ಮಂಗಳೂರು: ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಜುಲೈ 16ರಂದು ಭಾನುವಾರ ಗುರುಪೂರ್ಣಿಮಾ ಆಚರಣೆ ಜರುಗಲಿರುವುದು. ಅಂದು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಸರ್ವೈಶ್ವರ್ಯ ಪೂಜೆ ಹಾಗೂ ಮಹಾ ಮೃತ್ಯುಂಜಯ ಹೋಮ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಸಾರಥ್ಯದಲ್ಲಿ ಅಂದು ಪೂರ್ವಾಹ್ನ 8.30 ರಿಂದ ಮಧ್ಯಾಹ್ನ 1.00 ರ ತನಕ ಶ್ರೀ ಗುರು ಪಾದುಕಾ ಪೂಜೆ, ಮಹಾ ಮೃತ್ಯುಂಜಯ ಹೋಮ, ಸರ್ವೈಶ್ವರ್ಯ ಪೂಜೆ, ಆರತಿ, ಭಕ್ತರಿಂದ ಕ್ಷೀರಾಭಿಷೇಕ ಮತ್ತು ಮಹಾ ಪ್ರಸಾದ ವಿತರಣೆ ಇರುತ್ತದೆ.
ಸಹೃದಯಿ ಸಾರ್ವಜನಿಕರು ಯಾವುದೇ ಜಾತಿ, ಮತ, ಧರ್ಮ ವರ್ಣ ಭೇದವಿಲ್ಲದೆ ಸಕಾಲದಲ್ಲಿ ಬಂದು ಪೂಜೆಯಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೆ ನಮಗಾಗಿ ನಾವೇ ಸ್ವತಃ ಪೂಜೆಗೈದು ನಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಬಹುದಾಗಿದೆ ಎಂದು ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಅವರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಧ್ಯಾತ್ಮಿಕ ಅಸಕ್ತಿ ಉಳ್ಳವರು ಮಾತಾ ಅಮೃತಾನಂದಮಯಿ ಮಠದ ಸಮಾಜಮುಖಿ ಸೇವಾ ಯೋಜನೆಗಳಲ್ಲಿ ಭಾಗವಹಿಸಲು ಮತ್ತು ಅಮೃತಕುಟುಂಬದ ಸದಸ್ಯರಾಗಿ ಸೇರಲು ಅವಕಾಶವಿರುತ್ತದೆ. ಅಂದು ಪೂಜಾ ವಿಧಿಗಳೊಂದಿಗೆ ಸದಸ್ಯತ್ವ ಸ್ವೀಕಾರ ಕೂಡ ಮಾಡಲಾಗುತ್ತದೆ ಎಂದರು.
ಪರಿಸರ ಸಂರಕ್ಷಣೆಗಾಗಿ 2000 ಸಸಿಗಳ ವಿತರಣೆ:
ಪ್ರಕೃತಿ ಸಂರಕ್ಷಣೆಗೆ ಅಮ್ಮನವರು ಆದ್ಯತೆ ನೀಡುತ್ತಾರೆ. ಆ ಪ್ರಯುಕ್ತ ಅಂದು 2000 ಸಸಿಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಡಾ. ವಸಂತಕುಮಾರ ಪೆರ್ಲ ತಿಳಿಸಿದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಂಯುಕ್ತ ಆಶ್ರಯದಲ್ಲಿ ಪವಿತ್ರ ಕ್ಷೇತ್ರವಾದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಜರುಗುವ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಇದೆ. ಎಲ್ಲರೂ ಬಂದು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿದರು.
ಸೇವಾ ಸಮಿತಿ ಉಪಾಧ್ಯಕ್ಷ ಸುರೇಶ್ ಅಮೀನ್ ಮತ್ತು ವೈದ್ಯಕೀಯ ಸೇವಾ ವಿಭಾಗದ ಡಾ. ದೇವದಾಸ ಪುತ್ರನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ