ಮಂಗಳೂರು: "ಒತ್ತಡದ ಬದುಕಿನಲ್ಲಿ ಮಾನಸಿಕ ಏಕಾಗ್ರತೆ ಹಾಗೂ ಮನಶಾಂತಿಗೆ ಯೋಗ ಸಹಕಾರಿ, ಎಷ್ಟೇ ಕೆಲಸ ಇದ್ದರೂ ಬೆಳಗ್ಗಿನಿಂದ ಹಿಡಿದು ತಡರಾತ್ರಿಯವರೆಗೆ ಕೆಲಸ ಮಾಡಿದರೂ ಉತ್ತಮ ಮನಸ್ಥಿಯನ್ನು ಕಾಪಾಡಲು ಯೋಗ ಸಹಕಾರಿಯಾಗಿದೆ. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಮನಸ್ಸು ಮತ್ತು ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ ಎಂಬುವುದು ನನ್ನ ಅನುಭವ ಹಾಗೂ ವೈಯಕ್ತಿಕ ಅಭಿಪ್ರಾಯ. ನಾನು ಮಂಗಳೂರಿಗೆ ಬಂದ ನಂತರ ನನ್ನ ಯೋಗಾಭ್ಯಾಸಕ್ಕೆ ಮಾರ್ಗದರ್ಶನ ನೀಡುತ್ತಿರುವ ಗೋಪಾಲಕೃಷ್ಣ ದೇಲಂಪಾಡಿಯವರು 40 ವರ್ಷಗಳಿಂದ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಮುನ್ನಡೆಸಿ ಯೋಗ ಶಿಕ್ಷಣದ ಮೂಲಕ ಸಮಾಜಕ್ಕೆ ಸೇವೆ ನೀಡುತ್ತಿದ್ದಾರೆ, ಅವರ ಸೇವೆ ನಿಜಕ್ಕೂ ಶ್ಲಾಘನೀಯ" ಎಂದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಹೇಳಿದರು.
40 ವರ್ಷಗಳಿಂದ ಯೋಗ ಶಿಕ್ಷಣದ ಮೂಲಕ ಸಾವಿರಾರು ಜನರಿಗೆ ಮಾರ್ಗದರ್ಶನ ನೀಡಿರುವ ಯೋಗರತ್ನ ಗೋಪಾಲಕೃಷ್ಣ ಅವರಿಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಗೌರವಾಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ "ಪ್ರಸ್ತುತ ಜೀವನ ಶೈಲಿಗೆ ಯೋಗ ಅತಿ ಮುಖ್ಯವಾಗಿದ್ದು, ಮನಸ್ಸಿನ ಹತೋಟಿಗೆ ಯೋಗ ಸಹಕಾರಿ. ಪ್ರತಿಯೊಬ್ಬ ವ್ಯಕ್ತಿಯೂ ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಲು ಯೋಗದಿಂದ ಸಾಧ್ಯ. ಸ್ವಾಸ್ಥ್ಯ ಆರೋಗ್ಯ ರಕ್ಷಣೆಯತ್ತ ನಾವು ದೃಷ್ಟಿ ಇಟ್ಟು ಯೋಗದಿಂದ ಅದನ್ನು ಸಾಧಿಸಲು ಮುಂದಾಗಬೇಕು. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ವರ್ಷಗಳಿಂದ , ಆರೋಗ್ಯವನ್ನು ಯೋಗದ ಮೂಲಕ ಸದೃಢವಾಗಿಸಿದ್ದಾರೆ. ಸರ್ಕಾರವೂ ಯೋಗವನ್ನು ಶಾಲಾ ಶಿಕ್ಷಣದಲ್ಲಿ : ಅಳವಡಿಸಿಕೊಳ್ಳಲು ಸಮಗ್ರ ಯೋಜನೆ ರೂಪಿಸುತ್ತಿದೆ" ಎಂದರು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮಾತನಾಡಿ, "ಜನರ ಬದುಕಿನ ಒತ್ತಡಗಳನ್ನು ಕಡಿಮೆ ಮಾಡಲು ಯೋಗ ಅತ್ಯುತ್ತಮ ಸಾಧನ ಮನಸ್ಸಿನ ಏಕಾಗ್ರತೆ ಹಾಗೂ ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ, ನಿರಂತರ ಯೋಗ ಮಾಡುವ ಮೂಲಕ ಜನರ ಜೀವನಶೈಲಿ ಬದಲಿಸಲು ಸಾಧ್ಯ ಎಂದರು".
ರಾಮಕೃಷ್ಣ ಮಠ ಮಂಗಳೂರು ಹಾಗೂ ದೇಲಂಪಾಡಿ ಯೋಗ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಮಂಗಳೂರಿನ ಲೆಕ್ಕಪರಿಶೋಧಕ ಸುಧೀರ್ ಕುಮಾರ್ ಶೆಟ್ಟಿ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಶಿಕಾರಿಪುರ ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ರಾಮಕೃಷ್ಣ ಮಿಷನ್ ಯುವ ಕಾರ್ಯಕ್ರಮಗಳ ಸಂಯೋಜಕ ರಂಜನ್ ಬೆಳ್ಳಾರ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ