'ಶಿಸ್ತು' ಇದು ಬಹಳ ದೊಡ್ಡ ಪದ. ಬಹಳ ಅರ್ಥಗರ್ಭಿತವಾದ ಮತ್ತು ಗಾಂಭೀರ್ಯತೆಯನ್ನುಳ್ಳ ಪದವಾಗಿದೆ. ಶಿಸ್ತಿನ ಪಾಲನೆ ಬಹಳ ಕಠಿಣವಾಗಿರುತ್ತದೆ. ಶಿಸ್ತಿನ ಜೀವನ ಮಾರ್ಗ ಕಷ್ಟಕರವಾದರೂ ಸಮಾಜದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ. ಆ ಮೂಲಕ ಚಾರಿತ್ರ್ಯ ನಿರ್ಮಾಣಕ್ಕೆ ನಾಂದಿಯಾಗುತ್ತದೆ. ಇರುವೆಗಳು ಜೀವಿಗಳಲ್ಲಿ ಅತಿ ಸಣ್ಣ ಗಾತ್ರದ್ದೆಂದು ನಾವು ನಿರ್ಲಕ್ಷ್ಯೆ ತೋರುವಂತಿಲ್ಲ. ಏಕೆಂದರೆ ಇರುವೆಗಳ ಶಿಸ್ತನ್ನು ಸಾಲಿನಲ್ಲಿ ನೋಡಿ ಕಲಿಯಬೇಕಿದೆ. ತರಬೇತಿ ಹೊಂದಿದ ಸಿಪಾಯಿಗಳಂತೆ ಇರುವೆಗಳ ಶಿಸ್ತು ಇರುತ್ತದೆ. ಅಂದಹಾಗೆ ಸಿಪಾಯಿಗಳು ಕಟ್ಟುನಿಟ್ಟಿನ ನಿಯಮ ಪಾಲನೆಯ ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೆ. ಶಿಸ್ತು ಪಾಲನೆಯ ಮೂಲಕ ರಾಷ್ಟ್ರ ರಕ್ಷಣೆ ಮಾಡುತ್ತಾರೆ. ಬೆಳಗ್ಗೆ ಹಾಸಿಗೆಯಿಂದ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಶಿಸ್ತಿನ ಜೀವನಕ್ಕೆ ತಮ್ಮನ್ನು ಒಗ್ಗಿಸಿಕೊಂಡಿರುತ್ತಾರೆ. ಯಾರ್ಯಾರು ಶಿಸ್ತು ಬದ್ಧ ಜೀವನ ನಡೆಸಿದ್ದಾರೋ ಅವರೆಲ್ಲರೂ ಅತ್ಯುನ್ನತ ಸ್ಥಾನದಲ್ಲಿದ್ದಾರೆಂಬ ವಿಚಾರ ನಮಗೆ ಇತಿಹಾಸದಿಂದ ಗೊತ್ತಾಗಿದೆ.
ಈಜಿಪ್ಟಿನ ನಾಗರೀಕತೆಯಲ್ಲಿ ಕಂಡುಬರುವ ರಾಜರು ಅಳವಡಿಸಿಕೊಂಡ ಶಿಸ್ತುಬದ್ಧ ಆಡಳಿತ, ಚಕ್ರವರ್ತಿ ಅಮೆನ್ ಹೊಟೆಪ್ ಪಾಲಿಸಿದ ನೀತಿ ನಿಯಮಾವಳಿಗಳು, ಕಾನೂನುಗಳು ಶಿಸ್ತುಬದ್ಧತೆಗೆ ಸಾಕ್ಷಿಯಾಗಿವೆ. ಜಗತ್ತಿನ ಅದ್ಭುತಗಳೆನಿಸಿದ ಪಿರಮಿಡ್ ಗಳನ್ನು ನಿರ್ದಿಷ್ಟ ಅವಧಿಯಲ್ಲಿ ನಿರ್ಮಾಣ ಮಾಡಿರುವುದು ಶಿಸ್ತಿನ ಪಾಲನೆಗೆ ಒಂದು ಉದಾಹರಣೆಯಾಗಿದೆ. ಬ್ಯಾಬಿಲೋನಿಯಾ ನಾಗರೀಕತೆಯ ಪ್ರಸಿದ್ಧ ಚಕ್ರವರ್ತಿ ಹಮ್ಮುರಾಬಿಯ ನೀತಿಸಂಹಿತೆಗಳಿಂದ ಅವರ ಜೀವನ ಎಷ್ಟು ಶಿಸ್ತು ಬದ್ದವಾಗಿತ್ತೆಂದು ತಿಳಿಯುತ್ತದೆ. ರೋಮನ್ ಸಾಮ್ರಾಜ್ಯದ ಸಿಸೇರಿಯನ್ ನೀತಿಸಂಹಿತೆ ರೋಮನ್ ಲಾ ಎಂದೇ ಪ್ರಸಿದ್ಧವಾಗಿವೆ. ಪ್ರಾಚೀನ ಭಾರತದ ಮೌರ್ಯ ಸಾಮ್ರಾಜ್ಯದಲ್ಲಿ ಚಾಣಕ್ಯನ ನೀತಿಸಂಹಿತೆಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲಾಗಿತ್ತು. ಇವು ರಾಜ್ಯಾಡಳಿತದ ಮೂಲಕ ಶಿಸ್ತುಬದ್ಧ ಜೀವನಕ್ಕೆ ತಳಪಾಯ ಹಾಕಿಕೊಟ್ಟವು. ಇತಿಹಾಸವು ನಮಗೆ ಶಿಸ್ತಿನ ಪಾಠವನ್ನು ಹೇಳುತ್ತವೆ. ಬುದ್ಧ, ಮಹಾವೀರ, ಶಂಕರ, ರಾಮಾನುಜ, ಮಧ್ವಾಚಾರ್ಯರು, ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾದೇವಿ, ಮೀರಾಬಾಯಿ, ಗುರುನಾನಕ್, ಚೈತನ್ಯ ,ರಮಾನಂದ ಮುಂತಾದವರು ಭಗವಂತನನ್ನು ಕಾಣಲು ಅನುಸರಿಸಿದ ಭಕ್ತಿಯೊಳಗಿನ ಶಿಸ್ತು ಅವರವರ ಬದುಕಿನ ಸಾಧನೆಗೆ ಮೆಟ್ಟಿಲಾಯಿತು. ಅಶೋಕ, ಕನಿಷ್ಕ, ಸಮುದ್ರಗುಪ್ತ, ಅಲ್ಲಾವುದ್ದೀನ್ ಖಿಲ್ಜಿ, ಅಕ್ಬರ್, ಬ್ರಿಟಿಷರ ರಾಬರ್ಟ್ ಕೈವ್, ವೆಲ್ಲೆಸ್ಲಿ, ಡಾಲ್ ಹೌಸಿ, ರಿಪ್ಪನ್, ಡಫರಿನ್, ರಾಣಿ ಎಲಿಜಬೆತ್ ಮುಂತಾದವರ ಆಡಳಿತದಲ್ಲಿನ ಶಿಸ್ತು ಅವರನ್ನು ಇಂದಿಗೂ ಸ್ಮರಿಸುವಂತೆ ಮಾಡಿದೆ. ರಾಜಾರಾಂ ಮೋಹನ ರಾಯ್, ಜ್ಯೋತಿಬಾ ಫುಲೆ, ಸ್ವಾಮಿ ವಿವೇಕಾನಂದ, ಅ್ಯನಿಬೇಸಂಟ್ ಮುಂತಾದವರ ಸಮಾಜ ಸುಧಾರಣೆಯ ಶಿಸ್ತು ಸಮಾಜವನ್ನು ತಿದ್ದುವ ಕೆಲಸದಲ್ಲಿ ನಿರತವಾಗಿತ್ತು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಮುಂತಾದವರ ಅವಿರತ ಹೋರಾಟದ ಶಿಸ್ತು ಭಾರತವನ್ನು ಸ್ವಾತಂತ್ರ್ಯ ರಾಷ್ಟ್ರವನ್ನಾಗಿಸಿತು. ಸರ್.ಎಂ.ವಿಶ್ವೇಶ್ವರಯ್ಯ, ಡಾ|| ಬಿ.ಆರ್.ಅಂಬೇಡ್ಕರ್ ರವರ ಜೀವನ ಶಿಸ್ತು. ಇವೆಲ್ಲವೂ ನಮಗೆ ಶಿಸ್ತಿನ ದಿಗ್ದರ್ಶನವನ್ನು ಮಾಡಿಸುತ್ತವೆ. ಶಿಸ್ತಿಗೆ ಶಿವಪ್ಪನಾಯಕನೇ ಸರಿ ಎಂಬ ಮಾತನ್ನು ಎಂದಿಗೂ ಯಾರೂ ಅಲ್ಲಗಳೆಯುವಂತಿಲ್ಲ.
ಇಡೀ ಬ್ರಹ್ಮಾಂಡದ ನಿಜವಾದ ಆಡಳಿತಗಾರನೆಂದರೆ ಶಿಸ್ತು ಎಂದು ಹೇಳಲಾಗುತ್ತದೆ. ಭೂಮಿ, ಸೂರ್ಯ, ಚಂದ್ರ ಮತ್ತು ಇತರ ಗ್ರಹಗಳು, ಪ್ರಕೃತಿಯಲ್ಲಿ ಪರಿಪೂರ್ಣ ಸಾಮರಸ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಕೆಲವು ನಿಯಮಾವಳಿಗಳಿಂದ ನಿಯಂತ್ರಿಸಲ್ಪಡುತ್ತವೆ. ಅದೇ ರೀತಿ ಸಮಾಜವೂ ಒಂದು ನಿರ್ದಿಷ್ಟ ನೀತಿ ಸಂಹಿತೆಯಿಂದ ನಿಯಂತ್ರಿಸಲ್ಪಡುತ್ತದೆ. ಶಿಸ್ತು ಎಂಬುದು ಸುಸಂಸ್ಕೃತ ಅಸ್ತಿತ್ವಕ್ಕೆ ಬಹಳ ಮುಖ್ಯವಾಗಿರುತ್ತದೆ. ಶಿಸ್ತಿನ ನಾಗರಿಕನು ತನ್ನ ಹಕ್ಕುಗಳಿಗಾಗಿ ಹೋರಾಡುವನು, ಮಾತ್ರವಲ್ಲದೆ ಶಿಸ್ತು ಇತರರಿಗೆ ತಮ್ಮ ಹಕ್ಕುಗಳನ್ನು ಚಲಾಯಿಸಲು ಅವಕಾಶ ನೀಡುತ್ತದೆ. ಶಿಸ್ತುಬದ್ಧ ಸಮಾಜದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ಎಲ್ಲರ ಕಲ್ಯಾಣ ಮತ್ತು ಸಂತೋಷಕ್ಕಾಗಿ ಸ್ವಯಂ ನಿಯಂತ್ರಣವನ್ನು ಹೊಂದಬೇಕು. ಅರಿಸ್ಟಾಟಲ್ ಪ್ರಕಾರ ಶಿಸ್ತು ಎಂದರೆ, "ಸಮಾಜವು ಎಲ್ಲರ ಒಳಿತಿಗಾಗಿ ರೂಪಿಸಿದ ನಿಯಮಗಳಿಗೆ ವಿಧೇಯತೆ." ಆಗಿದೆ.
ಶಿಸ್ತಿನ ಪ್ರಯೋಜನಗಳು :
ಇಡೀ ದೇಶದ ಶಕ್ತಿ ಶಿಸ್ತಿನಲ್ಲಿದೆ. ಶಿಸ್ತುಬದ್ಧ ದೇಶದ ನಾಗರಿಕರು, ಸಹಕಾರ ಮತ್ತು ಏಕತೆಯ ಮನೋಭಾವದಿಂದ ಕೆಲಸ ಮಾಡುತ್ತಾರೆ. ಶಿಸ್ತು ಒಂದು ದೇಶವು ಪ್ರಗತಿ ಸಾಧಿಸಲು ಅತ್ಯಗತ್ಯವಾಗಿರುತ್ತದೆ. ಶಿಸ್ತು ಬಾಹ್ಯ ಆಕ್ರಮಣಗಳ ವಿರುದ್ಧ ಹೋರಾಡಲು ಮತ್ತು ರಾಷ್ಟ್ರೀಯ ಏಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯಾವುದೇ ದೇಶವು ತನ್ನ ಪ್ರಜೆಗಳು ಶಿಸ್ತುಬದ್ಧವಾಗಿ ಮತ್ತು ಕೆಲವು ನಿಯಮಗಳನ್ನು ಪಾಲಿಸದ ಹೊರತು ಅಭಿವೃದ್ಧಿಯಾಗಲಾರದು. ಶಿಸ್ತುಬದ್ಧತೆಯ ನಾಗರೀಕರ ಮೂಲಕ ಆಡಳಿತ ನಡೆಸದ ಹೊರತು ಪ್ರಗತಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಶಿಸ್ತು ಅಗತ್ಯವಾಗಿದೆ.
* ಶಿಸ್ತು ಬದ್ಧತೆಯಿಂದ ನಂಬಿಕೆ, ಶ್ರದ್ಧೆ ಮತ್ತು ನಿಷ್ಠೆ, ಆಸಕ್ತಿ, ಸ್ವಾವಲಂಬನೆ, ಧೈರ್ಯ ಹೆಚ್ಚಾಗುವ ಮೂಲಕ ವ್ಯಕ್ತಿಯಲ್ಲಿ ಏನನ್ನಾದರೂ ಸಾಧಿಸುವ ಮನಸ್ಸನ್ನು ಮೂಡಿಸುತ್ತದೆ. ಅಂದರೆ ಸಾಧನೆಗೆ ಅಥವಾ ಯಶಸ್ಸಿಗೆ ಶಿಸ್ತು ಬಹಳ ಮುಖ್ಯ.
ಶಿಸ್ತು ಎಂದರೆ ವೈಯಕ್ತಿಕ ಸ್ವಾತಂತ್ರ್ಯದ ನಿರಾಕರಣೆ ಎಂದಲ್ಲ. ಶಿಸ್ತು ಎಂಬುದರ ಅರ್ಥ ಸ್ವಯಂ ಹೇರಿದ ಸಂಯಮ ಮತ್ತು ನೈತಿಕ ಮೌಲ್ಯಗಳ ನಿರ್ವಹಣೆಯಾಗಿದೆ. ಇದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹೆಚ್ಚು ಪ್ರಸ್ತುತತೆಯನ್ನು ಹೊಂದಿದೆ. ಶಿಸ್ತು ನಮ್ಮಲ್ಲಿ ಸಂಯಮ ಮತ್ತು ಧೈರ್ಯವನ್ನು ಮೈಗೂಡಿಸುವ ಮೂಲಕ ನಮ್ಮನ್ನು ಚರಿತ್ರೆ ನೆನಪಿಸಿಕೊಳ್ಳುವಂತೆ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ. ಶಿಸ್ತನ್ನು ಪಾಲಿಸುವ ವ್ಯಕ್ತಿ ಸಮಾಜದಲ್ಲಿ ಒಳ್ಳೆಯ ಗೌರವನ್ನು ಪಡೆಯು ತ್ತಾನೆ. ಕೆಲವು ವೇಳೆ ವ್ಯಕ್ತಿ ತಾನು ಪಾಲಿಸುವ ಶಿಸ್ತಿನಿಂದ ನಿಷ್ಠುರಕ್ಕೂ ಒಳಗಾಗುತ್ತಾನೆ.
ಶಿಸ್ತನ್ನು ಮೂಡಿಸುವವರು ಯಾರು?
* ಕುಟುಂಬದಲ್ಲಿ ತಂದೆ - ತಾಯಿ, ಮಗು ಶಿಸ್ತುಬದ್ಧವಾಗಿ ಬೆಳೆಯುವಂತೆ ಮಾಡಬೇಕು. ಇದು ಪೋಷಕರದೇ ಕರ್ತವ್ಯವಾಗಿರುತ್ತದೆ.
* ಶಾಲೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸುವಲ್ಲಿ ಪ್ರಮುಖ ಸಂಸ್ಥೆಗಳಾಗಿವೆ. ಇಲ್ಲಿ ಶಿಕ್ಷಕರ ಪಾತ್ರ ಬಹಳಷ್ಟಿರುತ್ತದೆ.
* ಕಬ್ಸ್ ಅಂಡ್ ಬುಲ್ ಬುಲ್ಸ್ , ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಅಂಡ್ ರೇಂಜರ್ಸ್ , ಭಾರತ ಸೇವಾದಳ, ಎನ್. ಸಿ. ಸಿ., ರಾಷ್ಟೀಯ ಸೇವಾ ಯೋಜನೆ ಮುಂತಾದುವು ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸುವ ಸಂಸ್ಥೆಗಳಾಗಿವೆ.
* ಭಾರತದ ರಕ್ಷಣಾ ಪಡೆಗಳಾದ ಭೂಸೇನೆ , ವಾಯುಸೇನೆ, ನೌಕಾಸೇನೆ, ಪ್ಯಾರಾ ಮಿಲಿಟರಿ, ಗಡಿ ಭದ್ರತಾ ಪಡೆಗಳು ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಸ್ತನ್ನು ಮೂಡಿಸುವ ಪ್ರಯತ್ನ ಮಾಡುತ್ತವೆ.
* ವೃತ್ತಿಪರ ತರಬೇತಿ ಶಿಬಿರಗಳು, ಕಾರ್ಯಾಗಾರಗಳು, ವೃತ್ತಿಪರ ಶಿಕ್ಷಣದ ಕೋರ್ಸ್ಗಳು, ಶಾಲಾ ಕಾಲೇಜುಗಳು ಶಿಸ್ತನ್ನು ಕಾಪಾಡುವಲ್ಲಿ ಬಹು ಮುಖ್ಯ ಶ್ರಮವನ್ನು ವ್ಯಯಿಸುತ್ತವೆ.
* ಇಷ್ಟೇ ಅಲ್ಲದೇ ಜನಪರರಿಂದ ಹಿಡಿದು, ಸಂಘ- ಸಂಸ್ಥೆಗಳು ಮತ್ತು ಸರ್ಕಾರದ ಆಡಳಿತಮಟ್ಟದವರೆಗೂ ಶಿಸ್ತು ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಿದೆ.
ಶಿಸ್ತು ಪಾಲನೆಯಲ್ಲಿ ತೊಡಕಾಗುವ ಅಂಶಗಳು :
1. ಸರಿಯಾದ ಸಮಯ ನಿರ್ವಹಣೆ ಮಾಡದಿರವುದು.
2. ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆಲಸ್ಯವೂ ಶಿಸ್ತು ಪಾಲನೆಯಲ್ಲಿ ತೊಡಕುಂಟು ಮಾಡುತ್ತದೆ.
3. ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಒತ್ತಡ ಹೆಚ್ಚಾಗುವುದೂ ಸಹ ಶಿಸ್ತು ಪಾಲನೆಗೆ ತೊಡಕಾಗುತ್ತದೆ.
4. ಅನಾರೋಗ್ಯವೂ ಸಹ ಶಿಸ್ತು ಪಾಲನೆ ಮಾಡುವಲ್ಲಿ ತೊಡಕುಂಟು ಮಾಡುತ್ತದೆ.
5. ಶಿಸ್ತಿನ ಅಭ್ಯಾಸ ಇಲ್ಲದಿರುವುದು, ಶಿಸ್ತುಪಾಲನೆಗೆ ಸಿದ್ಧತೆ ಇಲ್ಲದಿರುವುದು, ಪ್ರಯತ್ನವನ್ನೇ ಮಾಡದಿರುವುದು ಶಿಸ್ತುಪಾಲನೆಯಲ್ಲಿ ತೊಡಕುಂಟು ಮಾಡುವ ಅಂಶಗಳಾಗಿವೆ.
6. ಸಹಕಾರ ಮನೋಭಾವ ಇಲ್ಲದಿರುವುದು.
7. ಸೌಹಾರ್ದಯುತ ವಾತಾವರಣ ಇಲ್ಲದಿರುವುದು.
ಶಿಸ್ತು ಎಲ್ಲರ ಬದುಕಿನಲ್ಲಿಯೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಸೆದುಕೊಂಡಿದೆ.
ಹಾಗಾಗಿ ಎಲ್ಲ ದೃಷ್ಟಿಯಿಂದಲೂ ಗೌರವ ತಂದು ಕೊಡುವ ಶಿಸ್ತನ್ನು ನಾವು ರೂಢಿಸಿಕೊಳ್ಳೋಣ ಮತ್ತು ನಮ್ಮ ಮುಂದಿನ ಪೀಳಿಗೆಗೂ ಕಲಿಸೋಣ.
-ಕೆ.ಎನ್.ಚಿದಾನಂದ ಹಾಸನ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ