ಸಾಧನೆ ಎಂಬುದು ಸುಲಭವಾಗಿ ಕೈಗೆಟಕುವಂಥದಲ್ಲ. ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲ, ಆತ್ಮಸ್ಥೈರ್ಯ ಒಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ಸಾಕ್ಷಿಯಾಗಿರುವವರು ಕಲಬುರಗಿಯ ಜೂನಿಯರ್ ಕಿರಣ್ ಬೇಡಿ ಎಂದೇ ಪ್ರಸಿದ್ಧವಾಗಿರುವ– ಪಿಎಸ್ಐ ಯಶೋದಾ ಕಟ್ಕೆ.
ಇವರು ಮೂಲತಃ ಕಲಬುರಗಿಯ ಅಂಬಾದಾಸ್ ಮತ್ತು ಸೋನಾಬಾಯಿ ಕಟ್ಕೆ ದಂಪತಿಗಳ ಐದು ಜನ ಮಕ್ಕಳಲ್ಲಿ ಇವರೋರ್ವರು. ಇವರು ತಮ್ಮ ಬಾಲ್ಯದಲ್ಲಿಯೇ ಅಪಾರವಾದ ದೇಶಪ್ರೇಮ ಹೊಂದಿದ್ದರು. ಇವರು ಎಳವೆಯಿಂದಲೇ ಮಿಲಿಟರಿ ಅಥವಾ ಪೊಲೀಸ್ ಇಲಾಖೆಗೆ ಸೇರುವ ಮೂಲಕ ದೇಶ ಸೇವೆಯನ್ನು ಮಾಡಬೇಕೆಂದು ಕನಸು ಹೊತ್ತಿದ್ದರು. ಇದಕ್ಕಾಗಿಯೇ ಕ್ರೀಡೆ, ಕರಾಟೆ ಹಾಗೂ ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಇವರು ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಸಂಗೀತ ಸಾಹಿತ್ಯರಂಗ ಹಾಗೂ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಸಕಲಕಲಾವಲ್ಲಭೆ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.
ಇವರು ಕಷ್ಟ ಎಂದು ನೊಂದು ಬಂದವರಿಗೆ ಕರುಣಾಮಯಿ ತಾಯಿಯಾಗುವರು. ಅದೇ ದುಷ್ಟರಿಗೆ ರೌದ್ರಾವತಾರದ ದುರ್ಗಿಯಾಗುವರು. ಎಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಿರುತ್ತದೆಯೋ ಅಲ್ಲಿ ಯಶೋದಾ ಕಟ್ಕೆ ಹಾಜರಿರುತ್ತಾರೆ. ಮೊದಲು ಕಾನ್ಸ್ಟೇಬಲ್ ಆಗಿ ನೇಮಕಗೊಂಡ ಇವರು ಇದು ಚಿಕ್ಕ ಹುದ್ದೆ ಎಂದು ಎಂದಿಗೂ ಕುಗ್ಗಲಿಲ್ಲ. ನಿರಂತರ ಪ್ರಯತ್ನ, ದಿಟ್ಟ ಹೆಜ್ಜೆಯನಿಟ್ಟ ಇವರು ಕ್ರೀಡೆಯ ವಿಭಾಗದಲ್ಲಿ ಪಿಎಸ್ಐ ಆಗಿ ಪ್ರಮೋಷನ್ ಪಡೆದರು. ನ್ಯಾಯಕ್ಕೆ ಹೆಸರಾಗಿರುವ ಇವರು ಪೊಲೀಸ್ ಇಲಾಖೆಯ ಶಿಸ್ತುಬದ್ಧ ಪಿಎಸ್ಐ ಎಂದೇ ಖ್ಯಾತಿ ಪಡೆದಿದ್ದಾರೆ.
"ಜನಸೇವೆಯೇ ಜನಾರ್ದನ ಸೇವೆ" ಎಂದು ನಂಬಿರುವ ಇವರು "ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು" ಎಂಬಂತೆ ತನ್ನ ದಾನ ಧರ್ಮವನ್ನು ಮುಂದುವರಿಸುತ್ತಲೇ ಬಂದಿದ್ದಾರೆ. ಭಿಕ್ಷಾಟನೆ ಮತ್ತು ಬಾಲಕಾರ್ಮಿಕರಾಗಿರುವ ಸುಮಾರು 43 ಮಕ್ಕಳನ್ನು ತಾನೇ ಸ್ವತಃ ಜವಾಬ್ದಾರಿಯನ್ನು ತೆಗೆದುಕೊಂಡು ಶಾಲೆಗೆ ಸೇರಿಸುವ ಮೂಲಕ ವಿದ್ಯಾಭ್ಯಾಸವನ್ನು ಕಲ್ಪಿಸಿದ್ದಾರೆ. ಮಂಗಳಮುಖಿಯರನ್ನು ತನ್ನ ಸಹೋದರಿಯರಂತೆ ಭಾವಿಸಿ, ತನ್ನ ಕೈಯಲ್ಲಾಗುವ ಸಹಾಯವನ್ನು ಮಾಡಿದ್ದಾರೆ. ಬಡವರು ಅನಾರೋಗ್ಯ ಕಷ್ಟ ಎಂದವರಿಗೆ ಆಸ್ಪತ್ರೆಯಲ್ಲಿ ತಾನೇ ಚಿಕಿತ್ಸೆ ಒದಗಿಸಿದ್ದಾರೆ.ಈ ವರ್ಷ 7 ಮಕ್ಕಳಿಗೆ ವಸತಿ ನಿಲಯದ ವ್ಯವಸ್ಥೆ ಕಲ್ಪಿಸಿದ್ದಾರೆ. ನಿಜಕ್ಕೂ ಪಿಎಸ್ಐ ಯಶೋದಾ ಕಟ್ಕೆಯವರು ನೊಂದವರ ಬಾಳಿನ ನಂದಾದೀಪವಾಗಿದ್ದಾರೆ.
ಪಿಎಸ್ಐ ಯಶೋದಾ ಕಟ್ಕೆ ಎಂಬ ಹೆಸರು ಕೇಳಿದರೆ ಸಾಕು, ಕಲಬುರಗಿಯ ಜನತೆಯ ಮೊಗದಲ್ಲಿ ಏನೋ ಒಂದು ಹಸನ್ಮುಖಗೊಳ್ಳುತ್ತದೆ. ಜನರಲ್ಲಿ ಅಮ್ಮ, ಅಕ್ಕ ಎನ್ನುವ ಮೂಲಕ ಯಶೋದಾ ಕಟ್ಕೆಯವರು ಜನರ ಮನೆಮಗಳಾಗಿದ್ದಾರೆ. ಇವರ ಮನೆಗೆ ಭೇಟಿ ನೀಡಿದರೆ ಮನೆಯು ಪ್ರಶಸ್ತಿ, ಸನ್ಮಾನಗಳಿಂದಲೇ ಅಲಂಕೃತವಾಗಿದೆ. ಇವರ ಸಾಧನೆಯನ್ನು ನೋಡಿದರೆ ಮನದಲ್ಲೊಂದು ಸಂತಸ, ಕಣ್ಣೋಟವು ಹೇಳುತ್ತಿದೆ ಕೈಮುಗಿದು ನಮಿಸು ಎಂದು.
ಪ್ರೇರಣೆ ನೀಡಿದವರು: ಪಿಎಸ್ಐ ಯಶೋಧ ಕಟ್ಕೆಯವರಲ್ಲಿ ನಿಮ್ಮ ಸಾಧನೆಗೆ ಸ್ಫೂರ್ತಿಯಾದವರು ಯಾರೆಂದು ಕೇಳಿದಾಗ ಅವರ ಮನದಲ್ಲಿ ಮೂಡಿದ ಪದವೊಂದೇ "ನನ್ನ ಅಜ್ಜಿ ಮತ್ತು ಅಮ್ಮ". ಯಶೋಧ ಕಟ್ಕೆಯವರು, ನನ್ನ ಅಜ್ಜಿ ರುಕ್ಮಿಣಿ "ಹೆಣ್ಣು ಹೆಣ್ಣೆಂದು ಹೀಯಾಳಿಸುವುದೇಕೆ? ಗೋಮಾತೆ ಹೆಣ್ಣು, ಭಾರತಾಂಬೆ ಹೆಣ್ಣು, ಕನ್ನಡಾಂಬೆ ಹೆಣ್ಣು, ಹರಿಯುವ ನದಿಗಳು ಹೆಣ್ಣು, ದೇವತೆಗಳು ಹೆಣ್ಣು, ನಮಗೂ ನಿಮಗೂ ಹೆತ್ತವಳು ಹೆಣ್ಣಲ್ಲವೇ?" ಎಂದು ಹೇಳುವ ಮೂಲಕ ನನಗೆ ಪ್ರೇರೇಪಿಸುತ್ತಿದ್ದರು ಎಂದರು. ಹಾಗೆಯೇ ನನ್ನ ಅಮ್ಮ, "ನನ್ನ ಮನೆಯಲ್ಲಿ ಹುಟ್ಟಿರುವುದು ಮೂರು ಹೆಣ್ಣು ಎಂಬ ಕೇಳರಿಮೆ ಬೇಡ, ಅವರನ್ನು ಹೆಣ್ಣು ಹುಲಿಗಳಾಗಿ ತೋರಿಸುತ್ತೇನೆ" ಎಂದರು. ಹೀಗೆ ನನ್ನ ಅಜ್ಜಿ ಮತ್ತು ಅಮ್ಮನ ಪ್ರತಿ ಮಾತುಗಳು ನನ್ನನ್ನು ನಿರಂತರ ಪ್ರೇರೇಪಿಸುತ್ತಿತ್ತು ಎಂದರು.
ಸತ್ಯವಾಗಿಯೂ ನಿಮ್ಮ ಅಜ್ಜಿ ಹಾಗೂ ಅಮ್ಮ ಆಡುತ್ತಿದ್ದ ಪದಗಳನ್ನು ಕೇಳಿದರೆ, ನಮಗೆ ಒಮ್ಮೆ ಮೈ ರೋಮಾಂಚನಗೊಳ್ಳುತ್ತದೆ. ಅದರಂತೆಯೇ ನೀವು ಛಲದಿಂದ ಸಾಧನೆಯ ಮೆಟ್ಟಿಲೇರಿರುವುದು ಹೆಮ್ಮೆಯ ಸಂಗತಿ.
ಇಷ್ಟು ಮಾತ್ರವಲ್ಲದೆ ಪಿಎಸ್ಐ ಯಶೋದಾ ಕಟ್ಕೆಯವರು ಉತ್ತಮ ಸಾಹಿತಿ, ಕವಿಯತ್ರಿ ಹಾಗೂ ವಚನಕಾರ್ತಿಯೂ ಹೌದು. 550 ವಚನಗಳು, 1000 ನುಡಿಮುತ್ತುಗಳು, ನೀತಿ ಕಥೆಗಳು, 9 ಪುಸ್ತಕಗಳು, ಮಗು ಅರಳಿದ ಮತ್ತು ಹೂವಲ್ಲಿ ನಕ್ಕಾಗ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ.
ಜನತೆಗೊಂದು ಸಂದೇಶ: ಇಂದಿನ ಯುವ ಜನತೆ ಸಮಯವನ್ನು ಕಾಲಹರಣ ಮಾಡುತ್ತಿದ್ದಾರೆ. ಕೇವಲ ಫೋನ್, ಲವ್ ಎಂಬ ದುಶ್ಚಟಗಳಿಗೆ ಭಾಗಿಯಾಗಿ ತಮ್ಮ ಮಾರ್ಗವನ್ನೇ ಬದಲಾಯಿಸುತ್ತಿದ್ದಾರೆ. ನಾ ಹೇಳುವುದಿಷ್ಟೇ, ಒಂದೊಮ್ಮೆ ನಿಮ್ಮ ತಂದೆ– ತಾಯಿಯನ್ನು ತಿರುಗಿ ನೋಡಿ, ನಿಮಗಾಗಿ ಕಷ್ಟಪಡುತ್ತಾ ತಮ್ಮ ನೋವನ್ನು ಮರೆಮಾಚಿ, ಸದಾ ಮಕ್ಕಳ ಸಾಧನೆಯನ್ನೇ ಬಯಸುತ್ತಿರುವವರನ್ನು. ವಿದ್ಯಾ ಸಂಪತ್ತಿದ್ದರೆ– ಜ್ಞಾನ ಸಂಪತ್ತು. ಜ್ಞಾನ ಸಂಪತ್ತಿದ್ದರೆ– ಮಾನ ಸಂಪತ್ತು. ಮಾನ ಸಂಪತ್ತಿದ್ದರೆ– ಜಗತ್ತಿನ ಎಲ್ಲಾ ಸಂಪತ್ತು ನಮ್ಮ ಹಿಂದೆ ಬರುತ್ತದೆ. ಚೆನ್ನಾಗಿ ಓದಿ ದೊಡ್ಡ ಆಫೀಸರ್ ಆದರೂ ಸಹ ನಮ್ಮ ದೇಶದ ಸಂಸ್ಕೃತಿಯನ್ನು ಮರೆಯಬೇಡಿ. ತಂದೆ– ತಾಯಿಯನ್ನು ಗೌರವಿಸಿ, ಎಂದೂ ವೃದ್ಧಾಶ್ರಮಕ್ಕೆ ತಳ್ಳಬೇಡಿ. ಶ್ರದ್ಧೆ, ಸಾಧಿಸುವ ಛಲ ನಮ್ಮೊಂದಿಗಿದ್ದರೆ ಬಡತನ ಎಂದಿಗೂ ಮುಖ್ಯವಲ್ಲ. ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ, ಇದರ ಮಧ್ಯೆ ನಾನು ನನ್ನದು ಎಂಬ ಅಹಂ ಇಲ್ಲದೆ ತಿಳಿದು ನಡೆ ಮನುಜ ಎಂದು ಹೇಳಿದರು.
ಸದಾ ನಗುಮುಖದಲ್ಲೇ ಹಸನ್ಮುಖಿಯಾಗಿರುವ ಪಿಎಸ್ಐ ಯಶೋದಾ ಕಟ್ಕೆಯವರ ಸಾಧನೆಗೆ ನನ್ನದೊಂದು ಸಲಾಂ. ನಿಮ್ಮನ್ನು ಹೆತ್ತ ತಂದೆ– ತಾಯಿಗೊಂದು ನನ್ನ ನಮನ. ನೀವು ಕಲಬುರಗಿಗೆ ಮಾತ್ರವಲ್ಲ, ಕರ್ನಾಟಕಕ್ಕೆ ಹಾಗೂ ಭಾರತಕ್ಕೆ ಒಂದು ಹೆಮ್ಮೆ. ನಿಮ್ಮ ಮಾತು ಪ್ರತಿಯೊಬ್ಬರಿಗೂ ಪ್ರೇರೇಪಿಸುವ ನುಡಿಮುತ್ತುಗಳು. ನಿಮ್ಮೊಂದಿಗೆ ಕಳೆದ ಸಮಯ ನನ್ನ ಜೀವನದ ಸವಿನೆನಪು. ನಿಮ್ಮ ಬಗ್ಗೆ ಲೇಖನ ಬರೆಯುತ್ತಿರುವ ನಾನೇ ಪುಣ್ಯವಂತೆ. ನೊಂದವರ ಬಾಳಿನ ನಂದಾದೀಪವಾಗಿರುವ ಪಿಎಸ್ಐ ಯಶೋದಾ ಕಟ್ಕೆ ನಿಮ್ಮ ಬಾಳು ಎಂದೂ ಸುಕಮಯವಾಗಿರಲಿ. ನಿಮ್ಮ ಸಾಧನೆಯ ಪಥ ಹೀಗೆ ಸಾಗಲಿ ಎಂದು ಆಶಿಸುತ್ತೇನೆ.
- ಕೀರ್ತನ ಒಕ್ಕಲಿಗ ಬೆಂಬಳೂರು
ಪ್ರಥಮ ಬಿಬಿಎ
ವಿವೇಕಾನಂದ ಕಾಲೇಜು ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ