ಪುತ್ತೂರು: “ನಮ್ಮ ಸುತ್ತಲಿರುವ ಪ್ರತಿಯೊಬ್ಬರಲ್ಲೂ ನಾವು ಕಲಿಯುವಂತಹ ಉತ್ತಮ ಅಂಶಗಳಿರುತ್ತವೆ. ಗಮನಿಸುವ ಮತ್ತು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು”. ಎಂದು ಪುತ್ತೂರಿನ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಶ್ರೀಯುತ ಉಮೇಶ್ ನಾಯಕ್ ರವರು ಅಭಿಪ್ರಾಯ ಪಟ್ಟರು. ಇವರು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ನಡೆದ ಮಂತ್ರಿಮಂಡಲ ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು.
ಸುದಾನ ವಸತಿಶಾಲೆಯ ಎಡ್ವರ್ಡ್ ಹಾಲ್ ನಲ್ಲಿ ಜುಲೈ 4ರಂದು ನೂತನ ಮಂತ್ರಿಮಂಡಲದ ಉದ್ಘಾಟನಾ ಕಾರ್ಯಕ್ರಮವನ್ನು, ದೀಪೋಜ್ವಲನೆಯನ್ನು ಮಾಡುವ ಮೂಲಕ ಮತ್ತು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಮೂಲಕ ವಿದ್ಯುಕ್ತವಾಗಿ ನಡೆಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾನಾಗರಾಜ್ ರವರು ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿ ನಾಯಕ ಮಾ. ವಿಶಾಲ್ ಬಿ (10ನೇ) ಉಪವಿದ್ಯಾರ್ಥಿ ನಾಯಕಿ ಜಿಯಾ ಸ್ವೀಡಲ್ ಲಸ್ರಾಡೊ (10ನೇ) ವಿದ್ಯಾರ್ಥಿ ಕಾರ್ಯದರ್ಶಿ ಅನಿಕಾ ಯು (9ನೇ) ಮತ್ತು ವಿರೋಧ ಪಕ್ಷದ ವಿದ್ಯಾರ್ಥಿ ನಾಯಕಿ ಶಜ್ಮಾ ಸುಮಯ್ಯ, ಉಪನಾಯಕಿ ತ್ರಯಾ ಕೃಷ್ಣರಾಜ್ (9ನೇ) ಮತ್ತು ಮಂತ್ರಿ ಮಂಡಲದ ಸದಸ್ಯರು ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಪ್ರತಿ ವರ್ಷವು ಒಂದು ಧ್ಯೇಯ ವಾಕ್ಯವನ್ನು ಅಳವಡಿಸಿಕೊಳ್ಳುವ ಸುದಾನ ಶಾಲೆಯು, ವರ್ಷ ಪೂರ್ತಿ ಆ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿಯೇ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ವರ್ಷ “ಭಾರತದ ಕರಾವಳಿಗಳ ಪರಂಪರೆಯ ವೈಭವ” (Legacy of coastal India) ಎಂಬ ಆಶಯ ವಾಕ್ಯವನ್ನು ಅಳವಡಿಸಿಕೊಂಡಿದೆ. ಶಾಲೆಯ ವಿವಿಧ ಸಂಘಗಳಿಗೆ ನೀಡಲಾದ ಭಾರತದ ವಿವಿಧ ಕರಾವಳಿಯ ಸಂಕೇತಗಳನ್ನು ಪ್ರತಿನಿಧಿಸುವ, ಕಲಾತ್ಮಕವಾಗಿ ರಚಿಸಲಾದ ಭಾರತದ ನಕ್ಷೆಯನ್ನು ಶಾಲಾ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ರವರು ಅನಾವರಣಗೊಳಿಸಿದರು. ಆ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ “ಬದುಕು ಶಿಸ್ತು ಬದ್ಧವಾಗಿದ್ದರೆ ಗೆಲುವು ಸಾಧ್ಯ. ಸ್ಥಾನಕ್ಕಿಂತ ಜವಾಬ್ದಾರಿ ದೊಡ್ಡದು. ಹೊಣೆಯರಿತು ನಡೆದಾಗ ಯಶಸ್ಸು ಸುಲಭ” ಎಂದು ನುಡಿದರು. ಶಾಲೆಯ ಸಂಘಗಳಾದ ಅವನಿ ವಿಜ್ಞಾನ ಸಂಘ(ಗುಜರಾತ್ ಕರಾವಳಿ), ಜಾಗೃತಿ ಸೋಶಿಯಲ್ ಕ್ಲಬ್(ಮುಂಬೈ ಕರಾವಳಿ), ಪ್ರತಿಭಾ ಕಲಾಸಂಘ(ಕೆನರಾ ಕರಾವಳಿ), ಶಕ್ತಿ ಕ್ರೀಡಾ ಸಂಘ(ಮಲಬಾರ್), ಸ್ಪಂದನಾ ಇಂಟೆರ್ಯಾಕ್ಟ್ ಕ್ಲಬ್(ಕೊಂಕಣ ಕರಾವಳಿ), ದೃಷ್ಟಿ ಐ.ಟಿ ಕ್ಲಬ್(ಕೋರಮಂಡಲ ಕರಾವಳಿ), ಲಹರಿ ಸಾಹಿತ್ಯ ಸಂಘ( ಉತ್ತರ ಪ್ರಾಂತ್ಯ ಕರಾವಳಿ)ಗಳ ಕಾರ್ಯಚಟುವಟಿಕೆಗಳ ಬಗ್ಗೆ ಕ್ರಮವಾಗಿ ಸಂಘದ ನಿರ್ದೇಶಕರಾಗಿರುವ ಸಹಶಿಕ್ಷಕರಾದ ರೀನಾ ಅಲೆಕ್ಸ್, ನಿಶ್ಮಿತಾ, ಬಕುಳಾ, ಪುಷ್ಪರಾಜ್, ಗ್ಲಾಡೀಸ್, ರಂಜಿತ್ ಮಥಾಯಿಸ್, ಚೇತನಾ ಪಿ.ಕೆ ವರದಿ ಮಂಡಿಸಿದರು.
ಆನಂತರ ಶಾಲೆಯ ಹಿರಿಯ ಶಿಕ್ಷಕಿಯಾಗಿದ್ದು ಸ್ವಯಂನಿವೃತ್ತಿಯನ್ನು ತೆಗೆದುಕೊಂಡಿರುವ ಶ್ರೀಮತಿ ಸರಿತಾ ಪಾಯಿಸ್ ರವರನ್ನು ಸನ್ಮಾನಿಸಲಾಯಿತು. ಸಹಶಿಕ್ಷಕಿ ಶ್ರೀಮತಿ ವಿನುತಾ ಅಭಿನಂದನಾ ಭಾಷಣವನ್ನು ಮಾಡಿದರು. ಶಾಲಾ ಕೋಶಾಧಿಕಾರಿ ರೋಟೇರಿಯನ್ ಆಸ್ಕರ್ ಆನಂದ್, ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿಯರಾದ ಶ್ರೀವಿಭಾ, ದಿಯಾ ಪ್ರಮೋದ್ ಮತ್ತು ತ್ರಿಶಾ ಕೃಷ್ಣರಾಜ್‍ರಿಂದ ಜನಪದ ಗೀತಾ ಗಾಯನ ನಡೆಯಿತು. ಅಭ್ಯಾಗತರಾಗಿದ್ದ ಶ್ರೀ ಉಮೇಶ್ ನಾಯಕ್ ರವರು ಮಂತ್ರಿಮಂಡಲದ ಸದಸ್ಯರಿಗೆ ‘ಭಾರತ ಸಂವಿಧಾನ’ ಎಂಬ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು.
ಜಾಗೃತಿ ಸೋಶಿಯಲ್ ಕ್ಲಬ್ ನ ವಿದ್ಯಾರ್ಥಿ ನಾಯಕಿ. ದಿಯಾ ಪ್ರಮೋದ್ (10ನೇ) ಸ್ವಾಗತಿಸಿ, ಕಾರ್ಯದರ್ಶಿ ಧ್ರುವ ಜೆ(9ನೇ) ಧನ್ಯವಾದವನ್ನರ್ಪಿಸಿದರು.
ಸಹಶಿಕ್ಷಕರಾದ ಶ್ರೀಮತಿ ಅಶ್ವಿನಿ ಮತ್ತು ಶ್ರೀಮತಿ ಶೈನಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕರಾದ ಶ್ರೀಮತಿ ಆಶಾಲತಾ, ಶ್ರೀಮತಿ ನಿಶ್ಮಿತಾ ಹಾಗೂ ತಂಡ ಸಹಕರಿಸಿದರು. ಜಾಗೃತಿ ಸೋಶಿಯಲ್ ಕ್ಲಬ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ