|| ಭವಾಂತರ್ಗತ ಶ್ರೀ ಶ್ರೀಕಂಠಾಯ ನಮಃ||
ಅನ್ಯಾಯದಿಂದ ರಾಜ್ಯ ಸುಖವನ್ನು ಅನುಭವಿಸುವ ದುರ್ಯೋಧನನ ದುರಾಶೆಯು ಕೈಗೊಡಲಿಲ್ಲ. ಪಾಂಡವರನ್ನು ಮೋಸದಿಂದ ಪಗಡೆಯಾಟದಲ್ಲಿ ಅವನು ಸೋಲಿಸಿದ. ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸವನ್ನೂ ಪಾಂಡವರು ಅನುಭವಿಸಿದರು. ಆಮೇಲೂ ದುರ್ಯೋಧನನು ಪಾಂಡವರಿಗೆ ರಾಜ್ಯ ಒಪ್ಪಿಸಲಿಲ್ಲ. ಕೌರವರಿಗೆ ಬುದ್ಧಿ ಹೇಳಲು ಶ್ರೀಕೃಷ್ಣನೇ ಸಂಧಾನಕ್ಕಾಗಿ ಬಂದನು.
ದುರ್ಯೋಧನನ ಆತಿಥ್ಯವನ್ನು ಶ್ರೀಕೃಷ್ಣ ನಿರಾಕರಿಸಿದ. ಧಾರ್ಮಿಕನಾದ ವಿದುರನಲ್ಲಿಗೆ ಬಂದ. ಕೃಷ್ಣನು ಪರಿಪರಿಯಾಗಿ ಹೇಳಿದರೂ ರಾಜ್ಯವನ್ನು ಮರಳಿ ಪಾಂಡವರಿಗೆ ಕೊಡಲು ದುರ್ಯೋಧನನು ಒಪ್ಪಲಿಲ್ಲ. ಪರಿಣಾಮವಾಗಿ ಕುರುಕ್ಷೇತ್ರ ಯುದ್ಧ ಅನಿವಾರ್ಯವಾಯಿತು.
ಪಾಂಡವರ ಏಳು ಅಕ್ಷೋಹಿಣಿ ಮತ್ತು ಕೌರವರ ಹನ್ನೊಂದು ಅಕ್ಷೋಹಿಣಿ ಸೈನ್ಯಗಳು ರಣರಂಗದಲ್ಲಿ ಕಾದಾಡಿದವು. ಶ್ರೀಕೃಷ್ಣನು ಅರ್ಜುನನಿಗೆ ಸಾರಥಿಯಾದ. ಹದಿನೆಂಟು ದಿನಗಳ ಕಾಲ ಘನ ಘೋರ ಯುದ್ಧವಾಯಿತು. ಹದಿನೆಂಟು ಅಕ್ಷೋಹಿಣಿ ಸೈನ್ಯ ನಾಶ ವಾಯಿತು. ಶ್ರೀಕೃಷ್ಣನ ಕರುಣೆಯಿದ್ದ ಮೇಲೆ ಪಾಂಡವರಿಗೆ ಜಯವಾಗದೇ ಇರಲು ಸಾಧ್ಯವೇ? ಸತ್ಯಕ್ಕೆ ಜಯ, ಧರ್ಮಕ್ಕೆ ಜಯ. ಪಾಂಡವರಿಗೆ ವಿಜಯ ಲಭಿಸಿತು. ದುಷ್ಟ ದುರಾಚಾರಿಗಳ ನಾಶವಾಯಿತು.
''ಯದಾ ಯದಾ ಹಿ ಧರ್ಮಸ್ಯ...'' ಎಂಬಂತೆ ಶ್ರೀಕೃಷ್ಣನು ಧರ್ಮವನ್ನು ರಕ್ಷಿಸಿದನು. ಧರ್ಮವಂತರನ್ನು ರಕ್ಷಿಸಿದನು. ಅಧರ್ಮಿಗಳ ನಾಶವಾಯಿತು. ಜೀವನದಲ್ಲಿ ನಾವು ಆಸೆ ಆಮಿಷಗಳಿಗೆ ಬಲಿಯಾಗಬಾರದು. ಅದರಿಂದ ನೋವು ಮತ್ತು ಸೋಲು ಅನುಭವಿಸ ಬೇಕಾಗುತ್ತದೆ. ''ಕರ್ಮಣ್ಯೇ ವಾಧಿಕಾರಸ್ಯೇ..'' ಎಂಬಂತೆ ನಾವು ಯಾವಾಗಲೂ ಸತ್ಕರ್ಮ ಗಳನ್ನೇ ಮಾಡಬೇಕು. ಸತ್ಕರ್ಮಗಳ ಫಲ ಯಾವಾಗಲೂ ಸಿಹಿಯಾಗಿರುತ್ತದೆ. ನಿಷ್ಕಾಮದಿಂದಲೇ ಸತ್ಕರ್ಮಗಳನ್ನು ನಾವು ಮಾಡಬೇಕು. ಕರ್ಮಗಳ ಫಲವನ್ನು ನಾವು ಬಯಸದಿ ದ್ದರೂ ಪರಮಾತ್ಮ ಅದಕ್ಕೆ ಫಲವನ್ನು ಕೊಟ್ಟೇ ಕೊಡುತ್ತಾನೆ. ಲೌಕಿಕ ಆಸೆ, ಆಮಿಷಗಳಿಗೆ ಬಲಿಯಾಗಬಾರದೆಂಬುದೇ ಶ್ರೀಕೃಷ್ಣನ ಸಂದೇಶ. ಶ್ರೀಕೃಷ್ಣನು ಎಲ್ಲರೊಡನೆ ಇದ್ದ. ಎಲ್ಲವನ್ನೂ ತಿಳಿಸಿ ಹೇಳಿದ. ಕೆಲವರು ತಿಳಿದರು. ತಿಳಿದವರು ಮುಕ್ತರಾದರು. ಇನ್ನು ಕೆಲವರು ತಿಳಿಯುವ ಗೋಜಿಗೇ ಹೋಗಲಿಲ್ಲ. ಉದಾಸೀನ ಮಾಡಿದರು. ಅಂಥವರು ಮತ್ತೆ ಕರ್ಮಬಂಧನಗಳಲ್ಲೇ ಸಿಲುಕುತ್ತಾ ಹೋದರು. ನಮ್ಮ ಉದ್ಧಾರ ನಮ್ಮ ಕೈಯಲ್ಲೇ ಇದೆ. ನಾವೇ ಪ್ರಯತ್ನಿಸಬೇಕು, ಅಲ್ಲವೇ?
ಶ್ರೀಕೃಷ್ಣನ ಅವತಾರದ ನಂತರ ಸಾವಿರಗಟ್ಟಲೆ ವರ್ಷಗಳು ಕಳೆದಿದ್ದರೂ ಕೂಡ ಈ ಯುಗಪುರುಷನ ಜೀವನಗಾಥೆ ಜನರ ಮನದಲ್ಲಿ ಆಳವಾಗಿ ಬೇರೂರಿದೆ. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಸಂತರು ಮಹಾತ್ಮರು ಶ್ರೀಕೃಷ್ಣನ ಚರಿತೆಯ ಮೂಲಕ ಸಾಮಾನ್ಯ ಜನರ ಉದ್ಧಾರ ಹಾಗೂ ಜ್ಞಾನೋದಯದ ಕುರಿತು ಬೋಧಿಸಿದ್ದಾರೆ. ಇವರಲ್ಲಿ ಸಂತ ಮೀರಾಬಾಯಿಯಿಂದ ಹಿಡಿದು ಸಂತ ಏಕನಾಥರ ವರೆಗೆ ಸೇರಿದ್ದಾರೆ. ಆದ್ದರಿಂದಲೇ ನಮ್ಮ ಪಾರಂಪರಿಕ ಜಾನಪದ ಸಂಗೀತ ಪ್ರಕಾರಗಳು ಹೆಚ್ಚಿನಂಶ ಶ್ರೀಕೃಷ್ಣನನ್ನೇ ಕೊಂಡಾಡುತ್ತವೆ. ಶ್ರೀಕೃಷ್ಣ ಚರಿತೆಯು ಸ್ಫೂರ್ತಿದಾಯಕ ಹಾಗೂ ಪ್ರೋತ್ಸಾಹ ದಾಯಕವಾಗಿದ್ದು ವ್ಯಕ್ತಿಯೊಬ್ಬ ತನ್ನ ಜೀವನವನ್ನು ಹೇಗೆ ನಡೆಸಬೇಕು ಎನ್ನುವುದಕ್ಕೆ ಮಾರ್ಗದರ್ಶನವನ್ನು ಒದಗಿಸುತ್ತದೆ. ಒಂದು ಸಮಯದಲ್ಲಿ ಅಗತ್ಯ ವಾದಾಗ ಶ್ರೀಕೃಷ್ಣ ಇಂದ್ರನ ಎದುರು ಗೋವರ್ಧನ ಗಿರಿಯನ್ನೇ ಎತ್ತಿ ಹಿಡಿದು ಧೈರ್ಯವನ್ನು ತೋರಿಸಿದರೆ, ಜರಾಸಂಧನ ವಿರುದ್ಧ ಅನೇಕ ಜೀವಗಳನ್ನು ಉಳಿಸುವುದಕ್ಕಾಗಿ ಮಥುರೆಯನ್ನು ತೊರೆಯುವ ಮೂಲಕ ತನ್ನ ಅರ್ಥಮಾಡಿಕೊಳ್ಳುವ ಕೌಶಲವನ್ನು ತೋರಿಸಿದ್ದಾನೆ. ಶಿಶುಪಾಲ ನೂರು ತಪ್ಪುಗಳನ್ನು ಎಸೆಗಿದ ನಂತರವಷ್ಟೇ ಆತನನ್ನು ವಧೆ ಮಾಡಿದ ಕೃಷ್ಣ ಅರ್ಜುನನಿಗೆ ಮಹಾಭಾರತ ಯುದ್ಧದಲ್ಲಿ ತನ್ನ ಕರ್ತವ್ಯಕ್ಕೆ ಬದ್ಧನಾಗಿ ಹೋರಾಡುವಂತೆ ಬೋಧನೆಯನ್ನೂ ಕೂಡ ಮಾಡಿದ್ದಾನೆ. ಕೃಷ್ಣ ಒಂದು ಕೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದಿದ್ದಾನೆ.
ಸರಳವಾಗಿ ಇವೆರಡನ್ನೂ ಸಮತೋಲನದಲ್ಲಿ ಇರಿಸಿಕೊಳ್ಳುವ ಪ್ರೌಢತೆಯನ್ನೂ ಕೂಡ ಆತ ತೋರಿಸಿಕೊಟ್ಟಿದ್ದಾನೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ