ಗೆಳೆತನದ ಸುವಿಶಾಲ ಆಲದಡಿ ಮಲಗಿರಲು
ಭಯವೆಂಬುದೆಲ್ಲಿಹುದು ಮನುಜ ಕುಲಕೆ|
ಎಳೆತನದಿಂದ ತೊಡಗಿ ಮುದಿತನದ ವರೆಗು
ಪಸರಿಸಿದೆ ಸ್ನೇಹಸೇತುವೆ ಎರಡು ದಡಕು ||
ಸುಖ ದುಃಖ ಹಂಚುತಲಿ ಕಷ್ಟಗಳ ಮರೆಯುತಿರೆ
ಗೆಳೆತನದ ಬಂಧ ಸಂಬಂಧ ನಾಕ ಸುಖವು |
ಅಲ್ಲಿಲ್ಲ ಮುಚ್ಚುಮರೆ ಅಲ್ಲಿಲ್ಲ ತರತಮವು
ಎರಡು ದೇಹದ ನಡುವೆ ಬೆಸೆದ ಒಲವು||
ಕುಚೇಲ ಕೃಷ್ಣರ ಸ್ನೇಹ ನಮಗೆ ಮಾದರಿಯಾಗೆ
ದ್ರೋಣ ದ್ರುಪದರ ಸ್ನೇಹ ಮರೆತರದುವೆ ಸೊಗಸು ।
ತಂದೆ ಮಕ್ಕಳ ಸ್ನೇಹ ತಾಯಿ ನೀಡಿದ ಮಮತೆ
ಎಲ್ಲದಕು ಪಂಚಾಂಗ ಗೆಳೆತನದ ಸರಸ||
ವಿಶ್ವವನೆ ತರಬಹುದು ಗೆಳೆತನದ ಸೂರಿನಡಿ
ಕರವಿಡಿದು ತಿಳಿವಳಿಕೆ ಹಂಚಿಕೊಳಲು|
ವರವೀವ ದೇವರನು ನೆರೆನಂಬಿ ಬದುಕಿದರೆ
ಗೆಳತನದ ಕಣ್ಣಿಯಲಿ ವರ ಬಂಧ ನೆಳಲು||
ವಿ.ಬಿ.ಕುಳಮರ್ವ, ಕುಂಬ್ಳೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ