ಏಕಲವ್ಯ, ಈ ಒಂದು ಹೆಸರು ಮಹಾಭಾರತದ ಸಮಯದಿಂದ ಇಂದಿನವರೆಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಏಕೆಂದರೆ ಆತ ತಾನು ಮನಸಾರೆ ಸ್ವೀಕರಿಸಿದ ಗುರುವಿನ ಬಳಿ ವಿದ್ಯೆ ಕಲಿಯುವ ಅವಕಾಶ ದೊರಕಲಿಲ್ಲ. ಆದರೂ ಕೂಡ ಆತ ಮೂರ್ತಿಯ ರೂಪದಲ್ಲಿ ಗುರುವನ್ನು ಪ್ರತಿಷ್ಠಾಪಿಸಿ ಒಬ್ಬ ಶ್ರೇಷ್ಠ ಬಿಲ್ವಿದ್ಯೆ ಪ್ರವೀಣನಾದವನು.
ಹಾಗಾದರೆ ಇಂದು ನಾವು ಏಕಲವ್ಯನ ಹುಟ್ಟು ಮತ್ತು ಆತ ತನ್ನ ಗುರುವಿಗೆ ಗುರು ದಕ್ಷಿಣೆಯಾಗಿ ಹೆಬ್ಬೆರಳನ್ನು ಅರ್ಪಿಸಿದ ಬಗ್ಗೆ ತಿಳಿದುಕೊಳ್ಳೋಣ.
ಹಸ್ತಿನಾಪುರ ಊರಿನ ಪಕ್ಕದ ಕಾಡಿನಲ್ಲಿ ನಿಷಾಧರು ಎನ್ನುವ ಬುಡಕಟ್ಟು ಸಂಸ್ಕೃತಿಯನ್ನು ಆನುಸರಿಸುವ ಒಂದು ಪಂಗಡ ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದರು. ಆ ರಾಜ್ಯಕ್ಕೆ ಹಿರಣ್ಯಧಾತು ಎನ್ನುವ ರಾಜನಿದ್ದು, ಆತನಿಗೆ ಹುಟ್ಟಿದ ಮಗ ಏಕಲವ್ಯ ಎನ್ನುವುದು ಕೆಲವು ಕಥೆಗಳಲ್ಲಿ ಪ್ರಸ್ತಾಪಿಸಿದರೆ, ಇನ್ನೂ ಕೆಲವು ಕಡೆ ಹಿರಣ್ಯಧಾತುವಿಗೆ ಮಕ್ಕಳಿಲ್ಲದ ಕಾರಣ ಆತನನ್ನು ದತ್ತುಪಡೆದ ಎಂದು ಹೇಳಲಾಗುತ್ತದೆ.
ಏಕಲವ್ಯನ ಮೂಲ ಹೆಸರು ಅಭಯ ಎನ್ನುವುದು ಪುರಾಣಗಳಲ್ಲಿರುವ ಉಲ್ಲೇಖ. ಕಾಡಿನ ಜನರೆಂದ ಮೇಲೆ ಭೇಟೆಯಾಡಲು ಬೇಕಾದ ವಿದ್ಯೆ ರಕ್ತಗತವಾಗಿ ಬಂದಿರುತ್ತದೆ, ಏಕೆಂದರೆ ಅವರ ದಿನನಿತ್ಯದ ಜೀವನಕ್ಕೆ ಬೇಕಾದ ಆಹಾರವು ಭೇಟೆಯ ಮೂಲಕ ನಡೆಯಬೇಕಿರುತ್ತದೆ. ಅಭಯ ಕೂಡ ಚಿಕ್ಕಂದಿನಿಂದಲೇ ಚುರುಕಾಗಿದ್ದನು. ಬಿಲ್ವಿದ್ಯೆ ಕಲಿಸುತ್ತಿದ್ದ ಗುರು ಈತನ ವಿದ್ಯೆ ಕಲಿಯುವಿಕೆಯಲ್ಲಿದ್ದ ಏಕಾಗ್ರತೆ ಕಂಡು ಏಕಲವ್ಯ ಎಂದು ಹೆಸರಿಟ್ಟರು ಎನ್ನುವುದು ಕಥೆಗಳಲ್ಲಿ ದಾಖಲಾದ ಅಂಶ.
ಏಕಲವ್ಯನ ಶೃದ್ಧೆ ಮತ್ತು ಪ್ರತಿಭೆಯನ್ನು ತಿಳಿದ ಗುರು ಆತನ ತಂದೆಯ ಬಳಿ ಒಂದು ಸಲಹೆಯನ್ನು ನೀಡುತ್ತಾರೆ. ಅದೇನೆಂದರೆ ಇನ್ನು ಒಳ್ಳೆಯ ಗುರುವಿನ ಮೂಲಕ ಬಿಲ್ವಿದ್ಯೆ ಕಲಿಸಿದರೆ ಈತನನ್ನು ಒಬ್ಬ ಶ್ರೇಷ್ಠ ಬಿಲ್ವಿದ್ಯೆ ಪ್ರವೀಣನನ್ನಾಗಿ ಮಾಡಬಹುದು ಎಂದು ತಿಳಿಸುತ್ತಾನೆ.
ಅಂದಿನ ಕಾಲಘಟ್ಟದಲ್ಲಿ ಶ್ರೇಷ್ಠ ಗುರುಗಳ ಸಾಲಿನಲ್ಲಿ ದ್ರೋಣಾಚಾರ್ಯರು ಒಬ್ಬರಾಗಿದ್ದರು. ಈ ವಿಷಯ ಅರಿತಿದ್ದ ಹಿರಣ್ಯಧಾತು ಅವರ ಬಳಿ ಏಕಲವ್ಯನನ್ನು ಕರೆದುಕೊಂಡು ಹೋಗಿ ವಿದ್ಯಾರ್ಜನೆಯ ಕೋರಿಕೆ ಇಡುತ್ತಾರೆ.
ದ್ರೋಣಾಚಾರ್ಯರಿಗೆ ಏಕಲವ್ಯನನ್ನು ನೋಡಿ ಶಿಷ್ಯನನ್ನಾಗಿ ಸ್ವೀಕರಿಸಬೇಕು ಎಂದೆನಿಸಿದರೂ ಅವರಿಗೇ ಅವರ ಮಾಡಿದ್ದ ಪ್ರತಿಜ್ಞೆ (ತಾನು ತನ್ನೆಲ್ಲ ಜ್ಞಾನವನ್ನು ಕೌರವರು ಮತ್ತು ಪಾಂಡವರಿಗೆ ಧಾರೆಯೆರೆಯುತ್ತೇನೆ ಎಂಬ ಪ್ರತಿಜ್ಞೆ)ಈ ಕೋರಿಕೆಯನ್ನು ತಿರಸ್ಕರಿಸುವಂತೆ ಮಾಡಿತು. ಅಲ್ಲದೆ ಅಂದಿನ ಕಾಲದಲ್ಲಿ ಬೇರೆ ಬೇರೆ ವರ್ಣಗಳಿದ್ದು ಒಂದೊಂದು ವರ್ಣಕ್ಕೂ ಅವರದೇ ಆದ ಕುಲಕಸುಬು ಏಂಬುದಿತ್ತು. ಏಕಲವ್ಯನು ಕಾಡಿನಲ್ಲಿ ಬೇಟೆಯಾಡಿ ಬದುಕುವ ಪಂಗಡದವನಾದ್ದರಿಂದ ಆತನ ವಿದ್ಯೆ ಉಪಯೋಗಕ್ಕಿಂತ ದುರುಪಯೋಗ ಆಗುವ ಸಂಭವವಿರಬಹುದು ಎನ್ನುವ ಆಲೋಚನೆಯಿಂದನು ದ್ರೋಣಾಚಾರ್ಯರು ಅವರ ವಿನಂತಿಯನ್ನು ಪರಿಗಣಿಸಲಿಲ್ಲ. ಆದರೆ ಅದಾಗಲೇ ಮನಸ್ಸಿನಲ್ಲಿ ದ್ರೋಣಾಚಾರ್ಯರನ್ನೇ ಗುರುವಾಗಿ ಏಕಲವ್ಯ ಸ್ವೀಕರಿಸಿದನು. ಅಲ್ಲಿಂದ ಹಿಂದಿರುಗಬೇಕಾದರೆ ಗುರುಗಳು ನಿಂತಿದ್ದ ಜಾಗದ ಮಣ್ಣನ್ನು ಕೊಂಡೊಯ್ದು ಆತ ಬಿಲ್ವಿದ್ಯೆ ಕಲಿಯುವ ಸ್ಥಳದಲ್ಲಿ ಮೂರ್ತಿಯನ್ನು ನಿರ್ಮಿಸಿದನು.
ಹೀಗೆ ಒಂದು ದಿನ ದ್ರೋಣಾಚಾರ್ಯರು ತನ್ನ ಶಿಷ್ಯಂದಿರ ಜೊತೆ ವಿಹರಿಸುವಾಗ ನಾಯಿಯೊಂದು ಶಿಷ್ಯಂದಿರ ನೋಡಿ ಬೊಗಳುವುದಕ್ಕೆ ಆರಂಭಿಸಿತು. ಆ ನಾಯಿಯನ್ನು ಹೆದರಿಸಿ ಸುಮ್ಮನಿರಿಸಬೇಕೆಂದುಕೊಳ್ಳುವಾಗಲೆ ಎಲ್ಲಿಂದಲೋ ಬಂದ ಕೆಲವು ಬಾಣಗಳು ನಾಯಿಯ ಬಾಯಿಗೆ ಚುಚ್ಚಿದವು. ಆದರೆ ಒಂದು ತೊಟ್ಟು ರಕ್ತ ಬರದೆ ಇದ್ದದ್ದನ್ನು ನೋಡಿ ದ್ರೋಣಾಚಾರ್ಯರಿಗೆ ಆಶ್ಚರ್ಯ ಎನಿಸಿತು! ಏಕೆಂದರೆ ಈ ಶಬ್ದ ವಿದ್ಯೆ ಗೊತ್ತಿರುವ ವ್ಯಕ್ತಿಯೆಂದರೆ ತಾನು ಮಾತ್ರ ಮತ್ತು ಈ ವಿದ್ಯೆಯನ್ನು ಇನ್ನು ಶಿಷ್ಯಂದಿರಿಗೆ ತಿಳಿಸಿ ಕೊಡಲಿಲ್ಲ. ಹೀಗಿರುವಾಗ ಈ ವಿದ್ಯೆ ಗೊತ್ತಿರುವ ಇನ್ನೊಬ್ಬ ಬಿಲ್ವಿದ್ಯೆ ಪ್ರವೀಣ ಯಾರು ಎಂದು ಬಾಣಗಳು ಬಂದ ಜಾಗದ ಕಡೆಗೆ ಹೊರಟರು.
ಕಾಡಿನ್ಯ ಮದ್ಯೆ ದ್ರೋಣಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಿಲ್ವಿದ್ಯೆಯಲ್ಲಿ ತೊಡಗಿರುವ ಒಬ್ಬ ಹುಡುಗನನ್ನು ನೋಡಿ ಗುರುಗಳು ಒಂದು ಕ್ಷಣ ಸಂತೋಷಗೊಂಡರು. ನಂತರ ಆತನ ಬಗ್ಗೆ ವಿಚಾರಿಸಿದಾಗ ಏಕಲವ್ಯ ಹಿಂದೊಮ್ಮೆ ಆತನ ತಂದೆಯ ಜೊತೆ ಗುರುವನ್ನು ಭೇಟಿಯಾದ ಪ್ರಸಂಗದ ಬಗ್ಗೆ ವಿವರಣೆ ನೀಡಿದನು.
ಏಕಲವ್ಯನ ಹೆಬ್ಬೆರಳನ್ನು ಗುರು ದಕ್ಷಿಣೆಯಾಗಿ ಕೇಳಿದ ಪ್ರಸಂಗ!
ಈಗ ಗುರು ದ್ರೋಣಾಚಾರ್ಯರು ಒಂದು ದ್ವಂದ್ವಕ್ಕೆ ಸಿಲುಕುತ್ತಾರೆ. ಅದೇನೆಂದರೆ ಈಗಾಗಲೇ ದ್ರೋಣಾಚಾರ್ಯರು ಅರ್ಜುನನ ಶೃದ್ಧೆ ಮತ್ತು ಪ್ರಾವಿಣ್ಯತೆಯನ್ನು ಗುರುತಿಸಿ ಆತನನ್ನು ಜಗತ್ತಿನ ಶ್ರೇಷ್ಠ ಬಿಲ್ವಿದ್ಯೆ ಪ್ರವೀಣನನ್ನಾಗಿ ಮಾಡುವ ಸಂಕಲ್ಪ ಮತ್ತು ಮಾತನ್ನು ಕೊಟ್ಟಿದ್ದಾರೆ. ಆದರೆ ಇಲ್ಲಿ ಏಕಲವ್ಯ ಈಗಾಗಲೇ ಅರ್ಜುನನಿಗೆ ಸರಿಸಮಾನನಾಗಿ ಯುದ್ದ ಮಾಡಬಲ್ಲ ಬಿಲ್ಲುಗಾರನಾಗಿ ಬೆಳೆಯುತ್ತಿದ್ದುದರಿಂದ ನಾನು ಈತನಿಗೆ ಕೊಟ್ಟ ಮಾತು ಮತ್ತು ಸಂಕಲ್ಪದ ಈಡೇರಿಕೆಗೆ ತೊಡಕಾಗಬಹುದು ಎಂದು ಆಲೋಚಿಸುತ್ತಾರೆ. ಹಾಗಾದರೆ ಈ ಸ್ವಾರ್ಥ ಭಾವದಿಂದ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಗುರು ದಕ್ಷಿಣೆಯಾಗಿ ಕೇಳಿದರೆ?.
ಇಲ್ಲ ಇನ್ನು ಒಂದು ಮುಖ್ಯ ಕಾರಣವಿದೆ, ಅದೇನೆಂದರೆ ಏಕಲವ್ಯನ ತಂದೆ ಹಿರಣ್ಯಧಾತು ಜರಾಸಂಧನ ಸೇನಾಧಿಪತಿ. ಜರಾಸಂಧ ಒಬ್ಬ ರಾಕ್ಷಸ ಆತ ಮನುಕುಲದ ವಿರುದ್ಧವಾಗಿ ಹೋರಾಡುವವನು. ಹಾಗಾಗಿ ಮುಂದೊಂದು ದಿನ ಏಕಲವ್ಯನು ತಂದೆಯ ಸ್ಥಾನವನ್ನು ಸ್ವೀಕರಿಸಿ ಜರಾಸಂಧನ ಸೇನಾಧಿಪತಿಯಾದರೆ, ಈತನ ವಿದ್ಯೆ, ಪ್ರಾವಿಣ್ಯತೆ ಎಲ್ಲವೂ ಅಧರ್ಮದ ಪರವಾಗಿ ಉಪಯೋಗ ಆಗುವುದು ಎಂಬ ದೂರ ದೃಷ್ಟಿಯಿಂದ ದ್ರೋಣಾಚಾರ್ಯರು ಏಕಲವ್ಯನ ಬಳಿ ಗುರು ದಕ್ಷಿಣೆಯಾಗಿ ಹೆಬ್ಬೆರಳು ನೀಡುವುದಕ್ಕೆ ಹೇಳುತ್ತಾರೆ. ಹೆಬ್ಬೆರಳೆ ಏಕೆ ಕೇಳಿದರು? ಎಂದರೆ ಬಾಣವನ್ನು ಹೆಬ್ಬೆರಳಿನ ಮೂಲಕ ಹಿಡಿದರೆ ಅದು ಕ್ರಮಿಸುವ ದೂರ ಹೆಚ್ಚು ಮತ್ತು ಪರಿಣಾಮಕಾರಿಯಾಗಿಯೂ ಇರುವುದು ಹಾಗಾಗಿ ಆಚಾರ್ಯರು ಆ ಬೆರಳನ್ನೆ ಕೇಳಿದ್ದರು. ಏಕಲವ್ಯ ತನ್ನ ಗುರುವಿನ ಅಪೇಕ್ಷೆಯಂತೆ ಒಂದು ಸಾರಿಯೂ ಹಿಂದೆ ಮುಂದೆ ಯೋಚಿಸದೆ ತನ್ನ ಹೆಬ್ಬೆರಳನ್ನು ಕತ್ತರಿಸಿ ಗುರುವಿಗೆ ದಕ್ಷಿಣೆಯಾಗಿ ನೀಡುತ್ತಾನೆ. ಇದೆಲ್ಲವನ್ನೂ ನೋಡಿದ ಅರ್ಜುನ ಗುರುವಿನ ಬಳಿ ಬೇಸರದಲ್ಲಿ ಕೆಲವೊಂದು ಮಾತುಗಳನ್ನು ಹೇಳುತ್ತಾನೆ. ಅದೇನೆಂದರೆ ಗುರುಗಳೇ ನಿಮಗೆ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿಲ್ಲವೇ?. ಇನ್ನೊಬ್ಬರ ಶಕ್ತಿಯನ್ನು ಕುಂಠಿತಗೊಳಿಸಿ ನಾನು ಶ್ರೇಷ್ಠ ವ್ಯಕ್ತಿಯಾಗ ಬೇಕು ಎನ್ನುವುದು ಎಷ್ಟು ಸರಿ ಗುರವರ್ಯರೆ? ಎಂದು ಕೇಳುತ್ತಾನೆ ಆದರೆ ದೂರದೃಷ್ಟಿ ಅರಿತ ಗುರುವರ್ಯರು ಇದೆಲ್ಲವನ್ನೂ ಸಮಾಧಾನಚಿತ್ತರಾಗಿ ಕೇಳುತ್ತಾರೆ. ಇದಾದ ನಂತರವೂ ಕೇವಲ ನಾಲ್ಕೇ ನಾಲ್ಕು ಬೆರಳುಗಳಲ್ಲಿ ಏಕಲವ್ಯ ಬಿಲ್ವಿದ್ಯೆಯನ್ನು ಕಲಿತು ಒಬ್ಬ ಶ್ರೇಷ್ಠ ಬಿಲ್ಲುಗಾರನಾಗಿ ಪ್ರಾವಿಣ್ಯತೆ ಹೊಂದುತ್ತಾನೆ.
ಏಕಲವ್ಯನ ಅಂತ್ಯವಾಗಿದ್ದು ಹೇಗೆ?
ಹಿರಣ್ಯಧಾತುವಿನ ಕಾಲದ ನಂತರ ಏಕಲವ್ಯ ಜರಾಸಂಧನ ಸೇನಾಧಿಪತಿಯಾಗಿ ಕಾರ್ಯ ಆರಂಭಿಸುತ್ತಾನೆ. ಕಂಸನ ವಧೆಯ ನಂತರ ಜರಾಸಂಧನು ತನ್ನ ಸೇನೆಯ ಮೂಲಕ ಮಥುರದ ಮೇಲೆ ದಾಳಿ ಮಾಡುತ್ತಾನೆ. ಆಗ ಕೃಷ್ಣನು ಜರಾಸಂಧನನ್ನು ಕೊಲ್ಲುತ್ತಾನೆ, ಆ ವೇಳೆ ಸೇನೆಯ ಸೇನಾಧಿಪತಿ ಆಗಿದ್ದ ಏಕಲವ್ಯ ಒಂದು ಶಪಥ ಮಾಡುತ್ತಾನೆ. ಅದೇನೆಂದರೆ ತನ್ನ ರಾಜನನ್ನು ಕೊಂದಿದ್ದಕ್ಕೆ ಪ್ರಾಯಶ್ಚಿತ್ತವಾಗಿ ನಾನು ಎಲ್ಲ ಯಾದವರನ್ನು ಕೊಲ್ಲುತ್ತೆನೆ ಎಂದು ನಿಶ್ಚಯಿಸಿ
ಕೃಷ್ಣನ ಮೇಲೆ ಯುದ್ದ ಸಾರುತ್ತಾನೆ. ಕೃಷ್ಣನಿಗೂ ಕೂಡ ಏಕಲವ್ಯನ ಶಕ್ತಿಯನ್ನು ನೋಡಿ ಒಂದು ಕ್ಷಣ ಆಶ್ಚರ್ಯಗೊಳ್ಳುತ್ತಾನೆ. ಯುದ್ದದಲ್ಲಿ ಕೃಷ್ಣ ಏಕಲವ್ಯನ ಕೊಲ್ಲುತ್ತಾನೆ ಏಕೆಂದರೆ ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ಈತನು ಕೂಡ ಕೌರವರ ಅಧರ್ಮದ ಪರ ನಿಲ್ಲುತ್ತಾನೆ ಎನ್ನುವ ದೂರದೃಷ್ಟಿಯಿಂದ.
ಏಕಲವ್ಯನಿಂದ ನಾವು ಕಲಿಯಬಹುದಾದ ಪಾಠ?
ಕಲಿಯುವುದಕ್ಕೆ ಶ್ರದ್ಧೆಯೊಂದು ಇದ್ದರೆ ಆತ ಎಂತಹ ಪರಿಸ್ಥಿತಿಯಲ್ಲಿ ಇದ್ದರೂ ಕಲಿಕೆ ನಿಲ್ಲುವುದಿಲ್ಲ ಮತ್ತು ಸಾಧನೆಗೆ ತೊಡಕಾಗುವುದಿಲ್ಲ. ಆದರೆ ಪ್ರಾವೀಣ್ಯತೆ ಹೊಂದಿದ ನಂತರ ನಾವು ಯಾವ ಹಾದಿಯಲ್ಲಿ ಹೋಗುತ್ತೇವೆ ಎನ್ನುವುದು ನಮ್ಮ ಅಳಿವು ಉಳಿವಿಗೆ ಕಾರಣವಾಗುತ್ತದೆ. ಏಕಲವ್ಯನ ಪ್ರಾವೀಣ್ಯತೆಯ ಬಗ್ಗೆ ಎರಡು ಮಾತಿಲ್ಲ, ಏಕೆಂದರೆ ಕೃಷ್ಣನ ವಿರುದ್ಧ ಯುದ್ದದಲ್ಲಿ ಸ್ಪರ್ಧೆಯೊಡ್ಡಿದವನು ಇವನು. ಆದರೆ ಅದು ಉಪಯೋಗ ಆಗುತ್ತಿದ್ದದ್ದು ಮಾತ್ರ ಅಧರ್ಮೀಯರಿಗೆ. ಹಾಗಾಗಿ ನಾವು ಕೂಡ ಎಲ್ಲಾ ತರಹದ ಜ್ಞಾನ ಸಂಪಾದಿಸಿದರೂ ಅದು ಸಮಾಜದ ಒಳಿತಿನ ವಿರುದ್ಧ ಉಪಯೋಗವಾಗುತ್ತಿದ್ದರೆ ಅಂತಹ ಜ್ಞಾನ ಮತ್ತು ಸಾಧನೆಗೆ ಇತಿಹಾಸದಲ್ಲಿ ಅತ್ಯಂತ ಮಹತ್ತರವಾದ ಸ್ಥಾನ ಸಿಗುವುದಕ್ಕೆ ಸಾಧ್ಯವಿಲ್ಲ.
- ಪ್ರದೀಪ ಶೆಟ್ಟಿ ಬೇಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ