ಮರೆವಿನ ಗೋಳು: ಬೀಗದ ಕೈ ಅವಾಂತರ

Upayuktha
0


ಟೆನ್ಶನ್ ಅಥವಾ ಒತ್ತಡ... ಇದು ಯಾವ ಕಾಲದಲ್ಲಿ ಯಾರಿಗೆ ಎಲ್ಲಿ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲವೂ ಸರಿಯಾಗಿದ್ದು ಒಂದು ಹಂತದ ನಿಶ್ಚಿಂತೆಯಲ್ಲಿರುವಾಗ ಅದ್ಯಾವುದೋ ಮಾಯೆಯಂತೆ ಧುತ್ತೆಂದು ಎದುರು ನಿಂತು ಹಿಂಡಿ ಹಿಪ್ಪೆ ಮಾಡಿ ಬಿಡುವ ಶಕ್ತಿ ಈ ಒತ್ತಡಕ್ಕಿದೆ ಎಂದಾದರೆ ಇದನ್ನು ಉಪೇಕ್ಷೆ ಮಾಡಲುಂಟೇ? ಹಾಗಾದರೆ ಇದೊಂದು ಸತ್ಯ ಪ್ರಸಂಗವನ್ನು ನಿಮ್ಮ ಮುಂದಿಡುತ್ತೇನೆ.. 


ಜುಲೈ ಮೂರು.. ನನ್ನ ಮಗಳ ಮದುವೆ ಸಂಭ್ರಮ. ಬೆಳಗ್ಗಿನ ಆರುವರೆ ಗಂಟೆಗೆ ನಾವು ಮದುವೆ ಹಾಲಿನಲ್ಲಿರಬೇಕು. ಏಳು ಕಾಲಕ್ಕೆ ಹುಡುಗನ ಕಡೆಯ ದಿಬ್ಬಣ ಬರುವುದು. ಅವರನ್ನು ಸ್ವಾಗತಿಸಲು ವಾಲಗದವರ ಜತೆ ನಮ್ಮ ಬಂಧು ಬಳಗದವರೆಲ್ಲ ಸೇರಬೇಕು. ಹಿಂದಿನ ದಿನದ ತಯಾರಿಗಳು ಎಷ್ಟೇ ಇದ್ದರೂ ಕೊನೆ ಕ್ಷಣದ ತಯಾರಿಗಳು ಇದ್ದೇ ಇರುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಅವಸರ ಅವಸರ ಮಾಡಿ ಮನೆಯಿಂದ ಆರು ಗಂಟೆಗೆ ಹೊರಟು ಬೆಳ್ತಂಗಡಿ ಮಂಜುನಾಥ ಕಲಾ ಭವನಕ್ಕೆ ಆರುವರೆಗೆ ತಲುಪಿದೆವು. ಉತ್ಸಾಹ, ಆನಂದ, ಸಂಭ್ರಮದಿಂದ ಎಲ್ಲ ಕಾರ್ಯಕ್ರಮಗಳೂ ಸುಂದರವಾಗಿ ಆಗಬೇಕೆಂಬ ಒಂದೇ ಗುರಿ ಎಲ್ಲರಲ್ಲೂ ತುಂಬಿತ್ತು. ಸರಿ.. ಕಾರಿನಿಂದ ಇಳಿದು ಮದುವೆಯ ಹಾಲಿಗೆ ಹೋಗಿ ನಮಗೆಂದೇ ಕೊಟ್ಟಂಥ ವಧುವಿನ ಕೋಣೆಗೆ ಹೋಗುವ ಬಾಗಿಲಿನ ಬೀಗ ತೆರೆಯಲು ಚಾವಿಯನ್ನು ಹುಡುಕಿದಾಗ ಯಾರಲ್ಲಿ ಚಾವಿ ಇದೆ ಎಂದು ಗೊತ್ತಾಗದೆ ಪರಸ್ಪರ ವಿಚಾರಿಸತೊಡಗಿದೆವು. ಯಾರಾದರೊಬ್ಬರಲ್ಲಿ ಖಂಡಿತ ಇದೆ ಎಂಬ ವಿಶ್ವಾಸವಿದ್ದುದರಿಂದ ಸಮಸ್ಯೆ ಎಂದು ಅನ್ನಿಸಲಿಲ್ಲ. ಆದರೆ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸತೊಡಗಿತು. ಅಂತು ಮದುವೆ ಹಾಲಿಗೆ ಬಂದವರಲ್ಲಿ ಯಾರಲ್ಲೂ ಚಾವಿ ಇರಲಿಲ್ಲ. ಛೇ! ಇನ್ನೇನು ಮಾಡೋಣ? ಮನೆಯಲ್ಲಿ ಇಟ್ಟದ್ದಾದರು ಎಲ್ಲಿ ಇಟ್ಟವರು ಯಾರು ಎಂಬಲ್ಲಿಗೆ ಬಂದಾಗ ನನ್ನ ತಂಗಿ ವೀಣಾ ದೇವರ ಕೋಣೆಯಲ್ಲಿಟ್ಟಿದ್ದಳು. ಬೆಳಗ್ಗೆ ದೇವರಲ್ಲಿ ಪ್ರಾರ್ಥನೆ ಮಾಡಿ ಹೊರಡುವಾಗ ಅದು ಕಣ್ಣಿಗೆ ಕಂಡೇ ಕಾಣುತ್ತದೆ. ಅಲ್ಲಿಲ್ಲಿ ಇಟ್ಟರೆ ಮರೆತು ಹೋದರೂ ಹೋಗಬಹುದೆಂಬ ಸದುದ್ದೇಶದಿಂದ ಈ ರೀತಿಯಲ್ಲಿಟ್ಟರೂ ಯಾಕೆ ಮರೆತು ಹೋಯತು..? ಚರ್ಚೆ ಉಪಯೋಗವಿಲ್ಲ.  ಹ, ಅದು ಏನಾದರಾಗಲಿ ವರ್ತಮಾನದಲ್ಲಿ ಚಾವಿಯ ಹೊರತಾಗಿ ಬೇರ್ಯಾವ ವಿಶ್ಲೇಷಣೆಯ ಅಗತ್ಯವೂ ಇಲ್ಲ. ಮನೆಯಿಂದ ಹೊರಡುವವರು ಇನ್ನಷ್ಟು ಜನರಿದ್ದುದರಿಂದ ಕೂಡಲೇ ಮನೆಗೆ ಫೋನು ಮಾಡಿ ವಿಚಾರಿಸಿದರೆ ಎಲ್ಲೂ ಇಲ್ಲವೆಂದೇ ಉತ್ತರ ಬಂದಿತು. 


ಗಂಟೆ ಮುಂದೋಡುತ್ತಿದೆ ಇನ್ನೇನು ಹತ್ತಿಪ್ಪತ್ತು ನಿಮಿಷದಲ್ಲಿ ಗಂಡಿನ ಕಡೆಯವರು ಬರುತ್ತಾರೆ. ಅವರಿಗೆ ಕೊಡುವ ಉಗ್ರಾಣದ ಚಾವಿ ಇನ್ನೂ ಸಿಗುವ ಹಾಗೆ ಕಾಣುವುದಿಲ್ಲ. ಛೆ! ಛೇ! ಎಲ್ಲರೊಳಗೂ ಒತ್ತಡವೊಂದು ಹೊಕ್ಕಿ ಗಳಿಗೆ ಗಳಿಗೆಗೂ ಬೃಹದಾಕಾರ ತಾಳುತ್ತಿತ್ತು. ಅಂತೆಯೇ ಬೀಗದ ಇನ್ನೊಂದು ಚಾವಿ ಆಫೀಸಿನೊಳಗಿರುತ್ತದೆ. ಅದನ್ನಾದರೂ ಕೇಳೋಣವೆಂದರೆ ವಾಚ್ಮೆನ್ ಮನೆಗೆ ಹೋಗಿದ್ದ. ಕೂಡಲೇ ಫೋನ್ ಮಾಡಿದಾಗ ಆತ 'ನಮ್ಮಲ್ಲಿ ಒಂದೇ ಚಾವಿ ಇರುವುದು ಇನ್ನೊಂದು ಮ್ಯಾನೇಜರ್ ಕೈಯಲ್ಲಿರುತ್ತದೆ' ಎನ್ನಬೇಕೆ!!. ಸರಿ ಮ್ಯಾನೇಜರನಾದರು ಬರಬಹುದೆ ಎಂದರೆ ಆತ ನಮ್ಮ ಮದುವೆ ದಿನ ತಾನಿಲ್ಲವೆಂದು ಮೊದಲೇ ಹೇಳಿದ್ದರಿಂದ ಆತನಲ್ಲಿ ಕೇಳಿಯೂ ಪ್ರಯೋಜನವಿಲ್ಲ. ಇಷ್ಟೆಲ್ಲ ಆಗುವಾಗ ಇನ್ನು ಬರಿದೆ ಹತ್ತು ನಿಮಿಷ ಮಾತ್ರ ಉಳಿದಿದೆ. ಹಾಗಾದರೆ ಚಾವಿ ಕಳೆದುಹೋದದ್ದಾದರೂ ಎಲ್ಲಿ? ಇತ್ತ ಬೆಳಿಗ್ಗೆ ಮನೆಯಲ್ಲಿ ದೇವರೆದುರು ಒರೆಸಿ, ರಂಗೋಲಿ ಹಾಕಿ ಪೂಜೆ ಮಾಡಿದವನು ನಾನು. ಅಲ್ಲೆಲ್ಲಾದರೂ ಚಾವಿ ಇರುತ್ತಿದ್ದರೆ ನನಗೆ ಸಿಗಬೇಕಿತ್ತು. ಸ್ವಚ್ಛ ಮಾಡುವಾಗ ನನಗೆ ಊದುಬತ್ತಿ ಉರಿದುಳಿದ ಕಡ್ಡಿ ಕೂಡಾ ಸಿಗುವುದಾದರೆ ಐದಾರು ಚಾವಿಗಳ ದೊಡ್ಡ ಗೊಂಚಲು ಕಾಣದೆ ಇರಲು ಸಾಧ್ಯವೇ ಇಲ್ಲ. ಆದ್ದರಿಂದ ನನ್ನ ತರ್ಕ ದೇವರೆದುರು ಚಾವಿ ಇರಲಿಲ್ಲವೆಂದೇ. ಆದರೆ ತಂಗಿ ವೀಣಾ ತಾನೇ ಇಟ್ಟಿದ್ದೇನೆ ಎನ್ನುವಾಗ ಹಾಗೂ ಬೆಳಗ್ಗೆ ಚಾವಿಯನ್ನು ನೋಡಿದ್ದೇನೆ ಎನ್ನುವಾಗ ಸಂಶಯಕ್ಕೂ ಕಾರಣವಿಲ್ಲ. ಏನು ಮಾಡೋಣ ಮರ್ಯಾದಿ ಪ್ರಶ್ನೆ, ಬೇಜವಾಬ್ದಾರಿಯ ಕಳಂಕ, ಎಲ್ಲದಕ್ಕೂ ಉತ್ತರ ನಾನೇ ಹೇಳಬೇಕಾದ ಅನಿವಾರ್ಯತೆ....  ಒಂದು ಕ್ಷಣದ ವಿಸ್ಮೃತಿ ಅದೆಂಥ ಸನ್ನಿವೇಶವನ್ನು ಸೃಷ್ಟಸಿತು... ಇನ್ನು ಕೊನೆಯ ಪ್ರಯತ್ನವೆಂದರೆ ಬೀಗವನ್ನು ಒಡೆಯುವುದು. ಆದರೆ ಅದು ಕೂಡ ಬೇಗನೇ ಆಗುವ ಪ್ರಕ್ರಿಯೆಯಲ್ಲ. ಮ್ಯಾನೇಜರರ ಒಪ್ಪಿಗೆ ಬೇಕು.  ದೊಡ್ಡ ದೊಡ್ಡ ಬೀಗಗಳಾದುದರಿಂದ ಬೀಗ ಒಡೆಯುವ ಸಾಧನಗಳು ಮತ್ತು ಅದರಲ್ಲಿ ಪಳಗಿದವರು ಬೇಕು. ಬೀಗ ಒಡೆಯುವಾಗ ದಾರಬಂಧ, ಬಾಗಿಲಿಗೆ ತೊಂದರೆಯಾಗದಂತೆ ಎಚ್ಚರವಿರಬೇಕು. ಎಲ್ಲದಕ್ಕಿಂತಲೂ ಮುಖ್ಯವಾಗಿ ಕಾಲ ಓಡುವುದನ್ನು ನಿಲ್ಲಿಸಬೇಕು. 


ಆಗ ಯಾರೋ ಒಬ್ಬರು ಹೇಳಿದರು 'ನನ್ನ ಕಾರಲ್ಲಿಟ್ಟಿದ್ದೇನೆ' ಎಂದು. ಕೂಡಲೇ ಹೋಗಿ ಡ್ಯಾಶ್ಬೋರ್ಡೆಲ್ಲ ಹುಡುಕಿದರೂ ಚಾವಿ ಸಿಗಲಿಲ್ಲ. ಅಲ್ಲಿಗೆ ಎಲ್ಲ ಆಶೆಗಳೂ ಕೊನೆಗೊಂಡವು. ನನ್ನದು ಸಾಮಾನ್ಯಕ್ಕೆ ಸೋಲೊಪ್ಪಿಕೊಳ್ಳುವ ಜಾಯಮಾನವಲ್ಲ. ಆದರೆ ಆ ಕ್ಷಣ ನನಗೂ ಒತ್ತಡ ಏರುತ್ತಿದ್ದಂತೆ ಅಳುವೇ ಬಂದು ಬಿಟ್ಟಿತು. ದೇವರೇ ಯಾಕೆ ಈ ಅಗ್ನಿ ಪರೀಕ್ಷೆ? ಇಷ್ಟೊಂದು ಸುಂದರವಾದ ಕ್ಷಣಗಳು ಅಗ್ನಿ ಪರ್ವತ ಸಿಡಿಯುವಂಥ ಒತ್ತಡಕ್ಕೆ ಯಾಕೆ ಒಳಪಡುವಂತಾಯ್ತು? ಆದದ್ದಾಗಲಿ ಎಂದು ಸುಮ್ಮನೆ ಕೂರಲುಂಟೆ? ಹಾಗೆಂದು ಕಾಲವನ್ನು ನಿಲ್ಲಿಸಲುಂಟೇ? ಇಲ್ಲ ಇಲ್ಲ ಇದು ಸುಮ್ಮನೆ ಕೂರುವಂಥ ಸಮಯವೂ ಅಲ್ಲ, ತಪ್ಪು ನಿರ್ಧಾರ ಕೈಗೊಳ್ಳುವ ಸಂದರ್ಭವೂ ಅಲ್ಲ. ಏನೇ ಇರಲಿ ಇನ್ನೊಂದು ಸಲ ಕಾರನ್ನು ಕೂಲಂಕುಷವಾಗಿ ನೋಡಿ ಸಮಸ್ಯೆಯ ಪರಿಹಾರಕ್ಕೆ ಮುಂದಾಗೋಣವೆಂದು ಓಡಿದೆ ಕಾರಿನೆಡೆಗೆ. ಪುನಹ ಮೊದಲಿಂದ ಡ್ಯಾಶ್ಬೋರ್ಡೆಲ್ಲ ಹುಡುಕಿ ಕಾರಿನ ಬಾಗಿಲಿಗಿರುವ ನೀರಿಡುವ ಬದಿಗಳನ್ನೂ ಹುಡುಕತೊಡಗಿದೆ. ನೀರಿನ ಬಾಟಲಿಗಳನ್ನೂ ಎತ್ತಿ ಹುಡುಕಿದಾಗ ಅಲ್ಲಿ ಅಡಗಿಕೊಂಡಿತ್ತು ನೋಡಿ ಉಗ್ರಾಣಗಳ ಹಾಗೂ ನಮ್ಮೆಲ್ಲರ ಒತ್ತಡಗಳ ಚಾವಿ. ಅಲ್ಲಿಗೆ ಎಲ್ಲರ ಮನಸ್ಸಿನ ಜತೆ ಉಗ್ರಾಣಗಳ ಬಾಗಿಲುಗಳು ತೆರೆದುಕೊಂಡವು. ಬೆಟ್ಟವನ್ನೇ ಎತ್ತಿಕೊಂಡಂಥ ಅನುಭವವು ಕ್ಷಣ ಮಾತ್ರದಲ್ಲಿ ಹತ್ತಿಯಂತೆ ಹಗುರವಾಗಿ ತೇಲಿ ಹೋಯಿತು. ಈ ಒಂದು ಘಟನೆ ಹೇಗೆ ಅವಿಸ್ಮರಣೀಯವೋ ಅದಕ್ಕಿಂತಲೂ ಮದುವೆಯ ಎಲ್ಲ ಕಾರ್ಯಕ್ರಮಗಳೂ ನಾವೆಣಿಸಿದ್ದಕ್ಕಿಂತಲೂ ಸುಂದರವಾಗಿದ್ದು, ನಮ್ಮ ಆಮಂತ್ರಣಕ್ಕೆ ಓಗೊಟ್ಟು ಪ್ರೀತಿ ಅಭಿಮಾನದಿಂದ ಸಹಸ್ರಕ್ಕೂ ಅಧಿಕ ಮಂದಿ ಬಂದು ನಮ್ಮನ್ನು ಹಾರೈಸಿದ್ದು ಇನ್ನೂ ಅವಿಸ್ಮರಣೀಯ. 


ಇನ್ನು ಮೇಲಿನ ಒತ್ತಡಕ್ಕೆಲ್ಲ ಕಾರಣವೆಂದರೆ ಬರಿದೆ ಸ್ಥಾನಪಲ್ಲಟ. ಇಲ್ಲಿ ಏನಾಯಿತೆಂದರೆ ವೀಣಾ ಚಾವಿಗಳನ್ನು ಕೊಂಡು ಹೋಗಿ ದೇವರ ಮುಂದೆ ಇಟ್ಟದ್ದಾಳೆ, ಮರುದಿನ ಆದೇ ಚಾವಿಗಳನ್ನು ಗಡಿಬಿಡಿಯಲ್ಲಿ ಯಾರಲ್ಲೋ ಕಾರಲ್ಲಿ ಇಡಲೆಂದು ಕೊಟ್ಟಿದ್ದಾಳೆ, ಅದು ಕೈಯಿಂದ ಕೈಗೆ ಹೋಗಿ ನನ್ನ ಮಗಳು ನವಮಿಯ ಕೈಗೆ ಸಿಕ್ಕಿದೆ, ಅವಳು ಕಾರಿಗೆ ಹೋಗಿ ಬಲ ಬದಿಯ ಬಾಗಿಲು ತೆರೆದಿದ್ದಾಳೆ, ಬಲ ಬದಿಯಲ್ಲಿ ಡ್ಯಾಶ್ಬೋರ್ಡಿಲ್ಲದ ಕಾರಣ ಬಾಗಿಲಿನಲ್ಲಿರುವ ನೀರಿಡುವ ಜಾಗದಲ್ಲಿಟ್ಟಿದ್ದಾಳೆ, ನೀರಿನ ಬಾಟಲಿಯ ಜತೆ ಪೇಪರ್ ಇದ್ದುದರಿಂದ ಕಾರು ಚಲಿಸುವಾಗ ಅದು ತಳಕ್ಕೆ ಹೋಗಿದ್ದು ಮಾತ್ರವಲ್ಲ ಚಾವಿಯ ಕಿಲಕಿಲ ಶಬ್ದವೂ ನಿಂತು ಹೋಗಿದೆ. ಹಾಲಿನಲ್ಲಾದ ಈ ಗೊಂದಲಗಳೆಲ್ಲ ನವಮಿಗೆ ಗೊತ್ತಾದದ್ದು ಚಾವಿ ಸಿಕ್ಕಿದ ಮೇಲೆಯೇ. ಮೊದಲೇ ತಿಳಿದಿದ್ದರೆ ಅವಳೇ ತರುತ್ತಿದ್ದಳು. ಕೊನೆಗೆ ಈ ಘಟನೆಯ ಕೊನೆಯಾದದ್ದು ಎಲ್ಲರ ಒತ್ತಡಗಳಿಗೆ ತಾನೇ ಕಾರಣವೆಂದು ಅಪರಾಧಿ ಭಾವದಿಂದ ವೀಣಾ ತನ್ನ ಕಣ್ಣೀರಿನಿಂದ ಎಲ್ಲರ ಮನಸ್ಸನ್ನು ಮುಟ್ಟಿದ್ದರಿಂದ. ಇಲ್ಲಿ ಯಾರ ತಪ್ಪೂ ಇಲ್ಲ. ಯಾಕೆಂದರೆ ಎಲ್ಲರ ಉದ್ದೇಶವೂ ಒಳ್ಳೆಯದಾಗಬೇಕೆಂಬುದೇ ತಾನೆ. ಆದರೂ ಕೆಲವು ಸಂದರ್ಭಗಳಲ್ಲಿ ಇಂತಹ ಗೊಂದಲಗಳಾಗುವುದು ಸಹಜ. ತಾಳಿದವನು ಬಾಳಿಯಾನು ಮಾತ್ರವಲ್ಲ, ಶೀಘ್ರ ನಿರ್ಧಾರಗಳು ಪ್ರಮಾದಕ್ಕೆ ಕಾರಣವಾಗಬಹುದೆಂಬ ಪಾಠವೂ ಇದರಿಂದ ನಮಗಾಯಿತು...


- ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top