ಅಳಿಲು ಸೇವೆ ಸಲ್ಲಿಸಬೇಕು ಅನ್ನೋ ಪದವನ್ನು ನಾವು ಅಲ್ಲಲ್ಲಿ ಕೇಳ್ತಾನೆ ಇರ್ತೀವಿ. ಅಮ್ಮ ಮನೆ ಕೆಲಸ ಮಾಡುವಾಗ ಅಮ್ಮನಿಗೆ ಚಿಕ್ಕ ಪುಟ್ಟ ಸಹಾಯ ಮಾಡುವುದು, ಅಪ್ಪನಿಗೆ ಗಾಡಿ ಒರೆಸಲು ಸಹಾಯ ಮಾಡುವುದು, ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಪುಸ್ತಕಗಳನ್ನು, ಬ್ಯಾಗನ್ನು ಹೊಂದಿಸಿಕೊಳ್ಳಲು, ಹೋಮ್ ವರ್ಕ್ ಮಾಡಲು ಸಹಾಯ ಮಾಡುವುದು ಒಂದು ರೀತಿಯಲ್ಲಿ ಅಳಿಲು ಸೇವೆಗಳಲ್ಲಿಯೇ ಬರುತ್ತದೆ. ನೀವು ಮಾಡುತ್ತಿರುವ ಮಹತ್ತರವಾದ ಕೆಲಸ ಕಾರ್ಯದಲ್ಲಿ ನನ್ನದೂ ಒಂದು ಪುಟ್ಟ ಪಾಲು ಇರಲಿ ಎಂಬ ಅರ್ಥವನ್ನು ಕೊಡುವ ಈ ಪದದ ಹಿಂದೆ ಒಂದು ದೊಡ್ಡ ಕಥೆಯೇ ಇದೆ.
ಅದು ತ್ರೆತಾಯುಗದ ಕಾಲ. ಅಯೋಧ್ಯಾ ಅರಸ ಶ್ರೀರಾಮಚಂದ್ರನ ಪತ್ನಿ ಸೀತಾದೇವಿಯನ್ನು ಸ್ವರ್ಣಲಂಕೆಯ ರಾಕ್ಷಸರ ರಾಜ ರಾವಣನು ಅಪಹರಿಸಿಕೊಂಡೊಯ್ದು ಲಂಕೆಯ ಅಶೋಕವನದಲ್ಲಿ ಇಟ್ಟಿದ್ದನು.
ಸೀತೆಯನ್ನು ಕಳೆದುಕೊಂಡ ಶ್ರೀರಾಮಚಂದ್ರನು ತನ್ನ ಸಹೋದರ ಲಕ್ಷ್ಮಣನೊಡನೆ ಸೀತೆಯನ್ನು ಹುಡುಕುತ್ತಾ ಕಿಷ್ಕಿಂದೆಯ ವಾನರ ರಾಜ ಸುಗ್ರೀವ ಮತ್ತು ಆತನ ಕಪಿ ಸೈನ್ಯದೊಂದಿಗೆ ಸಮುದ್ರದ ದಡಕ್ಕೆ ಬಂದು ಬೀಡು ಬಿಟ್ಟನು. ಸಮುದ್ರದ ಆಚೆಗೆ ಸಿರಿ ಲಂಕೆ ಮತ್ತು ಸಮುದ್ರದ ಈ ಕಡೆಯ ಭೂ ಭಾಗದಲ್ಲಿ ಪ್ರಭು ಶ್ರೀರಾಮಚಂದ್ರ ಮತ್ತು ವಾನರ ಸೇನೆ.
ರಾಮನು ಸಮುದ್ರದ ನೀರನ್ನು ಹಿಂತೆಗೆದುಕೊಂಡು ಸಮುದ್ರದ ಮಧ್ಯದಲ್ಲಿ ದಾರಿ ಕೊಡಲು ಸಮುದ್ರರಾಜನನ್ನು ಪ್ರಾರ್ಥಿಸಿ ಬಾಣ ಹೂಡಿದನು. ಕ್ಷಣಮಾತ್ರದಲ್ಲಿ ಸಮುದ್ರರಾಜನು ಪ್ರತ್ಯಕ್ಷನಾಗಿ ಪ್ರಭು ಶ್ರೀರಾಮನಿಗೆ ವಂದಿಸಿ ಬೆಟ್ಟದ ಕಲ್ಲುಗಳನ್ನು ಸಮುದ್ರದ ಮೇಲೆ ಹಾಕಿದರೆ ಅವು ತೇಲುವಂತೆ ಮಾಡುವ ಜವಾಬ್ದಾರಿ ನನ್ನದು. ಆ ರೀತಿ ಅಗಾಧ ಸಮುದ್ರಕ್ಕೆ ಸೇತುವೆಯನ್ನು ಕಟ್ಟುವ ಕೆಲಸ ವಾನರ ಸೈನ್ಯ ನಿರ್ವಹಿಸಲಿ ಎಂದು ಹೇಳಿದನು. ಇದಕ್ಕೆ ವಾನರ ರಾಜ ಸುಗ್ರೀವನು ರಾಮನ ಅಪ್ಪಣೆಯ ಮೇರೆಗೆ ತನ್ನ ಕಪಿ ಸೈನ್ಯದೊಡನೆ ಸುತ್ತಲಿರುವ ಬೆಟ್ಟದ ಅಗಾಧ ಕಲ್ಲುಗಳನ್ನು ತಂದು ಅವುಗಳನ್ನು ಸಮತಟ್ಟಾಗಿಸಿ ಅವುಗಳ ಮೇಲೆ ಶ್ರೀ ರಾಮ ಎಂದು ಬರೆದು ನೀರಿನಲ್ಲಿ ಎಸೆದನು. ಆಶ್ಚರ್ಯ ಎಂದರೆ ಪ್ರಭು ಶ್ರೀ ರಾಮನ ಹೆಸರನ್ನು ಹೊತ್ತ ಕಲ್ಲುಗಳು ಸಮುದ್ರದ ಮೇಲೆ ತೇಲುತ್ತಾ ಒಂದಕ್ಕೊಂದು ಅಂಟಿಕೊಂಡು ಸೇತುವೆಯ ಸ್ವರೂಪವನ್ನು ಪಡೆಯಲಾರಂಭಿಸಿದವು.
ಅಲ್ಲಿಯೇ ಇದ್ದು ಇದನ್ನೆಲ್ಲಾ ಗಮನಿಸುತ್ತಿದ್ದ ಪುಟ್ಟ ಅಳಿಲಿನ ಮರಿಯೊಂದು ನಾನು ಕೂಡ ಶ್ರೀರಾಮನ ಸೇವೆ ಮಾಡಬೇಕು ಆತನ ಕಾರ್ಯದಲ್ಲಿ ಸಹಕಾರಿಯಾಗಿ ನಿಲ್ಲಬೇಕು ಎಂದು ಆಶಿಸಿತು. ಆದರೆ ಆಕಾರದಲ್ಲಿ ಅತ್ಯಂತ ಚಿಕ್ಕದಾಗಿದ್ದ ಅಳಿಲು ಏನು ತಾನೆ ಸಹಾಯ ಮಾಡಲು ಸಾಧ್ಯ!!
ಕಲ್ಲನ್ನಂತೂ ಹೊರಲು ಸಾಧ್ಯವಿಲ್ಲ ನಿಜ. ತಕ್ಷಣ ಪುಟ್ಟ ಅಳಿಲು ಮರಿಗೆ ಒಂದು ಉಪಾಯ ಹೊಳೆಯಿತು. ಸೇತುವೆಯ ಗಾರೆಗೆ ಬೇಕಾದ ಉಸುಕನ್ನು ತರಲು ಯೋಚಿಸಿದ ಪುಟ್ಟ ಅಳಿಲ ಮರಿ ತನ್ನಿಡೀ ದೇಹವನ್ನು ನೀರಿನಲ್ಲಿ ತೋಯಿಸಿಕೊಂಡು ಸಮುದ್ರದ ದಡಕ್ಕೆ ಬಂದು ಉಸುಕಿನಲ್ಲಿ ಹೊರಳಾಡಿ ತನ್ನ ಮೈ ಮೇಲೆ ಉಸುಕಿನ ಕಣಗಳು ಅಂಟುವಂತೆ ಮಾಡುತ್ತಿತ್ತು. ನಂತರ ಸೇತುವೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಬಂದು ತನ್ನ ಮೈಯನ್ನು ಒದರಿ ತನ್ನ ದೇಹಕ್ಕೆ ಅಂಟಿದ ಎಲ್ಲ ಉಸುಕನ್ನು ತೊಡೆದು ಹಾಕುತ್ತಿತ್ತು. ಇದೇ ರೀತಿ ನಿರಂತರವಾಗಿ ತನ್ನ ಸೇವೆ ಮುಂದುವರೆಸಿತು ಪುಟ್ಟ ಅಳಿಲ ಮರಿ.
ಪದೇ ಪದೇ ಅಳಿಲು ಮಾಡುವ ಕೆಲಸವನ್ನು ಗಮನಿಸಿದ ಪ್ರಭು ಶ್ರೀರಾಮಚಂದ್ರನು ತನ್ನ ಸಹಚರರೊಂದಿಗೆ ಈ ವಿಷಯದ ಕುರಿತು ಪ್ರಸ್ತಾಪಿಸಿದಾಗ ಅಳಿಲಿನ ಸೇವೆಯ ಕುರಿತು ಅವರು ವಿವರಣೆ ನೀಡಿದರು. ಪುಟ್ಟದಾದರೂ ಸೇವೆ ಮಾಡಬೇಕೆಂಬ ಅಳಿಲಿನ ಮಹತ್ವಾಕಾಂಕ್ಷೆಯನ್ನು ಅರಿತ ಪ್ರಭು ಶ್ರೀ ರಾಮಚಂದ್ರನು ಅತ್ಯಂತ ಮಮತೆಯಿಂದ ಅಳಿಲಿನ ದೇಹದ ಮೇಲೆ ಸವರಿದನು. ರಾಮನ ಮೂರು ಕೈ ಬೆರಳುಗಳ ಗುರುತು ಸೇವೆಯ ದ್ಯೋತಕವಾಗಿ ಕಾರ್ಯ ನಿರ್ವಹಿಸಿದ ಅಳಿಲಿನ ಮೈ ಮೇಲೆ ಇಂದಿಗೂ ಕೂಡ ಕಾಣಬಹುದು. ಅಂದಿನಿಂದ. ಯಾವುದೇ ಕೆಲಸ ಕಾರ್ಯಗಳಲ್ಲಿ ಕಿಂಚಿತ್ತು ಸಹಾಯ ಮಾಡುವುದನ್ನು ಅಳಿಲು ಸೇವೆ ಎಂದು ಅಳಿಲಿನ ಸೇವೆಯ ಸ್ಮರಣಾರ್ಥವಾಗಿ ಹೇಳಲು ಆರಂಭಿಸಿದರು.
-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ