ಗೋವಾ ಹವ್ಯಕ ವಲಯದ ವಾರ್ಷಿಕ ಸಭೆ
ಪಣಜಿ (ಮಡಗಾಂವ): ಗೋವಾ ಹವ್ಯಕ ವಲಯದಲ್ಲಿರುವವರು ನಮ್ಮ ಭಾಗದ ಜನರೇ ಆಗಿದ್ದಾರೆ. ಇಲ್ಲಿನ ಹವ್ಯಕರು ಹೆಚ್ಚಿನದ್ದಾಗಿ ಉತ್ತರಕನ್ನಡ ಭಾಗದವರೇ ಆಗಿದ್ದಾರೆ. ಹೊರ ರಾಜ್ಯ ಗೋವೆಯಲ್ಲಿ ನೆಲೆಸಿ ಅನೇಕ ವರ್ಷಗಳು ಕಳೆದರೂ ಕೂಡ ನಮ್ಮ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೀರಿ ಎಂಬುದು ಹೆಮ್ಮೆಯ ವಿಷಯ. ಗೋವಾ ಎಂದರೆ ಹೊರ ದೇಶದಂತೆಯೇ ಇದೆ, ಆದರೂ ನಮ್ಮ ತನವನ್ನು ಉಳಿಸಿಕೊಂಡು ಹೋಗಿ ಮಕ್ಕಳಿಗೆ ನಮ್ಮ ಸಂಸ್ಕಾರವನ್ನು ನೀಡುತ್ತಿರುವುದು ಶ್ರೀಗಳ ಆಶೀರ್ವಾದವೇ ಆಗಿದೆ ಎಂದು ಕುಮಟಾ ಹವ್ಯಕ ಮಂಡಳದ ಅಧ್ಯಕ್ಷರಾದ ಜಿ.ಎಸ್. ಹೆಗಡೆ ನುಡಿದರು.
ಹವ್ಯಕ ವಲಯ ಗೋವಾ ವತಿಯಿಂದ ಮಡಗಾಂವ ವೀರಶೈವ ಲಿಂಗಾಯತ ಮಠದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು. ಪ್ರತಿ ವರ್ಷ ಹವ್ಯಕ ವಲಯದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಮ್ಮ ಸಂಸ್ಕಾರ ಮುಂದುವರೆಸಿಕೊಂಡು ಹೋಗುತ್ತಿದ್ದೀರಿ. ಇಂದು ಐಟಿಬಿಟಿಯಲ್ಲಿ ಕೆಲಸ ಮಾಡುವ ಸಂದರ್ಭ ಇದರಿಂದ ನಮ್ಮ ಭಾಗದಲ್ಲಿಯೂ ಯುವಕರು ಬೆಂಗಳೂರಿಗೆ ಅಥವಾ ವಿದೇಶಕ್ಕೆ ಕೆಲಸಕ್ಕೆ ಹೋಗುತ್ತಿರುವುದನ್ನು ನಾವು ಕಾಣಬಹುದು. ಇಂತಹ ಸಂದರ್ಭದಲ್ಲಿ ಗೋವಾದಲ್ಲಿ ನಮ್ಮ ಸಂಪ್ರದಾಯ ಮುಂದುವರೆಸಿಕೊಂಡು ಹೋಗುತ್ತಿರುವದು ಹೆಮ್ಮೆಯ ಸಂಗತಿ ಎಂದು ಜಿ.ಎಸ್. ಹೆಗಡೆ ನುಡಿದರು.
ಈ ಸಂದರ್ಭದಲ್ಲಿ ಹೊನ್ನಾವರ ಮಂಡಳದ ಅಧ್ಯಕ್ಷರಾದ ಆರ್.ಜಿ.ಹೆಗಡೆ, ಕುಮಟಾ ಮಂಡಳದ ಉಪಾಧ್ಯಕ್ಷರಾದ ಎಸ್.ವಿ.ಹೆಗಡೆ, ಕುಮಟಾ ಮಂಡಳದ ಕೋಶಾಧ್ಯಕ್ಷರಾದ ಜಿ.ಎಸ್.ಉಪ್ಪುಂದ, ಹಾಗೂ ಗೋವಾ ಹವ್ಯಕ ವಲಯದ ಅಧ್ಯಕ್ಷ ಈಶ್ವರ ಹೆಗಡೆ, ಸ.ಕಾರ್ಯದರ್ಶಿ ಮಂಜುನಾಥ ಹೆಗಡೆ, ಸ.ಕಾರ್ಯದರ್ಶಿ ಗಿರೀಶ್ ಹೆಗಡೆ, ಹವ್ಯಕ ವಲಯದ ಮಹಾಬಲ ಭಟ್, ನಿವೃತ್ತ ಪ್ರಾಚಾರ್ಯ ಶ್ರೀಪಾದ ಎನ್. ಭಟ್ ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯ ಶ್ರೀಪಾದ ಎನ್.ಭಟ್ ಹಾಗೂ ಗಾಯತ್ರಿ ಭಟ್ ದಂಪತಿಗಳನ್ನು ಹವ್ಯಕ ವಲಯದ ವತಿಯಿಂದ ಸನ್ಮಾನಿಸಲಾಯಿತು.
ಹವ್ಯಕ ವಲಯ ಗೋವಾದ ಅಧ್ಯಕ್ಷರಾದ ಈಶ್ವರ ಹೆಗಡೆ ಸಭಾಪೂಜೆ ನೆರವೇರಿಸಿದರು. ಸಭಾ ಕಾರ್ಯಕ್ರಮದ ಮುನ್ನ ಪುರುಷರಿಂದ ಮಂತ್ರ ಘೋಷ, ಮಾತೆಯರಿಂದ ಕುಂಕುಮಾರ್ಚನೆ, ಗಣೇಶಪಂಚರತ್ನ ಸ್ತೋತ್ರದ ಸಾಮೂಹಿಕ ಪಠನೆ ಕಾರ್ಯಕ್ರಮ ನೆರವೇರಿಸಲಾಯಿತು. ಪ್ರಸಕ್ತ ವರ್ಷ ಹತ್ತನೇಯ ತರಗತಿಯಲ್ಲಿ ಹೆಚ್ಚಿನ ಅಂಕ ಪಡೆದು ಸಾಧನೆಗೈದ ಹವ್ಯಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗೋವಾ ಹವ್ಯಕ ವಲಯದ ಮಹಾಬಲ ಭಟ್ ಕಾರ್ಯಕ್ರಮ ನಿರೂಪಿಸಿದರು. ಸ. ಕಾರ್ಯದರ್ಶಿ ಗಿರೀಶ್ ಹೆಗಡೆ ವಂದನಾರ್ಪಣೆಗೈದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ