ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ
ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತರಗತಿಗಳಿಗೆ ಚಾಲನೆ
ಪುತ್ತೂರು: ಭಾರತದ ಮಣ್ಣಿನಲ್ಲಿ ಜನಿಸಿದ್ದು ನಮ್ಮ ಪುಣ್ಯ. ಹಾಗಾಗಿ ಬದುಕಿನುದ್ದಕ್ಕೂ ರಾಷ್ಟ್ರಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಜನ್ಮ ಸಾರ್ಥಕಗೊಳಿಸಿಕೊಳ್ಳಬೇಕು. ರಾಷ್ಟ್ರೀಯತೆಯನ್ನು ಮರೆತು ಬದುಕುವುದಕ್ಕೆ ಅರ್ಥವಿಲ್ಲ. ದೇಹದಲ್ಲಿ ಉಸಿರಿರುವವರೆಗೆ ದೇಶ ಹಾಗೂ ಹಿಂದೂ ಧರ್ಮಕ್ಕೆ ನಮ್ಮಿಂದಾದ ಸೇವೆಗಳನ್ನು ಸಲ್ಲಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಚಿಂತನೆಗಳನ್ನು ಮಕ್ಕಳಲ್ಲಿ ಒಡಮೂಡಿಸುವುದು ಅತ್ಯಂತ ಅಗತ್ಯ ಎಂದು ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ಹಾಗೂ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತರಬೇತಿ ತರಗತಿಗಳನ್ನು ಉದ್ಘಾಟನೆಗೈದು ಶುಕ್ರವಾರ ಮಾತನಾಡಿದರು.
ರಾಷ್ಟ್ರೀಯತೆಯ ಕೊರತೆ ಭಾರತೀಯರಲ್ಲಿ ದಟ್ಟವಾಗಿದೆ. ದೇಶಾಭಿಮಾನ ಹೊಂದದಿದ್ದರೆ ಮುಂದಿನ ಜನಾಂಗಕ್ಕೆ ಅಪಾಯ. ಹಾಗಾಗಿ ಎಳವೆಯಿಂದಲೇ ರಾಷ್ಟ್ರಭಕ್ತಿಯನ್ನು ತುಂಬುವ ಅನಿವಾರ್ಯತೆಯಿದೆ. ಕೇವಲ ಒಂದೆರಡು ಸಂಸ್ಥೆಗಳ ಪ್ರಯತ್ನದಿಂದ ಬಹುದೊಡ್ಡ ಬದಲಾವಣೆ ಸಾಧ್ಯವಿಲ್ಲದಿದ್ದರೂ ಪ್ರಯತ್ನಿಸಿದ ತೃಪ್ತಿ ದೊರಕುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸುವಾಗ ಕಟ್ಟಡದ ವೈಭವ ನೋಡಿ ಸೇರಿಸುವ ಬದಲು ದೊರಕುವ ಶಿಕ್ಷಣದ ಗುಣಮಟ್ಟ ಹಾಗೂ ಸಂಸ್ಕಾರಗಳನ್ನು ತಿಳಿದುಕೊಳ್ಳಬೇಕು ಎಂದರು.
ಇಂದು ಮಕ್ಕಳಿಗೆ ಡ್ರಗ್ಸ್ ಸುಲಭವಾಗಿ ದೊರಕುತ್ತಿದೆ. ಮಕ್ಕಳನ್ನು ಹಾಳುಗೆಡವಲೆಂದೇ ಉಚಿತವಾಗಿ ಡ್ರಗ್ಸ್ ಮಿಶ್ರಿತ ಚಾಕಲೇಟ್‍ಗಳನ್ನು ಹಂಚುವ ಕಾರ್ಯಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಹೆತ್ತವರ ಜವಾಬ್ದಾರಿ ಹೆಚ್ಚಿದೆ ಎಂದರಲ್ಲದೆ ಇಂದು ಮನಃಸ್ಥಿತಿಗಳು ಬದಲಾಗಿವೆ. ಹೆತ್ತವರೆಲ್ಲರೂ ತಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕೆನ್ನುತ್ತಾರಲ್ಲದೆ ಶಿಕ್ಷಕರಾಗಬೇಕು, ಕೃಷಿಕರಾಗಬೇಕು ಎಂಬ ಭಾವನೆಯನ್ನು ಬೆಳೆಸಿಕೊಳ್ಳುತ್ತಿಲ್ಲ. ವ್ಯಕ್ತಿತ್ವ ನಿರ್ಮಾಣದ ಬಗೆಗೆ ಹಿರಿಯರು ಆಲೋಚಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಂಪ್ಯೂಟರ್‍ನಲ್ಲಿ ಕನ್ನಡ ಕೀಲಿಮಣೆಯನ್ನು ಆವಿಷ್ಕರಿಸಿದ ಹಿರಿಯ ಸಾಪ್ಟ್‍ವೇರ್ ತಂತ್ರಜ್ಞ ಪ್ರೊ ಕೆ.ಪಿ.ರಾವ್ ಮಾತನಾಡಿ ಕೃತಕ ಬುದ್ಧಿಮತ್ತೆಯ ಬಗೆಗೆ ಮೂರು ದಶಕಗಳ ಹಿಂದಿನಿಂದಲೇ ಚರ್ಚೆ ಆರಂಭವಾಗಿದೆ. ಆದರೆ ಈಗ ಆ ಚರ್ಚೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ. ಪ್ರಶ್ನೆಯೊಂದನ್ನು ಕಂಪ್ಯೂಟರ್‍ನಲ್ಲಿ ಹಾಕಿದಾಗ ಅದು ನೂರಾರು ಉತ್ತರಗಳನ್ನು ನಮ್ಮ ಮುಂದೆ ಹರವಿಬಿಡುವುದು ಕೃತಕ ಬುದ್ಧಿಮತ್ತೆಯಿಂದಲೇ ಆಗಿದೆ. ಈ ಉತ್ತರಗಳೆಲ್ಲವೂ ಬೇರೆ ಭೇರೆ ವ್ಯಕ್ತಿಗಳು ಬೇರೆ ಬೇರೆ ಸಂದರ್ಭದಲ್ಲಿ ನೀಡಿದ ವಿವರಣೆಗಳಾಗಿವೆ. ಹಾಗಾಗಿ ಮೊದಲೆಲ್ಲ ಒಬ್ಬ ಗುರುವಿನಿಂದ ಜ್ಞಾನ ಪಡೆಯುವುದಕ್ಕೆ ಸಾಧ್ಯವಿದ್ದರೆ ಈಗ ನೂರಾರು ಗುರುಗಳಿಂದ ಕಂಪ್ಯೂಟರ್ ಮೂಲಕ ಜ್ಞಾನ ಹೊಂದುವುದಕ್ಕೆ ಅನುಕೂಲವೆನಿಸಿದೆ ಎಂದರು.
ಕೃತಕ ಬುದ್ಧಿಮತ್ತೆಯ ಬಗೆಗೆ ಮಾತನಾಡುವಾಗ ಸಹಜ ಬುದ್ಧಿಮತ್ತೆಯನ್ನು ಮರೆಯಬಾರದು. ನಮ್ಮ ಮೆದುಳಿಗಿರುವ ಅಪಾರ ಶಕ್ತಿಯನ್ನು ಗುರುತಿಸುವ ಕಾರ್ಯ ಆಗಬೇಕು. ಎಷ್ಟು ಒಳ್ಳೆಯ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ ಎಂಬುದರ ಮೇಲೆ ಉತ್ಕøಷ್ಟ ಉತ್ತರಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಜಗತ್ತಿನಲ್ಲಿ ಅಧ್ಯಯನಕ್ಕಿಂತ ಖುಷಿ ಕೊಡುವ ಸಂಗತಿ ಮತ್ತೊಂದಿಲ್ಲ. ಇಂದು ಕಂಪ್ಯೂಟರ್‍ನಲ್ಲಿ ಅವೆಷ್ಟೋ ಮಂದಿ ನಡೆಸಿದ ಅಧ್ಯಯನ, ಜ್ಞಾನಗಳು ನಮಗೆ ಸುಲಭವಾಗಿ ದೊರೆಯುವಂತಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಮುಂದಿನ ದಿನಗಳನ್ನು ಕೃತಕ ಬುದ್ಧಿಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಬಹುತೇಕ ದಶಕವೊಂದರ ಒಳಗಾಗಿ ಕೃತಕ ಬುದ್ಧಿಮತ್ತೆಯ ವಿರಾಟ್ ದರ್ಶನವನ್ನು ನಾವು ಕಾಣುವುದಕ್ಕಿದ್ದೇವೆ. ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಇದು ಬುದೊಡ್ಡ ಕೊಡುಗೆಯನ್ನು ನೀಡಬಲ್ಲುದು ಎಂದರಲ್ಲದೆ ಇಂದು ಅಮೇರಿಕದ ಡಾಲರ್ ಪ್ರಪಂಚವನ್ನು ಆಳುತ್ತಿದೆ. ಆ ಜಾಗದಲ್ಲಿ ನಮ್ಮ ರೂಪಾಯಿಯನ್ನು ಕಾಣುವ ದಿನಗಳು ಬರಬೇಕಿವೆ. ಅದಕ್ಕಾಗಿ ನಮ್ಮ ಮಕ್ಕಳು ತಯಾರಾಗುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಮಾಧವ ಭಟ್, ಹಿರಿಯ ನ್ಯಾಯವಾದಿ ಮಹೇಶ್ ಕಜೆ ಶುಭಾಶಂಸನೆಗೈದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ, ಬಾಲಕೃಷ್ಣ ಬೋರ್ಕರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ, ನ್ಯಾಯವಾದಿ ಸೀಮಾ ನಾಗರಾಜ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಘವೇಂದ್ರ ಇನ್ವಾರ್ಟರ್ ಸಂಸ್ಥೆಯ ಕೃಷ್ಣರಾಜ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಪುರಂದರ ಭಟ್, ಡಾ.ಶ್ರೀಕಾಂತ ರಾವ್, ಕಾಂಚನ ಈಶ್ವರ ಭಟ್, ವಿಶ್ರಾಂತ ಪ್ರಾಚಾರ್ಯ ಪ್ರೊ.ವೇದವ್ಯಾಸ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿ.ಬಿ.ಅರ್ತಿಕಜೆ, ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ಯ ಹಿಂದಾರ್, ಮಾಣಿಯ ಬಾಲವಿಕಾಸ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಜೆ, ಕಾರ್ಯದರ್ಶಿ ಮಹೇಶ ಶೆಟ್ಟಿ ಜೆ, ಪುತ್ತೂರಿನ ಶ್ರೀ ರಾಮಕೃಷ್ಣ ಸೇವಾ ಸಮಾಜದ ಕಾರ್ಯದರ್ಶಿ ಗುಣಪಾಲ ಜೈನ್, ಗ್ರಾಮಾಂತರ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ ಬಿ.ಎಸ್.ರವಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮುಕ್ತೇಸರ ಎನ್.ಕೆ.ಜಗನ್ನಿವಾಸ ರಾವ್ ಮತ್ತಿತರ ಗಣ್ಯರು, ಹೆತ್ತವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಶಂಖನಾದಗೈದರು. ವಿದ್ಯಾರ್ಥಿನಿಯರಾದ ವೈಷ್ಣವಿ, ನಿಧಿ ಹಾಗೂ ರಕ್ಷಾ ಪ್ರಾರ್ಥಿಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ ಸ್ವಾಗತಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದರು. ಅಂಬಿಕಾ ವಿದ್ಯಾಲಯದ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ವಂದಿಸಿದರು. ಶಿಕ್ಷಕಿಯರಾದ ಗೌರಿ ಹಾಗೂ ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗೆಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಶಾಲಾ ಶಿಕ್ಷಕಿ ಸುಷ್ಮಾ ಮಿಥುನ್ ಮಾಹಿತಿ ನೀಡಿದರು. ಶಿಕ್ಷಕಿ ಸುಜಾತಾ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ