ಪ್ರದೋಷಮ್ ಅಥವಾ ಪ್ರದೋಷ ವ್ರತ

Upayuktha
0

ಪ್ರದೋಷ ವ್ರತವು ದೇಶಾದ್ಯಂತ  ಹಿಂದೂ ಧರ್ಮೀಯರು ಆಚರಿಸುವ ಪ್ರಮುಖ ವ್ರತವಾಗಿದ್ದು ಇದರಲ್ಲಿ ಪ್ರಮುಖವಾಗಿ ಶಿವ ಮತ್ತು ಪಾರ್ವತಿಯನ್ನು ಆರಾಧಿಸಲಾಗುತ್ತದೆ. ಈ ವ್ರತವನ್ನು ಪ್ರತಿ ತಿಂಗಳ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷಗಳ ತ್ರಯೋದಶಿ ತಿಥಿಯಂದು ಆಚರಿಸಲಾಗುತ್ತದೆ. ಹಾಗಾಗಿ ಹಿಂದೂ ಪಂಚಾಂಗದ ಪ್ರಕಾರ ಇದು ತಿಂಗಳಲ್ಲಿ ಎರಡು ಬಾರಿ ಬರುತ್ತದೆ. ಪ್ರದೋಷ ವ್ರತವನ್ನು ಲಿಂಗ ವಯಸ್ಸು ಯಾವ ಬೇಧವೂ ಇಲ್ಲದೆ ಭಕ್ತಿ,ಶ್ರದ್ಧೆಗಳಿಂದ ಆಚರಿಸಲಾಗುತ್ತದೆ.ಭಾರತದ ಕೆಲ ಭಾಗಗಳಲ್ಲಿ ಇಂದು ಶಿವನನ್ನು ನಟರಾಜನ ರೂಪದಲ್ಲಿ ಆಚರಿಸಲಾಗುತ್ತದೆ. ಸ್ಕಂಧ ಪುರಾಣದ ಪ್ರಕಾರ ಎರಡು ವಿಧದಲ್ಲಿ ಇಂದು ಉಪವಾಸ ಕೈಗೊಳ್ಳಲಾಗುತ್ತದೆ. ಮೊದಲನೆಯ ಪ್ರಕಾರದಲ್ಲಿ ಈ ದಿನದ ಇಪ್ಪತ್ತನಾಲ್ಕು ಗಂಟೆಯೂ ಉಪವಾಸದಿಂದಿದ್ದು ಶಿವನ ಆರಾಧನೆ ಮಾಡಲಾಗುತ್ತದೆ. ಇನ್ನೊಂದು ವಿಧದಲ್ಲಿ ಇಂದು ಬೆಳಗ್ಗೆ ‌ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಕೈಗೊಂಡು ಸಂಜೆ ಶಿವನ ಆರಾಧನೆ ಮಾಡಿದ ನಂತರ ಉಪವಾಸ ಕೊನೆಗೊಳಿಸಲಾಗುತ್ತದೆ.


 ಪ್ರದೋಷವೆಂದರೆ ಹಿಂದಿಯಲ್ಲಿ ಸಂಜೆಗೆ ಸಂಬಂಧಿಸಿದ್ದು ಎಂದರ್ಥ ಅಥವಾ ರಾತ್ರಿಯ ಮೊದಲ ಭಾಗವೆಂದರ್ಥ. ಈ ಪವಿತ್ರ ವ್ರತವನ್ನು ಸಂಧ್ಯಾ ಕಾಲದಲ್ಲಿ ಮಾಡಲಾಗುವುದರಿಂದ ಪ್ರದೋಷ ವ್ರತ ಎಂದೇ ಕರೆಯಲಾಗುತ್ತದೆ. ಇನ್ನೊಂದು ಅರ್ಥದಲ್ಲಿ ಪ್ರದೋಷವೆಂದರೆ ಪಾಪಗಳಿಂದ ವಿಮುಕ್ತಿ ಎಂದರ್ಥ.

ಇಂದು ವ್ರತ ಆಚರಿಸುವುದರಿಂದ ಶಿವ ಪಾರ್ವತಿಯರು ಅತ್ಯಂತ ಪ್ರಸನ್ನಗೊಳ್ಳುತ್ತಾರೆ ಎಂದು ನಂಬಲಾಗಿದೆ. ಶಿವ ಪಾರ್ವತಿಯರ ದಿವ್ಯ ಆಶೀರ್ವಾದದಿಂದ ಕಾಮಿತ ಫಲಗಳು ಲಭ್ಯವಾಗುವುದೆಂದು ನಂಬಲಾಗುತ್ತದೆ.


ಪ್ರದೋಷ ವ್ರತದ ನಿಯಮಗಳು ಮತ್ತು ಆಚರಣೆ:

ಇಂದು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಶಿವನ ಆರಾಧನೆ ಹೆಚ್ಚು ಶ್ರೇಯಸ್ಕರ. ಸೂರ್ಯಾಸ್ತದ ಒಂದು ಗಂಟೆಗೆ ಮುಂಚೆ ಪವಿತ್ರ ಸ್ನಾನ ಮಾಡಿ ಪೂಜೆಗೆ ಸಿದ್ಧವಾಗಲಾಗುತ್ತದೆ. ಪವಿತ್ರ ಕಲಶದಲ್ಲಿ ಶಿವನನ್ನು ಆಹ್ವಾನಿಸಿ ಶಿವ, ಪಾರ್ವತಿ, ಗಣಪತಿ, ಕಾರ್ತಿಕೇಯನನ್ನು ಪೂಜಿಸಲಾಗುತ್ತದೆ. ಕಲಶದಲ್ಲಿ ಪವಿತ್ರ ನೀರನ್ನು ತುಂಬಿಸಿ ಪರಿಮಳಯುಕ್ತವಾದ ಪತ್ರೆ ಪುಷ್ಪಗಳನ್ನು ಹಾಕಲಾಗುತ್ತದೆ. ಮತ್ತೆ ಕೆಲವೆಡೆಗಳಲ್ಲಿ ಶಿವಲಿಂಗಕ್ಕೆ ಹಾಲು, ಎಳನೀರು, ಮೊಸರು, ತುಪ್ಪ, ಗಂಧ ಮೊದಲಾದ ದ್ರವ್ಯಗಳಿಂದ  ಅಭಿಶೇಕ ಮಾಡಲಾಗುತ್ತದೆ. ಶಿವಲಿಂಗಕ್ಕೆ ಇಂದು ಶಿವನಿಗೆ ಬಹುಪ್ರಿಯವಾದ ಬಿಲ್ವ ಪತ್ರೆಗಳನ್ನು ಅರ್ಪಿಸುವುದು ಬಹಳ ಶ್ರೇಷ್ಠ.ಈ ಎಲ್ಲಾ ಆಚರಣೆಗಳನ್ನು ಮಾಡಿದ ನಂತರ ಪ್ರದೋಷ ವ್ರತ ಕಥೆ ಓದಲಾಗುತ್ತದೆ ಅಥವಾ ಕೇಳಲಾಗುತ್ತದೆ. ಶಿವಪುರಾಣ, ಶಿವನಿಗೆ ಸಂಬಂಧಿಸಿದ ಭಜನೆ ಶ್ಲೋಕಗಳನ್ನು ಪಠಿಸಲಾಗುತ್ತದೆ. ಅಲ್ಲದೆ ವಿಶೇಷವಾಗಿ ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಲಾಗುತ್ತದೆ. ಪೂಜಾವಿಧಿಗಳ ನಂತರ ಕಲಶದ ನೀರನ್ನು ಭಕ್ತರಿಗೆ ತೀರ್ಥವಾಗಿ ವಿನಿಯೋಗಿಸಲಾಗುತ್ತದೆ. ಪವಿತ್ರ ವಿಭೂತಿಯನ್ನು ಹಂಚಲಾಗುತ್ತದೆ ಮತ್ತು ಧರಿಸಲಾಗುತ್ತದೆ. ಮತ್ತು ಪೂಜೆಯ ನಂತರದಲ್ಲಿ ಭಕ್ತರು ಶಿವಾಲಯಗಳಿಗೆ ಭೇಟಿ ನೀಡುತ್ತಾರೆ. ಶಿವನಿಗೆ ಇಂದು ಹಚ್ಚುವ ಒಂದು ದೀಪವೂ ಕೂಡ ವಿಶೇಷ ಫಲದಾಯಕವೆಂದು ನಂಬಲಾಗುತ್ತದೆ. ಪ್ರದೋಷದಂದು ಮಹಾನ್ ಶಿವಭಕ್ತ ರಾವಣನಿಂದ ರಚಿತವಾದ ಶಿವತಾಂಡವ ಸ್ತೋತ್ರದ ಪಾರಾಯಣವು ಬಹಳ ಶ್ರೇಯಸ್ಕರ.


ಪ್ರದೋಷ ವ್ರತ ಕಥೆ ಮತ್ತು ಮಹತ್ವ:

ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರ ಕಡೆಯುವಾಗ ಲೋಕ ಕಂಟಕವಾದ ಹಾಲಾಹಲ ಅಂದರೆ ವಿಷ ಉತ್ಪತ್ತಿಯಾಯಿತು.ಈ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಲ್ಲಿದ್ದನು. ಆದರೆ ಪರಮ ಕರುಣಾಳು ಶಿವನು ವಿಷದಿಂದುಂಟಾಗುವ ಅನಾಹುತ ಮನಗಂಡು, ಲೋಕವನುಳಿಸಲು ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ.ಶಿವನು ಈ ವಿಷವನ್ನು ಕುಡಿದ ನಂತರ ಅದು ಅವನ ಗಂಟಲಿನ ಬಳಿ ಇಳಿಯುತ್ತಿರುವುದನ್ನು ಕಂಡ ಮಾತೆ ಪಾರ್ವತಿ, ವಿಷ ಕೆಳಗಿಳಿಯದಂತೆ ತನ್ನ ಕೈಗಳಿಂದ ಭದ್ರವಾಗಿ ಶಿವನ ಕೊರಳನ್ನು ಹಿಡಿಯುತ್ತಾಳೆ. ವಿಷ ಶಿವನ ಕೊರಳಿನಲ್ಲಿಯೇ ನಿಲ್ಲುತ್ತದೆ. ಹೀಗಾಗಿ ಶಿವನು ನೀಲಕಂಠ. ವಿಷವನ್ನು ಅಂದರೆ ನಂಜನ್ನು ಕುಡಿದವನಾದ್ದರಿಂದ ನಂಜುಂಡೇಶ್ವರ ಎಂದೂ ಹೆಸರು ಪಡೆಯುತ್ತಾನೆ. ವಿಷ ಪಾನ ಮಾಡಿದ ಶಿವನಿಗೆ ಬ್ರಹ್ಮ ದೇವನು ಗಂಗೆಯಿಂದ ಜಳಕ ಮಾಡಿಸುತ್ತಾನೆ.ಈ ಕಾರಣಕ್ಕಾಗಿಯೇ ಶಿವನು ಅಭಿಷೇಕಪ್ರಿಯ.ಹೀಗಾಗಿ ಶಿವ ಪೂಜೆಯಲ್ಲಿ ರುದ್ರಾಭಿಷೇಕ ಮಹತ್ವ ಪಡೆದಿದೆ. ಜಗತ್ತಿನ ರಕ್ಷಣೆಗಾಗಿ ಶಿವನು ಮಾಡಿದ ಈ ಮಹಾತ್ಯಾಗವನ್ನು ಎಲ್ಲಾ ದೇವತೆಗಳು ತರತರವಾಗಿ ಸ್ತುತಿಸಿ ಹಾಡಿ ಹೊಗಳುತ್ತಾರೆ. ಇದನ್ನು ಕೇಳಿ ಸಂಪ್ರೀತನಾದ ಶಿವನು ಆನಂದ ತಾಂಡವ ನೃತ್ಯ ಮಾಡುತ್ತಾನೆ. ಇದು ನಡೆದದ್ದು ಪ್ರದೋಷ ಸಮಯದಲ್ಲೇ. ಅಂದಿನಿಂದ ತಿಂಗಳಿನಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ಬರುವ ತ್ರಯೋದಶಿಯಂದು ಸಾಕ್ಷಾತ್ ದೇವತೆಗಳೂ ಪ್ರದೋಷ ಪೂಜೆಯನ್ನು ಮಾಡಲಾರಂಭಿಸಿದರು. ಸ್ಕಂಧ ಪುರಾಣದ ಪ್ರಕಾರ ಪ್ರದೋಷ ವ್ರತವನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸುವುದರಿಂದ ಆರೋಗ್ಯ ಭಾಗ್ಯಗಳನ್ನು ಇಷ್ಟಾರ್ಥಗಳನ್ನು ಪೂರೈಸುತ್ತದೆ. ಈ ವ್ರತದ ಆಚರಣೆಯಿಂದ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬಹುದು. ಈ ವ್ರತದ ಆಚರಣೆಯಿಂದ ಜನ್ಮಾಂತರದ ಪಾಪಗಳು ಪರಿಹಾರವಾಗಿ ಇಹಪರ ಸೌಖ್ಯ ಸಾಧಿತವಾಗುತ್ತದೆ.


ಪ್ರದೋಷದಂದು ಶಿವನ ಪೂಜೆಗೆ /ಅಭಿಷೇಕಕ್ಕೆ ಬಳಸುವ ಪದಾರ್ಥಗಳು ಮತ್ತು ಅದರ ವಿಶೇಷ ಫಲಗಳು:


ಪಂಚಗವ್ಯ – ಎಲ್ಲಾ ಪಾಪಗಳಿಂದ ಮುಕ್ತಿ


ಪಂಚಾಮೃತ – ಸಂಪತ್ತನ್ನು ನೀಡುತ್ತದೆ


ತುಪ್ಪ – ಮೋಕ್ಷವನ್ನು ನೀಡುತ್ತದೆ


ಹಾಲು – ದೀರ್ಘಾಯುಷ್ಯ


ಮೊಸರು – ಮಕ್ಕಳ ಭಾಗ್ಯ


ಜೇನು ತುಪ್ಪ – ಉತ್ತಮ ಧ್ವನಿ


ಅಕ್ಕಿ ಹಿಟ್ಟು– ಸಾಲಗಳಿಂದ ಮುಕ್ತಿ


ಕಬ್ಬಿನ ರಸ – ಆರೋಗ್ಯ ಭಾಗ್ಯ, ಶತ್ರು ನಾಶ


ನಿಂಬೆ ರಸ – ಸಾವಿನ ಭಯ ದೂರಾಗುತ್ತದೆ.


ಎಳೆನೀರು – ಸಂತೋಷ ಮತ್ತು ಜೀವನ ಆನಂದ


ಸಕ್ಕರೆ-ಶತ್ರು ನಾಶ


ಗಂಧ (ಗಂಧದ ಪೇಸ್ಟ್) – ಲಕ್ಷ್ಮಿ ಕಟಾಕ್ಷ


ಬೇಯಿಸಿದ ಅನ್ನ – ಜೀವನವನ್ನು ಆನಂದಮಯ ಗೊಳಿಸುತ್ತದೆ.


ಪ್ರದೋಷ ವ್ರತದ ವಿಧಗಳು ಮತ್ತು ಫಲಗಳು:

ಪ್ರದೋಷ ವ್ರತದ ಫಲಗಳು, ಅದು ಆಚರಿಸಲ್ಪಡುವ ದಿನಗಳಿಗೆ ಅನುಗುಣವಾಗಿ ಭಿನ್ನವಾಗಿರುತ್ತದೆ. ಪ್ರದೋಷ ವ್ರತದ ವಿಧಗಳು ಮತ್ತು ಅದಕ್ಕನುಸಾರವಾಗಿ ಅದರ ವಿಶೇಷ ಫಲಗಳನ್ನು ಈ ಕೆಳಗಿನಂತೆ ತಿಳಿಸಬಹುದು.


೧ ಸೋಮ ಪ್ರದೋಷ:

ಇದನ್ನು ಸೋಮವಾರದಂದು ಆಚರಿಸಲಾಗುತ್ತದೆ. ಇಂದು ವ್ರತ ಆಚರಿಸುವುದರಿಂದ ಧನಾತ್ಮಕ ಆಲೋಚನೆಗಳಿಗೆ ಪ್ರೇರಣೆ ದೊರೆಯುತ್ತದೆ. ಅಲ್ಲದೆ ಎಲ್ಲಾ ಕಾಮನೆಗಳು ಪೂರ್ಣಗೊಳ್ಳುತ್ತವೆ.


ಭೌಮ ಪ್ರದೋಷ:ಪ್ರದೋಷವು ಮಂಗಳವಾರದಂದು ಬಿದ್ದರೆ ಅದು ಭೌಮ ಪ್ರದೋಷವೆಂದು ಹೇಳಲಾಗುತ್ತದೆ.ಇಂದು ಪ್ರದೋಷ ವ್ರತ ಆಚರಿಸಿದರೆ ದೈಹಿಕ ಬಾಧೆಗಳು ದೂರಾಗಿ ಆರೋಗ್ಯ ಭಾಗ್ಯ,ಸುಖ ಸಮೃದ್ಧಿ ಉಂಟಾಗುತ್ತದೆ.


ಸೌಮ್ಯ ಪ್ರದೋಷ: 

ಈ ವ್ರತವನ್ನು ಬುಧವಾರ ಆಚರಿಸಲಾಗುತ್ತದೆ. ಇದರ ಆಚರಣೆಯಿಂದ ಕಾಮಿತ ಫಲಗಳು ದೊರೆಯುವುರ ಜೊತೆಗೆ ಬುದ್ಧಿ ಹಾಗೂ ಜ್ಞಾನ ಲಭ್ಯವಾಗುತ್ತದೆ.


ಗುರುವಾರ ಪ್ರದೋಷ ವ್ರತ:

ಗುರುವಾರ ಬರುವ ಪ್ರದೋಷದ ಆಚರಣೆಯಿಂದ ಎಲ್ಲಾ ವಿಪತ್ತುಗಳೂ ಪರಿಹಾರವಾಗುತ್ತವೆ. ಹಾಗೂ ಪಿತೃಗಳ, ಪೂರ್ವಜರ ಆಶೀರ್ವಾದ ದೊರೆತು ಶ್ರೇಯಸ್ಸು ಉಂಟಾಗುತ್ತದೆ.


ಭೃಗುವಾರ ಪ್ರದೋಷ:

ಶುಕ್ರವಾರದಂದು ಪ್ರದೋಷ ವ್ರತ ಬಂದರೆ ಅದು ಭೃಗು ಪ್ರದೋಷವಾಗುತ್ತದೆ. ಈ ದಿನದಂದು ವ್ರತ ಆಚರಿಸುವುದರಿಂದ ನೆಮ್ಮದಿ ದೊರೆತು ಜೀವನದ ಎಲ್ಲಾ ಋಣಾತ್ಮಕತೆಗಳು ದೂರಾಗುತ್ತವೆ.


ಶನಿ ಪ್ರದೋಷ ವ್ರತ: ಶಿನಿವಾರದಂದು ಬೀಳುವ ಈ ಪ್ರದೋಷ ವ್ರತವೂ ಉಳಿದವೆಲ್ಲವುಗಳಿಗಿಂತ ವಿಶೇಷವಾದದ್ದು ಹಾಗೂ ಮಹತ್ವವಾದದ್ದು. ಈ ದಿನ ವ್ರತ ಆಚರಿಸುವುದರಿಂದ ಉದ್ಯೋಗದಲ್ಲಿ ಪ್ರಗತಿ ಕಾಣಬಹುದು. ಹಾಗೂ ಕಳೆದುಕೊಂಡ ಸಂಪತ್ತು ಮರಳಿ ಪಡೆಯಬಹುದು. ಅಲ್ಲದೆ ಶನಿದೇವರ ಕೃಪೆಯೂ ಆಗುತ್ತದೆ. ಒಂದು ದಿನ ಶನಿ ಪ್ರದೋಷ ಆಚರಣೆ ಮಾಡುವುದರಿಂದ ಐದು ವರ್ಷ ಪ್ರತಿ ದಿನ ಶಿವಾಲಯಕ್ಕೆ ಹೋಗಿ ಪೂಜೆ ಮಾಡಿದ ಫಲ ಸಿಗುತ್ತದೆ. ಅಲ್ಲದೆ ಸಾಡೇ ಸಾತಿಯ ಪ್ರಭಾವ ಕಡಿಮೆಯಾಗಬಹುದು ಹಾಗೂ ಹೊರಟು ಹೋಗಬಹುದು.


ಭಾನುವಾರ ಪ್ರದೋಷ ವ್ರತ:

ಈ ದಿನದಂದು ವ್ರತ ಆಚರಿಸಿದರೆ ದೀರ್ಘಾಯಸ್ಸು,ಆರೋಗ್ಯಗಳು ಪ್ರಾಪ್ತಿಯಾಗುತ್ತವೆ.


ಇಂದು ಅಂದರೆ 15/07/2023ರಂದು  ಶನಿಪ್ರದೋಷದ  ಪೂಜಾ ಸಮಯ: ಸಂಜೆ 7:11ರಿಂದ ರಾತ್ರಿ 9:20


||ಓಂ ನಮಃ ಶಿವಾಯ||

|| ಶಿವಾರ್ಪಣಮಸ್ತು||


- ಎಸ್.ಎಲ್.ವರಲಕ್ಷ್ಮೀಮಂಜುನಾಥ್.

ನಂಜನಗೂಡು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top