿ, ಹುತ್ತದ ಮಣ್ಣು ಮತ್ತು ಹುಲ್ಲುಕಡ್ಡಿಗಳನ್ನೂ ಜತೆಯಲ್ಲಿಟ್ಟು ಆ ಸರ್ಪದೇವತಾ ವಿಗ್ರಹಗಳಿಗೆ ಹಾಲನ್ನು ಪ್ರೋಕ್ಷಿಸಿ, ಅಕ್ಕಿಹಿಟ್ಟು, ಅರಳು, ಕಡಲೆಕಾಯಿ, ಚಿಗಳಿ ತಂಬಿಟ್ಟು, ಸಿಹಿ ಕಡುಬು, ಉದ್ದಿನ ಕಡುಬು ಇವುಗಳನ್ನು ವಿಶೇಷ ನೈವೇದ್ಯವನ್ನಾಗಿ ಸಮರ್ಪಿಸುತ್ತಾರೆ. ಸೋದರ ಸೋದರಿಯರು ಒಂದು ಕಡೆ ಸೇರುತ್ತಾರೆ. ಸಹೋದರಿಯು ಅಣ್ಣ ತಮ್ಮಂದಿರಿಗೆ ದೇವರಿಗೆ ಅರ್ಪಿಸಿದ ಹಾಲು ತುಪ್ಪದಿಂದ ಬೆನ್ನು ತೊಳೆದು ಅಣ್ಣನ ಬಾಳು ಆರೋಗ್ಯ, ಐಶ್ವರ್ಯ, ಸಂತೋಷ ನೆಮ್ಮದಿಯಿಂದ ತುಂಬಿರಲಿ ಎಂದು ಹಾರೈಸಿ ಪರಸ್ಪರ ಅಭಿನಂದನೆ ಸಲ್ಲಿಸಿಕೊಂಡು ಯಥೋಚಿತವಾಗಿ ನಮಸ್ಕಾರವನ್ನೂ ಆಶೀರ್ವಾದವನ್ನೂ ಮಾಡುವುದು ಈ ಹಬ್ಬದ ಪ್ರಮುಖ ವಿಶೇಷತೆ.


ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವಾರು ದಂತಕಥೆಗಳಿವೆ ಅವುಗಳಲ್ಲಿ ಕೆಲವು....


ನಾಗರ ಪಂಚಮಿಗೂ ಭಗವಾನ್ ಶ್ರೀಕೃಷ್ಣನಿಗೂ ಸಂಬಂಧವಿದೆ. ಪುರಾಣ ಕತೆಯೊಂದರ ಪ್ರಕಾರ ಬಾಲ ಕೃಷ್ಣ ಯಮುನಾ ನದಿ ತೀರದಲ್ಲಿ ಆಟವಾಡುತ್ತಿದ್ದಾಗ ನದಿಯಲ್ಲಿ ಜಾರಿ ಬೀಳುತ್ತಾನೆ. ಕೃಷ್ಣ ನದಿಗೆ ಬಿದ್ದ ಸಂದರ್ಭದಲ್ಲಿ ಕಾಳಿಯಾ ಎಂಬ ಹಾವೊಂದು ಆತನ ಮೇಲೆ ದಾಳಿ ನಡೆಸುತ್ತದೆ. ಆದರೆ ದೈವತ್ವದ ಸ್ವರೂಪವಾಗಿದ್ದ ಶ್ರೀಕೃಷ್ಣ ಕಾಳಿಯಾನನ್ನು ಮಣಿಸುತ್ತಾನೆ. ಈತ ಸಾಮಾನ್ಯ ಮಗುವಲ್ಲ ಎಂಬುದನ್ನು ಅರಿತ ಕಾಳಿಯ ಹಾವು ತನ್ನನ್ನು ಬಿಟ್ಟುಬಿಡುವಂತೆ ಕೃಷ್ಣನಲ್ಲಿ ಬೇಡುತ್ತದೆ. ಆಗ ಜನರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ವಚನ ಪಡೆದು, ಶ್ರೀಕೃಷ್ಣ ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗೆ ಕೃಷ್ಣನು ಕಾಳಿಯಾ ಹಾವನ್ನು ಸೋಲಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಭಯಂಕರ ಹಾವನ್ನು ಕೃಷ್ಣ ಮಣಿಸಿದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ.


ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿದ ನಾಗರವೊಂದು ಈ ಹೆಣ್ಣುಮಗಳ ಬಳಿ ಬಂದು ಆಶ್ರಯವನ್ನು ಕೇಳಿತಂತೆ ಭಕ್ತಿಯಿಂದ ಆ ಹೆಣ್ಣುಮಗಳು ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಹೆಣ್ಣು ಮಗಳು ದೇವರ ಸನ್ನಿಧಿಯಲ್ಲಿ ಶಿರ ಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಹೆಣ್ಣುಮಗಳು ಯಶಸ್ವಿಯಾದ ದಿನವೇ "ನಾಗರ ಪಂಚಮಿ" ಎಂಬ ಪ್ರತೀತಿ.


ಮತ್ತೊಂದು ಪುರಾಣ ಕಥೆಯ ಪ್ರಕಾರ ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಋತ್ವಿಜರು ಹೋಮಮಾಡಲು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಬೂ ದಿಯಾಗತೊಡಗಿತು. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ ದಯವಿಟ್ಟು ನಮ್ಮನ್ನು ಆ ರಾಜನ ಹೋಮದಿಂದ ರಕ್ಷಿಸು ಎಂದು ಬೇಡಿಕೊಳ್ಳುತ್ತವೆ. ಸರ್ಪಗಳ ಮನವಿಗೆ ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಾಳೆ. ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋಧಿಸಿದ. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿದೆಯಂತೆ.


5 ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕ್ಷುದ್ರ ದೇವಿಯಿದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತನಾದ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ಮಾತು ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.


ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕವಾಗಿರುತ್ತದೆ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಕಷ್ಟದ ಕೆಲಸ. ಹಾವುಗಳು  ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.


‘ಸರ್ಪಗಳು ನಮ್ಮನ್ನು ಕಚ್ಚದಿರಲಿ, ವಿಷಬಾಧೆ ಪರಿಹಾರವಾಗಲಿ, ಸಂತಾನಪ್ರಾಪ್ತಿ, ಧನಪ್ರಾಪ್ತಿ ಉಂಟಾಗಲಿ, ಚರ್ಮರೋಗಗಳ ನಿವೃತ್ತಿಯಾಗಲಿ, ಸ್ವರ್ಗಪ್ರಾಪ್ತಿ ಉಂಟಾಗಲಿ’ ಇತ್ಯಾದಿ ಕಾರಣಗಳಿಂದ ಈ ವ್ರತವನ್ನು ಆಚರಿಸುತ್ತಾರೆ. ಹಲವು ಕಡೆ ನಾಗನ ಕಲ್ಲುಗಳಿಗೆ ಕ್ಷೀರಾಭಿಷೇಕ ಮಾಡಿ ಆರಾಧಿಸುವ ಪದ್ಧತಿಯೂ ಇದೆ.


ಸರ್ವರಿಗೂ ನಾಡಿನ ದೊಡ್ಡ ಹಬ್ಬ ನಾಗರ ಪಂಚಮಿ ಶುಭಾಶಯಗಳು 




-ಸೌಮ್ಯ ಸನತ್ 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top