ಬೆಂಗಳೂರು: ಸಂಸ್ಕೃತಿ ಚಿಂತಕ, ಲೇಖಕ, ಅಧ್ಯಾತ್ಮ ವಿದ್ವಾಂಸ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ಬರೆದ 'ಕೃಷ್ಣನ ಹೆಸರೇ ಲೋಕಪ್ರಿಯ- ಅನವರತ ಸ್ಫೂರ್ತಿಯ ಸೆಲೆ' ಕೃತಿಯನ್ನು ಸೋಸಲೆ ಶ್ರೀ ವ್ಯಾಸರಾಜ ಮಠದ ವಿದ್ಯಾಕರ್ನಾಟಕ ಸಿಂಹಾಸನಾಧೀಶ್ವರರಾದ ಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಇಂದು (ಆ.9- ಬುಧವಾರ) ಬೆಳಗ್ಗೆ ಲೋಕಾರ್ಪಣೆ ಮಾಡಿದರು.
ಬಸವನಗುಡಿ ಗಾಂಧಿ ಬಜಾರ್ ನ ಸೋಸಲೆ ಶ್ರೀ ವ್ಯಾಸರಾಜ ಮಠದ ಆವರಣದ ಪ್ರಸನ್ನ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ನೆರವೇರಿತು.
ನಾಡಿನ ಸದಭಿರುಚಿಯ ಡಿಜಿಟಲ್ ಮಾಧ್ಯಮ ಬಳಗ ಉಪಯುಕ್ತ.ಕಾಮ್ ಮತ್ತು ಉಪಯುಕ್ತ ಇ-ಪೇಪರ್ ಪತ್ರಿಕೆಯಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ 33 ಕಂತುಗಳಲ್ಲಿ ಪ್ರಕಟವಾಗುತ್ತಿರುವ ಅಕ್ಷರ ಆರಾಧನೆ ಹೆಸರಿನ ಅಂಕಣ ಬರಹಗಳ ಸಂಕಲನವನ್ನು ಇದೀಗ 'ಕೃಷ್ಣನ ಹೆಸರೇ ಲೋಕಪ್ರಿಯ- ಅನವರತ ಸ್ಪೂರ್ತಿಯ ಸೆಲೆ' ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಪ್ರಣವ ಮೀಡಿಯಾ ಹೌಸ್ ತನ್ನ ದಶಮಾನೋತ್ಸವದ ಅಂಗವಾಗಿ ಈ ಅಂಕಣ ಬರಹಗಳನ್ನು ಸಂಗ್ರಹಯೋಗ್ಯ ಪುಸ್ತಕದ ರೂಪದಲ್ಲಿ ಹೊರತಂದಿದೆ. ಪುಸ್ತಕದಲ್ಲಿ ಶ್ರೀಕೃಷ್ಣಾವತಾರದ ಲೀಲೆಗಳು, ಮಹಿಮೆ, ಸಂದೇಶಗಳನ್ನು ಸರಳ ಭಾಷೆಯಲ್ಲಿ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.
ಈ ಸಂದರ್ಭದಲ್ಲಿ ಉಪಯುಕ್ತ.ಕಾಮ್ ಡಿಜಿಟಲ್ ಮಾಧ್ಯಮ ಬಳಗದ ಸಂಪಾದಕ ಚಂದ್ರಶೇಖರ ಕುಳಮರ್ವ, ಕೃತಿಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ: 90356 18076
ಕೃತಿಯ ಕುರಿತು:
ಹೊಸ ಹೊಳಹುಗಳ ಮೂಲಕ ಸ್ಫೂರ್ತಿದಾಯಕ ಓದಿಗೆ ಅನುವು ಮಾಡಿಕೊಡುವ- ಧರ್ಮ- ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಇರುವ ಸಾಂಸ್ಕೃತಿಕ ಸೇವಾಬಂಧು ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ 'ಕೃಷ್ಣನ ಹೆಸರೇ ಲೋಕಪ್ರಿಯ' ಹಲವು ಕಾರಣಗಳಿಂದಾಗಿ ಮಹತ್ವದ ಪುಸ್ತಕ. ಕೃಷ್ಣ ತತ್ವದ ಸಾಂಸ್ಕೃತಿಕ, ಪೌರಾಣಿಕ, ಐತಿಹಾಸಿಕ, ಸಾಹಿತ್ಯಕ, ಧಾರ್ಮಿಕ ನೆಲೆಯ ಅಗಣಿತ ಅಯಾಮಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತ, 33 ಲೇಖನಗಳ ಸಂಗ್ರಹದಲ್ಲಿ ಸರಳ ಸುಂದರ ನಿರೂಪಣೆಯೊಂದಿಗೆ ಓದಿಸಿಕೊಂಡು ಸತ್ವಭರಿತ ಜ್ಞಾನದೌತಣ ನೀಡುತ್ತದೆ.
ಲೇಖಕರಿಂದ ಅನೇಕ ಸಂಪಾದಿತ ಮತ್ತು ಸ್ವಂತ ಕೃತಿಗಳು ಮೂಡಿಬಂದಿದ್ದು, ಸಾರಸ್ವತ ವ್ಯವಸಾಯದಲ್ಲೇ ತೊಡಗಿಸಿಕೊಂಡು ಕ್ರಿಯಾಶೀಲರಾಗಿ ಚಿರಪರಿಚಿತರಾಗುತ್ತಿದ್ದಾರೆ. ಇಲ್ಲೊಂದು ಜ್ಞಾನವೃಷ್ಟಿ ಇದೆ, ಧರ್ಮದೃಷ್ಠಿ ಇದೆ, ಆಧ್ಯಾತ್ಮದ ಬೆಳಕಿದೆ, ಸಾತ್ವಿಕತೆಯ ರೂಪವಿದೆ. ಶಾಸ್ತ್ರೀಯ ಚೌಕಟ್ಟಿದೆ. ಕೃಷ್ಣನ ಕುರಿತು ವಿಭಿನ್ನ ನೆಲೆಯ ಚಿಂತನೆಗಳನ್ನೊಳಗೊಂಡ ಈ ಕೃತಿಯನ್ನು ಆಸಕ್ತರು ಬಂಧು ಮಿತ್ರರಿಗೆ ಉಡುಗೊರೆಯಾಗಿ ನೀಡಲು ಅತ್ಯುತ್ತಮ ಆಯ್ಕೆಯಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ