"ವಸುಧೈವ ಕುಟುಂಬಕಂ" ಎಂಬ ಸರ್ವಶ್ರೇಷ್ಠ ಘೋಷಣೆಯೊಂದಿಗೆ ಜಿ - 20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ವಹಿಸಿರುವ ಭಾರತ ದೇಶ ಅತಿಥೇಯ ರಾಷ್ಟ್ರವಾಗಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಭಾರತ ದೇಶದ ಸಂಸ್ಕೃತಿಯನ್ನು , ದೇಶಭಕ್ತಿಯನ್ನು, ರಾಷ್ಟ್ರಪ್ರೇಮವನ್ನು ರಾಷ್ಟೀಯ ಭಾವೈಕ್ಯತೆಯನ್ನು, ಕಲೆ, ನೆಲೆ, ಸಾಹಿತ್ಯ , ಸಂಗೀತ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಕುರಿತಂತೆ ಮುಂತಾದ ವಿಚಾರಧಾರೆಗಳನ್ನು ಜಿ-20 ಗುಂಪಿನ ರಾಷ್ಟ್ರಗಳಿಗೆ ಮನದಟ್ಟಾಗುವ ಹಾಗೆ ತಿಳಿಸಿ ಕೊಡುವುದು ನಮ್ಮ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಇದನ್ನು ಪಾಲಿಸುವ ಅಗತ್ಯವೂ ಇದೆ.
"ವಸುದೈವ ಕುಟುಂಬಕಂ " ಎಂಬುದು ಒಂದು ಸಂಸ್ಕೃತ ಭಾಷೆಯ ವೈದಿಕ ಶ್ರೇಷ್ಠ ಚಿಂತನೆ ಯಾಗಿದೆ. ಇದು ಸಾಮವೇದ ಸಂಪ್ರದಾಯಕ್ಕೆ ಸಂಬಂಧಿಸಿದ ಮಹಾ ಉಪನಿಷತ್ತಿನಲ್ಲಿ ಕಂಡುಬರುವ ಸ್ತೋತ್ರವಾಗಿದೆ. " ಜಗತ್ತು ಒಂದೇ ಕುಟುಂಬ " ಎಂಬುದು ಇದರ ಅರ್ಥವೆನಿಸಿದೆ. ಸಂಪೂರ್ಣ ಜಗತ್ತಿನ ಪರಸ್ಪರ ಸಂಬಂಧವನ್ನು ಒಂದು ದೊಡ್ಡ ಕುಟುಂಬವಾಗಿ ಗುರುತಿಸುವ ಶಕ್ತಿ ಇದೆ. ಇದನ್ನರಿತುಕೊಳ್ಳಲು ನಾವು ಪ್ರಬುದ್ಧತೆಯ ಭಾವನೆಯನ್ನು ಮತ್ತು ಹರ್ಷಚಿತ್ತತೆಯನ್ನು ಬೆಳೆಸಿಕೊಳ್ಳಬೇಕು. ಇದು ಹೆಚ್ಚು ಸಕಾರಾತ್ಮಕ ಸಮಾಜದ ನಿರ್ಮಾಣಕ್ಕೆ ಮತ್ತು ಜಾಗತಿಕ ಒಳಿತನ್ನು ಮಾತ್ರ ನಿರ್ಮಿಸಲು ಪ್ರೇರಕ ಶಕ್ತಿಯಾಗಿದೆ.
"ವಸುಧೈವ ಕುಟುಂಬಕಂ " ಎಂಬ ಮಂತ್ರವು ಇಡೀ ವಿಶ್ವವು ಒಂದು ಸಣ್ಣ, ಬಿಗಿಯಾಗಿ ಹೆಣೆದ, ವಿಭಕ್ತ ಕುಟುಂಬದಂತೆ ಇದೆ. ವಿಶ್ವವನ್ನು ಒಂದು ವಿಭಕ್ತ ಕುಟುಂಬವನ್ನಾಗಿಸಿ "ನಾನು, ನೀನು, ಆನು, ತಾನು " ಎಂಬ ವರಕವಿ ದ.ರಾ.ಬೇಂದ್ರೆಯವರ ಪರಿಕಲ್ಪನೆಗೆ ಮೂಲವೆನ್ನುವಂತೆ ಇದೆ. ಮಹಾಕವಿ ರಸಋಷಿ ಕುವೆಂಪುರವರ ಅನಿಕೇತದಂತಹ ಪರಿಕಲ್ಪನೆಗಳಾದ ಮನುಜಮತ , ವಿಶ್ವಪಥ . ಸರ್ವೋದಯ, ಸಮನ್ವಯ ,ಪೂರ್ಣದೃಷ್ಠಿ ಚಿಂತನೆಗಳಿಗೆ ಅಡಿಗಲ್ಲೆನಿಸಿದಂತಿದೆ. ಒಟ್ಟಾರೆ ನಾವೆಲ್ಲರೂ ಒಂದೇ ವಿಶ್ವ ನಾಗರೀಕರು ಎಂಬ ಮೂಲತತ್ವಕ್ಕೆ ಅಣಿಗೊಳಿಸುತ್ತದೆ.
"ವಸುಧೈವ ಕುಟುಂಬಕಂ " ಎಂಬುದು ಸರಳ ಜೀವನ ಮತ್ತು ಉದಾತ್ತ ಚಿಂತನೆಗಳನ್ನು, ಉದಾತ್ತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಣೆ ನೀಡುತ್ತದೆ. " ನಾನು ಬೇರೆ , ನೀನು ನನ್ನವನಲ್ಲ , ನನ್ನನ್ನು ಬಿಟ್ಟು ಅವನು , ಅವಳು, ಅವರು, ಅವು ಇವ್ಯಾವ ಸಂಬಂಧಗಳಿಗೂ ಇಲ್ಲಿ ಬೆಲೆ ಇಲ್ಲ " ಎಂಬ ನಕಾರಾತ್ಮಕ ಮನೋಭಾವದಿಂದ ಹೊರಬಂದು " ನಾನು ಪರರಂತೆ, ಪರರು ನನ್ನಂತೆಯೇ, ನನ್ನಂತೆಯೇ ಪರರು ಎಂಬ ಅನುಭವದ ಹಿನ್ನೆಲೆಯಲ್ಲಿ ಅನುಭಾವದ ಅನುಭೂತಿಯನ್ನು ಹೊಂದುವ ಸಕಾರಾತ್ಮಕ ಮನೋಧೋರಣೆಯನ್ನು ಉಂಟು ಮಾಡುತ್ತದೆ. ಇದು ನಾವು ನಮ್ಮವರು ಎಂಬ ಭಾವ - ಬಾಂಧವ್ಯದೊಂದಿಗೆ ಬಿಗಿಯಾಗಿ ಬೆಸೆದುಕೊಂಡಿದೆ.
"ವಸುಧೈವ ಕುಟುಂಬಕಂ" ಎಂಬ ಮಂತ್ರದ ಮೂಲಕ ಜಗತ್ತಿಗೆ ಆದರ್ಶ ಮೌಲ್ಯಗಳನ್ನು ಕಟ್ಟಿಕೊಡುತ್ತದೆ. ವಿಶಾಲವಾದ ಭಾರತೀಯ ಸಂಸ್ಕೃತಿ ಮತ್ತು ಭಾವೈಕ್ಯತೆಗೆ ಆಧಾರವಾದ ತತ್ವಗಳೆನಿಸಿರುವ ಪರಧರ್ಮ ಸಹಿಷ್ಣುತೆ, ಅಹಿಂಸೆ, ತ್ಯಾಗ, ತಾಳ್ಮೆ, ಸಹಬಾಳ್ವೆ, ಸಹಕಾರ, ಸಮನ್ವಯ, ಶಾಂತಿ , ಪ್ರೀತಿ, ಕರುಣೆ, ಸಹೋದರತೆ, ಸ್ವಾತಂತ್ರ್ಯ , ಸಮಾನತೆ, ಪ್ರಜಾಪ್ರಭುತ್ವ ಮುಂತಾದವುಗಳನ್ನು ವಿಶ್ವದ ಜನಮಾನಸದಲ್ಲಿ ಅರಿವು ಮೂಡಿಸುವ ಮೂಲಕ ಜಾಗೃತಗೊಳಿಸುತ್ತದೆ. ಸಾಮ್ರಾಟ್ ಅಶೋಕ, ಭಗವಾನ್ ಬುದ್ಧ , ವರ್ಧಮಾನ ಮಹಾವೀರ, ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರಂತಹ ಪುಣ್ಯ ಪುರುಷರ ಆದರ್ಶ ಜೀವನವನ್ನು ವಿಶ್ವಕ್ಕೆ ನೀಡಿದ ದೇಶ ಭಾರತ ಭಾಗ್ಯನೆಲವೆನಿಸಿದೆ.
" ವಸುಧೈವ ಕುಟುಂಬಕಂ " ಎಂಬ ಜಗತ್ ಚಿಂತನೆಯನ್ನು ಭಾರತವು ವಿಶ್ವಕ್ಕೆ ನೀಡುವ ಮೂಲಕ ಒಂದು ರಾಷ್ಟ್ರದೊಳಗಿನ ಸಕಲ ಧರ್ಮಗಳಲ್ಲಿ ಸಮನ್ವಯತೆಯನ್ನು ಸಾಧಿಸುವ ಮೂಲಕ ಸಮಾನತೆಯನ್ನು ತರುವುದು ಹೇಗೆಂದು ತಿಳಿಸಿದೆ. "ಈಶ್ವರ ಅಲ್ಹಾ ತೇರೇ ನಾಮ್, ಸಬಕೊ ಸನ್ಮತಿ ದೇ ಭಗವಾನ್ " ಎನ್ನುವ ಮೂಲಕ ಗುರುನಾನಕ್ , ಕಬೀರ್, ತುಳಸೀದಾಸ್, ಚೈತನ್ಯ, ಅಲ್ಲಮ ಪ್ರಭು, ಬಸವಾದಿ ಶಿವಶರಣರು, ಪುರಂಧರ , ಕನಕಾದಿ ದಾಸವರೇಣ್ಯರು, ರಾಮಕೃಷ್ಣ ಪರಮಹಂಸ, ಶಾರದಾದೇವಿ , ಸ್ವಾಮಿ ವಿವೇಕಾನಂದ ಮುಂತಾದ ಮಹಾನ್ ಸತ್ಪುರುಷರು ಧರ್ಮಗಳ ಸಮನ್ವಯತೆಗೆ ಸಾಮರಸ್ಯತೆಯ ಸಾಧನೆಗೆ ತಮ್ಮದೇ ಆದ ಕಾಣಿಕೆ ನೀಡಿ, ವಿಶ್ವ ಮಟ್ಟದ ಆದರ್ಶ ವ್ಯಕ್ತಿತ್ವವನ್ನು ಮೆರೆದಿದ್ದಾರೆ.
"ವಸುಧೈವ ಕುಟುಂಬಕಂ " ಎಂಬ ಮಾತಿನ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರಧ್ವಜ, ರಾಷ್ಟ್ರ ಲಾಂಛನ, ರಾಷ್ಟ್ರಗೀತೆ, ರಾಷ್ಟ್ರ ಪಕ್ಷಿ , ರಾಷ್ಟ್ರ ಪ್ರಾಣಿ, ರಾಷ್ಟೀಯ ಹೂ, ರಾಷ್ಟೀಯ ಹಣ್ಣು, ರಾಷ್ಟ್ರ ವೃಕ್ಷ ಮುಂತಾದ ರಾಷ್ಟ್ರೀಯ ಚಿಹ್ನೆಗಳಿಗೆ ಹೇಗೆ ಗೌರವಿಸುತ್ತೇವೆ ಮತ್ತು ಅವುಗಳನ್ನು ಗೌರವಿಸಿ , ಆರಾಧಿಸುವ ಮೂಲಕ ನಮ್ಮ ರಾಷ್ಟ್ರೀಯ ಭಾವೈಕ್ಯತೆಯನ್ನು ನಾವು ಹೇಗೆ ಪ್ರದರ್ಶಿಸುತ್ತೇವೆ ಎಂಬುದನ್ನು ಜಗತ್ತಿಗೆ ಪರಿಚಯಿಸುವ ಬಹಳ ದೊಡ್ಡ ಹಾಗೂ ಮುಖ್ಯ ಜವಾಬ್ದಾರಿಯನ್ನು ಸರ್ವರೂ ಹೊಂದಿದ್ದೇವೆ. ಇವುಗಳ ಮೂಲಕ ವಿಶ್ವಪ್ರಜೆಗಳಾಗುವತ್ತ ಸಾಗುವುದು ಹೇಗೆ ಎಂಬ ಪಥವನ್ನು ತೋರಿಸಿ ಕೊಡುತ್ತಿದ್ದೇವೆ.
" ವಸುಧೈವ ಕುಟುಂಬಕಂ " ಮಂತ್ರೋಪದೇಶದ ಮೂಲಕ ಭಾರತವೆಂದರೇನು? ಎಂಬುದನ್ನು ತೋರಿಸಿ ಕೊಡಬೇಕಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿಗರ ದೃಷ್ಟಿಯಲ್ಲಿ ಭಾರತವೊಂದು ಅಚ್ಚರಿಯ ಬೀಡು ಎನಿಸಿದೆ. ಇಲ್ಲಿ ಕವಿಯೋರ್ವರು ಹಾಡಿರುವಂತೆ " ವೇಷ ಬೇರೆ ಭಾಷೆ ಬೇರೆ ದೇಶವೊಂದೆ ಭಾರತ ಒಂದೇ ತಾಯ ಮಕ್ಕಳೆಂದು ಘೋಷಿಸೋಣ ಸಂತತ " ಎಂದು ಸಾರಿ ಹೇಳುತ್ತಿದ್ದೇವೆ. ಭಾರತವೆಂಬ ಸುಂದರ ಮಂದಿರದಲ್ಲಿ ವಿಧವಿಧ ಬಣ್ಣಗಳ ಜನರಿದ್ದಾರೆ. ವಿಧವಿಧ ವೇಷಗಳನ್ನು ಧರಿಸುವವರಿದ್ದಾರೆ. ಬೇರೆ ಬೇರೆ ಭಾಷೆಗಳನ್ನಾಡುವ ಜನರಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ , ಬೌದ್ಧ , ಪಾರ್ಸಿ ಹೀಗೆ ವಿವಿಧ ಧರ್ಮಗಳನ್ನು ಪಾಲಿಸುವ ಜನರಿದ್ದಾರೆ. ವಿಧವಿಧ ಊಟೋಪಚಾರಗಳನ್ನು ಹೊಂದಿರುವ ಜನರಿದ್ದಾರೆ. ವಿಧವಿಧವಾದ ಸಂಸ್ಕೃತಿಗಳನ್ನು ಪಾಲಿಸುವವರಿದ್ದಾರೆ. ಇಲ್ಲಿ ಆಚಾರ- ವಿಚಾರಗಳು, ರೀತಿ-ರಿವಾಜುಗಳು, ನೀತಿ-ನಿಯಮಗಳು, ರೂಢಿ - ಪದ್ಧತಿಗಳು, ಸಂಪ್ರದಾಯ- ಆಚರಣೆಗಳು ವಿಭಿನ್ನತೆಯಿಂದ ಕೂಡಿವೆ. ವಿಧವಿಧ ಹಬ್ಬ - ಹರಿದಿನಗಳನ್ನು ಮಾಡುವವರಿದ್ದಾರೆ. ಭಾರತವು ವಿವಿಧ ರಾಜ್ಯಗಳಿಂದ ಕೂಡಿದ್ದರೂ ಪ್ರತ್ಯೇಕತಾ ಭಾವದಿಂದ ಹೊರಗಿದೆ. ಭಾರತದ ನೆಲ- ಜಲ- ಜನ- ಸಂಸ್ಕೃತಿಗೆ ಯಾರಿಂದಾದರೂ ಮತ್ತು ಯಾವಾಗಲಾದರೂ ಸಮಸ್ಯೆ ಉಂಟಾದರೆ ಕೂಡಲೇ ಭಾರತೀಯ ಏಕತೆಯನ್ನು ಪ್ರದರ್ಶಿಸುವಂತಹ ಐಕ್ಯತಾ ನೀತಿ ಭಾರತೀಯರಲ್ಲಿ ರಕ್ತಗತವಾಗಿದೆ. "ನಾವು ಭಾರತೀಯರು ನಾವೆಲ್ಲರೂ ಒಂದೇ " ಹೀಗೆಯೆ ವಿಶ್ವ ಮಟ್ಟದಲ್ಲಿಯೂ ಇರಬೇಕೆಂದು ಅನೇಕತೆಯಲ್ಲಿ ಏಕತೆಯನ್ನು ತೋರಬೇಕೆಂದು ಭಾರತ ಘೋಷಿಸುತ್ತದೆ.
"ವಸುಧೈವ ಕುಟುಂಬಕಂ'' ಎಂಬ ಮಂತ್ರೋಚ್ಛಾರಣೆಯನ್ನು ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಗಗಳು ಮತ್ತು ಉಪಯೋಗಗಳು ವಿಶ್ವಮಟ್ಟದಲ್ಲಿಯೂ ಸಹಾಯಕವಾಗಿವೆ ಎಂಬುದನ್ನು ಒತ್ತಿ ಹೇಳುತ್ತದೆ. "ಶಾಂತಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ " ಎಂಬ ನಿಲುವನ್ನು ತಳೆದಿರುವ ಭಾರತ ವಿಶ್ವ ಶಾಂತಿ ಮತ್ತು ವಿಶ್ವ ಪ್ರೇಮವನ್ನು ಬಯಸುತ್ತದೆ. ಈ ನಿಟ್ಟಿನಲ್ಲಿ ತನ್ನ ಖಗೋಳ ಪ್ರಯೋಗಗಳು ಭಾರತದ ಅಭಿವೃದ್ಧಿಗಾಗಿ ಮಾತ್ರವಲ್ಲದೆ ಜಾಗತಿಕ ವಿಕಾಸಕ್ಕಾಗಿಯೂ ಇದೆ. ಇಪ್ಪತ್ತೊಂದನೇ ಶತಮಾನದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳು ಶಾಂತಿಯುತ ಬದುಕನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಶಯವನ್ನು ನಮ್ಮ ಇತಿಹಾಸದ ಅಧ್ಯಯನದಿಂದ ತಿಳಿಯುತ್ತೇವೆ.
"ವಸುಧೈವ ಕುಟುಂಬಕಂ " ಪರಿಪಾಲನೆಯಲ್ಲಿ ರುವ ಭಾರತ ವಿಶ್ವಮಟ್ಟದ ಸಂದೇಶಗಳನ್ನೇ ಸದಾ ನೀಡುತ್ತಾ ಬಂದಿದೆ. "ಜೈ ಜವಾನ್, ಜೈಕಿಸಾನ್" ಮತ್ತು "ಜೈ ವಿಜ್ಞಾನ್" "ಸತ್ಯ ಮೇವ ಜಯತೇ" "ನಾವು ಎಂಬ ಭಾವ" "ಮಾತೃ ದೇವೋ ಭವ" "ಪಿತೃ ದೇವೋ ಭವ" "ಆಚಾರ್ಯ ದೇವೋ ಭವ" "ಅತಿಥಿ ದೇವೋ ಭವ " ಮುಂತಾದ ಸಂದೇಶಗಳು ಸಾರ್ವತ್ರಿಕ ಮತ್ತು ಸಾರ್ವಕಾಲಿಕವಾಗಿವೆ. ಇವು ವಿಶ್ವಮಟ್ಟದಲ್ಲಿ ನಿಲ್ಲುವಂತಹ ಸಂದೇಶಗಳನ್ನು ನಾವು ಸದಾ ಸ್ಮರಿಸಬೇಕಿದೆ. ಏಕೆಂದರೆ ನಂಬಿಕೆ, ದೃಢ ವಿಶ್ವಾಸ, ಆತ್ಮಗೌರವ, ಶ್ರದ್ಧೆ , ಭಕ್ತಿ , ಪ್ರೀತಿ ಮತ್ತು ಶಾಂತಿಯುತ ಮೌಲ್ಯಗಳನ್ನು ಭಾರತ ವಿಶ್ವಕ್ಕೆ ನೀಡುವ ಮೂಲಕ ಜಗತ್ ಕುಟುಂಬದ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತದೆ.
"ವಸುಧೈವ ಕುಟುಂಬಕಂ" ಮಹೋನ್ನತ ನುಡಿಗಟ್ಟಿನಲ್ಲಿ ನಮ್ಮ ರಕ್ಷಣಾ ವ್ಯವಸ್ಥೆಯೂ ವಿಶ್ವಕ್ಕೆ ಮಾದರಿಯೆನಿಸಿದೆ. ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳ ಕಾರ್ಯವೈಖರಿ ವಿಶ್ವದಲ್ಲಿ ಶ್ಲಾಘನೀಯವೆನಿಸಿದೆ. ಜುಲೈ 26 ನ್ನು ಪ್ರತೀವರ್ಷ ಕಾರ್ಗಿಲ್ ವಿಜಯ್ ದಿವಸ್ ಎಂಬುದಾಗಿ ಭಾರತ ಆಚರಿಸುತ್ತದೆ. ಪ್ರಸ್ತುತ 24 ನೇ ವರ್ಷದ ವಿಜಯೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಎಲ್ಲಾ ಯೋಧರನ್ನು ಸ್ಮರಿಸಲಾಗುತ್ತದೆ. ಆ ಮೂಲಕ ಭಾರತವು ವಿಶ್ವಕ್ಕೆ ಸೈನಿಕರ ಕೊಡುಗೆ ಮಹತ್ವವಾಗಿದ್ದು ಅಪಾರವಾಗಿದೆ ಎಂಬುದನ್ನು ತಿಳಿಸಿಕೊಡುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ "ವಸುಧೈವ ಕುಟುಂಬಕಂ" ಎಂಬುದು ಮಹಾ ಉಪನಿಷತ್ತಿನ ಸಂದೇಶವಾಗಿದ್ದು ವಿಶ್ವ ನಾಗರೀಕರಾಗಿ ರೂಪಗೊಳ್ಳಲು ವಿಶ್ವ ಪ್ರಜ್ಞೆಯ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯ ರೂಪಿಸುತ್ತದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವಲ್ಲಿ ಈ ಮಂತ್ರೋಚ್ಛಾರಣೆಯು ನಮ್ಮೆಲ್ಲರನ್ನು ವಿಶ್ವ ಭ್ರಾತೃತ್ವದಡಿಯಲ್ಲಿ ಬಂಧಿಸುತ್ತಾ ಧನಾತ್ಮಕ ಚಿಂತನೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ ದುಡಿಮೆಯೇ ಬಡತನ ಅಳಿಸುವ ಸಾಧನ ಎನ್ನುತ್ತಾ ಉತ್ತಮ ಹಾಗೂ ಜಾಗೃತ ವಿಶ್ವ ಪ್ರಜೆಗಳಾಗೋಣ.
-ಕೆ. ಎನ್. ಚಿದಾನಂದ, ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ