ಗೋಕರ್ಣ: ದೇಹ, ಇಂದ್ರಿಯಗಳು ಸ್ತಬ್ಧವಾದಾಗ ಮಾತ್ರ ಆತ್ಮಸುಖದ ಅನುಭವವಾಗುತ್ತದೆ. ಅದುವೇ ಸರ್ವಶ್ರೇಷ್ಠ ಸುಖ. ಆತ್ಮದ ಧ್ವನಿ ಓಂಕಾರ. ಈ ಧ್ಯಾನ ಸುಖವನ್ನು ಅನುಭವಿಸುವುದೇ ಮುಕ್ತಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಪರಮಪೂಜ್ಯರು, ಶನಿವಾರ ಹುಬ್ಬಳ್ಳಿ-ಧಾರವಾಡ, ಹಾವೇರಿ, ದಾವಣಗೆರೆ, ರಾಣೆಬೆನ್ನೂರು ವಲಯಗಳ ಶಿಷ್ಯಭಕ್ತರಿಂದ ಭಿಕ್ಷಾಸೇವೆ ಸ್ವೀಕರಿಸಿ "ಸುಖ ಬರುವ ದಾರಿ" ಎಂಬ ವಿಷಯದ ಬಗ್ಗೆ ಶ್ರೀಸಂದೇಶ ನೀಡಿದರು.
ಆದ್ದರಿಂದ ಧರ್ಮದ ದಾರಿಯಲ್ಲಿ ಬರುವ ಸುಖ ಮುಖ್ಯ. ನಿಜಕರ್ಮದಿಂದ ಬರುವ ಸಂತೋಷ ಶಾಶ್ವತ. ನಾವು ಕರ್ತವ್ಯ ಮಾಡುವ ಮೂಲಕ ಪಡೆಯುವ ಸುಖ ಶ್ರೇಷ್ಠ. ಅಂತೆಯೇ ಪರೋಪಕಾರ, ಯಜ್ಞ, ದಾನ ತಪಸ್ಸು ಪರಿಪೂರ್ಣ ಸುಖದ ಕಡೆಗೆ ಒಯ್ಯುವ ಸಾಧನಗಳು ಎಂದು ಬಣ್ಣಿಸಿದರು.
ಜೀವನದಲ್ಲಿ ಸುಖ ಬಹಳ ಮುಖ್ಯ. ಅದು ಎಲ್ಲ ಜೀವಿಗಳ ಅಪೇಕ್ಷೆ. ಇದು ತಪ್ಪಲ್ಲ. ಸುಖ ಪಡೆಯುವುದೇ ಬದುಕಿನ ಪರಮೋದ್ದೇಶ. ಆದರೆ ಸುಖ ಬರುವ ದಾರಿಯೂ ಅಷ್ಟೇ ಮುಖ್ಯ. ತಪ್ಪು ದಾರಿಯಲ್ಲಿ ಬರುವ ಕ್ಷಣಿಕ ಸುಖ, ಭವಿಷ್ಯದಲ್ಲಿ ಘೋರ ದುಃಖಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಸುಖದಲ್ಲಿ ಮೂರು ವಿಧ. ಏನೂ ಮಾಡದೇ ಬರುವ ಸುಖ ಮೊದಲನೆಯದು. ಇದು ಸರ್ವಶ್ರೇಷ್ಠ. ದೇಹ- ಇಂದ್ರಿಗಳು ಸ್ತಬ್ಧವಾದಾಗ ಆತ್ಮದ ಅನುಭೂತಿ ಸಿಗುತ್ತದೆ. ಧ್ಯಾನದ ಮೂಲಕ ಈ ಸುಖ ಆಸ್ವಾದಿಸಬಹುದು ಎಂದು ವಿಶ್ಲೇಷಿಸಿದರು.
ಎರಡನೆಯದು ಒಳಿತು ಮಾಡಿ ಬರುವ ಸುಖ. ಅದು ಪುಣ್ಯ ಎನಿಸುತ್ತದೆ. ಇದು ಮಧ್ಯಮ. ಪ್ರತಿಯೊಬ್ಬರೂ ಪರೋಪಕಾರ, ದಾನ, ಯಜ್ಞ- ಯಾಗಾದಿಗಳ ಮೂಲಕ ಈ ಸುಖ ಅನುಭವಿಸಬಹುದು. ಕೆಟ್ಟ ಕಾರ್ಯಗಳಿಂದ ಬರುವ ಸುಖ ಮೂರನೆಯದು ಹಾಗೂ ಇದು ತೀರಾ ಕೆಟ್ಟದು. ಅದು ಕ್ಷಣಿಕ ಸಂತೋಷ ಅಥವಾ ಸುಖದ ಭ್ರಮೆಯನ್ನಷ್ಟೇ ನೀಡುತ್ತದೆ. ಇದು ಕಳೆದ ಬಳಿಕ ಘೋರ ಪಾಪ ಅನುಭವಿಸಬೇಕಾಗುತ್ತದೆ. ಉದಾಹರಣೆಗೆ ಕೈಕೇಯಿ ಮಂಥರೆಯ ಮಾತು ಕೇಳಿ ರಾಜಮಾತೆಯಾಗಲು ಬಯಸಿದ್ದು, ವಂಚನೆಯ ಮೂಲಕ. ಇದು ಕ್ಷಣಿಕವಾಗಿ ಆಕೆಗೆ ಸುಖ ನೀಡಿದರೂ, ಜೀವನವಿಡೀ ಸಂತೋಷ ನೀಡಿದ ದಶರಥ ಕೊರಗಿ ಕೊರಗಿ ಸಾಯುವಂಥಾದ್ದನ್ನು ನೋಡಬೇಕಾಯಿತು. ಇಡೀ ರಾಜ್ಯ ಆಕೆಯನ್ನು ಶಪಿಸಿತು. ಸ್ವಂತ ಮಗ ಭರತ ಕೂಡಾ ತಾಯಿಯನ್ನು ರಕ್ಕಸಿ ಎಂದು ನಿಂದಿಸಿದ. ಕೈಕೇಯಿಯ ಕ್ಷಣಿಕ ಸುಖಕ್ಕಾಗಿ ಆಕೆ ಇಡೀ ಜೀವನದಲ್ಲಿ ಕೆಟ್ಟದ್ದನ್ನೇ ಅನುಭವಿಸುವಂತಾಯಿತು ಎಂದು ಹೇಳಿದರು.
ಮರಾಠಿ ಸಮಾಜದ ವತಿಯಿಂದ ಚಾತುರ್ಮಾಸ್ಯ ಅಂಗವಾಗಿ ಪಾದಪೂಜೆ ನೆರವೇರಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಆರ್.ಜಿ.ಭಟ್ ಹುಬ್ಬಳ್ಳಿ-ಧಾರವಾಡ ವಲಯದ ಅಧ್ಯಕ್ಷರಾಗಿ, ಗಜಾನನ ಭಾಗವತ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಗಳಿಂದ ನಿಯುಕ್ತಿ ಪತ್ರ ಪಡೆದರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಮಾತನಾಡಿದರು. ವಿವಿವಿ ಪ್ರಾಚೀನ ಶಿಕ್ಷಣ ವಿಭಾಗದ ಮುಖ್ಯಸ್ಥ ಆ.ಪು.ನಾರಾಯಣಪ್ಪ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ವಿವಿವಿ ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಉಪಸ್ಥಿತರಿದ್ದರು. ಆಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಸದಸ್ಯರಿಂದ ಪಾದುಕಾ ಪಟ್ಟಾಭಿಷೇಕ ಯಕ್ಷಗಾನ ತಾಳಮದ್ದಳೆ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ