ಸರ್ವೆವಲಯ ಕಾಂಗ್ರೆಸ್‌ನಿಂದ ಕಾಯಕರ್ತರ ಸಭೆ, ಶಾಸಕರಿಗೆ ಸನ್ಮಾನ

Upayuktha
0

ಕಾಂಗ್ರೆಸ್ ಗೆದ್ದು ಕಾರ್ಯಕರ್ತರಿಗೆ ಹೊಸ ಚೈತನ್ಯ ಬಂದಿದೆ: ಶಾಸಕ ರೈ



ಪುತ್ತೂರು: ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಿದೆ ಈ ಕಾರಣಕ್ಕೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಸರ್ವೆ ವಲಯ ಕಾಂಗ್ರೆಸ್ ವತಿಯಿಂದ ಕಲ್ಪನೆ ಸಮುದಾಯ ಭವನದಲ್ಲಿ ಜು.1 ರಂದು ನಡೆದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಶಾಸಕರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿಲ್ಲದ ಕಾರಣ ಕಾರ್ಯಕರ್ತರು ನೋವು, ಯಾತನೆಯನ್ನು ಅನುಭವಿಸುವಂತಾಗಿತ್ತು. ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಕಳೆದ ಚುನಾವಣೆಯಲ್ಲಿ ಕಾರ್ಯಕರ್ತರ ಅವಿರತಶ್ರಮದ ಫಲವಾಗಿ ಇಂದು ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರ ಗೆಲುವು ಸಾಧ್ಯವಾಗಿದೆ. ನಮ್ಮ ನಿರೀಕ್ಷೆಯಂತೆ ರಾಜ್ಯದಲ್ಲಿಯೂ ಕಾಂಗ್ರೆಸ್ ಸರಕಾರ ಬಂದಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಇನ್ನು ಮುಂದೆ ಯಾವುದೇ ಕಾರ್ಯಕರ್ತರು ತಲೆತಗ್ಗಿಸುವ ಅಗತ್ಯವಿಲ್ಲ, ನಿಮ್ಮ ಜೊತೆ ನಾನಿದ್ದೇನೆ ಎಂದು ಶಾಸಕರು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.


ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಯನ್ನು ಜನತೆಯ ಮುಂದಿಟ್ಟಿತ್ತು. ಅದರಲ್ಲಿ ಎರಡು ಯೋಜನೆ ಈಗಾಗಲೇ ಜಾರಿಯಾಗಿದೆ. ಮಹಿಳೆಯರಿಗೆ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯೂ ಜಾರಿಯಾಗಲಿದೆ. ಅಕ್ಕಿ ಕೊಡುವುದಕ್ಕೆ ಕೇಂದ್ರದ ಮೋದಿ ಸರಕಾರ ಅಡ್ಡಿ ಮಾಡಿದೆ. ಕಾಂಗ್ರೆಸ್ ಸಾಧನೆಯನ್ನು ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ. ಸರಕಾರದ ಯೋಜನೆಯನ್ನು ಕಾಂಗ್ರೆಸ್ ಪಕ್ಷದ ಮೂಲಕವೇ ಜನರಿಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕು ಎಂದು ಹೇಳಿದರು.


ಸರ್ವೆ ಗ್ರಾಮದಲ್ಲಿ ಅಭಿವೃದ್ದಿ ಕೆಲಸಗಳು ಆಗಬೇಕಿದೆ; ಎಸ್.ಡಿ ವಸಂತ

ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಡಿ ವಸಂತರವರು ಮಾತನಾಡಿ, ಗ್ರಾಮದಲ್ಲಿ 9 ಕಾಲನಿಗಳಿವೆ ಈ ಕಾಲನಿಗಳ ಅಭಿವೃದ್ದಿಯಾಗಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಸಿಬಂದಿಗಳ ಕೊರತೆ ಇದೆ. ಅದನ್ನು ನೀಗಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಆಗಬೇಕಿದೆ ಎಂದು ಹೇಳಿದರು. ಶಾಸಕರು ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಿರುವುದು ಉತ್ತಮ  ವಿಚಾರವಾಗಿದೆ. ವಲಯ ಅಧ್ಯಕ್ಷರು ಮತ್ತು ಬೂತ್ ಅಧ್ಯಕ್ಷರ ಗಮನಕ್ಕೆ ಬಾರದೆ ಯಾವುದೇ ಕೆಲಸಗಳು ನಡೆಯಬಾರದು. ಕಾರ್ಯಕರ್ತರಿಗೆ ನೋವಾದಾಗ ಅದಕ್ಕೆ ಸ್ಪಂದಿಸುವ ಕೆಲಸವೂ ಆಗಬೇಕು. ಪಕ್ಷವನ್ನು ಗಟ್ಟಿಗೊಳಿಸುವಲ್ಲಿ ಏನೆಲ್ಲಾ ಆಗಬೇಕೋ ಅದೆಲ್ಲವನ್ನೂ ಮಾಡುವ ಮೂಲಕ ಸರ್ವೆ ಗ್ರಾಮದಲ್ಲಿ ಪಕ್ಷವನ್ನು ಇನ್ನಷ್ಟುಗಟ್ಟಿಗೊಳಿಸುವ ಕಾರ್ಯ ಎಲ್ಲರಿಂದಲೂ ನಡೆಯಬೇಕು ಎಂದು ಹೇಳಿದರು.


ಕಾರ್ಯಕರ್ತರಿಗೆ ಧೈರ್ಯ ಬಂದಿದೆ: ಎಂ.ಬಿ

ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾರ್ಯಕರ್ತರಲ್ಲಿ ಧೈರ್ಯ ಬಂದಿದೆ. ಪಕ್ಷದ ಬೆಳವಣಿಗೆಗೆ ಇದು ಪೂಕವಾಗಲಿದೆ. ಶಾಸಕರು ಕರೆ ಮಾಡಿದಾಗ ಸ್ವೀಕರಿಸಲಿಲ್ಲ ಎಂಬ ನೋವು ಕೆಲವರಿಗೆ ಇರಬಹುದು, ಶಾಸಕರು ತುಂಬಾ ಒತ್ತಡದಲ್ಲಿರುವಾಗ ಎಲ್ಲರ ಕರೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಏಕೈಕ ಶಾಸಕರು ಇರುವ ಕಾರಣ ಅವರಿಗೆ ಹೆಚ್ಚಿನ ಒತ್ತಡ ಮತ್ತು ಜವಾಬ್ದಾರಿಗಳಿದ್ದು, ಈ ಕಾರಣಕ್ಕೆ ಅವರು ಕಾರ್ಯಕರ್ತರ ಅಥವಾ ನಾಯಕರ ಕರೆಯನ್ನು ಕೆಲವೊಮ್ಮೆ ಸ್ವೀಕರಿಸದೇ ಇದ್ದರೂ ಯಾರೂ ತಪ್ಪು ತಿಳಿಯಬಾರದು. ಕ್ಷೇತ್ರದಲ್ಲಿ ತುಂಬಾ ಅಭಿವೃದ್ದಿ ಕೆಲಸಗಳು ಮುಂದೆ ಆಗಬೇಕಿದೆ. ಅಭಿವೃದ್ದಿ ವಿಚಾರದಲ್ಲಿ ನಾವು ಎಲ್ಲರೂ ಒಟ್ಟಾಗಿ ಶಾಸಕರ ಮೂಲಕ ಗ್ರಾಮಕ್ಕೆ ಅನುದಾನವನ್ನು ತರುವ ಮೂಲಕ ಪಕ್ಷ ಭೇದವಿಲ್ಲದೆ ನಾವು ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಬೇಕಿದೆ. ಗ್ಯಾರಂಟಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಮುಂಡೂ ಸಿ ಎಬ್ಯಾಂಕ್ ಅಧ್ಯಕ್ಷರಾದ ಸುರೇಶ್‌ಕುಮಾರ್ ಸೊರಕೆ, ಮಹಾಲಿಂಗ ನಾಯ್ಕ, ಶಕೂರ್ ಹಾಜಿ, ಮೌರಿಶ್ ಮಸ್ಕರೇನಸ್, ಜಯಪ್ರಕಾಶ್ ಬದಿನಾರ್, ಮುರಳೀಧರ್ ರೈ ಮಠಂತಬೆಟ್ಟು, ಅಮಲ ರಾಮಚಂದ್ರ, ಸರ್ವೆ ವಲಯ ಉಸ್ತುವಾರಿ ರಾಮಚಂದ್ರ ಸೊರಕೆ, ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಎಸ್ ಡಿ, ಬೂತ್ ಅಧ್ಯಕ್ಷರುಗಳಾದ ಮಜೀದ್ ಬಾಳಯ, ಯತೀಶ್ ರೈ, ಅಶೋಕ್ ಎಸ್ ಡಿ, ಸಿ ಎಬ್ಯಾಂಕ್ ನಿರ್ದೇಶಕ ಕೊರಗಪ್ಪ ಸೊರಕೆ, ಮಹಿಳಾ ವಲಯ ಅಧ್ಯಕ್ಷೆ ಗೀತಾಮರಿಯ, ಗ್ರಾಪಂ ಸದಸ್ಯರುಗಳಾದ ಕಮಲೇಶ್ ಎಸ್ ಡಿ, ಕಮಲ ನೇರೋಲ್ತಡ್ಕ, ವಿಜಯಾ ಕಮಿನಡ್ಕ, ಉಪಸ್ಥಿತರಿದ್ದರು. ಇದೇ ಸಂದರ್ಬದಲ್ಲಿ ವಲಯ ಕಾಂಗ್ರೆಸ್ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ವಲಯ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top