ಬಿಜಾಪುರದ ವಿಶ್ವ ಪ್ರಸಿದ್ಧ ವಚನ ಗುಮ್ಮಟ - ಫ.ಗು. ಹಳಕಟ್ಟಿ

Upayuktha
0

*ಕನ್ನಡದ ಕಣ್ವ* ಎಂದು ಹೆಸರಾದ ಬಿ.ಎಂ. ಶ್ರೀಕಂಠಯ್ಯನವರು ಒಮ್ಮೆ ಬಿಜಾಪುರಕ್ಕೆ ಭೇಟಿ ನೀಡಿದಾಗ ಅವರ ಆಪ್ತರು ಗೋಳಗುಮ್ಮಟ ನೋಡಲು ಹೋಗೋಣವೆ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಬಿ.ಎಂ. ಶ್ರೀಕಂಠಯ್ಯನವರು ನಾನು ಬಿಜಾಪುರದ ವಚನ ಗುಮ್ಮಟವನ್ನು ನೋಡಬಯಸುತ್ತೇನೆ ಎಂದು ಹೇಳಿದರು. ಹಾಗೆ ಬಿ.ಎಂ. ಶ್ರೀಕಂಠಯ್ಯನವರಿಂದ ವಚನ ಗುಮ್ಮಟ ಎಂದು ಕರೆಸಿಕೊಂಡ ವ್ಯಕ್ತಿಯೇ *ವಚನ ಪಿತಾಮಹ* ಎಂದು ಪ್ರಸಿದ್ಧರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು.


ಓರ್ವ ವ್ಯಕ್ತಿ ತನ್ನಿಡಿ ಜೀವಿತಕಾಲದಲ್ಲಿ ಏನೆಲ್ಲವನ್ನು ಸಾಧಿಸಲು ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿ  ವಚನ ಸಾಹಿತ್ಯವನ್ನು ಮನೆ ಮನೆಗಳಿಗೆ ತಿರುಗಿ ಸಂಗ್ರಹಿಸಿದ, ಮತ್ತು ಅದನ್ನು ಪ್ರಕಟಿಸಿದ ವಿಜಯಪುರದ ಇನ್ನೊಂದು ಗುಮ್ಮಟ.ವಚನ ಸಾಹಿತ್ಯದ ಪ್ರಕಟಣೆಗೆ ತನ್ನ ಸ್ವಂತ ಮನೆಯನ್ನೇ ಮಾರಿ ಪತ್ರಿಕಾಲಯ ಸ್ಥಾಪಿಸಿದ ಜಗತ್ತಿನ ಏಕೈಕ ವ್ಯಕ್ತಿ ಹಳಕಟ್ಟಿಯವರು.


ಇಂದು ಭಾರತದಲ್ಲಿಯೇ ಅತ್ಯಂತ ಪ್ರಸಿದ್ಧವಾಗಿರುವ ಬಿ ಎಲ್ ಡಿ ಇ ಸಂಸ್ಥೆಯನ್ನು, ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಗಳನ್ನು  ಸ್ಥಾಪಿಸಿದ ವ್ಯಕ್ತಿ ಹಳಕಟ್ಟಿಯವರು. ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರ ಸಂಘ, ನೇಕಾರರ ಸಂಘ ಮತ್ತು ಹತ್ತಿ ಮಾರಾಟ ಸಂಘಗಳನ್ನು ಸ್ಥಾಪಿಸಿದವರು. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿದ ವ್ಯಕ್ತಿ ಹಳಕಟ್ಟಿಯವರು. 


ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಗುರುಬಸಪ್ಪ ಮತ್ತು ದಾನಾ ದೇವಿ ದಂಪತಿಗಳ ಮಗನಾಗಿ ಜುಲೈ 2, 1890 ರಲ್ಲಿ ಧಾರವಾಡದಲ್ಲಿ ಫಕೀರಪ್ಪ ಹಳಕಟ್ಟಿಯವರು ಜನಿಸಿದರು. ಈಗಾಗಲೇ ಸಿಕಂದರ ಬಾದಶಹನ ಚರಿತ್ರೆ, ಇಂಗ್ಲೆಂಡಿನ ಇತಿಹಾಸ, ಫ್ರಾನ್ಸ್ ನ ಕ್ರಾಂತಿ, ದೆಹಲಿ ಇತಿಹಾಸ, ಸಾಧು ಸಂತ ಏಕನಾಥರ ಚರಿತ್ರೆ ಮುಂತಾದ ಕೃತಿಗಳನ್ನು ಬರೆದ ಗುರುಬಸಪ್ಪ ಹಳಕಟ್ಟಿ ಅವರಿಂದ ಪುತ್ರ ಫಕೀರಪ್ಪ ನವರಿಗೆ ಸಾಹಿತ್ಯ ರಚನೆ ಎಂಬುದು ರಕ್ತಗತವಾಗಿ ಬಂದಿತ್ತು.


ಧಾರವಾಡದಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳನ್ನು ಪೂರೈಸಿದ ಅವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಮುಂಬೈಯ ಸೇಂಟ್ ಝೇವಿಯರ್ ಕಾಲೇಜಿಗೆ ಸೇರಿಕೊಂಡರು ‌. ಅಲ್ಲಿ ಇತರ ಭಾಷೆಯ ಜನರ  ಭಾಷಾಭಿಮಾನವನ್ನು ಕಂಡು ಅದರ ಜೊತೆಗೆ ನಮ್ಮ ಕನ್ನಡಿಗರ ದುರಭಿಮಾನಕ್ಕೆ ಬೇಸತ್ತು, ಕನ್ನಡಕ್ಕಾಗಿ ದುಡಿಯದಿದ್ದರೆ ಕನ್ನಡ ನೆಲ, ನಾಡು, ಜಲ, ನೆಲ ಎಲ್ಲದರ ಮೇಲಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಹೊಡೆತವನ್ನು ತಪ್ಪಿಸುವ ಉದ್ದೇಶದಿಂದ ಕನ್ನಡ ನಾಡು-ನುಡಿಗೆ ತಮ್ಮ ಜೀವನವನ್ನು ಮುಡುಪಾಗಿಡಲು ಪಣ ತೊಟ್ಟರು.


1901ರಲ್ಲಿ ಕಲಾ ವಿಭಾಗದಲ್ಲಿ ‌ಪದವೀಧರರಾದ ನಂತರ ಕಾನೂನು ಶಾಸ್ತ್ರದ ಅಭ್ಯಾಸವನ್ನು ಮಾಡಿದ ಅವರು 1904ರಲ್ಲಿ ಕಾನೂನು ಪದವಿ ಪಡೆದು ಧಾರವಾಡದಲ್ಲಿ ವಕೀಲಿವೃತ್ತಿಯನ್ನು ಆರಂಭಿಸಿದರು. ಆದರೆ ಕಾರಣಾಂತರಗಳಿಂದ ವಿಜಯಪುರಕ್ಕೆ ಸ್ಥಳಾಂತರಗೊಂಡರು. ಕೆಲವೇ ಸಮಯದಲ್ಲಿ ಅವರ ಜಾಣ್ಮೆ ಹಾಗೂ ಕಾನೂನು ಜ್ಞಾನವನ್ನು ಕಂಡುಕೊಂಡ ವಿಜಯಪುರದ ನ್ಯಾಯಾಲಯವು ಅವರನ್ನು ಪ್ಲೀಡರ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಎಂದು ನೇಮಕ ಮಾಡಿಕೊಂಡಿತು.

ಹಲವಾರು ವರ್ಷಗಳ ಕಾಲ ಎಲ್ಲೆಲ್ಲಿ ವಚನಗಳು ದೊರೆಯುತ್ತವೆಯೋ ಆ ಎಲ್ಲಾ ಮನೆಗಳಿಗೆ ತಿರುಗಿ ಸಾವಿರಾರು ವಚನಗಳನ್ನು ಸಂಗ್ರಹ ಮಾಡಿದ ಹಳಕಟ್ಟಿಯವರು ಅವುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಲು ಯೋಜಿಸಿದ್ದು ಒಂದು ಐತಿಹಾಸಿಕ ನಿರ್ಣಯವಾಗಿತ್ತು. ವೃತ್ತಿಯಲ್ಲಿ ಇಷ್ಟೇ ಹಣವನ್ನು ಶುಲ್ಕವಾಗಿ ಪಡೆಯಬೇಕೆಂಬ ನಿಯಮವನ್ನು ಹೊಂದಿರದ ಬಡವರ ಬಂಧುವಾದ ವಕೀಲ ಹಳಕಟ್ಟಿಯವರಿಗೆ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ವಿಂಗಡಿಸಿ ಪ್ರಕಟಿಸಲು ಹಣಕಾಸಿನ ಅವಶ್ಯಕತೆ ಬಹಳವೇ ಇತ್ತು. ಅದಕ್ಕಾಗಿ ತಾವು ವಾಸವಿದ್ದ ಮನೆಯನ್ನು ೧೯೨೫ರಲ್ಲಿಯೇ ಮಾರಿ *ಹಿತಚಿಂತಕ ಮುದ್ರಣಾಲಯ*ವನ್ನು ಪ್ರಾರಂಭಿಸಿದರು. ಅಲ್ಲಿಂದ ವಚನ ಸಾಹಿತ್ಯ ಕೃತಿಗಳ ಸುರಿಮಳೆಯೇ ಶುರುವಾಗಿ ಹಳಕಟ್ಟಿಯವರಿಂದ ವಚನಕ್ರಾಂತಿಯೇ ನಡೆದಿತ್ತು. ಇವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನಸಂಕಲನದ ಕೃತಿಗಳು ಇಂದಿಗೂ ಸಾರಸ್ವತ ಲೋಕದ ಮಾಣಿಕ್ಯಗಳೇ ಆಗಿವೆ. ಹಳಕಟ್ಟಿಯವರು ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿಗಳು, ಚರಿತೆಕಾರರು ಗುರುತಿಸಿದ್ದು ಕೇವಲ ೫೦ ವಚನಕಾರರನ್ನು ಮಾತ್ರ. ಫ. ಗು. ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ ೨೫೦ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ ೪೨ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗೆ ಸಲ್ಲುತ್ತದೆ.


ಏತನ್ಮಧ್ಯೆ ಏಕ ಕಾಲಕ್ಕೆ 2 ಪತ್ರಿಕೆಗಳನ್ನು ಸಂಪಾದಿಸಿ, ಪ್ರಕಟಿಸಿ ಜನಸಮೂಹದ ಜವಾಬ್ದಾರಿ ತಿಳಿಸುವ ಕಾರ್ಯಕ್ಕೆ ಕೈ ಹಾಕಿದರು.1926ರಲ್ಲಿ ಆರಂಭಿಸಿದ ಶಿವಾನುಭವ ಮಾಸಿಕ ಪತ್ರಿಕೆ 35 ವರ್ಷ ನಿರಂತರ ನಡೆಸಿದ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1927ರಲ್ಲಿ ನವ ಕರ್ನಾಟಕ ಎಂಬ ವಾರ ಪತ್ರಿಕೆ ಆರಂಭಿಸಿದರು. ಈ ಪತ್ರಿಕೆಯ ವಿಶೇಷವೆಂದರೆ ರಾಜಕೀಯ,ಸಾಮಾಜಿಕ ಮತ್ತು ವೈವಿಧ್ಯತೆಗಳನ್ನು ಒಳಗೊಂಡಿತು. 1920ರಲ್ಲಿ ನಡೆದ ಮುಂಬೈ ವಿಧಾನ ಪರಿಷತ್ ಚುನಾವಣೆಯಲ್ಲಿ ಹಳಕಟ್ಟಿಯವರು ಅಧಿಕ ಮತಗಳಿಂದ ಆರಿಸಿ ಬಂದರು. ಕರ್ನಾಟಕ ಸಾಹಿತ್ಯ ಪರಿಷತ್ ಸಂಸ್ಥಾಪಕ ಹಳಕಟ್ಟಿಯವರು ನವ ಕರ್ನಾಟಕದ ಶಿಲ್ಪಿ. ಅಂತಃಕರಣಪೂರ್ವಕವಾಗಿ ದುಡಿದರು. 1928ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಕರ್ನಾಟಕ ಏಕೀಕರಣ ಸಮ್ಮೇಳನ ಅಧ್ಯಕ್ಷರಾದರು.


ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ "ವಚನ ಸಾಹಿತ್ಯ ಸಾರ"ವಂತೂ ಅಪೂರ್ವ ವಚನಗಳುಳ್ಳ ಅದ್ಭುತ ಕೃತಿ. ಈ ಬೃಹತ್ ಗ್ರಂಥ ಹಲವು ಸಂಪುಟಗಳಲ್ಲಿ 1923ರಿಂದ 1939ರ ಅವಧಿಯಲ್ಲಿ ಪ್ರಕಟಗೊಂಡು ವಚನಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಇವರ ಸ್ವತಂತ್ರ ಕೃತಿಗಳು ಸೇರಿದಂತೆ ಸಂಪಾದಿಸಿದ ವಚನಸಾಹಿತ್ಯ ಕೃತಿಗಳು 175ಕ್ಕೂ ಹೆಚ್ಚೆಂದರೆ ಹಳಕಟ್ಟಿಯವರ ವಚನ ಸಾಹಿತ್ಯದ ದೈತ್ಯಶಕ್ತಿಯನ್ನು ಅರಿವು ಆಗಬಹುದು. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ ಮುಂತಾದವುಗಳು ಇವರ ಪ್ರಮುಖ ಕೃತಿಗಳು.ಬಸವಣ್ಣನವರ ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿ 'ಬ್ರಿಟಿಷ್ ಆಂಟಿಕ್ವೆರಿ'ಯಲ್ಲಿ ಪ್ರಕಟಿಸಿದರು. ವಚನ ಗಾಯನದ ಮೂಲಕ ವಚನ ಸಾಹಿತ್ಯವನ್ನು ವಿಶ್ವ ಸಾಹಿತ್ಯ ವಾಗಿಸಲು ಪ್ರೋತ್ಸಾಹಿಸಿದ  ಹಳಕಟ್ಟಿಯವರು ವಚನಗಳ ರೆಕಾರ್ಡಿಂಗಗಾಗಿ ಶ್ರೇಷ್ಠ ಗಾಯಕರನ್ನು ಮುಂಬೈಗೆ ಕಳುಹಿಸಿದರು.


1920ರಲ್ಲಿ ಮುಂಬಯಿಯ ವಿಧಾನ ಪರಿಷತ್ತಿನ ಸದಸ್ಯತ್ವ, 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1928ರಲ್ಲಿ ಜರುಗಿದ 3ನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ, 1931ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, 1933ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ, 1956ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಮುಂತಾದವು ಇವರ ಸೇವೆಗೆ ಸಂದ ಗೌರವ ಪುರಸ್ಕಾರಗಳು.


ಸಾಹಿತ್ಯ ಸೇವೆ ಮೆಚ್ಚಿ 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿ ಕನ್ನಡಿಗರು ಅವರನ್ನು ಸನ್ಮಾನಿಸಿದರು. ಜನ ವಚನ ಪಿತಾಮಹ ಎಂದು ಪ್ರೀತಿಯಿಂದ ಕರೆದರು. ಭಾರತ ಸರಕಾರ ರಾವ್ ಬಹಾದ್ದೂರ ಪದವಿ ನೀಡಿ ಗೌರವಿಸಿತು. 1956ರಲ್ಲಿ ಗೌರವ ಡಿ.ಲಿಟ್ ಪದವಿ ಇತ್ತು ಸನ್ಮಾನಿಸಿತು.

ತಮ್ಮ ಸೈಕಲ್ಲಿನಲ್ಲಿ ಮನೆ ಮನೆಗೆ ತೆರಳಿ ಓಲೆಗರಿ, ತಾಳೆಗರಿ ಮತ್ತು ಲಿಪಿಗಳಲ್ಲಿನ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿದ ಹಳಕಟ್ಟಿಯವರು ತಮ್ಮ ಮನೆಯ ಮೇಲೆ ಕೆ.ಸಿ.ಸಿ. ಬ್ಯಾಂಕಿನಲ್ಲಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಮನೆ ಜಪ್ತಿಗೆ ಬಂದಿತು .ಇದನ್ನರಿತ ಸಿರಿಗೆರೆಯ ತರಳಬಾಳು ಜಗದ್ಗುರುಗಳಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ದಾವಣಗೆರೆಯಲ್ಲಿ ನಡೆದ ತರಳುಬಾಳು ಹುಣ್ಣಿಮೆಗೆ ಹಳಕಟ್ಟಿಯವರನ್ನು ಆಹ್ವಾನಿಸಿ ಅವರಿಗೆ ಮಠದಲ್ಲಿದ್ದ ಚಿನ್ನದ ಪದಕವನ್ನು ನೀಡಿ ಗೌರವಿಸಿ ಸನ್ಮಾನಿಸಿದರಲ್ಲದೇ, ಮಠವು ನೀಡಿದ ಚಿನ್ನದ ಪದಕವನ್ನು ಹಾಗೆಯೇ ಇಟ್ಟುಕೊಳ್ಳದೆ ಮಾರಿ ಸಾಲ ತೀರಿಸಿಕೊಳ್ಳಲು ಕೇಳಿಕೊಂಡರು. ಜೊತೆಗೆ ಶರಣ ಸಾಹಿತ್ಯ ಸೇವಕರಾದ, ಸಾಧಕರಾದವರು ಸಾಲಗಾರರಾಗಿ ಸಾಯಬಾರದು ಎಂದು ಆಶೀರ್ವದಿಸಿದ್ದರು. ಇದು ಹಳಕಟ್ಟಿಯವರ ಘನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿತ್ತು.

ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಜಯ ಚಾಮರಾಜೇಂದ್ರ ಒಡೆಯರ್ ಅವರು ವಿಜಾಪುರಕ್ಕೆ  ಆಗಮಿಸಿದಾಗ‌ ಹಳಕಟ್ಟಿ ಅವರ ಮನೆಗೆ ಹೋಗಿ ಅವರಿಗೆ ಹಣ್ಣು ಹೂ ಸಮರ್ಪಿಸಿ ಗೌರವಿಸಿದರು. ಇದು ಹಳಕಟ್ಟಿ ಅವರ ಮೇರು ವ್ಯಕ್ತಿತ್ವಕ್ಕೆ ಸಂದ ಗೌರವ.


ಹೀಗೆ ಕನ್ನಡದ ನಾಡು-ನುಡಿಗೆ ತಮ್ಮ ಜೀವನವನ್ನು ಸಮರ್ಪಿಸಿ ವಚನ ಸಾಹಿತ್ಯಕ್ಕೆ ವಿಶ್ವದರ್ಜೆಯ ಸ್ಥಾನಮಾನಗಳನ್ನು ದೊರಕಿಸಿಕೊಟ್ಟ, ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ ವಿಜಯಪುರದ ಗುಮ್ಮಟ ಎಂದೇ ಹೆಸರಾದ ಹಳಕಟ್ಟಿಯವರು 1964 ಜೂನ್ 29ರಂದು ಅಸ್ತಂಗತರಾದರು.


ಪ್ರತಿ ವರ್ಷ ಜೂನ್ 29ರಂದು ಹಳಕಟ್ಟಿಯವರ ಸ್ಮರಣಾರ್ಥವಾಗಿ ವಚನ ದಿನವನ್ನಾಗಿ ಆಚರಿಸಲಾಗುತ್ತಿದೆ.‌ ಬಿಜಾಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯು ಹಾಗೂ ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು 15 ಸಂಪುಟಗಳಲ್ಲಿ ಮರುಪರಿಷ್ಕರಿಸಿ ಪ್ರಕಟಿಸಿದೆ. ಬಿ ಎಲ್ ಡಿ ಈ  ಸಂಸ್ಥೆಯ ಆವರಣದಲ್ಲಿ ಹಳಕಟ್ಟಿಯವರ ಸ್ಮಾರಕ ಭವನವನ್ನು ನಿರ್ಮಿಸಿದೆ. ಬಡತನದ ಮಧ್ಯದಲ್ಲಿಯೂ ಅಗಾಧ ವಚನ ಸಂಪುಟವನ್ನು ಸಂಗ್ರಹಿಸಿ ಪರಿಷ್ಕರಿಸಿ ಪ್ರಕಟಿಸಿದ ಹಳಕಟ್ಟಿ ಅವರ ದಿವ್ಯ ವ್ಯಕ್ತಿತ್ವಕ್ಕೆ ಭಕ್ತಿ ಪೂರ್ವಕ ನಮನಗಳು. ಅವರು ಗಳಿಸಿಕೊಟ್ಟ ವಚನದ ಆಸ್ತಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲ ಕನ್ನಡಿಗರದು. ಈ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಿಕೊಂಡು ಹೋಗುವ ಮೂಲಕ ಆ ದಿವ್ಯ ಚೇತನಕ್ಕೆ ಗೌರವ ಸಲ್ಲಿಸೋಣ ಎಂದು ಹಿರಿದಾಸೆಯೊಂದಿಗೆ

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top