ಜೀವನವು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ. ಜೀವನ ಸುಂದರ. ಇದಕ್ಕೆ ಕಷ್ಟ - ಸುಖ ಎರಡು ಭಾಗಗಳು. ಅವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದರ ನಂತರ ಒಂದಾಗಿ ಬರುತ್ತದೆ. ಅದಕ್ಕೆ ಸಮಾಧಾನವೇ ಔಷಧಿ.
ಜೀವನವೆಂಬುದು ಆಳವಾದ ಸಾಗರವಿದ್ದಂತೆ . ಅದನ್ನು ಈಜಿ ದಡ ಸೇರುವವರು ಕೆಲವೇ ಕೆಲವು ಮಂದಿ. ಹೌದು ಸ್ನೇಹಿತರೇ ಜೀವನವೆನ್ನುವುದು ಒಂದು ಸವಾಲು . ಜೀವನವೆಂಬ ಪಯಣದಲ್ಲಿ ನಾವು ಸುಖ - ದುಃಖ, ನೋವು - ನಲಿವು ಎಲ್ಲವನ್ನೂ ಎದುರಿಸಬೇಕಾಗುತ್ತದೆ . ನಮ್ಮ ಸಮಾಜದ ವ್ಯಕ್ತಿತ್ವ ಹೇಗೆಂದರೆ "ಶರಣರ ಗುಣವನ್ನು ಮರಣದಲ್ಲಿ ಕಾಣು" ಎಂಬಂತೆ. ಏಕೆಂದರೆ ವ್ಯಕ್ತಿ ತೀರಿಕೊಂಡ ಮೇಲೆ ಆತ ಉಳಿಸಿ ಹೋದ, ಬೆಳೆಸಿಕೊಂಡ ವ್ಯಕ್ತಿತ್ವದ ಆಧಾರದ ಮೇಲೆ ಆತನ ಗುಣವನ್ನು ಅಳೆಯುತ್ತಾರೆ. ಆದರೇ ಅದೇ ವ್ಯಕ್ತಿ ಬದುಕಿದ್ದಾಗ ತನ್ನ ಜೀವನದಲ್ಲಿ ಮಾಡಿದ ಒಂದು ತಪ್ಪನ್ನೇ ಹಿಡಿದುಕೊಂಡು ಅವನ ಜೀವನದ ಅಂತ್ಯದವರೆಗೂ ಹಿಯಾಳಿಸುತ್ತಲೇ ಇರುತ್ತಾರೆ. ಈ ಸಮಾಜ ಎಂಬ ಬೇಲಿಯೊಳಗೆ ಸಿಕ್ಕಿಕೊಂಡ ಜೀವಿಗಳು ನಾವು. ಇಲ್ಲಿ ಒಳ್ಳೆಯ ಕೆಲಸಗಳು ಕೂಡ ತಪ್ಪಾಗಿಯೇ ಪ್ರತಿಬಿಂಬಿಸುತ್ತವೆ.
ಕಾಲುಗಳನ್ನು ಒದ್ದೆ ಮಾಡಿಕೊಳ್ಳದೆ ಸಮುದ್ರ ದಾಟಬಹುದು, ಆದರೆ ಕಣ್ಣುಗಳನ್ನು ಒದ್ದೆ ಮಾಡಿಕೊಳ್ಳದೆ ಜೀವನ ಸಾಗಿಸಲು ಸಾಧ್ಯವಿಲ್ಲ ನೆನಪಿರಲಿ...! ಹೌದು ಸ್ನೇಹಿತರೇ, ನಾವು ಯಾವತ್ತೂ ಸಮಾಜ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತದೆ ಎಂದು ತಲೆ ಕೆಡಿಸಿಕೊಳ್ಳಬಾರದು. ಏಕೆಂದರೆ ಜೀವನದಲ್ಲಿ ಯಶಸ್ಸಿನ ಗುರಿ ಎಂಬುದು ದಾರಿ ತೋರುವ ಗುರುವಿನಂತೆ. ಸಾಧಿಸುವ ಛಲ ದೊರೆಯುವುದು ಜೀವನದ ಒಂದು ಪ್ರಮುಖ ಗುರಿಯಿಂದ ಆದರೆ ಗುರಿ ಸಾಧನೆಗೆ ತೊಡಕುಗಳು ಇದ್ದೇ ಇರುತ್ತದೆ. ಸಮಾಜದ ಮಾತಿಗೆ ತಲೆಕೆಡಿಸಿಕೊಳ್ಳದೆ ನಮ್ಮ ಚಿತ್ತ ಯಶಸ್ಸಿನ ಗುರಿಯತ್ತ ಸಾಗಬೇಕು.
ಹುಟ್ಟು ಮತ್ತು ಸಾವು ಇವುಗಳ ನಡುವಿನ ಬದುಕೇ ಜೀವನ. ಒಬ್ಬ ವ್ಯಕ್ತಿ ಸತ್ತಾಗ ಆತ ಮಾಡಿದ ಸಾಧನೆಗಳೆಲ್ಲ ಚರ್ಚೆಗೆ ಬರುತ್ತವೆ. ಇಷ್ಟು ಬೇಗ ಸಾಯಬಾರದಿತ್ತು , ಎಂದೂ ಕೆಡುಕು ಬಯಸಿದವನಲ್ಲ, ಇಂಥವರು ಇದ್ಧಿದ್ರಿಂದ್ದಾನೆ ಮಳೆ ಬೆಳೆ ಎಲ್ಲ ಆಗುತ್ತಿರುವುದು, ಮುಂತಾದ ಮಾತುಗಳು ಪುಂಖಾನುಪುಂಖವಾಗಿ ಹೊರಬರುತ್ತವೆ. ಅದೇ ಸಮಾಜದಲ್ಲಿ ಯಾವುದೇ ಛಾಪು ಮೂಡಿಸದೇ ಸತ್ತರೆ ಅಥವಾ ಸಮಾಜಕ್ಕೆ ಬೇಡದವನಾಗಿ ಸತ್ತಿದ್ದರೆ.... ಏನೇನಂತಾರೆ ಅಂತ ನೀವೇ ಊಹಿಸಿ....
ನಾಳೆ ಎಂದರಾಗದು, ಮುಂದೆ ಎಂದರಾಗದು, ಇಂದೆ ನೀನು ನಿರ್ಣಯಿಸಬೇಕು, ಇಂದೆ ಎತ್ತಿ ಪೊರೆಯಬೇಕು ಬೆಂಕಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ದೊರೆಯುವುದೇನು ಬೂದಿಯಲ್ಲವೇ...? ನೀರಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ಲಭಿಸುವುದೇನು ಹೆಣವಲ್ಲವೇ...? ಆದ್ದರಿಂದ ನಿನ್ನ ಜೀವನದ ಗುರಿಯ ಆಯ್ಕೆಯನ್ನು ಇಂದೇ ಮಾಡು, ಗುರಿಯ ಯಶಸ್ಸಿಗೆ ಇಂದೇ ಪ್ರಯತ್ನದ ಹೆಜ್ಜೆ ಇಡು.
-ವನಶ್ರೀ ಗೌಡ ಬಳ್ಪ
ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ