‘ವೃತ್ತಿ ಪದ್ಧತಿಗೆ ಮೊದಲ ಆದ್ಯತೆ ಇರಲಿ’ - ಮುಲ್ಲೈ ಮುಗಿಲನ್

Upayuktha
0

ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ರಾಷ್ಟ್ರೀಯ  ವಿಚಾರಸಂಕಿರಣಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಮೂಡುಬಿದಿರೆ: ‘ಹೋಮಿಯೋಪಥಿ ಪರ್ಯಾಯ ವೈದ್ಯಕೀಯ ಪದ್ಧತಿಯೇ?’- ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಪಟ್ಟಣದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಹಮ್ಮಿಕೊಂಡ ಎರಡು ದಿನಗಳ ‘ಪ್ರೊವಿನಿಯೋ-23’ ರಾಷ್ಟ್ರೀಯ ವಿಚಾರ ಸಂಕಿರಣ’ವನ್ನು ಶುಕ್ರವಾರ ಉದ್ಘಾಟಿಸಿದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಶ್ನಿಸಿದರು. 


ಆಗ ವಿಚಾರಸಂಕಿರಣದಲ್ಲಿ ಸೇರಿದ್ದ ವಿದ್ಯಾರ್ಥಿಗಳು, ವೈದ್ಯರು, ವೈದ್ಯಕೀಯ ಪ್ರಾಧ್ಯಾಪಕರೆಲ್ಲ ‘ಅಲ್ಲ’ ಎಂದು ಉತ್ತರಿಸಿದರು. ಪ್ರಾಧ್ಯಾಪಕರೊಬ್ಬರು ಎದ್ದು ನಿಂತು ಹೋಮಿಯೋಪಥಿ ಮಹತ್ವವನ್ನು ವಿವರಿಸಿದರು.   


‘ನಾನು ಈ ಪ್ರಶ್ನೆಯನ್ನು ಉದ್ದೇಶಪೂರ್ವಕವಾಗಿಯೇ ಕೇಳಿದ್ದೇನೆ. ಯಾವತ್ತೂ ನಾವು ಅನುಸರಿಸುವ ವೃತ್ತಿ ಬಗ್ಗೆ ನಮಗೆ ದೃಢ ವಿಶ್ವಾಸ ಇರಬೇಕು. ಅದನ್ನೇ ಆದ್ಯತೆಯನ್ನಾಗಿ ಮಾಡಬೇಕು. ಅದು ಪರ್ಯಾಯ ಅಲ್ಲ. ಅನನ್ಯ’ ಎಂದು ಮುಗಿಲನ್ ತಿಳಿಸಿದರು.   

‘ಆಯುಷ್ (ಆಯುರ್ವೇದ, ಹೋಮಿಯೋಪಥಿ, ಯುನಾನಿ ಇತ್ಯಾದಿ) ವೈದ್ಯಕೀಯ ಪದ್ಧತಿ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಕಡಿಮೆ ಇದೆ. ಹೀಗಾಗಿ, ತಪ್ಪು ಗ್ರಹಿಕೆ ಉಂಟಾಗಿದೆ. ಇವುಗಳನ್ನು ಹೋಗಲಾಡಿಸುವುದೂ ಈ ವೈದ್ಯಕೀಯ ಪದ್ಧತಿ ಅನುಸರಿಸುವವರ ಕರ್ತವ್ಯ’ ಎಂದು ಸಲಹೆ ನೀಡಿದರು.  


‘ಸಾಮಾನ್ಯ ಜನರಿಗೂ ಆರೋಗ್ಯ ಕೈಗೆಟಕುವಂತೆ ಮಾಡುವುದು ಆಡಳಿತದ ಆದ್ಯತೆ. ಈ ನಿಟ್ಟಿನಲ್ಲಿ ಹೋಮಿಯೋಪಥಿ ಮತ್ತಿತರ ವೈದ್ಯಕೀಯ ಪದ್ಧತಿ ಜನರಿಗೆ ನೆರವಾಗುತ್ತಿವೆ’ ಎಂದರು. 


‘ದಕ್ಷಿಣ ಕನ್ನಡವು ಶಿಕ್ಷಣ ಸೇರಿದಂತೆ ಹಲವು ಹೊಸತನಗಳಿಗೆ ಮೊದಲಿಗ ಆಗಿರುವುದು ನಮ್ಮೆಲ್ಲರ ಹೆಮ್ಮೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಾರ್ಯಕ್ರಮಗಳೂ ಶ್ರೇಷ್ಠಮಟ್ಟದಲ್ಲಿ ಇರುತ್ತವೆ’ ಎಂದು ಶ್ಲಾಘಿಸಿದರು. 


ಫಾದರ್ ಮುಲ್ಲರ್ ಚಾರಿಟಬಲ್ ಟ್ರಸ್ಟ್‍ನ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ ಮಾತನಾಡಿ, ‘ಅಲೋಪಥಿ ದುಬಾರಿಯಾಗಿದ್ದು, ಹೋಮಿಯೋಪಥಿಯು ಜನರನ್ನು ತಲುಪುತ್ತಿದೆ. ಯಾವುದೇ ಸೇವೆಯು ಜನ ಸಾಮಾನ್ಯರಿಗೆ ತಲುಪುವುದು ಬಹುಮುಖ್ಯ’ ಎಂದರು. 

‘ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಚಿತ ಕನ್ನಡ ಶಿಕ್ಷಣ, ಸಾಂಸ್ಕೃತಿಕ- ಕ್ರೀಡಾ ಕ್ಷೇತ್ರದ ಕೊಡುಗೆಯು ಪ್ರಶಂಸನೀಯ. ಡಾ.ಮೋಹನ ಆಳ್ವ ಅವರು ವಿದ್ಯಾರ್ಥಿ ಜೀವನದಲ್ಲೇ ಎಲ್ಲರ ಜೊತೆ ಸಾಮರಸ್ಯ, ಸಹಬಾಳ್ವೆಯನ್ನು ಹೊಂದಿದ್ದರು’ ಎಂದರು. 

ಯೆನೆಪೋಯಾ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಮೊಹಮ್ಮದ್ ಫರ್ಹಾದ್ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಜನೆ ಜೊತೆ ಸಹಬಾಳ್ವೆಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ಕಲಿಯುವ ಶಿಸ್ತಿನ ಬಗ್ಗೆ ಹೆಮ್ಮೆ ಇರಬೇಕು’ ಎಂದರು. 


‘ರೋಗಿ ಜೊತೆ ಮಾತನಾಡಲೂ ಸಮಯ ಇಲ್ಲದಂತೆ ಹಲವು ವೈದ್ಯರು ವರ್ತಿಸುತ್ತಾರೆ. ರೋಗಿಯನ್ನು ಮನುಷ್ಯನಂತೆ ಕಾಣದವರು ಹಲವರಿದ್ದಾರೆ. ರೋಗಿ ಜೊತೆ ಮಾನವೀಯ ಸಂಬಂಧ ಬಹುಮುಖ್ಯ’ ಎಂದರು. 

‘ಆಳ್ವಾಸ್ ಒಂದು ಸಾಂಸ್ಕೃತಿಕ ಬದುಕಿನ ಕಲಿಕೆಯ ಕೇಂದ್ರ. ಡಾ.ಮೋಹನ ಆಳ್ವ ಅವರು ಪಿತೃಸ್ವರೂಪದ ಮಾದರಿ ವ್ಯಕ್ತಿತ್ವ’ ಎಂದು ಬಣ್ಣಿಸಿದರು. 


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಕೆ. ಇದ್ದರು.  

ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ರೋಶನ್ ಪಿಂಟೊ ಸ್ವಾಗತಿಸಿದರು. ಕಾರ್ಯಕ್ರಮ ಆಯೋಜನಾ ಕಾರ್ಯದರ್ಶಿ ಡಾ. ಮೋನಿಕಾ ಲೋಬೊ ವಂದಿಸಿದರು. 

ಕೇರಳ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ತಾನ, ಮಣಿಪುರ, ಗುಜರಾತ್ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಸೇರಿದಂತೆ 1,045 ಪ್ರತಿನಿಧಿಗಳು ಪಾಲ್ಗೊಂಡಿದ್ದರು. 



11 ವೈದ್ಯಕೀಯ ಔಷಧಾಲಯ ಪ್ರದರ್ಶನಗಳು, 30ಕ್ಕೂ ಹೆಚ್ಚು ಭಿತ್ತಿಚಿತ್ರಗಳು, 12 ಪ್ರಬಂಧಗಳು ಮಂಡನೆ ನಡೆದವು. ಆಳ್ವಾಸ್ ಹೋಮಿಯೋಪಥಿ ಹಿರಿಯ ವಿದ್ಯಾರ್ಥಿಗಳ ಸಭೆ ನಡೆಯಿತು. 80ಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳಿದ್ದರು.  ಆಳ್ವಾಸ್ ಸಾಂಸ್ಕೃತಿಕ ತಂಡವು ಪ್ರದರ್ಶನ ನೀಡಿತು. ದೇಶದ ವಿವಿಧೆಡೆಯ 10ಕ್ಕೂ ಹೆಚ್ಚು ಹೋಮಿಯೋಪಥಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ 120ಕ್ಕೂ ಹೆಚ್ಚು ವೈದ್ಯಕೀಯ ಪ್ರಾಧ್ಯಾಪಕರು ಹಾಗೂ ವೃತ್ತಿಪರರು ಪಾಲ್ಗೊಂಡರು. 

ಬಳಿಕ ನಡೆದ ಗೋಷ್ಠಿಯಲ್ಲಿ ಬೆಂಗಳೂರಿನ ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡಾ. ವಿಜಯ ಕೃಷ್ಣ ವಿ, `ತೀವ್ರಸ್ತರ ಕಾಯಿಲೆಗಳಲ್ಲಿ ಹೋಮಿಯೋಪಥಿ ಚಿಕಿತ್ಸಾ ವಿಧಾನಗಳ ಸವಾಲುಗಳು ಮತ್ತು ಪರಿಹಾರಗಳು’ ಕುರಿತು ಮಾತನಾಡಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top