ಕಳೆದ ವರ್ಷ ಕೇಂದ್ರದ ಸರ್ಕಾರ ಪ್ಲಾಸ್ಟಿಕ್ ನಿಂದ ಆಗುವ ಮಾಲಿನ್ಯದ ಗಂಭೀರತೆ ಗಮನಿಸಿ ಪ್ಲಾಸ್ಟಿಕ್ ಸ್ಟಿಕ್‌ಗಳು, ಇಯರ್ ಬಡ್, ಬಲೂನ್‌ಗಳು, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್, ಐಸ್ಕ್ರೀಮ್ ಸ್ಟಿಕ್, ಪಾಲಿಸ್ಟೈರೀನ್ ಅಲಂಕಾರ, ಪ್ಲಾಸ್ಟಿಕ್ ಪ್ಲೇಟ್, ಕಪ್‌ಗಳು, ಗ್ಲಾಸ್, ಕಟ್ಲರಿಗಳಾದ ಫೋರ್ಕ್, ಚಮಚ, ಚಾಕು, ಸ್ಟ್ರಾಗಳು ಸೇರಿದಂತೆ ಹಲವು ವಸ್ತುಗಳನ್ನು ದೇಶಾದ್ಯಂತ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು, ಮತ್ತು ಅದರ ತಯಾರಿಕೆ, ಆಮದು, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿತ್ತು. ಅದು ನಿಜವಾಗಿಯೂ ಕಾರ್ಯರೂಪಕ್ಕೆ ಬಂದಿದೆ ಎಂಬುದೇ ಹಾಸ್ಯಾಸ್ಪದವಾಗಿದೆ.
ಕಾರಣ ನಿಷೇಧ ಅನ್ನುವುದು ಕೇವಲ ಕಾಗದ ಮೇಲೆ ಮಾತ್ರ ಜಾರಿಯಾಗಿದೆ. ನೆಪ ಮಾತ್ರ ನಗರ ಪಟ್ಟಣ ಪ್ರದೇಶಗಳಲ್ಲಿ ಸಣ್ಣಪುಟ್ಟ ಅಂಗಡಿಗಳ ಮೇಲೆ ದಾಳಿ ನೆಡೆಸಿ ದಂಡವಿದಿಸುವುದು ಒಂದು ರೀತಿಯ ಗುಬ್ಬಿಯ ಬ್ರಹ್ಮಾಸ್ತ್ರ ಪ್ರಯೋಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಿದ್ದಾರೆ. ಅದು ಕೆಲವು ದಿನಗಳಿಗೆ ಸಿಮೀತ. ಅದರೆ ಆದೇಶದ ಹಿಂದಿರುವ ಗಂಭೀರತೆಯನ್ನು, ಮುಂದಾಗುವ ಪರಿಣಾಮವನ್ನು ಆಡಳಿತ ವರ್ಗ, ಸಾರ್ವಜನಿಕರು ಅರಿಯದೇ ಹೋದದ್ದು ವಿಪರ್ಯಾಸ ಎಂದೇ ಹೇಳ ಬಹುದು.
ಇಂದು ಪ್ಲಾಸ್ಟಿಕ್ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಮುಂಜಾನೆಯ ಹಲ್ಲುಜ್ಜುವ ಬ್ರಷ್ನಿಂದ ಹಿಡಿದು, ದಿನವೆಲ್ಲಾ ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್, ರಾತ್ರಿ ಮಲುಗುವಾಗ ದೀಪ ಆರಿಸುವ ಸ್ವಿಚ್—ಎಲ್ಲದರಲ್ಲೂ ಪ್ಲಾಸ್ಟಿಕ್ಕಿನ ಒಂದಲ್ಲಾ ಒಂದು ಅವತಾರವಿದೆ ಕಾಗದ, ಮರ, ಕಬ್ಬಿಣ ಇವೆಲ್ಲಕ್ಕಿಂತಲೂ ಪ್ಲಾಸ್ಟಿಕ್ ಬಹುಕಾಲ ಬಾಳುತ್ತದೆ. ಅಲ್ಲದೆ, ಇದನ್ನು ಉತ್ಪಾದಿಸುವುದು ಅಗ್ಗ ಮತ್ತು ಹೊತ್ತೊಯ್ಯಲು ಬಹಳ ಹಗುರ. ಇದು ನೀರಿನಲ್ಲಿ ನೆನೆಯುವುದಿಲ್ಲ, ಬಿಸಿಲಿನಲ್ಲಿ ಕರಗುವುದಿಲ್ಲ, ತುಕ್ಕು ಹಿಡಿಯುವುದಿಲ್ಲ ಮತ್ತು ಗೆದ್ದಲು ಹತ್ತುವುದಿಲ್ಲ! ಹಾಗಾಗಿ ನಾವು ಪ್ಲಾಸ್ಟಿಕ್ಕನ್ನು ಬಳಸಿದ್ದೇ ಬಳಸಿದ್ದು, ಎಸೆದಿದ್ದೇ ಎಸೆದಿದ್ದು. ಪ್ರವಾಸಿ ತಾಣಗಳನ್ನು ಬಿಟ್ಟರು ನಮ್ಮ ವಾಸಸ್ಥಳಗಳಲ್ಲೂ ಪ್ಲಾಸ್ಟಿಕ್ಕಿನ ಹಾವಳಿ ತಪ್ಪಿದ್ದಲ್ಲ.
ಪ್ಲಾಸ್ಟಿಕ್ಕಿನ ಅವಾಂತರ ಹೇಳತೀರದು. ರಸ್ತೆಗಳಲ್ಲಿ, ಮೋರಿಗಳಲ್ಲಿ, ಕೆರೆಕಟ್ಟೆಗಳಲ್ಲಿ—ಎಲ್ಲೆಲ್ಲಿಯೂ ಪ್ಲಾಸ್ಟಿಕ್ ಚೀಲಗಳ, ಬಾಟಲಿಗಳ ಹಾವಳಿ. ನಾವು ವಿಶ್ವದಾದ್ಯಂತ ಪ್ರತೀ ನಿಮಿಷ ಬರೋಬ್ಬರಿ ಒಂದು ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಗೂ ಒಂಬತ್ತು ಮಿಲಿಯನ್ ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ಬಿಸಾಡುತ್ತೇವಂತೆ. ನಾವು ಉತ್ಪಾದಿಸುವ ಪ್ಲಾಸ್ಟಿಕ್ನಲ್ಲಿ ಹೆಚ್ಚಿನ ಮಟ್ಟದ ಪ್ಲಾಸ್ಟಿಕ್ ವಸ್ತುವನ್ನು ಒಂದು ಬಾರಿ ಬಳಸಿ ಎಸೆಯಲಾಗುತ್ತದೆ.
ಅಭಿವೃದ್ಧಿಯ ಜೊತೆಜೊತೆಗೇ ಬೆಳೆದುಬಂದು ಅವನತಿಗೂ ಕಾರಣವಾಗುತ್ತಿರುವ ವಸ್ತು ಪ್ಲಾಸ್ಟಿಕ್. ಬಹಳಷ್ಟು ಪ್ಲಾಸ್ಟಿಕ್ ತ್ಯಾಜ್ಯವು ಕೊಳೆಯುವುದಿಲ್ಲ. ಬದಲಾಗಿ ಅವು ಮೈಕ್ರೋಪ್ಲಾಸ್ಟಿಕ್ ಎಂದು ಕರೆಯಲ್ಪಡುವ ಅತಿ ಸಣ್ಣ ಚೂರುಗಳಾಗಿ ಉಳಿಯುತ್ತವೆ. ನಾವು ದಿನನಿತ್ಯ ಬಳಸುವ ಪ್ಲಾಸ್ಟಿಕ್ ಚೀಲಗಳು, ವಸ್ತುಗಳು sಸಾವಿರಾರು ವರ್ಷಗಳಾದರೂ ಭೂಮಿಯಲ್ಲಿ ಕೊಳೆಯದೇ ಉಳಿದುಬಿಡುತ್ತವೆ. ಈ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಹೆಚ್ಚಿನವೆಂದರೆ ನಾವು ದಿನನಿತ್ಯ ಬಳಸುವ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಆಹಾರದ ಪ್ಯಾಕೇಜುಗಳು, ಸ್ಟ್ರಾಗಳು, ಮುಂತಾದ ವಸ್ತುಗಳು. ಇಂತಹ ಪ್ಲಾಸ್ಟಿಕ್ ತ್ಯಾಜ್ಯ ಹಲವಾರು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ನೀರು ಹರಿಯುವ ದಾರಿಯನ್ನು ಮುಚ್ಚಿ ಅದರಿಂದ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಬಹುದು. ನೀರಿನಲ್ಲಿ ಸೇರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಜಲಚರಗಳು ಆಹಾರವೆಂದು ಸೇವಿಸಿ ಪ್ರಾಣಹಾನಿಗೊಳಗಾಗುವ ಸಾಧ್ಯತೆಯಿರುತ್ತದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡುವುದರಿಂದ ವಿಷಕಾರಿ ಅನಿಲಗಳು ಉತ್ಪತ್ತಿಯಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಇದೇ ಗತಿಯಲ್ಲಿ ನಾವು ಮುಂದುವರೆದರೆ, ವಿಶ್ವ ಆರ್ಥಿಕ ಸಂಸ್ಥೆ (ವರ್ಲ್ಡ್ ಎಕನಾಮಿಕ್ ಫೋರಮ್)ನ ಒಂದು ವರದಿಯ ಪ್ರಕಾರ 2050ನೇ ಇಸವಿಯ ಹೊತ್ತಿಗೆ ನಮ್ಮ ಸಮುದ್ರಗಳಲ್ಲಿ ಮೀನುಗಳಿಗಿಂತ ಪ್ಲಾಸ್ಟಿಕ್ ವಸ್ತುಗಳೇ ಹೆಚ್ಚಿರುವುದಂತೆ!
ಭೂಮಿಯಲ್ಲಿ ಈವರೆಗೆ ಕೋಟ್ಯಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ಹೋಗಿದೆ. ಇದನ್ನು ವಾತಾವರಣದಿಂದ ತೆಗೆದು ಪ್ಲಾಸ್ಟಿಕ್ ಮುಕ್ತ ಮಾಡೋದು ಕಷ್ಟ ಸಾಧ್ಯ ಎನ್ನುವಂತಾಗಿದೆ. ಮೌಂಟ್ ಎವರೆಸ್ಟ್ನ ತುದಿಯಿಂದ ಹಿಡಿದು ಸಮುದ್ರದ ತಳದವರೆಗೂ ಪ್ಲಾಸ್ಟಿಕ್ ಹರಡಿ ಹೋಗಿದೆ. ನಾವು ತಿನ್ನುವ ಆಹಾರ, ಕುಡಿಯುವ ನೀರು ಹಾಗೂ ಸೇವಿಸುವ ಗಾಳಿಯಲ್ಲೂ ಪ್ಲಾಸ್ಟಿಕ್ ಬೆರೆತಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಪ್ಲಾಸ್ಟಿಕ್ನಿಂದ ಬಾಧಿತರೇ.. ಸಂಶೋಧಕರು ಪರೀಕ್ಷೆಗೆ ಒಳಪಡಿಸಿದ 22 ವಯಸ್ಕರ ರಕ್ತದ ಮಾದರಿಗಳ ಪೈಕಿ 17 ಮಂದಿಯ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳು ಕಂಡು ಬಂದಿವೆ.
ಮನುಷ್ಯನ ದೇಹದಲ್ಲಿ ಪ್ಲಾಸ್ಟಿಕ್
ಮೈಕ್ರೋ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಮಾನವನ ದೇಹದಲ್ಲಿ ಪತ್ತೆಯಾಗಿದ್ದು, ಪರೀಕ್ಷೆಗೆ ಒಳಪಟ್ಟ ಶೇ. 80ಕ್ಕೂ ಹೆಚ್ಚು ಮಂದಿಯಲ್ಲಿ ಪತ್ತೆಯಾಗಿದೆ. ಮೈಕ್ರೋ ಪ್ಲಾಸ್ಟಿಕ್ ಸೂಕ್ಷ್ಮ ಕಣಗಳು ಮಾನವನ ದೇಹದ ತುಂಬೆಲ್ಲಾ ಸಂಚಾರ ಮಾಡಿ ಹಲವು ಅಂಗಗಳಲ್ಲೂ ನೆಲೆಯೂರಿವೆ. ಆದರೆ, ಇದರಿಂದ ಆಗಬಹುದಾದ ಆರೋಗ್ಯ ಸಮಸ್ಯೆ, ದುಷ್ಪರಿಣಾಮಗಳ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.
ಆದ್ರೆ ಮೈಕ್ರೋ ಪ್ಲಾಸ್ಟಿಕ್ ಕಣಗಳು ಮಾನವನ ದೇಹದ ಜೀವ ಕಣಗಳನ್ನು ಹಾನಿ ಪಡಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ. ಇದು ಪ್ರಯೋಗಾಲಯಗಳ ಪರೀಕ್ಷೆಯಲ್ಲೂ ದೃಢಪಟ್ಟಿದೆ. ಇನ್ನು ವಾಯು ಮಾಲಿನ್ಯದಿಂದಾಗಿ ಹಲವು ಸೂಕ್ಷ್ಮ ಕಣಗಳು ಈಗಾಗಲೇ ಮಾನವನ ದೇಹ ಸೇರುತ್ತಿವೆ. ಹೀಗಾಗಿ, ಲಕ್ಷಾಂತರ ಮಂದಿಗೆ ಅನಾರೋಗ್ಯ ಹಾಗೂ ಸಾವಿಗೂ ಕಾರಣವಾಗುತ್ತಿದೆ.
ಹಾಗೆ ನೋಡಿದ್ರೆ ಭೂಮಿಯಲ್ಲಿ ಈವರೆಗೆ ಕೋಟ್ಯಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ಹೋಗಿದೆ. ಮೌಂಟ್ ಎವರೆಸ್ಟ್ನ ತುದಿಯಿಂದ ಹಿಡಿದು ಸಮುದ್ರದ ತಳದವರೆಗೂ ಪ್ಲಾಸ್ಟಿಕ್ ಹರಡಿ ಹೋಗಿದೆ. ನಾವು ತಿನ್ನುವ ಆಹಾರ, ಕುಡಿಯುವ ನೀರು ಹಾಗೂ ಸೇವಿಸುವ ಗಾಳಿಯಲ್ಲೂ ಪ್ಲಾಸ್ಟಿಕ್ ಬೆರೆತಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಪ್ಲಾಸ್ಟಿಕ್ನಿಂದ ಬಾಧಿತರೇ.
ಸಂಶೋಧಕರು ಪರೀಕ್ಷೆಗೆ ಒಳಪಡಿಸಿದ 22 ವಯಸ್ಕರ ರಕ್ತದ ಮಾದರಿಗಳ ಪೈಕಿ 17 ಮಂದಿಯ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳು ಕಂಡು ಬಂದಿವೆ. ನೀರು ಕುಡಿಯುವ ಪ್ಲಾಸ್ಟಿಕ್ ಬಾಟಲ್, ಆಹಾರ ಸೇವಿಸುವ ಪ್ಲಾಸ್ಟಿಕ್ ಕಂಟೇನರ್, ಕವರ್ಗಳು, ಆಹಾರ ಪ್ಯಾಕಿಂಗ್ಗೆ ಬಳಸುವ ಪ್ಲಾಸ್ಟಿಕ್ ವಸ್ತುಗಳಲ್ಲಿ ಇರುವ ಕಣಗಳು ನೇರವಾಗಿ ಬಾಯಿಯ ಮೂಲಕ ದೇಹ ಸೇರುತ್ತಿದೆ.
ಸಂಶೋಧಕರಿಗೆ ಮೊದಲಿಗೆ ಮಾನವನ ರಕ್ತದಲ್ಲಿ ಪಾಲಿಮರ್ ಅಂಶ ಕಂಡು ಬಂತು. ನಂತರ ಸಂಶೋಧನೆ ತೀವ್ರಗೊಳಿಸಿದ ವೇಳೆ ಪ್ಲಾಸ್ಟಿಕ್ ಕಣಗಳೂ ಸಿಕ್ಕವು ಎನ್ನುತ್ತಾರೆ, ನೆದರ್ಲೆಂಡ್‌ನ ಆಮ್‌ಸ್ಟರ್‍ಡ್ಯಾಂ ವಿವಿ ತಜ್ಞ ಪ್ರೊ. ಡಿಕ್ ವೆತಕ್.
ಪ್ಲಾಸ್ಟಿಕ್ಕಿನಿಂದ ಇಷ್ಟೆಲ್ಲಾ ತೊಂದರೆಯಾದರೆ ಅದಕ್ಕೆ ಪರಿಹಾರವೇನು? ತಜ್ಞರ ಪ್ರಕಾರ ಮರುಬಳಕೆ ಆಗದ ಪ್ಲಾಸ್ಟಿಕ್ ಪದಾರ್ಥಗಳ ಉತ್ಪಾದನೆ ಮೊದಲು ನಿಲ್ಲಬೇಕು. ಆದಷ್ಟು ಪ್ಲಾಸ್ಟಿಕ್ಕಿನ ಬಳಕೆಯನ್ನು ಕಡಿಮೆ ಮಾಡಿ, ಅದನ್ನು ಮರುಬಳಸಬೇಕು. ಆದರೆ ಸಂತೋಷದ ವಿಷಯವೆಂದರೆ ಇಂದು ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ಸಮಸ್ಯೆಯನ್ನು ಎದುರಿಸಲು ಹಲವಾರು ಸಂಸ್ಥೆಗಳು ಬಹುರೂಪಿ ಪರಿಹಾರಗಳನ್ನು ಹುಡುಕುತ್ತಿವೆ. ಹೀಗಾಗಿ ಇಂದು ಭಾರತದಲ್ಲಿ ಸುಮಾರು 15-20 ಪ್ರತಿಶತ ಪ್ಲಾಸ್ಟಿಕ್ ಕಸವು ಮರುಬಳಕೆಯಾಗುತ್ತಿದೆ.
ಆದರಿಂದ ನಮ್ಮ ಅತೀಯಾದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದು ಅತ್ಯಗತ್ಯ. ಒಂದು ಸಮೀಕ್ಷೆಯ ಪ್ರಕಾರ ಪ್ರತಿಯೊಬ್ಬರೂ ಇಂದು ವರ್ಷಕ್ಕೆ ಸುಮಾರು 84 ಕೆಜಿ ಪ್ಲಾಸ್ಟಿಕ್ ಬಳಸುತ್ತಿದ್ದೇವಂತೆ, ನಮ್ಮ ಜೀವನಶೈಲಿಯಲ್ಲಾಗುವ ಸಣ್ಣ ಬದಲಾವಣೆಯಿಂದ ಇದನ್ನು ನಿಯಂತ್ರಿಸಬಹುದೇ? ಖಂಡಿತ, ಎನ್ನುತ್ತಾರೆ ತಜ್ಞರು. ಇನ್ನು ಮುಂದೆ ಪಾನೀಯ ಕುಡಿಯುವಾಗ ಸ್ಟ್ರಾ ನಿರಾಕರಿಸಿ, ಅಂಗಡಿಗೆ ನಿಮ್ಮದೇ ಚೀಲವನ್ನು ಕೊಂಡೊಯ್ಯಿರಿ, ಪ್ಲಾಸ್ಟಿಕ್ ಲೋಟಗಳನ್ನು ತ್ಯಜಿಸಿ, ನಿಮ್ಮ ನೆರೆಹೊರೆಯ ಅಂಗಡಿಮುಂಗಟ್ಟುಗಳಿಗೆ ಪ್ಲಾಸ್ಟಿಕ್ ಬಳಸದಂತೆ ಸೂಚಿಸಿ, ಕಸ ವಿಂಗಡಿಸಿ ಮತ್ತು ನಿಮ್ಮ ನಗರಪಾಲಿಕೆಯವರಿಗೆ ಕಸ ಸರಿಯಾಗಿ ಸಂಸ್ಕರಿಸುವಂತೆ ಒತ್ತಾಯಿಸಿ.
ಈ ಪ್ಲಾಸ್ಟಿಕ್ ಎಂಬ ಪೆಡಂಭೂತದಿಂದ ನಮ್ಮ ಮುಕ್ತಿ ಎಂದು? ಇದರ ವಿಷಮವಾದ ಜಾಲದಿಂದ ನಾವು ಹೊರಬರಲು ಸಾಧ್ಯವೇ? ಪ್ರತಿಬಾರಿಯು ಸರ್ಕಾರದ ನಿಷೇಧ ಕ್ರಮ ದಂಡ ಪಾವತಿಯಂತಹ ಕ್ರಮಗಳಿಂದ ಖಂಡಿತವಾಗಿ ಸಾಧ್ಯವಿಲ್ಲ. ಪ್ಲಾಸ್ಟಿಕ್ ನಿಮ್ಮ ಕೈಯಲ್ಲಿ ಇರುವಾಗ ಪ್ರತಿ ಬಾರಿಯೂ ನಿಲ್ಲಿ, ಒಂದು ಕ್ಷಣ ಯೋಚಿಸಿ.
ಇದು ನಿಜಕ್ಕೂ ನನಗೆ ಬೇಕೇ ಬೇಕಾ? ಎಂದು ಈ ಪ್ರಶ್ನೆಯನ್ನು ಕೇಳಿಕೊಂಡಾಗ ಭೂಮಿಗೆ ಒಳಿತು ಮಾಡುವ ಹಾಗೂ ಜಾಣತನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಖಂಡಿತವಾಗಿ ಮುಂದಾಗುವಿರಿ.
- ಡಾ.ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ