ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ.. ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ. ಕುಸಿಯುವ ಭೀತಿಯಲ್ಲಿ ಕಟ್ಟಹಳ್ಳಿ ಹೇಮಾವತಿ ನದಿ ಸೇತುವೆ. ಕಟ್ಟಹಳ್ಳಿ ಕಟ್ಟೆಕ್ಯಾತನಹಳ್ಳಿ ಅವಳಿ ಗ್ರಾಮಸ್ಥರ ಆಕ್ರೋಶ
ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಕಟ್ಟಹಳ್ಳಿ-ಕಟ್ಟೆಕ್ಯಾತನಹಳ್ಳಿ ಸೇತುವೆಯ ಪಿಲ್ಲರ್‌ಗಳ ಬಳಿ ಹೇಮಾವತಿ ನದಿಯ ಒಡಲಿನಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಯು ಎಗ್ಗಿಲ್ಲದೇ ರಾಜಾರೋಷವಾಗಿ ನಡೆಯುತ್ತಿದೆ. ಅಕ್ರಮವನ್ನು ತಡೆಯಬೇಕಾದ ಅಧಿಕಾರಿಗಳೇ ಈ ದಂಧೆಯಲ್ಲಿ ನೇರವಾಗಿ ಶಾಮೀಲಾಗಿದ್ದು, ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿರುವುದರಿಂದ ಅಕ್ರಮ ದಂಧೆಕೋರರು ಯಾವುದೇ ಅಂಜಿಕೆಯಿಲ್ಲದೇ ಹಗಲು ದರೋಡೆ ನಡೆಸಿ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹಾಗೂ ಅಕ್ಕಿಹೆಬ್ಬಾಳು ಹೋಬಳಿಯ ಮೂಲಕ ಮೈಸೂರು-ಹಾಸನ ಜಿಲ್ಲೆಗಳಿಗೆ ನೇರವಾದ ಸಂಪರ್ಕವನ್ನು ನೀಡುತ್ತಿರುವ ಹೇಮಾವತಿ ನದಿ ಸೇತುವೆಯ ಪಕ್ಕದಲ್ಲಿಯೇ ದಂಧೆಕೋರರು ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವುದರಿಂದ ಸೇಲುವೆಯ ಪಿಲ್ಲರ್‌ಗಳು ಶಿಥಿಲಗೊಳ್ಳುತ್ತಿದ್ದು ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ನಿರ್ಮಿಸಿರುವ ಸೇತುವೆಯು ಕುಸಿಯುವ ಭೀತಿಯು ಎದುರಾಗಿದೆ.
ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಈ ಪ್ರದೇಶವು ಕೃಷ್ಣರಾಜಸಾಗರ ಜಲಾಶಯದ ಹಿನ್ನೀರು ನಿಲ್ಲುವ ಪ್ರದೇಶವಾಗಿದ್ದು ಲಕ್ಷಾಂತರ ಟನ್ ಸಮೃದ್ಧವಾದ ಮರಳು ಇರುವ ಜಾಗವಾಗಿರುವುದರಿಂದ ದಂಧೆಕೋರರು ಕೊಪ್ಪರಿಕೆಗಳು, ಎತ್ತಿನಗಾಡಿಗಳು ಹಾಗೂ ಟ್ರ್ಯಕ್ಟರ್‌ಗಳ ಮೂಲಕ ಹೊಳೆಯ ಮರಳನ್ನು ಒಂದೆಡೆ ಸಂಗ್ರಹಿಸಿ ಮಧ್ಯರಾತ್ರಿಯ ವೇಳೆಯಲ್ಲಿ ದಿನವಹಿ ಹದಿನೈದಕ್ಕೂ ಹೆಚ್ಚಿನ ಟಿಪ್ಪರ್‌ಗಳ ಮೂಲಕ ಮರಳು ದಂಧೆಯನ್ನು ನಡೆಸುತ್ತಿದ್ದು ಒಂದು ಲೋಡ್ ಮರಳು ಕನಿಷ್ಠ ೪೦ರಿಂದ ೫೦ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿದೆ.
ಹೇಮಾವತಿ ನದಿಯ ನೀರಿಗೆ ಮೋಟಾರು ಬೋಟ್‌ಗಳು, ಹಿಟಾಚಿ, ಜೆಸಿಬಿ ಸೇರಿದಂತೆ ಬೃಹತ್ ಯಂತ್ರೋಪಕರಣ ಗಳನ್ನು ಬಳಸಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಕಟ್ಟೆಕ್ಯಾತನಹಳ್ಳಿ ಗ್ರಾಮದ ಬಲಾಢ್ಯ ಯುವಕರಾದ ಬಾಬು ಮತ್ತು ಧನಂಜಯ ಎಂಬುವವರು ಗ್ರಾಮದ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ರಾತ್ರಿಯಿಡೀ ಮರಳು ಸಂಗ್ರಹ ಕಾರ್ಯವು ಯಂತ್ರೋಪಕರಣಗಳ ಮೂಲಕ ನಡೆಯುತ್ತಿರುವುದರಿಂದ ರಾತ್ರಿಯಿಡೀ ನಿದ್ದೆಬರದಂತಾಗಿದ್ದು ಕಟ್ಟಹಳ್ಳಿ ಕಟ್ಟೆಕ್ಯಾತನಹಳ್ಳಿ ಸೇರಿದಂತೆ ಹೇಮಾವತಿ ನದಿಯ ಪಾತ್ರದ ಈ ಎರಡೂ ಅವಳಿ ಗ್ರಾಮಗಳ ಜನರು ಹೈರಾಣಾಗಿ ಹೋಗಿದ್ದಾರೆ. ಹೇಮಾವತಿ ನದಿಯ ಒಡಲಿನಲ್ಲಿ ಎಲ್ಲೆಂದರಲ್ಲಿ ಗುಂಡಿ ಬಗೆದು ಅಮೂಲ್ಯವಾದ ಮರಳು ಸಂಪತ್ತನ್ನು ಒಂದೆಡೆ ಸಂಗ್ರಹಿಸುವ ಕೆಲಸವನ್ನು ಎಗ್ಗಿಲ್ಲದಂತೆ ನಡೆಸುತ್ತಿರುವುದರಿಂದಾಗಿ ಹೇಮಾವತಿ ನದಿಯ ಪಾತ್ರಕ್ಕೂ ಸಂಚಕಾರ ಒದಗಿಬಂದಿದೆ. ಭಾರೀ ಯಂತ್ರೋಪಕರಣಗಳು ಭಾರೀ ಸದ್ದುಮಾಡಿ ಮರಳು ಗಣಿಗಾರಿಕೆ ನಡೆಸುತ್ತಿರುವ ಕಾರಣದಿಂದಾಗಿ ನದಿಯ ನೀರಿನಲ್ಲಿರುವ ಮಷೀರ್, ಕಾಟ್ಲಾ ಮೀನುಗಳು ಸೇರಿದಂತೆ ಅಮೂಲ್ಯವಾದ ಜಲಚರಗಳ ಜೀವಕ್ಕೆ ಸಂಚಕಾರ ಬಂದಿದೆ.
ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಕಟ್ಟೆಕ್ಯಾತನಹಳ್ಳಿ ಗ್ರಾಮದ ಕಡೆಯಿಂದ ಹೇಮಾವತಿ ನದಿಯೊಳಗೆ ಇಳಿಯಲು ಕಚ್ಚಾ ರಸ್ತೆಯನ್ನು ನಿರ್ಮಿಸಿ ಕೊಂಡಿರುವ ಅಕ್ರಮ ಮರಳು ದಂಧೆಕೋರರು ರಾತ್ರಿ ೧೦ಗಂಟೆಯಿದ ಆರಂಭಿಸಿ ಬೆಳಗಿನ ಜಾವ ೬ಗಂಟೆ ಯವರೆಗೂ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ ರಾತ್ರಿಯೇ ಟಿಪ್ಪರ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ಮರಳನ್ನು ಮೈಸೂರು, ಮಂಡ್ಯ ಸೇರಿದಂತೆ ಕೆ.ಆರ್.ಪೇಟೆ, ಕೆ.ಆರ್. ನಗರ, ಪಾಂಡವಪುರ ಪಟ್ಟಣಗಳಿಗೆ ಸಾಗಾಣಿಕೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಜಾವಳಿಯಲ್ಲಿ ಹುಟ್ಟಿ ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಕೃಷ್ಣರಾಜಪೇಟೆ ತಾಲೂಕಿನ ಮೂಲಕ ಹರಿದು ತಾಲೂಕಿನ ಪವಿತ್ರ ತ್ರಿವೇಣಿ ಸಂಗಮಕ್ಕೆ ಹೊಂದಿಕೊಂಡಂತೆ ಕಾವೇರಿ ನದಿಯನ್ನು ಸೇರುವ ಹೇಮಾವತಿ ನದಿಯು ತಾಲೂಕಿನ ಜನತೆಯ ಭಾಗ್ಯದ ಬಾಗಿಲನ್ನೇ ತೆರೆದಿರುವ ಜೀವನದಿಯಾಗಿದ್ದು ಕೆ.ಆರ್.ಪೇಟೆ ತಾಲೂಕಿನ ಆರ್ಥಿಕ ಅಭ್ಯುದಯಕ್ಕೆ, ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿಗೆ ಆಧಾರವಾಗಿರುವ ಹೇಮೆಯ ಒಡಲಿನಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಯು ನಡೆಯುತ್ತಿರುವುದರಿಂದ ನದಿಯಪಾತ್ರಕ್ಕೆ ಅಪಾಯವು ಬಂದೊದಗಿದೆಯಲ್ಲದೇ ಮಂಡ್ಯ ಹಾಗೂ ಮೈಸೂರು ಜಿಲ್ಲೆಗೆ ಸಂಪರ್ಕ ನೀಡುತ್ತಿರುವ ಹೇಮಾವತಿ ನದಿ ಸೇತುವೆಯು ಶಿಥಿಲವಾಗಿ ಕುಸಿಯುವ ಭೀತಿಯು ಎದುರಾಗಿದೆ.
ಅಪಾಯವು ಸಂಭವಿಸುವ ಮುನ್ನ ಕೃಷ್ಣರಾಜಪೇಟೆ ತಾಲೂಕು ಆಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೋಲಿಸರು ಎಚ್ಚೆತ್ತುಕೊಂಡು ಹೇಮಾವತಿ ನದಿಯ ಒಡಲಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಿ ಬರಿದಾಗುತ್ತಿರುವ ಹೇಮಾವತಿ ನದಿಯ ಒಡಲನ್ನು ಸಂರಕ್ಷಣೆ ಮಾಡುವ ಜೊತೆಗೆ, ಕುಸಿಯುವ ಭೀತಿಯನ್ನು ಎದುರಿಸುತ್ತಿರುವ ಹೇಮಾವತಿ ನದಿ ಸೇತುವೆಯನ್ನು ಕಾಪಾಡಬೇಕು ಎಂದು ಕಟ್ಟಹಳ್ಳಿ ಹಾಗೂ ಕಟ್ಟೇಕ್ಯಾತನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಂದೆರಡು ದಿನಗಳಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ ದಂಧೆಕೋರರ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸದಿದ್ದರೆ ಕೆ.ಆರ್.ಪೇಟೆ ಪಟ್ಟಣದ ತಾಲೂಕು ಆಡಳಿತ ಕಾರ್ಯಸೌಧದ ಮುಂಭಾಗದಲ್ಲಿ ಎರಡೂ ಗ್ರಾಮಗಳ ಜನರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ