ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗ (BIONEXUS- Biosciences Subject Association), ರಾಷ್ಟ್ರೀಯ ಸೇವಾ ಯೋಜನೆಯ ಮಂಗಳಗಂಗೋತ್ರಿ ಘಟಕ, 'ಮಂಗಳಾ ಯೋಜನೆ’- ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮ, ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ರೋಟರಿ ಕ್ಲಬ್ ದೇರಳ ಕಟ್ಟೆ ಇವುಗಳ ಜಂಟಿ ಸಹಭಾಗಿತ್ವದಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಮಂಗಳೂರು ಇದರ ಸಹಕಾರದೊಂದಿಗೆ ಇತ್ತೀಚೆಗೆ ವನಮಹೋತ್ಸವ ಆಚರಿಸಲಾಯಿತು.
ಮಂಗಳೂರು ವಿವಿವಿ ಕುಲಪತಿ ಪ್ರೊ. ಜಯರಾಜ ಅಮೀನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ “ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳದೆ ಅಭಿವೃದ್ಧಿಯ ಹೆಸರಿನಲ್ಲಿ ವಿನಾಶದತ್ತ ಪರಿಸರವನ್ನು ಹಾಳುಮಾಡುತ್ತಿದ್ದೇವೆ. ವೇಗವಾಗಿ ಅರಣ್ಯಗಳು ಮಾಯವಾಗುತ್ತಿವೆ. ಇದರ ಪರಿಣಾಮವಾಗಿ ನಾವಿಂದು ಪ್ರಾಕೃತಿಕ ವಿಕೋಪಗಳನ್ನು ಎದುರಿಸುತ್ತಿದ್ದೇವೆ. ವನಮಹೋತ್ಸವ ಆಚರಣೆಗೆ ಸೀಮಿತವಾಗದೆ ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ" ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪಿ. ಶ್ರೀಧರ ಮಾತನಾಡಿ, ವನಸಿರಿಗಳ ಜಾಗಗಳಲ್ಲಿ ಕಾಂಕ್ರಿಟೀಕರಣವಾಗುತ್ತಿದ್ದರೂ ಕಟ್ಟಡದ ಸುತ್ತಮುತ್ತ ಮತ್ತು ತಾರಸಿಯಲ್ಲಿ ಕುಂಡದಲ್ಲಿ ಗಿಡಗಳನ್ನು ಬೆಳೆಸಬಹುದು. ವಿವಿಧ ಬಗೆಯ ಹಣ್ಣು ಹಂಪಲು ನೀಡುವ ಮೊಳಕೆ ಬೀಜದ ಸೀಡ್ ಬಾಲ್ (ಬಿತ್ತನೆ ಬೀಜ)ಗಳನ್ನು ತಯಾರಿಸಿ ಕಾಡು ಬೆಟ್ಟಗುಡ್ಡ ಗಳಲ್ಲಿ ಎಸೆಯುವುದರ ಮೂಲಕ ಜೀವವೈವಿಧ್ಯತೆ ಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯವಾಗುತ್ತಿದೆ. ಅರಣ್ಯ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಿದರೆ ಪರಿಸರವನ್ನು ಉಳಿಸಿ ಬೆಳೆಸುವ ಕೆಲಸವನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದು, ಎಂದರು.
ಮಂಗಳೂರು ವಿವಿ ಕುಲಸಚಿವ ಮೊಹಮ್ಮದ್ ನಯೀಮ್ ಮೊಮಿನ್ ಮಾತನಾಡಿ, ಮಾನವ- ವನ್ಯಜೀವಿಗಳ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಣುತ್ತಿದ್ದೇವೆ. ನಿಜವಾಗಿ ಹೇಳಬೇಕೆಂದರೆ ವನ್ಯಜೀವಿ ಗಳು ನಮ್ಮ ಜಾಗವನ್ನು ಆಕ್ರಮಿಸಿರುವುದಲ್ಲ. ನಾವು ಅವುಗಳ ವಾಸಸ್ಥಾನಗಳನ್ನು ಆಕ್ರಮಿಸಿದ್ದೇವೆ. ಪ್ರತಿಯೊಬ್ಬರೂ ವರ್ಷಕ್ಕೆ ಹತ್ತು ಗಿಡಗಳನ್ನಾದರೂ ನೆಟ್ಟು ಪೋಷಿಸುವ ಮೂಲಕ ಅರಣ್ಯೀಕರಣಕ್ಕೆ ನಮ್ಮ ಕೊಡುಗೆ ನೀಡಬಹುದು, ಎಂದರು.
ರೋಟರಿ ಜಿಲ್ಲೆ- 3181 ಸಹಾಯಕ ಗವರ್ನರ್- ವಲಯ 3 ರೊ. ಪಿ.ಡಿ. ಶೆಟ್ಟಿ ಮುಖ್ಯ ಅತಿಥಿಯಾಗಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಘೋಷವಾಕ್ಯ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು. ಮೊದಲ ಬಹುಮಾನವನ್ನು ಭೂಮಿಕ ನೀಲಾವರ, ದ್ವಿತೀಯ ಬಿ.ಕಾಂ, ದ್ವಿತೀಯ ಬಹುಮಾನವನ್ನು ನಯನ, ದ್ವಿತೀಯ ಬಿ.ಕಾಂ, ಹಾಗೂ ತೃತೀಯ ಬಹುಮಾನವನ್ನು ಪ್ರಥಮ ಬಿ.ಬಿ.ಎ ಯ ಫಾರ್ಟ್ಯೂನ್ ಕಾಗೆಲೆಲೋ ಲೀಪೋ ಪಡೆದರು.
ಕಾರ್ಯಕ್ರಮ ಸಂಯೋಜಕ ಪ್ರೊ. ಪ್ರಶಾಂತ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜೀವವಿಜ್ಞಾನ ವಿಭಾಗದ ಅಧ್ಯಕ್ಷೆ ರೊ. ಲತಾ ಕುಮಾರಿ, ರೋಟರಿ ಕ್ಲಬ್ ದೇರಳಕಟ್ಟೆ ಅಧ್ಯಕ್ಷರು ಪ್ರೊ. ಚಂದ್ರಾ ಎಂ, ಎನ್.ಎಸ್.ಎಸ್. ಮಂಗಳಗಂಗೋತ್ರಿ ಘಟಕ ಯೋಜನಾಧಿಕಾರಿ ಡಾ. ಗೋವಿಂದರಾಜು ಬಿ. ಎಂ, ನಾರಾಯಣ ಗುರು ಅಧ್ಯಯನ ಪೀಠದ ಸಂಯೋಜಕ ಡಾ. ಗಣೇಶ್ ಅಮೀನ್ ಸಂಕಮಾರ್, ಜಿಲ್ಲಾ ಗವರ್ನರ್ ಚುನಾಯಿತ (2024-25) ರೊ. ವಿಕ್ರಮದತ್ತ, IQAC ನಿರ್ದೇಶಕಿ ಪ್ರೊ. ಮೋನಿಕಾ ಸದಾನಂದ, ಪರಿಸರ ವಿಜ್ಞಾನದ ಸಂಯೋಜಕಿ ಪ್ರೊ. ತಾರಾವತಿ ಎನ್. ಸಿ., ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಎಂ.ಎಸ್. ಮುಸ್ತಾಕ್ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು ಎನ್. ಎಸ್. ಎಸ್. ಘಟಕದ ಯೋಜನಾಧಿಕಾರಿ ಮಿಯಾಜ್ ಮಂಗಳಗಂಗೋತ್ರಿ ಬಹುಮಾನ ವಿಜೇತರ ಹೆಸರುಗಳನ್ನು ವಾಚಿಸಿದರು. ಪರಿಶಿಷ್ಟ ಜಾತಿ / ಪಂಗಡ ಸೆಲ್ ಇದರ ವಿಶೇಷ ಅಧಿಕಾರಿ ಡಾ. ನರಸಿಂಹಯ್ಯ ಎನ್. ವಂದನಾರ್ಪಣೆಗೈದರು. ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆಗೆ ವಿದ್ಯಾರ್ಥಿಗಳು ಗಿಡ ನೆಡುವುದು ಮತ್ತು ಬೀಜದ ಉಂಡೆ ಬಿತ್ತನೆಯನ್ನು ಮಾಡಲಾಯಿತು. ಇದೇ ವೇಳೆ ಇತ್ತೀಚೆಗೆ ನಿಧನರಾದ ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ