ಜನಸಾಮಾನ್ಯರ ಆರೋಗ್ಯ ರಕ್ಷಣೆಯಲ್ಲಿ ಮಾಧ್ಯಮದ ಪಾತ್ರ ಅತಿ ಮಹತ್ವದ್ದು: ಡಾ.ಕಿಶೋರ್ ಕುಮಾರ್

Upayuktha
0


ಮಂಗಳೂರು:
ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸುವ ಹಲವಾರು ಯೋಜನೆಗಳು, ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್ ಅವರು ತಿಳಿಸಿದರು.


ಅವರು ಆ.3ರ ಗುರುವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಯಿಂದ ಪತ್ರಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕಾರ್ಯಗಾರದಲ್ಲಿ ಮಾತನಾಡಿದರು.


ಆರೋಗ್ಯ ಇಲಾಖೆಯಿಂದ ಜಿಲ್ಲೆಯಾದ್ಯಂತ ಸಾಕಷ್ಟು ಐಇಸಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ, ಆದಾಗ್ಯೂ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳ ಪಾತ್ರ ಅತ್ಯಂತ ಪರಿಣಾಮಕಾರಿಯಾದದ್ದು, ಪ್ರತಿ ವರ್ಷ ಆರೋಗ್ಯ ಇಲಾಖೆಗೆ 2-3 ಕಾರ್ಯಕ್ರಮಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ, ಅವುಗಳ ವಿವರ ಹಾಗೂ ಮಾಹಿತಿ ಮಾಧ್ಯಮದಿಂದ ವ್ಯಾಪಕವಾಗಿ ಪ್ರಸಾರವಾಗುವುದರಿಂದ ಸಾರ್ವಜನಿಕರಿಗೆ ನೂತನ ಕಾರ್ಯಕ್ರಮಗಳ ಪರಿಚಯವಾಗಿ, ಪ್ರಯೋಜನ ಪಡೆಯಲು ಸಹಕಾರಿಯಾಗಿದೆ ಎಂದರು.


ಇದೇ ಮಾಹೆಯಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿರುವ ತೀವ್ರತರವಾದ ಇಂದ್ರಧನುಷ್ 0.5 ಕಾರ್ಯಕ್ರಮವೂ ಕೂಡ ಈಗಾಗಲೇ ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರವಾದ ಕಾರಣ ಅಗತ್ಯ ಲಸಿಕೆಯಿಂದ ವಂಚಿತರಾದವರು ಲಸಿಕೆ ಪಡೆಯಲು ಅನುಕೂಲವಾಗಲಿದೆ ಎಂದ ಅವರು ಕೋವಿಡ್ ಎದುರಾದ ಸಂದರ್ಭದಲ್ಲಿ ಜಿಲ್ಲೆಯ ಮಾಧ್ಯಮಗಳು ಆರೋಗ್ಯ ಇಲಾಖೆಗೆ ನೀಡಿದ್ದ ನೆರವು ಸ್ಮರಣೀಯವಾಗಿದೆ ಎಂದರು.


ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಆರೋಗ್ಯ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ತಳಮಟ್ಟದಲ್ಲಿ ಕೆಲಸ ಮಾಡಬೇಕಿರುತ್ತದೆ. ಈ ದಿಸೆಯಲ್ಲಿ ಆರೋಗ್ಯ ಸುರಕ್ಷಾ ಅಧಿಕಾರಿಗಳ ಪಾತ್ರ ಬಹಳ ಮುಖ್ಯ ಅದರೊಂದಿಗೆ ಹೊಸ ಯೋಜನೆಗಳ ಅನುಷ್ಠಾನದಲ್ಲಿ ಸಾಕಷ್ಟು ಸವಾಲುಗಳಿರುತ್ತವೆ, ಇದೀಗ ಜಿಲ್ಲೆಯಲ್ಲಿ ವೈದ್ಯರ ಕೊರತೆ ಬಹುತೇಕ ಕಡಿಮೆಯಾಗುತ್ತಿದೆ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆ ಹಾಗೂ ಕಳೆದ ಎರಡು ವರ್ಷಗಳಿಂದ ವೈದ್ಯರ ನೇಮಕಾತಿ ಆಗುತ್ತಿದೆ, ಆದರೆ 92 ರಿಂದ 95 ಪ್ರತಿಶತ ತಜ್ಞ ವೈದ್ಯರ ಕೊರತೆ ಇದೆ. ಇವುಗಳ ಮಧ್ಯೆ ಆರೋಗ್ಯ ಇಲಾಖೆ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.


ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಕಡಿಮೆಯಾಗುತ್ತಿದ್ದು, ಆರೋಗ್ಯ ಇಲಾಖೆ ಅಭಿಯಾನಗಳು ಸಾರ್ವಜನಿಕರಿಗೆ ಸಾಕಷ್ಟು ನೆರವು ನೀಡಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಜಿಲ್ಲೆಯ ಪತ್ರಕರ್ತರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕರಮ ಅನುಷ್ಠಾನಾಧಿಕಾರಿ ಡಾ. ಸುದರ್ಶನ್ ಅವರು ಕುಷ್ಠರೋಗ, ಅಂದತ್ವ, ಮಾನಸಿಕ ಆರೋಗ್ಯ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಯಕ್ರಮದ ಬಗ್ಗೆ, ಕೀಟ ಜನ್ಯ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಪ್ರಭಾರ ಜಿಲ್ಲಾ ಸವೇಕ್ಷಣಾಧಿಕಾರಿ  ಡಾ. ನವೀನ್ ಚಂದ್ರ ಕುಲಾಲ್ ಸಾಂಕ್ರಾಮಿಕ ಮತ್ತು ಅಸಾಂಕ್ರಮಿಕ ರೋಗಗಳ ಬಗ್ಗೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ. ಬದರುದ್ದೀನ್ ಕ್ಷಯ ರೋಗದ ಬಗ್ಗೆ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ರಾಜೇಶ್ ಅವರು ಟಿಬಿ, ಎಚ್‍ಐವಿ ಹಾಗೂ ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮ, ಚುಚ್ಚುಮದ್ದು ಮತ್ತು ತಾಯಿ ಹಾಗೂ ಶಿಶು ಮರಣ, ಆಯುಷ್ಮಾನ್ ಕ್ಲಿನಿಕ್, ಹದಿಹರೆಯದ ಆರೋಗ್ಯ ಮತ್ತು ಇಲಾಖೆಯ ಪ್ರಮುಖ ಯೋಜನೆ ಬಗ್ಗೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪ ಪ್ರಭು ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ಪರಿಹಾರ ಮತ್ತು ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆ ಮತ್ತು ಶ್ರವಣದೋಷ ನಿಯಂತ್ರಣ ಕಾಯ್ದೆ ಬಗ್ಗೆ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಬಗ್ಗೆ ಡಾ.ಯಶಸ್ವಿನಿ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಬಗ್ಗೆ ಪುಂಡಲಿಕಾ ಲಕೋಟಿ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪತ್ರಕರ್ತರು ಭಾಗವಹಿಸಿದ್ದರು.  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಜ್ಯೋತಿ ಕೆ.ಉಳೆಪಾಡಿ ಕಾರ್ಯಕ್ರಮ ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top