ಇತಿಹಾಸ ಪುರುಷರು: ಸಮರವೀರ ಬಾಜಿಪ್ರಭು ದೇಶಪಾಂಡೆ

Upayuktha
0


ಬಾಜಿ ಪ್ರಭು ದೇಶಪಾಂಡೆ ಕಾಯಸ್ತ ಲಿಪಿಕಾರ ಮನೆತನದ ವ್ಯಕ್ತಿಯಾಗಿದ್ದು ಸಮರ ಕಲೆಯಲ್ಲಿ ನಿಷ್ಣಾತನಾಗಿದ್ದ. ಪ್ರತಿದಿನವೂ 12 ಗಂಟೆಗಳ ಕಾಲ ಸಮರ ಕಲೆಯನ್ನು ಅಭ್ಯಸಿಸುತ್ತಿದ್ದ ಬಾಜಿ ಪ್ರಭು ತನ್ನ ತಂದೆಯ ಆಶಯದಂತೆ ತನ್ನ ಜನರನ್ನು ಸದಾ ರಕ್ಷಿಸುವ ಕೆಲಸ ಮಾಡುತ್ತಿದ್ದನು. 12 ಮಾವಳಿಗಳನ್ನು ರಕ್ಷಿಸುತ್ತಿದ್ದ ಆತನ ಧೈರ್ಯ ಶೌರ್ಯಕ್ಕೆ ಸರಿಸಾಟಿ ಯಾರು ಇರಲಿಲ್ಲ. ಆದರೂ ಕೂಡ ತನ್ನೂರಿನ ಪಟೇಲನು ಅದೇ ತಾನೇ ಹದಿಹರೆಯಕ್ಕೆ ಬಂದ ಹೆಣ್ಣು ಮಕ್ಕಳನ್ನು ಹಾಳು ಮಾಡುತ್ತಿದ್ದುದನ್ನು ತಡೆಯಲಾಗದೆ ಹೋಗುತ್ತಿದ್ದ. ಇದಕ್ಕೆ ಕಾರಣ ಸಾಯುವಾಗ ತನ್ನ ತಂದೆಗೆ ಕೊಟ್ಟ ಮಾತಿನಂತೆ ತನ್ನವರನ್ನು ರಕ್ಷಿಸುವ ಹುಚ್ಚು ಭ್ರಮೆ. ಆದರೆ ಆತನ ಮಗನ ನಿಶ್ಚಿತ ವಧುವಿಗೂ ಅದೇ ಗತಿಯಾದಾಗ ಆತನ ಮಗ ತಂದೆಯ ವಿರುದ್ಧ ತನ್ನ ಅಸಹನೆಯನ್ನು ತೋರ್ಪಡಿಸಿದನಲ್ಲದೆ ಆತನ ಶೌರ್ಯವನ್ನು ಪ್ರಶ್ನಿಸಿದ. ಮಗನ ಈ ನಡತೆಯಿಂದ ನೊಂದ ತಂದೆ ಮಗನ ದೃಷ್ಟಿಯಲ್ಲಿ ತನ್ನ ಘನತೆಯನ್ನು ಉಳಿಸಿಕೊಳ್ಳಲು ಶಿವಾಜಿ ಮಹಾರಾಜನ ಜೊತೆ ಕೈಜೋಡಿಸಿದ.


ಸಂಪೂರ್ಣವಾಗಿ ಸ್ವರಾಜ್ಯದ ಕುರಿತು ಆತನಲ್ಲಿ ಯಾವುದೇ ಆಸಕ್ತಿ ಇಲ್ಲದಿರುವುದನ್ನು ಅರಿತಿದ್ದರು ಕೂಡ ಶಿವಾಜಿ ಮಹಾರಾಜ ಆತನಿಗೆ ತನ್ನ ಸೇನಾತುಕಡಿಯ ನಾಯಕತ್ವವನ್ನು ವಹಿಸಿದ ಕಾರಣ ಶಿವಾಜಿ ಮಹಾರಾಜನಿಗೆ ಬಾಜಿ ಪ್ರಭುವಿನ ಶೌರ್ಯದ ಮೇಲೆ ಆತನಿಗಿಂತ ಹೆಚ್ಚಿನ ನಂಬಿಕೆ ಇತ್ತು. ಕಾರಣ ಶಿವಾಜಿ ಮಹಾರಾಜನು ತನ್ನ ಸ್ವರಾಜ್ಯದ ಕನಸಿನಲ್ಲಿ ತನ್ನೊಂದಿಗೆ ಕೈಜೋಡಿಸಲು ಆತನ ಅವಶ್ಯಕತೆಯನ್ನು ಮನಗಂಡಿದ್ದನು.

 

ಆ ಸಮಯದಲ್ಲಿ ಶಿವಾಜಿ ಮಹಾರಾಜನು ವಿಜಯಪುರದ ಆದಿಲ್ ಶಾಹಿಗಳ ಸೇನಾಪತಿಯಾದ ನರ ರಾಕ್ಷಸನೆಂದೇ ಹೆಸರಾದ ಅಫ್ಜಲ್ ಖಾನ್ ನ ವಿರುದ್ಧದ ಯುದ್ಧ ಕಾರ್ಯಾಚರಣೆಯಲ್ಲಿ ನರಸಿಂಹನಂತೆ ಮೆರೆದು ಅಫಜಲ ಖಾನನನ್ನು ವಧಿಸಿದನು. ಇದರಿಂದ ಕುಪಿತನಾದ ಅಫ್ಜಲ್ ಖಾನನ ಮಗ ಫಝಲ್ ಖಾನನು ಆಫ್ರಿಕಾದಿಂದ ಬಂದ ಬುಡಕಟ್ಟು ಜನಾಂಗದ ಸಿದ್ಧಿ ಜೋಹರ್ ಜೊತೆಯಲ್ಲಿ ಸೇರಿ ಬಿಜಾಪುರದ ಸುಲ್ತಾನನ ಅಪಾರ ಸೇನೆಯೊಂದಿಗೆ ಪನ್ಹಾಲಕೋಟೆಗೆ ಮುತ್ತಿಗೆ ಹಾಕಿದನು.


ಹೊರಗಿನಿಂದ ಈ ಮುತ್ತಿಗೆಯನ್ನು ಅಯಶಸ್ವಿಗೊಳಿಸಲು ಶಿವಾಜಿ ಮಹಾರಾಜನ ಸೇನಾಪತಿಯಾದ ನೇತಾಜಿ ಪಾಲ್ಕರ್ ಮಾಡಿದ ಪ್ರಯತ್ನ ವಿಫಲವಾಯಿತು. ಜೊತೆಗೆ ಅರಮನೆಗೆ ಬರುವ ಎಲ್ಲಾ ದಾರಿಗಳನ್ನು ಮುತ್ತಿಗೆದಾರರು ಕಟ್ಟಿ ಹಾಕಿದ್ದರಿಂದ ಕೋಟೆಯಲ್ಲಿ ದವಸ ಧಾನ್ಯಗಳ ದಾಸ್ತಾನಿನಲ್ಲಿಯೂ ಕೊರತೆಯಾಯಿತು. ಸೈನಿಕರು ಅರೆ ಹೊಟ್ಟೆ ಉಣ್ಣುವಂತಾಯಿತು. ಬಾಜಿ ಪ್ರಭು ದೇಶಪಾಂಡೆ ಮತ್ತಿತರರೊಂದಿಗೆ ಸಮಾಲೋಚಿಸಿದ ಶಿವಾಜಿ ಮಹಾರಾಜನು ತಾನು ಸಿದ್ದಿ ಜೋಹರ ಗೆ ಶರಣಾಗುವೆನೆಂದು ಸಂದೇಶ ಕಳುಹಿಸಿದನು. ಇದರಿಂದ ಕೊಂಚ ನಿರಾಳನಾದ ಸಿದ್ದಿ ಜೋಹರ್ ಮೋಜು ಮಸ್ತಿಯಲ್ಲಿ ತೊಡಗಿದನು.


ಇದೇ ಸಮಯದಲ್ಲಿ ದವಸ ಧಾನ್ಯಗಳ ಶೇಖರಣೆಗೆ ಹಳ್ಳಿಗಳಿಗೆ ಹೋಗಿದ್ದ ಬಾಜಿ ಪ್ರಭು ಅಲ್ಲಿ ಶಿವಾಜಿ ಮಹಾರಾಜನ ಹೋಲಿಕೆ ಇರುವ ಶಿವ ವಹಾದ್ ಎಂಬ ನಾಪಿತನನ್ನು ನೋಡಿ, ನಾಡಿನ ಸ್ವಾತಂತ್ರ್ಯ ಮುಕ್ತಿಯ ಯಜ್ಞಕ್ಕೆ ಸಮಿತ್ತಾಗುವಂತೆ ಕೇಳಿಕೊಂಡಾಗ ದೇವರಷ್ಟೇ ಶಿವಾಜಿಯಲ್ಲಿಯೂ ಅಪರಿಮಿತ ಭಕ್ತಿಯನ್ನು ಇಟ್ಟಿದ್ದ ಶಿವ ಒಪ್ಪಿಕೊಂಡನು. ಮುಂದೆ ನಡೆದದ್ದು ಇತಿಹಾಸ.


ನಾನು ಹೇಳಿದ್ದು ನಿಮಗೆ ಅರ್ಥವಾಗುವುದಿಲ್ಲವೇ ಎಂದು ಸೇನಾ ಮುಖ್ಯಸ್ಥ ಬಾಜಿ ಪ್ರಭು ದೇಶಪಾಂಡೆ ಶಿವಾಜಿ ಮಹಾರಾಜರ ಮೇಲೆ ಗುಡುಗಿದಾಗ ಇಡೀ ಸೈನ್ಯವೇ ದಂಗಾಗಿ ನಿಂತಿತು. ಕೆಲ ಸೈನಿಕರ ಒರೆಗಳಿಂದ ಖಡ್ಗ ಹೊರಗೆ ಬರುವುದರಲ್ಲಿತ್ತು. ಆದರೆ ಆತನ ಸಿಟ್ಟಿನ ಹಿಂದಿನ ಕಾಳಜಿ ಕಳಕಳಿಯನ್ನು ಅರಿತ ಶಿವಾಜಿ ಮಹಾರಾಜನು ಆತನೆಡೆಗೆ ಮಂದಹಾಸ ಬೀರಿದನು.


 *ತನ್ನ ಸ್ವರಾಜ್ಯದ ಕನಸಿಗೆ ಬೆಂಬಲವೀಯುವ ತನ್ನ ಸೈನಿಕರಿಗೆ ಊಟಕ್ಕೆ ಕೊರತೆಯಾಗಿದೆ ಎಂದು ತಾನು ಕೂಡ ಅರೆ ಹೊಟ್ಟೆ ಉಣ್ಣುವ ಪಾಲನಕರ್ತ, ತಮ್ಮನ್ನು ಪಾಲಿಸುವ ದೊರೆ ತನ್ನ ಸೈನಿಕರ ಉಳಿವಿಗಾಗಿ ತಾನು ಹೋರಾಡುವೆ ಎಂದು ಅಪಾಯವನ್ನು ತನ್ನ ಮೈಮೇಲೆ ಎಳೆದುಕೊಳ್ಳುವ  ಮಹಾರಾಜನು ಇರುವಾಗ ಆತನಿಗೆ ಗುರಾಣಿಯಾಗಿ ಆತನನ್ನು ರಕ್ಷಿಸುವ ಹೊಣೆ ತನ್ನದು.


,ಸಾವಿರಾರು ಮರಾಠ ಸೈನಿಕರು ತನ್ನ ನಾಯಕನಿಗಾಗಿ ಪ್ರಾಣವನ್ನು ಅರ್ಪಿಸಬಹುದು ಆದರೆ ನಾಯಕನೇ ಇಲ್ಲದ ಸ್ವರಾಜ್ಯದ ಕನಸು ಕೈಗೂಡುವುದು ಅಸಾಧ್ಯ* ಎಂಬ ಭಾಜಿ ಪ್ರಭು ದೇಶಪಾಂಡೆಯ ಪ್ರಖರ ಮಾತಿನಲ್ಲಿರುವ ಕಾಳಜಿಪೂರ್ವಕ ಸತ್ಯವನ್ನು ಅರಿತ ಸೈನಿಕರೆಲ್ಲರೂ ಆತನ ಮಾತಿಗೆ ಹೌದೆಂದರು. ತನ್ನ ಸೈನಿಕರೆಲ್ಲರ ಒತ್ತಾಸೆಗೆ ಮಣಿದ ಶಿವಾಜಿ ಮಹಾರಾಜನು ಬಾಜಿ ಪ್ರಭು ಹೆಣೆದ ಯುದ್ದ ತಂತ್ರದ ಭಾಗವಾಗಿ ತಾನುಳಿದುಕೊಂಡ ಪನ್ನಾಲ ಕೋಟೆಯಿಂದ ವಿಶಾಲಗಡ ಕೋಟೆಯೆಡೆಗೆ 300 ಸೈನಿಕರ ಜೊತೆಯಲ್ಲಿ ಧಾವಿಸಿದರು. ಇತ್ತ ಶಿವಾಜಿ ಮಹಾರಾಜನ ವೇಷದಲ್ಲಿ ಶಿವ ವಹಾದನು ಸಿದ್ದಿ ಜೋಹರನನ್ನು ಭೇಟಿಯಾದನು. ಮಾತುಕತೆಯ ಸಮಯದಲ್ಲಿ ಫಜಲ್ ಅಲಿ ಗೆ ಶಿವಾಜಿ ಮಹಾರಾಜನ ಭವಾನಿ ಖಡ್ಡವು ಆತನ ಕೈಯಲ್ಲಿ ಇಲ್ಲದಿರುವುದನ್ನು ಕಂಡು ಶಂಕೆ ಉಂಟಾಗಿ ಆ ಕುರಿತು ಪ್ರಶ್ನಿಸಲಾರಂಭಿಸಿದಾಗ ಶಿವಾಜಿ ಮಹಾರಾಜರ ವೇಷಧಾರಿ ತಡಬಡಾಯಿಸಿದನು. ಸತ್ಯವನ್ನು ಅರಿತ ಸಿಟ್ಟಿಗೆದ್ದ ಫಜಲ್ ಖಾನ್ ಮತ್ತು ಸಿದ್ದಿ ಜೋಹರ್ ನಕಲಿ ಶಿವಾಜಿಯ ಶಿರಚ್ಚೇಧನ ಮಾಡಿದರು.


ಇದೇ ಸಮಯವನ್ನು ಸಾಧಿಸಿ ಸುಮಾರು 60 ಕಿಲೋ ಮೀಟರ್ ದೂರದ ಕಣಿವೆಯ ಹಾದಿಯಲ್ಲಿ ಶಿವಾಜಿ ಮಹಾರಾಜನು ವಿಶಾಲಗಡದ ಕೋಟೆಯತ್ತ ಹೊರಟರೆ, ಉಳಿದ 300 ಜನ ಸೈನಿಕರೊಂದಿಗೆ ಭಾಜಿ ಪ್ರಭು ದೇಶಪಾಂಡೆಯು ಸುಮಾರು 4 ಸಾವಿರಕ್ಕೂ ಹೆಚ್ಚಿನ ಸಿದ್ದಿ ಜೋಹರ ಮತ್ತು ಫಜಲ್ ಖಾನನ  ಸೈನಿಕರನ್ನು ಎದುರಿಸಿದನು.


ಶಿವಾಜಿ ಮಹಾರಾಜನಿಗೆ ವಿಶಾಲಗಡದ ಕೋಟೆಯನ್ನು ತಲುಪುತ್ತಲೇ ಮೂರು ಬಾರಿ ತೋಪನ್ನು ಹಾರಿಸುವ ಮೂಲಕ ತಾನು ಸುರಕ್ಷಿತವಾಗಿ ಕೋಟೆಯನ್ನು ತಲುಪಿದ ಸೂಚನೆ ನೀಡಲು ಈ ಮೊದಲೇ ಬಾಜಿ ಪ್ರಭು ಮನವಿ ಮಾಡಿಕೊಂಡಿದ್ದನು.


ಇಕ್ಕಟ್ಟಾದ ಕಣಿವೆಯ ದಾರಿಯಲ್ಲಿ ಕೇವಲ 300 ಜನ ತನ್ನ ಸೈನಿಕರ ತಂಡದೊಂದಿಗೆ ಸಾವಿರಾರು ಜನ ಬಿಜಾಪುರದ ಸೈನಿಕರನ್ನು ಎದುರಿಸಿದ ಬಾಜಿ ಪ್ರಭು ವಿರೋಚಿತವಾಗಿ ಹೋರಾಡಿದನು. ಆತನ ಜೋಡು ಕತ್ತಿಗಳ ದಂಡಪಟ್ಟಿ ಹಿಡಿದು ಹೋರಾಡಲಾರಂಭಿಸಿದಾಗ ಮಿಂಚು, ಗುಡುಗು ಸಿಡಿಲು ಒಟ್ಟಿಗೆ ಆರ್ಭಟಿಸಿದಂತೆ ಆಯಿತು. ಆತನ ಮಿಂಚಿನ ಖಡ್ಗ ಸಂಚಾರಕ್ಕೆ ಎಣೆಯಿಲ್ಲದಂತಾಯಿತು. ಹಲವಾರು ಗಂಟೆಗಳ ಹೋರಾಟದಲ್ಲಿ ಆತನ ಬಹುತೇಕ ಸೈನಿಕರು ಸತ್ತು ಹೋದರು ಅದಕ್ಕಿಂತ 10 ಪಟ್ಟು ಹೆಚ್ಚು ಬಿಜಾಪುರದ ಸೈನಿಕರು ಮರಣ ಹೊಂದಿದರು. ಆಗ ತಾನೇ ಬ್ರಿಟಿಷರಿಂದ ಬಳುವಳಿಯಾಗಿ ಪಡೆದಿದ್ದ ಬಂದೂಕಿನಿಂದ ಬಾಜಿ ಪ್ರಭು ದೇಶಪಾಂಡೆಗೆ ಗುಂಡು ಹಾರಿಸಲಾಯಿತು ಬಾಜಿ ಪ್ರಭುವನ್ನು ಗುಣಾಕಾರದ ಚಿಹ್ನೆಯ ಆಕಾರದಲ್ಲಿ ಖಡ್ಗದಿಂದ ಛಿದ್ರಗೊಳಿಸಲಾಗಿತ್ತು. ದೇಹದ ಹಲವೆಡೆ ಆಗಿರುವ ಗಾಯಗಳಿಂದ ರಕ್ತ ಜಿನುಗುತ್ತಿತ್ತು. ಆದರೂ ಆತ್ಮ ಬಲವನ್ನು ಮೈಗೂಡಿಸಿಕೊಂಡು ಬಾಜಿ ಪ್ರಭು ಹೋರಾಡುತ್ತಿದ್ದನು. ತನ್ನ ದೇಹವನ್ನೇ ಹೆಬ್ಬಂಡೆಯಾಗಿಸಿ ಬಿಜಾಪುರದ ಸೈನಿಕರನ್ನು ಅಡ್ಡಗಟ್ಟಿ ನಿಂತಿದ್ದ ಮಾಜಿ ಪ್ರಭುವಿನ ದೇಹದ ಹಲವಡೆ ಕತ್ತಿಯ ಇರಿತಗಳಿಂದ ಗಾಯಗಳಾಗಿದ್ದವು. ದೇಹ ಸಂಪೂರ್ಣ ಜರ್ಜರಿತವಾಗಿದ್ದರೂ ಶಿವಾಜಿ ಮಹಾರಾಜನ ಸುರಕ್ಷತೆಯ ಕುರಿತ ತೋಪುಗಳ ನಾದ ಆತನ ಕಿವಿಗೆ ಬೀಳುವವರೆಗೂ ಆತನ ಹೋರಾಟ ಅವಿರತವಾಗಿ ನಡೆದಿತ್ತು.


ಇತ್ತ ಶಿವಾಜಿ ಮಹಾರಾಜರು ವಿಶಾಲಗಡ ಕೋಟೆಯ ಹೊರಭಾಗದಲ್ಲಿಯೇ ಸಿದ್ದಿ ಜೋಹರನಿಂದ ಆಮಿಷಕ್ಕೊಳಪಟ್ಟ ದಳವಿ ಮತ್ತು ಸುರ್ವೆ ಅವರ ಸೈನ್ಯಗಳನ್ನು ಎದುರಿಸಬೇಕಾಗಿತ್ತು. ಸ್ವತಂತ್ರ ರಾಜ್ಯದ ಕನಸಿನಲ್ಲಿ ತನ್ನೊಂದಿಗೆ ಕೈಗೂಡಿಸಲು ಅವರನ್ನು ಶಿವಾಜಿ ಅದೆಷ್ಟೇ ಕೇಳಿಕೊಂಡರು ಅಧಿಕಾರದ ಆಸೆಯನ್ನು ಹೊಂದಿದ್ದ ಅವರಿಬ್ಬರು ಒಪ್ಪದೆ ಹೋದಾಗ ವಿಧಿ ಇಲ್ಲದೆ ಅವರೊಂದಿಗೆ  ಕಾಳಗ ಮಾಡಿ ಅವರನ್ನು ಸಾಯಿಸಿದ ಶಿವಾಜಿ ಓಡುತ್ತಲೆ ಹೋಗಿ ಕೋಟೆಯ ಮೇಲ್ಭಾಗದಲ್ಲಿದ್ದ ತೋಪುಗಳಿಗೆ ಬೆಂಕಿ ಇಟ್ಟು ಫಿರಂಗಿ ಹಾರಿಸಿ ತನ್ನ ಸುರಕ್ಷತೆಯನ್ನು ಸಾಬೀತುಪಡಿಸಿದರು. ಅತ್ಯಂತ ನೆಮ್ಮದಿಯ ನಿಟ್ಟುಸಿರಿಟ್ಟ ಬಾಜಿ ಪ್ರಭು ದೇಶಪಾಂಡೆ ಸಮಾಧಾನದಿಂದ ನೆಲಕ್ಕೊರಗಿದನು.


ಸ್ವಾತಂತ್ರ್ಯಕ್ಕಾಗಿ ಭಾರತ ದೇಶದಲ್ಲಿ ಸಾವಿರಾರು ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ, ಬಲಿದಾನಗೈದಿದ್ದಾರೆ. ಅಂತಹ ಮಹಾನ್ ವೀರರಲ್ಲಿ ಭಾಜಿ ಪ್ರಭು ದೇಶಪಾಂಡೆ ಒಬ್ಬರು. ಮುಂದೆ ಶಿವಾಜಿ ಮಹಾರಾಜನು ಬಾಜಿ ಪ್ರಭುವಿನ ಆಶಯದಂತೆ, 1595ರಲ್ಲಿ ಮೊಘಲ್ ಚಕ್ರವರ್ತಿಯನ್ನು ಸೋಲಿಸಿ ಇಡೀ ಭಾರತ ದೇಶಕ್ಕೆ ಸಾಮ್ರಾಟನಾದನು, ಛತ್ರಪತಿಯಾದನು.


ಬಾಜಿ ಪ್ರಭು ದೇಶಪಾಂಡೆಯ ಈ ಕಥೆಯು ದೇಶದ ಪ್ರತಿ ಮನೆ ಮನೆಗಳ ತಾಯಂದಿರ ಬಾಯಲ್ಲಿ ಹೊರಹೊಮ್ಮಲಿ.


- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top