ಅಪ್ರತಿಮ ಶಿವಭಕ್ತ ರಾವಣ ಮತ್ತು ಆತ್ಮಲಿಂಗ

Upayuktha
0

ರಾಕ್ಷಸೇಂದ್ರ ರಾವಣನು ಅಪ್ರತಿಮ ಶಿವ ಭಕ್ತನಾಗಿದ್ದನು. ನಿತ್ಯ ಕರ್ಮಗಳನ್ನು ಪೂರೈಸಿ ಶಿವ ಪೂಜೆಯನ್ನು ಮಾಡದೆ ಹನಿ ನೀರನ್ನು ಸೇವಿಸದವನು. ತಾಯಿಯ ಬಯಕೆಯಂತೆ ಆತ ತನಗೆ ದೇವ, ದಾನವರಿಂದ ಮರಣ ಬಾರದಂತೆ ವರವನ್ನು ಪಡೆಯಲು ಶಿವ ಮಹದೇವನನ್ನು ಕುರಿತು ತಪಸ್ಸನ್ನ ಆಚರಿಸಿದನು.

ಈ ಶಿವನೋ ಮೊದಲೇ ಭಕ್ತ ಪ್ರಿಯ... ರಾವಣನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದ ಆತ ರಾವಣನಿಗೆ ಆತ ಬಯಸಿದಂತೆ ವರವನ್ನು ನೀಡಿ ಆತನಿಗೆ ಆತ್ಮ ಬಲವನ್ನು ತುಂಬಲು ತನ್ನ ಆತ್ಮ ಲಿಂಗವನ್ನೇ ನೀಡಿದ. ಆದರೆ ಆತ್ಮಲಿಂಗವನ್ನು ನೀಡಲು ಒಂದು ಶರತ್ತನ್ನು ವಿಧಿಸಿದ್ದ ಶಿವ. ಎಲ್ಲಿಯೂ ಆತ್ಮಲಿಂಗವನ್ನು ಕೆಳಕ್ಕಿಳಿಸಬಾರದು. ಹಾಗೇನಾದರೂ ಕೆಳಕ್ಕೆ ಇಳಿಸಿದರೆ ಆ ಆತ್ಮಲಿಂಗವು ಮತ್ತೆ ಭೂಮಿಯನ್ನು ಬಿಟ್ಟು ಬರಲಾರದು ಎಂಬುದೇ ಆ ಶರತ್ತು.


ಆಕಾಶದಲ್ಲಿ ನಿಂತು ನೋಡುತ್ತಿದ್ದ ದೇವತೆಗಳು ಈ ವಿದ್ಯಮಾನದಿಂದ ಭಯಭೀತರಾದರು. ಈಗಾಗಲೇ ರಾವಣನ ಉಪಟಳದಿಂದ ಬೇಸತಿದ್ದ ಇಂದ್ರ ಮತ್ತವನ ಪರಿವಾರದವರು ಸಂಕಷ್ಟಹರ ಗಣಪತಿಯ ಮೊರೆ ಹೋದರು. ವಿಘ್ನನಿವಾರಕನಾದ ಗಣಪತಿಯು ಅವರಿಗೆ ಈ ಕಷ್ಟದಿಂದ ಪಾರಾಗಲು ಸಹಾಯ ಮಾಡುವೆನೆಂಬ ಭರವಸೆಯನ್ನು ನೀಡಿದನು.


ಮೊದಲೇ ಕ್ರೂರಿ ರಾಕ್ಷಸನಾದ ರಾವಣನು ಮತ್ತಷ್ಟು ಅಟ್ಟಹಾಸದಿಂದ ಮೆರೆಯುತ್ತಾ ಶಿವನ ಆತ್ಮ ಲಿಂಗವನ್ನು  ಕೈಯಲ್ಲಿ ಹಿಡಿದುಕೊಂಡು ಸ್ವರ್ಣ ಲಂಕೆಗೆ ತೆರಳುತ್ತಿದ್ದ.

ಏತನ್ಮಧ್ಯೆ ಸಮುದ್ರ ತೀರದಲ್ಲಿ ಅವನು ಸಾಗುವಾಗ ಸಂಧ್ಯಾಕಾಲವಾಯಿತು. ಸಂಧ್ಯಾವಂದನೆ ಮಾಡುವುದನ್ನು ಎಂದಿಗೂ ತಪ್ಪಿಸದ ರಾವಣನು ಧರ್ಮಸಂಕಟಕ್ಕೀಡಾದನು. ಆತ್ಮಲಿಂಗವನ್ನು ಕೆಳಗಿಳಿಸಲಂತೂ ಸಾಧ್ಯವಿಲ್ಲ.. ಹಾಗಾದರೆ ಸಂಧ್ಯಾ ವಂದನೆಯನ್ನು ಹೇಗೆ ಮಾಡುವುದು, ಅರ್ಘ್ಯ ಬಿಡುವುದು ಹೇಗೆ ಎಂಬ ಸಂದಿಗ್ದದಲ್ಲಿರುವಾಗಲೇ ಆತನಿಗೆ ಪುಟ್ಟ ಬ್ರಾಹ್ಮಣ ಬಾಲಕನು ಕಂಡನು. ತಕ್ಷಣವೇ ಆ ಬಾಲಕನನ್ನು ಹತ್ತಿರ ಕರೆದು ನಾನು ಸಂಧ್ಯಾವಂದನೆಯನ್ನು ಮಾಡಿ ಬರುವೆ. ಅಲ್ಲಿಯವರೆಗೆ ಈ ಆತ್ಮಲಿಂಗವನ್ನು ಹಿಡಿದುಕೊಳ್ಳುವೆಯಾ, ಯಾವುದೇ ಕಾರಣಕ್ಕೂ ನೆಲಕ್ಕೆ ತಾಕಿಸಬಾರದು ಎಂದು ಕೇಳಿಕೊಂಡನು. ಇದಕ್ಕುತ್ತರವಾಗಿ ಬಾಲಕ ರೂಪಿಯಾದ ವಿಘ್ನೇಶ್ವರನು ಚಾಣಾಕ್ಷತನದಿಂದ ಖಂಡಿತವಾಗಿಯೂ ಹಿಡಿದುಕೊಳ್ಳುವೆ ಆದರೆ ನೀನು ಬೇಗನೆ ವಾಪಸಾಗಬೇಕು. ನೀನು ಬೇಗನೆ ಬರದೇ ಹೋದ ಪಕ್ಷದಲ್ಲಿ ನನ್ನ ಕೈ ಸೋತರೆ ನಾನು ಮೂರು ಬಾರಿ ನಿನ್ನನ್ನು ಕೂಗಿ ಕರೆಯುವೆ ಅಷ್ಟರೊಳಗೆ ನೀನು ಬರದಿದ್ದರೆ ನಾನು ಲಿಂಗವನ್ನು ಕೆಳಗೆ ಇಡುವೆ ಎಂದು ಹೇಳಿದ. ಖಂಡಿತವಾಗಿಯೂ ಬೇಗನೆ ಬರುವೆ ಎಂದು ವಾಗ್ದಾನವನ್ನಿತ್ತ ರಾವಣನು ಆತ್ಮಲಿಂಗವನ್ನು ಬಾಲಕನ ಕೈಯಲ್ಲಿಟ್ಟು ಹೊರಟು ಹೋದನು.


ರಾವಣನು ಸಂಧ್ಯಾವಂದನೆಯನ್ನು ಮಾಡುತ್ತಿರುವಾಗ ಬಾಲಕರೂಪಿ ವಿನಾಯಕನು ಎರಡು ಬಾರಿ ಕೇಳಿಯೂ ಕೇಳಿಸದ ಹಾಗೆ ರಾವಣನನ್ನು ಕೂಗಿ ಕರೆದನು. ಇನ್ನೇನು ರಾವಣನು ಅರ್ಘ್ಯವನ್ನು ಬಿಡುತ್ತಿರುವಾಗ ಆತ್ಮಲಿಂಗವನ್ನು ಸಮುದ್ರದ ತಟದಲ್ಲಿ ನೆಲದ ಮೇಲೆ ಇರಿಸಿಬಿಟ್ಟ ಆ ಬಾಲಕ.


ಸಂಧ್ಯಾ ವಂದನೆ ಮುಗಿಸಿ ಮರಳಿ ಬಂದ ರಾವಣ ನೋಡಿದರೆ ಪುಟ್ಟ ಬಾಲಕ ಆತ್ಮಲಿಂಗವನ್ನು ನೆಲದ ಮೇಲೆ ಇರಿಸಿ ಬಿಟ್ಟಿದ್ದಾನೆ... ಅತ್ಯಂತ ಬಲಶಾಲಿಯಾದ ರಾವಣನು ಪ್ರಯಾಸದಿಂದ ಆತ್ಮಲಿಂಗವನ್ನು ಕೀಳಲು ಯತ್ನಿಸಿದ. ಅವನೆಷ್ಟೇ ಪ್ರಯತ್ನ ಪಟ್ಟರೂ ಆತ್ಮಲಿಂಗವು ಮೇಲಕ್ಕೆ ಬರಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿದ ರಾವಣನ ಕೈಗೆ ದೊರೆತದ್ದು ಆತ್ಮಲಿಂಗದ ಮೂರು ಚೂರುಗಳು ಮಾತ್ರ. ಕೋಪದಿಂದ ತನ್ನ ಕೈಗೆ ದೊರೆತ ಆತ್ಮ ಲಿಂಗದ ಮೂರು ತುಂಡುಗಳನ್ನು ರಾವಣನು ಮೂರು ದಿಕ್ಕಿಗೆ ಎಸೆದು ನಿರಾಸೆಯಿಂದ ಲಂಕೆಗೆ ಹಿಂತಿರುಗಿದನು. ದೇವತೆಗಳ ಉಪಾಯ ಫಲಿಸಿತು.


ಇತ್ತ ರಾವಣನು ಎಸೆದ ಆತ್ಮಲಿಂಗದ ಮೂರು ತುಂಡುಗಳು ಇರುವ ಜಾಗದಲ್ಲಿ ಶಿವನ ದೇವಾಲಯಗಳನ್ನು ಸ್ಥಾಪಿಸಲಾಗಿದೆ. ಸಮುದ್ರ ತೀರದಲ್ಲಿರುವ ಆತ್ಮಲಿಂಗಕ್ಕೆ ದೇವಸ್ಥಾನವನ್ನು ಕಟ್ಟಿದ್ದು ಇದು ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದೆ. ಅತ್ಯಂತ ಪವಿತ್ರ ಪುಣ್ಯಕ್ಷೇತ್ರವಾಗಿರುವ ಈ ಸ್ಥಳವನ್ನು ಗೋಕರ್ಣ ಎಂದು ಕರೆಯುತ್ತಾರೆ. ಈ ಸ್ಥಳವು ಗೋವಿನ ಕಿವಿಯನ್ನು ಹೋಲುವಂತಹ ಪ್ರಾಕೃತಿಕತೆಯನ್ನು ಹೊಂದಿರುವುದರಿಂದ ಈ ಸ್ಥಳಕ್ಕೆ ಗೋಕರ್ಣ ಎಂದು ಕರೆದಿದ್ದಾರೆ.


ವಿಜಯನಗರ ಸಾಮ್ರಾಜ್ಯದ ಭಾಗವಾದ ಕದಂಬ ವಂಶದ ರಾಜಾ ಮಯೂರವರ್ಮನು ಇಲ್ಲಿ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಮುಂದೆ ರಾಣಿ ಚೆನ್ನಮ್ಮ ಮತ್ತು ಆಕೆಯ ಮಗ ಸೋಮಶೇಖರನ ಆಳ್ವಿಕೆಯ ಸಮಯದಲ್ಲಿ ಈ ದೇವಾಲಯಕ್ಕೆ ಕುಂದಾಪುರದ ವಿಶ್ವೇಶ್ವರಯ್ಯ ಎಂಬ ವ್ಯಕ್ತಿ ಚಂದ್ರ ಶಾಲೆ ಮತ್ತು ನಂದಿಮಂಟಪವನ್ನು ನಿರ್ಮಿಸಿದರು.


ಆತ್ಮ ಲಿಂಗವನ್ನು ಮಹಾಬಲೇಶ್ವರ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಆತ್ಮಲಿಂಗವನ್ನು ಗೋಕರ್ಣದಲ್ಲಿ ಸ್ಥಾಪಿಸಿದ ವಿಘ್ನೇಶ್ವರನ ದೇವಸ್ಥಾನವು ಗೋಕರ್ಣದಲ್ಲಿದ್ದು ಕಡ್ಡಾಯವಾಗಿ ಭಕ್ತರು ಈ ಎರಡು ದೇಗುಲಗಳಲ್ಲಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.


- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top