|| ಪರ್ಜನ್ಯಾಂತರ್ಗತ ಶ್ರೀ ದೈತ್ಯಾರಯೇ ನಮಃ ||
ಧರ್ಮ ನಮ್ಮನ್ನು 'ದೈವಿಕ'ಗೊಳಿಸುವ ಒಂದು ಮಾರ್ಗ' ಅಷ್ಟೇ. ಅದುವೇ ದೇವರಲ್ಲ!! ದೇವರನ್ನು ಹೊಂದಬೇಕೆಂದರೆ 'ಧಾರ್ಮಿಕ ಕೋಟೆ'ಯನ್ನು ಭೇದಿಸಬೇಕಾಗುತ್ತದೆ. ಇದು ಕೃಷ್ಣನ ಅಭಿಪ್ರಾಯ. ಒಮ್ಮೆ 'ಕಮಿಟ್' ಆದ ಮೇಲೆ ''ಖುದ್ ಕಾ ಭೀ ನಹೀಂ ಸುನಾನಾ ಚಾಹಿಯೇ!!'' ಇದು ಕೃಷ್ಣನ 'ಸಿದ್ಧಾಂತ'. ಕೃಷ್ಣ 'ಪಲಾಯನವಾದ'ವನ್ನು ಯಾವತ್ತೂ ಪ್ರೋತ್ಸಾಹಿಸುವುದಿಲ್ಲ. ಅರ್ಜುನ ಯುದ್ಧಭೂಮಿಗಿಳಿದು 'ಪಲಾಯನವಾದ'ದ ಮಾತನಾಡಿದಾಗ ಕೃಷ್ಣ ಆತನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಾನೆ.
ಯುದ್ಧಭೂಮಿಯನ್ನು ಪ್ರವೇಶಿಸಿಯಾಗಿದೆ. ಅರ್ಜುನ ಕೃಷ್ಣನಿಗೆ ''ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇ ಅಚ್ಯುತ'' ಎಂದು ಹೇಳಿಯಾಗಿದೆ. ಕೃಷ್ಣ 'ಉಭಯ' ಸೈನ್ಯಗಳ ಮಧ್ಯದಲ್ಲಿ ರಥವನ್ನು ತಂದು ನಿಲ್ಲಿಸಿಯಾಗಿದೆ. ಇನ್ನೇನು 'ಪಾಂಚಜನ್ಯ' ಮೊಳಗಬೇಕು, ಯುದ್ಧ ಶುರುವಾಗಬೇಕು.
ಒಮ್ಮೆ ಉಭಯ ಸೈನ್ಯಗಳ 'ಸೇನಾಪ್ರಮುಖ'ರ 'ಮುಖಾವಲೋಕನ' ಮಾಡಿದ ಅರ್ಜುನ ಹೇಳುತ್ತಾನೆ, ''ನನ್ನ ಅಂಗಾಂಗಗಳು ಬಿದ್ದುಹೋಗುತ್ತಿವೆ. ಮುಖವು ಒಣಗುತ್ತಿದೆ. ಶರೀರದ ತುಂಬೆಲ್ಲ 'ನಡುಕ' ತುಂಬಿಕೊಂಡಿದೆ. ಕೈಯಿಂದ ನನ್ನ 'ಗಾಂಡೀವ'ವು ಜಾರಿಬೀಳುತ್ತಿದೆ. ಚರ್ಮವೆಲ್ಲ ಉರಿದುಕೊಳ್ಳುತ್ತಿದೆ. ಕೈ-ಕಾಲುಗಳು 'ಅಧೀನ' ತಪ್ಪುತ್ತಿವೆ. ಮನಸ್ಸು ಭ್ರಮಿತವಾಗಿದೆ. ನನಗೆ ರಾಜ್ಯ ಬೇಡ, ವಿಜಯ ಬೇಡ, ನಾನು 'ಭಿಕ್ಷಾನ್ನ'ವನ್ನು ತಿಂದುಕೊಂಡಿರುತ್ತೇನೆ. ಇವರೆಲ್ಲರ ಜೊತೆ ನಾನು ಯುದ್ಧಮಾಡಲಾರೆ'' ಎಂದು ಬಡಬಡಿಸುತ್ತ ದಿಢೀರನೇ ಅರ್ಜುನ 'ಶಸ್ತ್ರತ್ಯಾಗ' ಮಾಡುತ್ತಾನೆ. ಬಂಧು-ಮಿತ್ರ 'ಮೋಹ' ಅರ್ಜುನನನ್ನು ಘಾಸಿಗೊಳಿಸಿದೆ ಎಂದು ಅರ್ಜುನ 'ವೇದಾಂತಿ'ಯಂತೆ ಮಾತನಾಡುತ್ತಿದ್ದಾನೆ.
'ವೇದಾಂತ'ಯಂತೆ ಮಾತನಾಡುವುದಾಗಲಿ ಅಥವಾ 'ವೇದಾಂತಿ'ಯಂತೆ ವರ್ತಿಸುವುದಾಗಲಿ ತಪ್ಪಲ್ಲ. ಆದರೆ ಹಾಗೆ ಮಾತನಾಡುವುದಕ್ಕೆ ಇದು ಸಮಯವಲ್ಲ. ಅರ್ಜುನ ಆ 'ಪರಿಜ್ಞಾನ'ವನ್ನು ಕಳೆದುಕೊಂಡಿದ್ದಾನೆ. ಮಾನಸಿಕವಾಗಿ ಸಂಪೂರ್ಣವಾಗಿ 'ಕುಸಿದುಹೋದ' ಅರ್ಜುನನನ್ನು ಮತ್ತೆ ಕಟ್ಟಬೇಕು. ಆತನನ್ನು ಎಚ್ಚರಿಸಲೇಬೇಕಾದ 'ಅನಿವಾರ್ಯತೆ' ಕೃಷ್ಣನಿಗಿದೆ. ಆದ್ದರಿಂದ ಆತ ಅರ್ಜುನನಿಗೆ ನೇರವಾಗಿ ಹೇಳುತ್ತಾನೆ.
''ಅರ್ಜುನ, ನೀನು 'ನಪುಂಸಕ'ನಂತೆ ಮಾತನಾಡಬೇಡ. ಅದು ನಿನಗೆ ಮತ್ತು ನಿನ್ನ 'ಯೋಗ್ಯತೆ'ಗೆ ಶೋಭೆ ತರುವಂಥದ್ದಲ್ಲ. 'ದೀನ-ಹೀನ'ವಾದ 'ಹೃದಯದೌರ್ಬಲ್ಯ'ವನ್ನು ಬಿಟ್ಟುಕೊಟ್ಟು ಕೊಡವಿಕೊಂಡು ಏಳು, ಮೇಲೇಳು, ಎದ್ದೇಳು'' ಎಂದು ಕೃಷ್ಣ ಅರ್ಜುನನನ್ನು ಉತ್ಸಾಹಿಸುತ್ತಾನೆ. ಅರ್ಜುನ ಎಚ್ಚತ್ತುಕೊಳ್ಳುವ ಲಕ್ಷಣಗಳು ಕಾಣಿಸದೆ ಹೋದಾಗ ಕೃಷ್ಣ 'ಗೀತಾಚಾರ್ಯ'ನಾಗಿ ನಿಂತುಕೊಂಡು ಆತನ ಸಂದೇಹಗಳನ್ನೆಲ್ಲ ಪರಿಹರಿಸುತ್ತಾನೆ. ಅರ್ಜುನ 'ಧರ್ಮಾಧರ್ಮ'ಗಳ ಕುರಿತ 'ಜಿಜ್ಞಾಸೆ'ಗೆ ಒಳಗಾದಾಗ ಕೃಷ್ಣ ಹೇಳುತ್ತಾನೆ, ''ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ'' ಎಂದು. ''ಎಲ್ಲ ಧರ್ಮಗಳನ್ನು ಬಿಟ್ಟು . ನನಗೆ 'ಶರಣು' ಬಾ. ನನ್ನಲ್ಲಿ 'ಶರಣಾಗತ'ನಾಗು. ನನ್ನ 'ಚರಣಾಗತ'ನಾಗು' ಎಂದು 'ಧರ್ಮ' ಬದುಕಿಕೊಂಡಿರುವುದಕ್ಕೆ ದೇವರು ಬೇಕೋ, ಬೇಕಿಲ್ಲವೋ? ಗೊತ್ತಿಲ್ಲ. ಆದರೆ 'ದೇವರು' ಬದುಕಿಕೊಂಡಿರುವುದಕ್ಕೆ 'ಧರ್ಮ' ಮಾತ್ರ ಬೇಕೇಬೇಕು. ಅಂಥ ಧರ್ಮವನ್ನೇ 'ಬಿಟ್ಟಾಕು' ಎಂದು ಹೇಳುವ ಕೃಷ್ಣನ ಧೈರ್ಯವನ್ನು ಮೆಚ್ಚಿಕೊಳ್ಳಲೇಬೇಕು. ದೇವರು ಅಕ್ಷರಶಃ 'ಧರ್ಮಾವಲಾಂಬಿ'. ದೇವರನ್ನು ನಂಬುವಂತೆ ಮಾಡುವುದೇ 'ಧರ್ಮ' ಧರ್ಮವಿಲ್ಲದೆ ಹೋಗಿದ್ದರೆ ದೇವರು ತನ್ನ 'ಅಸಿತ್ವ'ಕ್ಕಾಗಿ ಹೋರಾಡಬೇಕಾಗುತ್ತಿತ್ತು.
ಕೃಷ್ಣ 'ಧರ್ಮ'ವನ್ನು ಬೋಧಿಸುವುದಿಲ್ಲ. ಆತ 'ಕರ್ತವ್ಯ'ವನ್ನು ಬೋಧಿಸುತ್ತಾನೆ. ಕೃಷ್ಣ 'ಹಕ್ಕಿ'ಗಾಗಿ ಹೋರಾಡಲು ಕಲಿಸುತ್ತಾನೆ. ನಾವುಗಳು ಬದುಕಿನಲ್ಲಿ ಕೃಷ್ಣನಿಂದ ಕಲಿಯಬೇಕಾದುದು ಸಾಕಷ್ಟಿದೆ|| ಭಗವದ್ಗೀತೆ'ಯಲ್ಲಿ ಕೃಷ್ಣ 'ಜನಗಳು ಸ್ವಾವಲಂಬಿಗಳಾಗಿ ಬದುಕಲು ಕಲಿತುಕೊಳ್ಳಬೇಕು' ಎಂದು ಕರೆಕೊಡುತ್ತಾನೆ. ಕೃಷ್ಣ'ಆತ್ಮನಾ ಉದ್ಧರೇತ್ ಆತ್ಮಾನಮ್' ಎಂದು ಹೇಳುತ್ತಾನೆ. 'ನಮ್ಮನ್ನು ಅವರು ಬಂದು ಉದ್ಧರಿಸುತ್ತಾರೆ, ಇವರು ಬಂದು ಉದ್ಧರಿಸುತ್ತಾರೆ' ಎಂದು ಅವರಿವರ 'ದಾರಿ ಕಾಯುತ್ತ' ಕುಳಿತುಕೊಳ್ಳುವುದಕ್ಕಿಂತ ನಮ್ಮ 'ಆತ್ಮೋದ್ಧಾರಕ್ಕಾಗಿ ನಾವೇ 'ಕಂಕಣಬದ್ಧ'ರಾಗಿ ನಿಂತುಕೊಳ್ಳಬೇಕು.
ನಮ್ಮ ದೃಷ್ಟಿಯಲ್ಲಿ 'ಕೃಷ್ಣ' ಎಂದರೆ ಬರೀ 'ವಾಸುದೇವ'ನಲ್ಲ. ನಮ್ಮ ದೃಷ್ಟಿಯಲ್ಲಿ 'ಕೃಷ್ಣ' ಎಂದರೆ 'ವಾಸ್ತವ' ಮತ್ತು 'ವಾಸ್ತವವಾದ'||ನಮ್ಮ ದೃಷ್ಟಿಯಲ್ಲಿ 'ಕೃಷ್ಣಪ್ರಜ್ಞೆ'. ಎಂದರೆ ಮತ್ತೇನಲ್ಲ. ಅದು 'ಕರ್ತವ್ಯಪ್ರಜ್ಞೆ'. ನಮ್ಮ ದೃಷ್ಟಿಯಲ್ಲಿ 'ಕೃಷ್ಣಭಕ್ತಿ', 'ಕೃಷ್ಣಪ್ರೇಮ' ವೆಂದರೆ ಮತ್ತೇನಲ್ಲ. ಅದು 'ಕರ್ತವ್ಯಭಕ್ತಿ' ಮತ್ತು 'ಕರ್ತವ್ಯಪ್ರೇಮ''||
ಕೃಷ್ಣ ಸ್ವತಃ ತಾನೇ ಯುದ್ಧಮಾಡಿ ಪಾಂಡವರಿಗೆ 'ಯುದ್ಧ'ವನ್ನು ಗೆದ್ದುಕೊಡಬಹುದಾಗಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಆತ 'ಕುರುಕ್ಷೇತ್ರ'ದಲ್ಲಿ 'ಅಸ್ತ್ರಶಸ್ತ್ರ'ಗಳನ್ನು ಮುಟ್ಟುವ ಗೊಡವೆಗೆ ಹೋಗಲೇ ಇಲ್ಲ. ಆತ ಯುದ್ಧದುದ್ದಕ್ಕೂ 'ಸಾಕ್ಷಿ'ಯಾಗಿ ನಿಂತುಕೊಂಡ. ಇದು ಕಾರಣವಾಗಿ ಶ್ರೀಕೃಷ್ಣನನ್ನು 'ಜೈ ಶ್ರೀಕೃಷ್ಣ' ಎಂದು ಅಭಿನಂದಿಸಲೇಬೇಕು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ