ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಸೋಮವಾರ ವಿಜ್ಞಾನ ಭವನದಲ್ಲಿ ಉಪನ್ಯಾಸ ನೀಡುತ್ತಿರುವುದು.
ಮೈಸೂರು: ನಮ್ಮ ಅಭಿಪ್ರಾಯವನ್ನು ಪರರಿಗೆ ಮುಟ್ಟಿಸಲು ಬಳಸುವುದೇ ಶಬ್ದ. ಏನು ಹೇಳಲು ಹೊರಟಿದ್ದೇವೆ ಎನ್ನುವುದನ್ನು ತಿಳಿಸುವ ಮಾಧ್ಯಮವೇ ಶಬ್ದ. ಯಾವುದೇ ಶಬ್ದ ಪರಿಪೂರ್ಣ ಅರ್ಥ ಹೇಳುವಂತಿರಬೇಕು ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಶಬ್ದಶಾಸ್ತ್ರ' ವಿಷಯ ಕುರಿತು ಅವರು ಪ್ರೌಢ ಉಪನ್ಯಾಸ ನೀಡಿದರು.
ನಮ್ಮಲ್ಲಿ ಏನು ಬರೆಯುತ್ತೇವೆ ಅದನ್ನು ಓದುತ್ತೇನೆ. ಏನು ಓದುತ್ತೇವೆ ಅದನ್ನು ಬರೆಯುತ್ತೇವೆ. ಇಂಗ್ಲಿಸ್‍ನಲ್ಲಿ ಪಿಯುಟಿ- ಪುಟ್ ಎನ್ನುತ್ತೇವೆ. ಸಿಯುಟಿ- ಕುಟ್ ಎನ್ನಲ್ಲ. ಬದಲಿಗೆ ಕಟ್ ಎನ್ನುತ್ತೇವೆ. ಏಕೆ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ. ಬರೆಯುವುದಕ್ಕೂ ಓದುವುದಕ್ಕೂ ವ್ಯತ್ಯಾಸ ಇದೆ. ನಮ್ಮಲ್ಲಿ ಹಾಗೆ ಇಲ್ಲ. ಏನು ಬರೆಯುತ್ತೇವೆ ಹಾಗೆ ಓದುವುದು. ಏನು ಓದುತ್ತೇವೆ ಹಾಗೆ ಬರೆಯಬೇಕು ಎಂದರು. ಇದೇ ವೇಳೆ ದೋಷ ಇರುವ ಅನೇಕ ಪದಗಳನ್ನು ಉದಾರಣೆ ಸಮೇತ ವಿವರಿಸಿದರು.
ಸಂಸ್ಕೃತ ತಾಯಿ ಭಾಷೆ:
ಸಂಸ್ಕೃತ ಎಲ್ಲ ಭಾಷೆಗಳಿಗೂ ತಾಯಿ ಭಾಷೆ ಎನ್ನುವುದನ್ನು ನಾವು ತಿಳಿದಿದ್ದೇವೆ. ನಮ್ಮ ಕನ್ನಡ ಭಾಷೆಯಲ್ಲಿ ಸಂಖ್ಯೆಯನ್ನು ಪರಿಗಣಿಸುವಾಗ ಮೊದಲಿಗೆ `ಒಂದು'ಅನ್ನು ಪರಿಗಣಿಸುತ್ತೇವೆ. ತಮಿಳುನಲ್ಲಿ ಒನ್ನು, ತುಳುವಿನಲ್ಲಿ ಒಂಜಿ, ಇಂಗ್ಲಿಷ್‍ನಲ್ಲಿ ಒನ್ ಎನ್ನುತ್ತೇವೆ. ಎಲ್ಲ ಕಡೆಯೂ ಬಹುತೇಕ ಒಂದೇ ರೀತಿ ಉಚ್ಛಾರಣೆ ಗಮನಿಸಬಹುದು. ಇದರ ಮೂಲಕ ಇಂಗ್ಲಿಷ್ ಇರಬಹುದೇ ಎನ್ನಲು ಸಾಧ್ಯವಾಗುವುದಿಲ್ಲ. ಇಂಗ್ಲಿಷ್ ಇತ್ತೀಚೆಗೆ ಹುಟ್ಟಿರುವ ಭಾಷೆ. ಆದರೆ, ನಮ್ಮ ದೇಶಿ ಭಾಷೆಗಳಾದ ಕನ್ನಡ, ತುಳು, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಹಾಗಾಗಿ ನಮ್ಮ ಭಾಷೆಯಿಂದ ಇಂಗ್ಲಿಷ್‍ಗೆ ಹೋಗಿರಬಹುದೇ? ಇದರ ಮೂಲ ಯಾವುದು? ಎಂದರೆ ಸಂಸ್ಕೃತ ಎಂದು ಹೇಳುತ್ತೇವೆ. ಸಂಸ್ಕೃತದಲ್ಲಿ ಊನ ಎಂಬ ಶಬ್ದ ಇದೆ. ಊನ ಶಬ್ದದ ಅರ್ಥ ಕಡಿಮೆ ಎಂದು. ಊನ ಶಬ್ದವೆ ಇದಕ್ಕೆ ಮೂಲ ಎನ್ನಬಹುದು ಎಂದರು.
`ಹ'ಕಾರ ಬಳಕೆ ಇರಲಿಲ್ಲ:
ಈ ಹಿಂದೆ `ಹ'ಕಾರ ಬಳಕೆ ಇರಲಿಲ್ಲ. ಎಲ್ಲೆಲ್ಲಿ ಹ ಕಾರ ಬಳಸುತ್ತಿದ್ದೇವೆ ಅಲ್ಲೆಲ್ಲ `ಪ'ಕಾರ ಇತ್ತು. ಹೆಣ್ಣು- ಪೆಣ್ಣು, ಹೊನ್ನು-ಪೊನ್ನು, ಹಾಲು-ಪಾಲು, ಹೋಗೋಣ-ಪೋಹೋಣ ಎನ್ನುತ್ತಿದ್ದೆವು ಎಂದು ಸ್ವಾಮೀಜಿ ಉದಾಹರಣೆ ಸಹಿತ ವಿವರಿಸಿದರು. ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿರ್ದೇಶಕ ಡಾ.ಡಿ.ಪಿ. ಮಧುಸೂದನಾಚಾರ್ಯ, ಉಪ ನಿರ್ದೇಶಕಿ ಪಾರ್ವತಿ, ಸಂಶೋಧಕರು ಇತರರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ