ಕುಂದಾಪುರ ಎಂದ ಕೂಡಲೇ ನಮಗೆಲ್ಲರಿಗೂ ನೆನಪಾಗುವ ಒಂದು ಅಂಶ ಕಡಲ ತೀರದ ಊರು ಮತ್ತು ಜನರು ಮಾತನಾಡುವ ಕುಂದಗನ್ನಡ ಆಡು ಭಾಷೆ. ಈ ಕಡಲ ತೀರದ ಊರಿಗೆ ಕುಂದಾಪುರ ಎಂದು ಹೆಸರು ಬರಲು ಒಂದು ವಿಶೇಷವಾದ ಕಾರಣವು ಇದೇ ಅದೇನೆಂದರೆ ಅಳುಪ ರಾಜವಂಶ ಸರಿ ಸುಮಾರು ಹತ್ತು ಹನ್ನೊಂದನೇ ಶತಮಾನದಲ್ಲಿ ಈ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಬಾರ್ಕೂರು ಅಳುಪ ರಾಜವಂಶದ ಆಡಳಿತದ ಕೇಂದ್ರ ಸ್ಥಾನವಾಗಿತ್ತು. ಕುಂದ ಎಂದರೆ ಮಲ್ಲಿಗೆ ಹೂವು ಹಾಗೆಯೇ ಕರಾವಳಿಯ ಈ ಭಾಗದಲ್ಲಿ ಮಲ್ಲಿಗೆ ಹೂವಿನ ಬೆಳೆ ಬಹುತೇಕ ಮಂದಿಯು ಬೆಳೆಯುತ್ತಿದ್ದರಿಂದ ಈ ಸ್ಥಳಕ್ಕೆ ಕುಂದಾಪುರ ಎಂದು ಹೆಸರು ಬಂತೆಂದು ಇತಿಹಾಸದಲ್ಲಿರುವ ಉಲ್ಲೇಖ ಹಾಗೂ ಕುಂದೇಶ್ವರ ದೇವಸ್ಥಾನ ಈ ಸ್ಥಳದಲ್ಲಿ ಇದ್ದುದರಿಂದ ಈ ಊರಿಗೆ ಕುಂದಾಪುರ ಎಂಬ ಹೆಸರು ಬಂತೆಂಬ ನಂಬಿಕೆಯು ಇದೆ.
ಕುಂದಾಪುರದ ಮತ್ತೊಂದು ವೈಶಿಷ್ಟ್ಯವೆಂದರೆ ಈ ಊರಿನ ಮೂರು ಕಡೆಯಲ್ಲಿ ನದಿಯಿದ್ದು ಅವುಗಳೆಂದರೆ ಉತ್ತರಕ್ಕೆ ಪಂಚಗಂಗಾವಳಿ, ಪೂರ್ವಕ್ಕೆ ಕಲಗರ ನದಿ, ಪಶ್ಚಿಮಕ್ಕೆ ಕೊಡಿ ಹಿನ್ನೀರು ಹಾಗೂ ದಕ್ಷಿಣಕ್ಕೆ ಭೂಪ್ರದೇಶದಿಂದ ಕೂಡಿದೆ.
ಈ ಆಡು ಭಾಷೆಯಲ್ಲಿ ಮೂರು ಪ್ರಕಾರಗಳಿದ್ದು ಬಾರ್ಕೂರು ಕನ್ನಡ, ಕೋಟ ಕನ್ನಡ ಹಾಗೂ ಕುಂದಾಪುರ ಕನ್ನಡ. ವಾಣಿಜ್ಯ ದೃಷ್ಟಿಯಿಂದ ಕುಂದಾಪುರ ಮೂಲ ಸ್ಥಾನವಾಗಿ ಬೆಳೆದ ನಂತರ ಈ ಮೂರು ಪ್ರಕಾರಗಳೊಂದಾಗಿ ಕುಂದಾಪುರ ಕನ್ನಡ ಮುನ್ನೆಲೆಗೆ ಬಂತು ಎಂದು ಹೇಳಲಾಗುತ್ತದೆ. ಹೆಬ್ರಿಯಿಂದ ಬೈಂದೂರಿನ ನಡುವೆ ಈ ಆಡುಭಾಷೆ ಪ್ರಚಲಿತದಲ್ಲಿದ್ದು ವ್ಯಾವಹಾರಿಕ ಭಾಷೆಯಾಗಿ ಮತ್ತು ಭಾವನೆಗಳ ಸಂವಹನ ಕುಂದಾಪುರದ ಜನರ ಬದುಕಿನಲ್ಲಿ ಕುಂದಗನ್ನಡ ನೆಲೆಯೂರಿದೆ.
ಇಲ್ಲಿಯ ಬಡುಗುತಿಟ್ಟು ಯಕ್ಷಗಾನ ಕಲೆಯು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು ಈ ಕಲೆಯನ್ನು ಈ ಭಾಗದ ಜನರು ಅತ್ಯಂತ ಶೃದ್ಧೆಯಿಂದ ಆರಾಧಿಸುವರು. ಕುಂದಾಪುರದ ಜನರಾಡುವ ಈ ಆಡು ಭಾಷೆ ಬಹಳ ಸೌಜನ್ಯಯುತವಾಗಿ ಕೂಡಿದ್ದು ಕೇಳುಗರಿಗೆ ಕಸಿವಿಸಿಯನ್ನುಂಟು ಮಾಡುವ ಪದಬಳಕೆ ಸಾಮಾನ್ಯವಾಗಿ ವಿರಳ ಎನ್ನಬಹುದು ಮತ್ತು ಈ ನಮ್ಮ ಆಡುಭಾಷೆಯಲ್ಲಿ ಇರುವ ಕೆಲವು ವಿಶೇಷ ಪದಗಳಿಂದ ಈ ಭಾಗದ ಜನರು ಯಾವ ಊರಿಗೆ ಹೋದರು ಇವರು ಕರಾವಳಿಯ ಕುಂದಾಪುರದವರು ಎಂದು ಗುರುತಿಸುವಷ್ಟು ಈ ಭಾಷೆ ಇಂದು ಪ್ರಚಲಿತಗೊಂಡಿದೆ.
ಕುಂದಾಪುರದ ಹಲವು ವಿಶೇಷಗಳಲ್ಲಿ ಮೊದಲನೆಯಿದಾಗಿ ಪರಶುರಾಮರು ನಿರ್ಮಿಸಿದ ಸಪ್ತ ಕ್ಷೇತ್ರಗಳಲ್ಲಿ ನಾಲ್ಕು ಪುಣ್ಯ ಕ್ಷೇತ್ರಗಳಾದ ಕೊಲ್ಲೂರು, ಕೋಟೇಶ್ವರ, ಕುಂಭಾಶಿ, ಶಂಕರನಾರಾಯಣ ನಮ್ಮ ಕುಂದಾಪುರದಲ್ಲಿರುವುದು ಹೆಮ್ಮೆಯ ವಿಚಾರ ಮತ್ತು ಈ ನೆಲಕ್ಕೆ ಎಷ್ಟು ದೈವಿಕ ಶಕ್ತಿಯಿದೆ ಎನ್ನುವುದು ನಾವು ಗಮನಿಸಬೇಕಾದ ವಿಚಾರ. ಸೋದೆ ಮಠದ ಪರಂಪರೆಯ ಪ್ರಮುಖ ಯತಿಗಳಾದ ಶ್ರೀ ವಾದಿರಾಜರು ಜನಸಿರುವ ಉಳ್ಳೂರು ಕೂಡ ಇರುವುದು ನಮ್ಮ ಕುಂದಾಪುರಕ್ಕೆ ಇರುವ ಇನ್ನೊಂದು ಹಿರಿಮೆ. ಈ ನಮ್ಮ ಪುಣ್ಯಭೂಮಿಯಲ್ಲಿ ಹಲವಾರು ಪ್ರಸಿದ್ಧ ದೇವಸ್ಥಾನಗಳಿದ್ದು ಅದರಲ್ಲಿ ಆನೆಗುಡ್ಡೆ ವಿನಾಯಕ, ಕೊಲ್ಲೂರು ಮೂಕಾಂಬಿಕೆ, ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಹೀಗೆ ಹಲವಾರು ದೇವಸ್ಥಾನಗಳಿವೆ. ಈ ಎಲ್ಲ ಪ್ರಸಿದ್ಧ ದೇವಾಲಯಗಳಿಗೆ ಬರುವ ಭಕ್ತಾದಿಗಳಿಗೆ ಹಸಿವು ತಣಿಸುವ ಕಾರ್ಯ ವರ್ಷ ಪೂರ್ತಿ ಮಾಡುವುದರ ಮೂಲಕ ನಮ್ಮ ಊರಿಗೆ ಬರುವ ಯಾತ್ರಿಕರ ಹಸಿವು ನೀಗಿಸುವ ಕಾರ್ಯ ಬಹಳ ಕಾಲದಿಂದ ನಡೆಯುತ್ತಿದೆ.
ಇಲ್ಲಿಯ ಜನರು ಸಹೃದಯಿ ಮನಸುಳ್ಳವರು ಎಲ್ಲಾ ಧಾರ್ಮಿಕ ನಂಬಿಕೆಯುಳ್ಳ ಜನರೊಂದಿಗೆ ಸಾಮರಸ್ಯದ ಬದುಕು ಸಾಗಿಸುವವರು ಆದರೆ ರಾಷ್ಟ್ರ ಪ್ರೇಮ ಮತ್ತು ಧಾರ್ಮಿಕ ನಂಬಿಕೆಗಳು ಎದುರಾದಾಗ ತುಂಬ ಕಠಿಣವಾಗಿ ತಮ್ಮ ನಿರ್ಧಾರವನ್ನು ತೋರ್ಪಡಿಸುವ ಮನಸುಳ್ಳವರು. ವಿಶ್ವ ಕುಂದಾಪುರ ಕನ್ನಡ ದಿನದ ಆಚರಣೆಯ ಸುಸಂದರ್ಭದಲ್ಲಿರುವ ನಾವು ನಮ್ಮ ಇತಿಹಾಸ ಮತ್ತು ಈ ಭಾಷೆಯ ಅಂತಃಶಕ್ತಿಯ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಕಲಿಸುವ ಕೆಲಸ ನಮ್ಮೆಲ್ಲರಿಂದಲು ಆಗಬೇಕಿದೆ. ಭಾಷೆಯ ಅಳಿವು ಉಳಿವು ನಾವು ಬಳಸುವ ರೀತಿಯಲ್ಲಿ ಇರುತ್ತದೆ ಮತ್ತು ನಮ್ಮ ಆಡುಭಾಷೆ ಮತ್ತು ನಾವು ಬೆಳೆದು ಬಂದಿರುವ ಪರಿಸರದ ಬಗ್ಗೆ ಅರಿತಷ್ಟು ಮುಂದಿನ ಜನಾಂಗಕ್ಕೆ ಭಾಷೆ ಮತ್ತು ಸ್ಥಳದ ಪ್ರಾಮುಖ್ಯತೆಯ ಜಾಗೃತಿ ಮೂಡುತ್ತದೆ ಮತ್ತು ಆ ಕಾರ್ಯ ಇಂದು ನಡೆಯಲಿ ಎಂಬುದೇ ಈ ವಿಶ್ವ ಕುಂದಾಪ್ರ ಕನ್ನಡದ ದಿನದ ಉದ್ದೇಶವಾಗಲಿ ಎನ್ನುವುದೇ ಆಶಯ.
- ಪ್ರದೀಪ ಶೆಟ್ಟಿ ಬೇಳೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ