ಆಳ್ವಾಸ್‍ನಲ್ಲಿ 46ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್‍ಗಳ ವಿಚಾರ ಸಂಕಿರಣ ಮತ್ತು ಪ್ರದರ್ಶನ
ಶೋಭಾವನ (ಮೂಡುಬಿದಿರೆ):‘ಸ್ಥಳೀಯ ಹಾಗೂ ನೈಜ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಪ್ರೋತ್ಸಾಹಿಸಿ’ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‍ಸಿಎಸ್‍ಟಿ) ಸಹಯೋಗದಲ್ಲಿ ಎರಡು ದಿನಗಳು (ಆ.11 ಮತ್ತು 12) ನಡೆಯಲಿರುವ ‘46ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್‍ಗಳ ವಿಚಾರ ಸಂಕಿರಣ ಮತ್ತು ಪ್ರದರ್ಶನ'ದಲ್ಲಿ ಅವರು ಮಾತನಾಡಿದರು.
ಸ್ಥಳೀಯ ಹಾಗೂ ದೇಶದ ಅಭಿವೃದ್ಧಿದೃಷ್ಟಿಯಿಂದ ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಕೆಎಸ್‍ಸಿಎಸ್‍ಟಿ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳ ಜ್ಞಾನ ಮತ್ತು ತಾಂತ್ರಿಕ ನೈಪುಣ್ಯತೆಯನ್ನು ಗುರುತಿಸುವ ಕ್ರಮವು ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಮೌಲ್ಯಯುತವಾಗಿದೆ ಎಂದು ವಿಶ್ಲೇಷಿಸಿದರು.
ವಿದ್ಯಾರ್ಥಿಗಳ ಪ್ರಾಜೆಕ್ಟ್‍ಗಳನ್ನು ಮೌಲ್ಯಮಾಪನ ಮಾಡಿ, ಉತ್ತಮ ಪ್ರಾಜೆಕ್ಟ್‍ಗಳಿಗೆ ಸಹಾಯಧನ ನೀಡಿ, ಉತ್ಕೃಷ್ಟ ಪ್ರಾಜೆಕ್ಟ್‍ಗಳನ್ನು ಪ್ರದರ್ಶಿಸಿ- ಪರಿಚಯಿಸಿ, ಅಂತಿಮ75ಕ್ಕೆ ಬಹುಮಾನ ನೀಡಿ, ಅವುಗಳಲ್ಲಿ ಒಂದು ಉತ್ತಮ ಮಹಾವಿದ್ಯಾಲಯವನ್ನು ಪುರಸ್ಕರಿಸುವ ಕಾರ್ಯ ಅನುಕರಣೀಯ. ಇದು ತಾಂತ್ರಿಕ ಶಿಕ್ಷಣದಲ್ಲಿ ಪರಿಣಾಮಕಾರಿ ಎಂದರು.
ಕೆಎಸ್‍ಸಿಎಸ್‍ಟಿಯು ಕಳೆದ 45 ವರ್ಷಗಳಲ್ಲಿ 15,300ಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಿ, ಸಹಾಧನ ನೀಡಿದೆ. ಈ ಸಾಲಿನಲ್ಲಿ 197 ಎಂಜಿನಿಯರಿಂಗ್ ಕಾಲೇಜುಗಳಿಂದ 5,961 ಯೋಜನಾ ಪ್ರಸ್ತಾವ ಸ್ವೀಕರಿಸಿದ್ದು, 1,494 ಯೋಜನೆಗಳಿಗೆ ತಾಂತ್ರಿಕ ಹಾಗೂ ಧನ ಸಹಾಯ ನೀಡಿದೆ. 433 ಅತ್ಯುತ್ತಮ ಯೋಜನೆಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ,ಇದು ವೈಜ್ಞಾನಿಕ ಯುಗ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸರ್ಕಾರ ಪ್ರೋತ್ಸಾಹಿಸುತ್ತದೆ. ದೇಶವು ಯುವ ಸಾಧಕರಿಂದ ತುಂಬಿದೆ ಎಂದು ಬಣ್ಣಿಸಿದರು.
ಎಲ್ಲ ಸ್ಪರ್ಧೆಗಳಲ್ಲಿ ಆಳ್ವಾಸ್ ಮುಂದಿರುತ್ತದೆ. ಇದು ಎಲ್ಲರಿಗೂ ಸವಾಲು ಎಂದರು.
ಕೆಎಸ್‍ಸಿಎಸ್‍ಟಿ ಕಾರ್ಯದರ್ಶಿ ಪ್ರೊ. ಅಶೋಕ ಎಂ. ರಾಯಚೂರ್ ಮಾತನಾಡಿ, ಕಾರ್ಯಕ್ರಮವು 1977ರಲ್ಲಿ ಆರಂಭವಾಗಿದ್ದು, ಈವರೆಗೆ ನಮಗೆ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿ ಪ್ರಾಜೆಕ್ಟ್‍ಗಳು ಬಂದಿವೆ. ವಿಶ್ವ ಹಾಗೂ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಬೆಂಬಲ ನೀಡುತ್ತಾ ಬಂದಿದ್ದೇವೆ ಎಂದರು.
ಎಸ್‍ಪಿಪಿ ವರದಿ ಹಾಗೂ ಸಿಡಿಯನ್ನು ಬಿಡುಗಡೆ ಮಾಡಲಾಯಿತು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆನಾರ್ಂಡಿಸ್, ಕಾರ್ಯಕ್ರಮದ ಸಂಯೋಜಕರಾದ ಕಾಲೇಜಿನ ಡಾ. ಸುಧೀರ್ ಶೆಟ್ಟಿ ಹಾಗೂ ಕೆಎಸ್‍ಸಿಎಸ್‍ಟಿಯ ಕೆ.ಎನ್. ವೆಂಕಟೇಶ್ ವೇದಿಕೆಯಲ್ಲಿದ್ದರು.
ಕೆಎಸ್‍ಸಿಎಸ್‍ಟಿ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ. ಯು.ಟಿ. ವಿಜಯ್ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
‘ಚಂದ್ರಯಾನದಲ್ಲಿ ಆಳ್ವಾಸ್ ಹೆಮ್ಮೆ’
ಚಂದ್ರಯಾನ ಯಶಸ್ವಿಗೊಂಡ ಮೂರನೇದೇಶ ಭಾರತ. ಇಸ್ರೋದ ಈ ಯೋಜನೆಯಲ್ಲಿ ಆಳ್ವಾಸ್‍ನ ಹಿರಿಯ ವಿದ್ಯಾರ್ಥಿನಿ ನಂದಿನಿ ಕಾರ್ಯನಿರ್ವಹಿಸಿದ್ದು, ನಮಗೆಲ್ಲ ಹೆಮ್ಮೆ ಎಂದ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಮೋಹ ಬೇಡ. ದೇಶದಲ್ಲಿ ಸಾಕಷ್ಟು ಅವಕಾಶ ಇವೆ ಎಂದರು.
ಸಾಕ್ಷಾತ್ಕರಿಸಿದ ಆವಿಷ್ಕಾರ
ಎಲ್ಲಿ ನೋಡಿದರಲ್ಲಿ ತಂತ್ರಜ್ಞಾನ, ವಿಜ್ಞಾನ, ಆವಿಷ್ಕಾರ, ಸಂಶೋಧನೆ, ಸೃಜನಶೀಲತೆ, ಸೌಂದರ್ಯ, ಶಿಸ್ತುಬದ್ಧತೆಯ ಸಾಕ್ಷಾತ್ಕಾರ. ಇದುಇಸ್ರೋ ಪರಿಸರವೇ, ಐಐಟಿಗಳೇ ಅಥವಾ ಎಂಜಿನಿಯರಿಂಗ್ ಕಾಲೇಜಿನ ಆವರಣವೇ ಎಂಬ ಬೆರಗು. ಇವೆಲ್ಲ ಕಂಡು ಬಂದದ್ದು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಆವರಣದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿದ್ದ, ವಿದ್ಯಾರ್ಥಿ ಪ್ರಾಜೆಕ್ಟ್‍ಗಳ ಪ್ರದರ್ಶನದಲ್ಲಿ. ಒಂದಕ್ಕಿಂತ ಇನ್ನೊಂದು ಮಿಗಿಲು ಎಂಬುವಂತೆ ಕಂಗೊಳಿಸಿತು. ಇಸ್ರೋ ಚಂದ್ರಯಾನದಿಂದ ಹಿಡಿದು ಚರಂಡಿಯ ತ್ಯಾಜ್ಯ ಎತ್ತುವ ತಂತ್ರಜ್ಞಾನದ ವರೆಗೆ ಆವಿಷ್ಕಾರಗಳು ಕಂಡುಬಂತು. ಮಕ್ಕಳು, ಯುವಜನತೆ ಮತ್ತೊಮ್ಮೆ ಮಗದೊಮ್ಮೆ ನೋಡಬೇಕು ಎನ್ನುವ ವಾತಾವರಣ ಸೃಷ್ಟಿಯಾಗಿತ್ತು.
ಪ್ರದರ್ಶನ:
ತಾಂತ್ರಿಕ ಪ್ರದರ್ಶನಗಳನ್ನು ಮಂಗಳೂರಿನ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಹ್ಯೂಬರ್ಟ್ ಮನೋಹರ್ ವಾಟ್ಸನ್ ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ವಿವಿಧತಾಂತ್ರಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ವಿಜ್ಞಾನಿಗಳು ಇದ್ದರು.
133 ಕಾಲೇಜುಗಳ 712 ವಿದ್ಯಾರ್ಥಿಗಳು ಒಟ್ಟು 368 ಪ್ರಾಜೆಕ್ಟ್‍ಗಳನ್ನು ಪ್ರದರ್ಶಿಸಿದರು. 160 ಪ್ರಾಧ್ಯಾಪಕರು ಪಾಲ್ಗೊಂಡರು.
ಆಳ್ವಾಸ್ ಸಾಂಸ್ಕೃತಿಕ ತಂಡದಿಂದ ಸಾಂಸ್ಕೃತಿಕ ವೈಭವಕಾರ್ಯಕ್ರಮವು ಮುದ ನೀಡಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ