ವಿಕೋಪ ತಡೆಯಲು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಕ್ಕೆ ಸರಕಾರಕ್ಕೆ ಮನವಿ: ಡಿಸಿ ಕೂರ್ಮಾರಾವ್ ಎಂ

Upayuktha
0

ಉಡುಪಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಉಂಟಾಗುವ ಪ್ರಾಕೃತಿಕ ವಿಕೋಪ ಪರಿಸ್ಥಿತಿಯ ಸಮರ್ಪಕ ನಿರ್ವಹಣೆಗೆ ರಾಜ್ಯ ವಿಕೋಪ ನಿರ್ವಹಣಾ ಪಡೆಯ ಒಂದು ತಂಡವನ್ನು ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.


ಅವರು ಜಿಲ್ಲೆಯಲ್ಲಿ ವಿಕೋಪ ನಿರ್ವಹಣೆ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ವರ್ಚ್‍ವಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು,ಯಾವುದೇ ಸಂದರ್ಭದಲ್ಲೂ ತಕ್ಷಣ ಸಂಪರ್ಕಕ್ಕೆ ಸಿಗುವಂತೆ ಇರಬೇಕು ಮತ್ತು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ  ಒಂದು ತಂಡವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ರಕ್ಷಣೆ ಮಾಡಬೇಕು. ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ರಚಿಸಲಾಗಿರುವ ಎಲ್ಲಾ ವಾರ್ಡ್ ಮತ್ತು   ಗ್ರಾಮ ತಾಲೂಕು ಮಟ್ಟ ಸೇರಿದಂತೆ ಎಲ್ಲಾ ಟಾಸ್ಕ್ ಪೋರ್ಸ್ ತಂಡಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.

 

ನೆರೆಯಿಂದ ತೊಂದರೆಗೊಳಗಾದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವವರಿಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಮತ್ತು ನಂತರ ಅವರು ಮನೆಗಳಿಗೆ ತೆರಳುವಾಗ ಅಗತ್ಯವಿರುವ ಸಾಮಗ್ರಿಗಳನ್ನು ನೀಡುವಂತೆ ಎಲ್ಲಾ ತಹಸೀಲ್ದಾರ್ ಗಳಿಗೆ ತಿಳಿಸಿದರು

 

ನೆರೆಯಿಂದ ತೊಂದರೆಗೊಳಗಾದ ಸಾರ್ವಜನಿಕರ ರಕ್ಷಣೆಗೆ ಕರಾವಳಿ ಕಾವಲು ಪಡೆ, ಆಪದ ಮಿತ್ರ , ಮೀನುಗಾರರು, ಗೃಹರಕ್ಷಕ ದಳದ ನೆರವು ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಮೀನುಗಾರಿಕಾ ಇಲಾಖೆವತಿಯಿಂದ ಅಗತ್ಯಬಿದ್ದಲ್ಲಿ ಬೋಟುಗಳನ್ನು ಮತ್ತು ಕಯಾಕಿಂಗ್ ಬೋಟುಗಳನ್ನು ಬಳಸಿಕೊಳ್ಳುವಂತೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಅಗತ್ಯ ಸಹಕಾರ ಪಡೆಯುವಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೂಚಿಸಿದರು.


ವಿಕೋಪದಿಂದ ತೊಂದರೆಗೊಳಗಾದವರಿಗೆ ಅಗತ್ಯ ತುರ್ತು ಪರಿಹಾರವನ್ನು ಶೀಘ್ರದಲ್ಲಿಯೇ ವಿತರಿಸಲು ಮುಂದಾಗಬೇಕು ಎಂದ ಅವರು ಕಳೆದ ಬಾರಿ ಮುಂಗಾರಿನಲ್ಲಿ ತೊಂದರೆಗೊಳಗಾದ ತಗ್ಗು ಪ್ರದೇಶದಲ್ಲಿ ಈ ಬಾರಿಯೂ ಪ್ರವಾಹವಾಗುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

 

ಜಿಲ್ಲೆಯಲ್ಲಿನ ಮಳೆಯ ಮುನ್ಸೂಚನೆಗಳನ್ನು ಸಾರ್ವಜನಿಕರಿಗೆ ತಲುಪುವಂತೆ ಸ್ವಚ್ಚತಾ ವಾಹನಗಳ ಮೂಲಕ ನಿರಂತರವಾಗಿ ಮಾಹಿತಿ ನೀಡುವಂತೆ ಹಾಗೂ ಮಳೆ ಅಧಿಕವಾಗಿ ಬರುತ್ತಿರುವ ಸಂದರ್ಭದಲ್ಲಿ ತುಂಬಿ ಹರಿಯುತ್ತಿರುವ ಹಳ್ಳ ಮತ್ತು ತೋಡುಗಳನ್ನು ದಾಟುವಾಗ ಎಚ್ಚರವಹಿಸುವಂತೆ ಜನ ಸಾಮಾನ್ಯರಿಗೆ ತಿಳಿಸುವಂತೆ ಸೂಚಿಸಿದರು.

    

ಜಿಲ್ಲಾಧಿಕಾರಿಗಳು ನಿನ್ನೆ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಅಕ್ಷಯ್ ಎಂ ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಜಿಲ್ಲೆಯ ಎಲ್ಲಾ ತಹಸೀಲ್ದಾರ್‍ ಗಳು,  ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top