|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಕ್ಷರ ಆರಾಧನೆ- 16: ಆತ್ಮಪ್ರಶಂಸೆ ಮತ್ತು ಪರರ ನಿಂದನೆ

ಅಕ್ಷರ ಆರಾಧನೆ- 16: ಆತ್ಮಪ್ರಶಂಸೆ ಮತ್ತು ಪರರ ನಿಂದನೆ

 || ವಾಮದೇವಾಂತರ್ಗತ ಶ್ರೀ ವಿಶ್ವಸಾಕ್ಷಿಣೇ ನಮಃ|| 



ಕುರುಕ್ಷೇತ್ರದಲ್ಲಿ ಹದಿನೆಂಟು ದಿನಗಳ ನಿರ್ಣಾಯಕ ಯುದ್ಧ ಪ್ರಾರಂಭವಾಯ್ತು. ಒಂದೊಂದು ದಿನದ ಯುದ್ಧ ಮುಗಿದಾಗಲೂ ಪಾಂಡವರ ಜಯವನ್ನು ಅದು ಗಟ್ಟಿಗೊಳಿಸುತ್ತಾ ಸಾಗಿತು. ಅದೇ ಸಮಯದಲ್ಲಿ ಕೌರವರ ಸೋಲನ್ನೂ ಖಚಿತ ಪಡಿಸುತ್ತಾ ಸಾಗಿತು. 

ದುರ್ಯೋಧನನ ಕೊನೆಯ ಆಹುತಿ ಪಾಂಡವರ ವಿಜಯಪತಾಕೆಯನ್ನು ಹಾರಿಸಿತು. ಆತ್ಮ ಪ್ರಶಂಸೆಯಿಂದ ಬೀಗುತ್ತಿದ್ದ ಕೌರವರ ನಾಶ ಪೂರ್ಣವಾಯಿತು. ಸಜ್ಜನರ ನಿಂದನೆಯಿಂದ ದೂಷಿತವಾದ ಹಸ್ತಿನಾವತಿ ಪಾಂಡವರ ವಿಜಯದ ರಭಸದ ಗಾಳಿಯಿಂದ ಪರಿಶುದ್ಧವಾಯಿತು. ನಮ್ಮನ್ನೇ ನಾವು ಹೊಗಳಿಕೊಳ್ಳುವುದು ನಮ್ಮ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಸಾಧನೆಯ ಗತಿ ನಿಧಾನಗೊಳುತ್ತದೆ. ಇಂಥ ಹೊಗಳಿಕೆಯಿಂದ ನಾವು ಹೊರಬರಬೇಕು. ಇನ್ನು ಪರರನ್ನು ಕುರಿತು ಮಾಡುವ ನಿಂದನೆಯೂ ನಮ್ಮ ಮನಸ್ಸಿನ ಅಪಕ್ವತೆಯನ್ನು ಎತ್ತಿ ತೋರಿಸುತ್ತದೆ. ನಾವು ಜೀವನದಲ್ಲಿ ಮಾಗುವುದು ಬಹಳಷ್ಟಿದೆ. ಅದಕ್ಕೆ ಇದು ಅಡ್ಡವಾಗಬಾರದು. 

ಯುದ್ಧದಲ್ಲಿ ಸಂಭವಿಸಿದ ಅಪಾರ ಸಾವುನೋವಿನಿಂದ, ಬಂಧು ಬಾಂಧವರ ನಾಶದಿಂದ ಧರ್ಮರಾಜನ ಮನಸ್ಸು ವ್ಯಾಕುಲಗೊಂಡಿತು. ಇದಕ್ಕೆ ಸಮಾಧಾನದ ಒಂದು ಪರಿಹಾರಬೇಕಿತ್ತು. ಇದನ್ನು ಅರಿತ ಶ್ರೀಕೃಷ್ಣ ತಾನು ಧರ್ಮರಾಜನಿಗೆ ಉಪದೇಶಿಸಲಿಲ್ಲ. ವೈರಿಗಳ ಕೈಯಿಂದಲೇ ಮೆಚ್ಚಿಕೆಯನ್ನು ಪಡೆಯುವುದು ಅವನ ಇಚ್ಛೆಯಾಗಿತ್ತು. ಶ್ರೀಕೃಷ್ಣನು ಪಾಂಡವರನ್ನು ಮರಣ ಶಯ್ಯೆಯಲ್ಲಿದ್ದ ಭೀಷ್ಮರ ಬಳಿಕರೆದೊಯ್ದನು. ಭೀಷ್ಮರಿಂದ ಪಾಂಡವರಿಗೆ ಉಪದೇಶವಾಯ್ತು. ಧರ್ಮರಾಜನ ಎಲ್ಲ ಸಂಶಯಗಳು ನಿವಾರಣೆಯಾದವು. ಭೀಷ್ಮರ ಉಪದೇಶವನ್ನು ಕೇಳಿದ ದ್ರೌಪದಿಗೆ ನಗು ತಡೆಯಲಾಗಲಿಲ್ಲ. ಭೀಷ್ಮರು ಅದಕ್ಕೆ ಕಾರಣ ಕೇಳಿದರು. ಆಗ ದ್ರೌಪದಿಯು ಏನು ಹೇಳಿದಳು ಗೊತ್ತೆ? 

``ಪಿತಾಮಹರೇ, ಇಂದು ಬಹಳ ಸುಂದರವಾಗಿ ಧರ್ಮದ ವ್ಯಾಖ್ಯೆಯನ್ನು ಮಾಡಿದ್ದಿರಿ. ಆದರೆ ಅಂದು ಏನಾಗಿತ್ತು? ಕೌರವರ ಸಭೆಯಲ್ಲಿ ದುಶ್ಯಾಸನ ನನ್ನನ್ನು ವಿವಸ್ತ್ರಗೊಳಿಸುವ ಪ್ರಯತ್ನದಲ್ಲಿದ್ದಾಗ ನಿಮ್ಮ ಈ ಧರ್ಮಜ್ಞಾನ ಎಲ್ಲಿ ಹೋಗಿತ್ತು?'' ದ್ರೌಪದಿಯ ಮಾತು ಕೇಳಿ ಭೀಷ್ಮರು ಹೇಳಿದ್ದು ಇಷ್ಟೇ- ``ಅಂದೂ ನನಗೆ ಧರ್ಮಜ್ಞಾನದ ಅರಿವಿತ್ತು. ಆದರೆ ದುರ್ಯೋಧನನ ಅನ್ಯಾಯದ ಅನ್ನ ಉಂಡಿದ್ದರಿಂದ ನನ್ನ ಬುದ್ಧಿ ಮಲಿನವಾಗಿತ್ತು. ಅದಕ್ಕೆ ನನ್ನಿಂದ ಯಾವ ಮಾತೂ ಹೊರಡಲಿಲ್ಲ. ಮಲಿನವಾದ ಬಾಯಿಯಿಂದ ಅಂದು ಪ್ರತಿರೋಧದ ಮಾತುಗಳುನನ್ನಿಂದ ಬರಲಿಲ್ಲ''. ಭೀಷ್ಮರು ತಮ್ಮ ತಪ್ಪು ಒಪ್ಪಿ ಮತ್ತಷ್ಟು ಮಹಾನರೆನಿಸಿದರು. ದುಷ್ಟರಿಂದ ಪಡೆದ ಅನ್ನವು ದುಷ್ಟ ಭಾವನೆಯನ್ನು ಮೂಡಿಸುತ್ತದೆ. ಶ್ರೀಕೃಷ್ಣ ತಾನು ಅಂದುಕೊಂಡಿದ್ದ ಕಾರ್ಯವೂ ಹೀಗೆ ಕೊನೆಗೊಂಡಿತು. 

ನಾವು ಮಾಡಬೇಕಾದ ಕೆಲಸವನ್ನು ಗಂಭೀರವಾಗಿ ಮಾಡುತ್ತಲೇ ಮಜವಾಗಿ ಕಾಲ ಕಳೆಯಲು ಸಾಧ್ಯವಿದೆ. ಮಹಾಭಾರತದ ಯುದ್ಧದಲ್ಲಿ ಕೃಷ್ಣ ಅರ್ಜುನನಿಗೆ ಸಾರಥಿ. ಅವನನ್ನು ಮುನ್ನಡೆಸುವುದರ ಜೊತೆಗೆ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುವುದು, ಕುದುರೆಗಳಿಗೆ ಹುಲ್ಲು ತಿನ್ನಿಸುವುದು, ಅವುಗಳ ಗಾಯಕ್ಕೆ ಉಪಚಾರ ಮಾಡುವುದು, ಯುದ್ಧ ತಂತ್ರಗಳನ್ನು ರೂಪಿಸುವುದು, ಇವೆಲ್ಲವುಗಳ ನಡುವೆ ಕಣ್ಮುಚ್ಚಿ ಕುಳಿತು ಕೊಳಲೂದುವುದು ಇವೆಲ್ಲವನ್ನೂ ಕೃಷ್ಣ ಮಾಡುತ್ತಿದ್ದ. ಪಾಂಡವರನ್ನು ಗೆಲ್ಲಿಸುವ ಭಯಂಕರ ಭಾರದ ಹೊಣೆ ನನ್ನ ಮೇಲಿದೆ ಎಂದು ಒತ್ತಡದಲ್ಲಿ ಕುಳಿತಿದ್ದರ ಅವನು ಖಂಡಿತ ಸೋಲುತ್ತಿದ್ದ. ಎಲ್ಲರಿಗೂ ಇಂತಹದ್ದೊಂದು ನಿರಾಳತೆ ಸಿದ್ಧಿಸಿಬೇಕು ಎಂದು ತನ್ನ ಬದುಕಿನಿಂದಲೇ ಕೃಷ್ಣ ತೋರಿಸಿಕೊಟ್ಟ. 

ಗಮನಿಸಿ ನೋಡಿ, ಸಾವಿರಾರು ಕೋಟಿ ರು. ವ್ಯವಹಾರ ನಡೆಸುವ ಬೃಹತ್ ಕಂಪನಿಗಳನ್ನು ಕಟ್ಟಿದ ಯಶಸ್ವಿ ನಾಯಕರು ಯಾವತ್ತೂ ತಲೆಗೆ ಕೈ ಕೊಟ್ಟು ಕುಳಿತುಕೊಳ್ಳುವುದಿಲ್ಲ. ಒತ್ತಡಕ್ಕೆ ಸಿಲುಕಿಕೊಂಡರೆ ಎಲ್ಲ ಕೆಲಸಗಳೂ ಹಾಳಾಗುತ್ತವೆ ಎಂಬುದು ಅವರಿಗೆ ತಿಳಿದಿದೆ. ಹಾಗೆಯೇ, ಮಹಾಭಾರತದಲ್ಲಿ ಕೃಷ್ಣನನ್ನು ಬೃಹತ್ ಪಾತ್ರ ನಿಭಾಯಿಸಿದವರು ಯಾರೂ ಇಲ್ಲ. ಅವನಷ್ಟು ಕೆಲಸ ಮಾಡಿದವರೂ ಬೇರೆಯಿಲ್ಲ. ಅದೇ ವೇಳೆ, ಅವನಷ್ಟು ಆಟ ಆಡಿದವರು, ಅವನಷ್ಟು ಖುಷಿಯಾಗಿದ್ದವರೂ ಇಲ್ಲ. ಕೃಷ್ಣ ಲೀಲೆಗಳು ಜಗತ್ಪ್ರಸಿದ್ಧ. ಗಾಂಭೀರ‍್ಯವನ್ನೂ ಹುಡುಗಾಟಿಕೆಯನ್ನೂ ಏಕಕಾಲಕ್ಕೆ ತೋರಿಸಿದವನು ಅವನು. ನಗುನಗುತ್ತಲೇ ಎಲ್ಲವನ್ನೂ ನಿಭಾಯಿಸಿದ. ಇದು ಕೃಷ್ಣನ ಬದುಕಿನ ಅತಿ ದೊಡ್ಡ ಪಾಠ.

0 Comments

Post a Comment

Post a Comment (0)

Previous Post Next Post