ಉಜಿರೆ: ಭಾರತೀಯರ ಪಾಲಿಗೆ ಜುಲೈ 26 ಎನ್ನುವುದು ಕೇವಲ ಒಂದು ದಿನವಲ್ಲ, ದೇಶದ ಗಡಿ ನುಗ್ಗಲು ಯತ್ನಿಸಿದ ಪರಕೀಯರಿಗೆ ಪಾಠ ಕಲಿಸಿದ ದಿನವಿದು. ರಾಷ್ಟ್ರಕ್ಕಾಗಿ ಮಡಿದ ವೀರ ಯೋಧರನ್ನು ಗೌರವಿಸುವ ವಿಶೇಷ ಹಬ್ಬವೇ ಕಾರ್ಗಿಲ್ ವಿಜಯ ದಿವಸ್.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಸೇವಾ ಯೋಜನೆಯ ಮತ್ತು ಎನ್‌ಸಿಸಿ ಆರ್ಮಿ ಹಾಗೂ ನೇವಲ್ ವಿಂಗ್ ನ ಸಹಭಾಗಿತ್ವದಲ್ಲಿ ಕಾರ್ಗಿಲ್ ವಿಜಯ ದಿವಸ್ ಅನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಬಿ.ಎ ಕುಮಾರ್ ಹೆಗ್ಡೆ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು, ಮಾತೃಭೂಮಿಯ ರಕ್ಷಣೆಗಾಗಿ ಶೌರ್ಯದ ಉತ್ತುಂಗವನ್ನು ಸಾಧಿಸಿದ ದೇಶದ ವೀರ ಪುತ್ರರನ್ನು ಸ್ಮರಿಸುತ್ತಾ, ಈ ದಿನ ನಮ್ಮ ಕಾಲೇಜಿನಲ್ಲಿ ಒಂದು ಅರ್ಥಪೂರ್ಣ ಕಾರ್ಯಕ್ರಮವಾಗುತ್ತಿದೆ. ಲಡಾಖ್, ಕಾರ್ಗಿಲ್ ನಂತಹ ಎತ್ತರದ ಹಿಮಾಲಯ ಪರ್ವತ ಗಳಲ್ಲಿ ಸುಮಾರು ಮೂರು ತಿಂಗಳ ಸುಧೀರ್ಘ ಯುದ್ಧದ ನಂತರ ಭಾರತೀಯ ಸೇನೆಯು "ಆಪರೇಷನ್ ವಿಜಯ"ನ ಯಶಸ್ವಿ ಪರಕಾಷ್ಠೆಯನ್ನು ಘೋಷಿಸಿದ ದಿನವಿದು.
1999 ರಲ್ಲಿ ಭಾರತದ ರಕ್ಷಣೆಗಾಗಿ ದೇಶದ ಸೈನಿಕರು ತೋರಿದ ಶೌರ್ಯ ಮತ್ತು ಸಾಹಸ ಅಪಾರವಾದದ್ದು ಸೊನ್ನೆ ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ, ಆಮ್ಲಜನಕದ ಕೊರತೆಯ ಹೊರತಾಗಿಯೂ ನಮ್ಮ ಸೈನಿಕರು ಶತ್ರುಗಳನ್ನು ಹಿಮ್ಮೆಟ್ಟಿಸಿದ್ದರಿಂದ ಇಂದು ನಾವು ನೀವೆಲ್ಲ ನೆಮ್ಮದಿಯಿಂದ ಇದ್ದೇವೆ.
ರಾಮಾಯಣದಲ್ಲಿ ಶ್ರೀರಾಮಚಂದ್ರ ಪ್ರಭು ಹೇಳುತ್ತಾರೆ,'ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ'ಎಂದು.ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲು ಆ ದಾರಿಯಲ್ಲಿ ನಾವೆಲ್ಲರೂ ಮುಂದೆ ಸಾಗೋಣ ದೇಶದ ಹಿತಕ್ಕಾಗಿ ದುಡಿಯೋಣ. ಹೊರಗಿನ ಶತ್ರುಗಳನ್ನು ಎದುರಿಸಲು ನಮ್ಮ ಯೋಧರು ಹೇಗೆ ಸನ್ನದ್ಧರಾಗಿದ್ದಾರೋ ಹಾಗೆ ದೇಶದ ಪ್ರಜೆಗಳಾಗಿ ನಾವು ಒಳಗಿನ ಶತ್ರುಗಳನ್ನು ಮತ್ತು ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬ ನಾಗರಿಕನೂ ಯೋಧರಾಗಬೇಕು ಎಂದು ಹೇಳಿದರು.
ಎನ್.ಸಿ.ಸಿ ಆರ್ಮಿ ವಿಂಗ್ ಕೆಡೆಟ್ ಗಳಿಂದ ತಯಾರಿಸಿದ್ದ ಭಿತ್ತಿ ಪತ್ರವನ್ನು ಡಾ.ಬಿ.ಎ ಕುಮಾರ್ ಹೆಗ್ಡೆ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ರವರು ಕಾರ್ಗಿಲ್ ವಿಜಯ್ ದಿವಸ್ ನ ರಜತ ಮಹೋತ್ಸವವನ್ನು ಅಚರಿಸುವ ಸಲುವಾಗಿ ಜುಲೈ 26 ರಿಂದ ಪ್ರಾರಂಭವಾಗುವ ಒಂದು ವರ್ಷದ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿಯೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ನ ಯೋಜನಾಧಿಕಾರಿಗಳಾದ ಪ್ರೊ ದೀಪಾ ಆರ್.ಪಿ ರವರು, ಎನ್.ಸಿ.ಸಿ ಯ ಲೆಫ್ಟಿನೆಂಟ್ ಭಾನುಪ್ರಕಾಶ್, ಲೆಫ್ಟಿನೆಂಟ್ ಶುಭಾರಾಣಿ, ಎಸ್.ಎನ್. ಕಾಕತ್ಕರ್, ಡಾ. ಶ್ರೀಧರ್ ಭಟ್, ಡಾ. ಶಲೀಪ್ ಕುಮಾರಿ, ಇತರೆ ಪ್ರಾಧ್ಯಾಪಕ ವೃಂದದವರು, ಎನ್.ಎಸ್.ಎಸ್ ನ ಸ್ವಯಂಸೇವಕರು ಹಾಗೂ ಎನ್. ಸಿ.ಸಿಯ ಕೆಡೆಟ್ ಗಳು ಉಪಸ್ಥಿತರಿದ್ದರು.
ಎನ್.ಎಸ್.ಎಸ್ ನ ಸ್ವಯಂಸೇವಕಿ ಕುಮಾರಿ ಸಿಂಚನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ