ಮುಳ್ಳೇರಿಯ ಮಂಡಲದ ನೇತೃತ್ವದಲ್ಲಿ ಕಾನತ್ತಿಲದಲ್ಲಿ `ಶ್ರೀರಾಮ ನೈವೇದ್ಯ'
ಬದಿಯಡ್ಕ: ಭತ್ತ ಬೆಳೆಸುವಲ್ಲಿ ಪ್ರತಿಯೊಬ್ಬ ಕೃಷಿಕನೂ ಮುಂದೆ ಬಂದಾಗ ನಮ್ಮ ಅಗತ್ಯಕ್ಕಿರುವಷ್ಟು ಅಕ್ಕಿ ನಮ್ಮಿಂದಲೇ ಲಭ್ಯವಾಗುತ್ತದೆ. ಭತ್ತದ ಬೇಸಾಯದಲ್ಲಿ ನಷ್ಟ ಎಂಬ ಚಿಂತನೆಯನ್ನು ಕೈಬಿಟ್ಟಾಗ ನಮ್ಮ ಗದ್ದೆಯಲ್ಲಿ ಹೊನ್ನಿನ ಪೈರು ಬೆಳೆಯಲು ಸಾಧ್ಯ ಎಂದು ಪ್ರಗತಿಪರ ಕೃಷಿಕ ಪೆರುಮುಂಡ ಶಂಕರನಾರಾಯಣ ಭಟ್ ಹೇಳಿದರು.
ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ವಿದ್ಯಾರ್ಥಿವಾಹಿನಿಯ ಸಹಯೋಗದೊಂದಿಗೆ ಬದಿಯಡ್ಕ ಸಮೀಪದ ಕಾನತ್ತಿಲ ದಿ. ಮಹಾಲಿಂಗ ಭಟ್ಟರ ಗದ್ದೆಯಲ್ಲಿ ಜರಗಿದ ಶ್ರೀರಾಮ ನೈವೇದ್ಯ ಭತ್ತದ ಭಕ್ತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಅವರು ಮಾಹಿತಿಗಳನ್ನು ನೀಡಿದರು.
ನಮ್ಮ ಭೂಮಿಯೊಂದಿಗೆ ನಾವು ನಿರಂತರ ಸಂಪರ್ಕವನ್ನು ಸಾಧಿಸುತ್ತಿದ್ದರೆ ಭೂಮಿ ಬರುಡಾಗುವುದನ್ನು ಇಲ್ಲವಾಗಿಸಿ ಕೃಷಿ ಭೂಮಿಯಾಗಿ ಪರಿವರ್ತನೆಯಾಗುತ್ತದೆ. ಭತ್ತದ ಗದ್ದೆಯನ್ನು ಎಲ್ಲಿಯೂ ಹಡಿಲು ಹಾಕಬಾರದು. ಸರಿಯಾದ ರೀತಿಯಲ್ಲಿ ಅಲ್ಲಿ ಬೇಸಾಯವನ್ನು ಮಾಡಿದಾಗ ನಮ್ಮ ನಿರೀಕ್ಷೆಯ ಫಸಲು ಲಭಿಸಬಹುದು. ಹಟ್ಟಿಯ ಗೊಬ್ಬರವು ಕೃಷಿಗೆ ಪೂರಕವಾದ ಪೋಷಕಾಂಶವನ್ನು ನೀಡುತ್ತದೆ. ಹಿಂದಿನ ಕಾಲದ ಕೃಷಿ ಪರಂಪರೆಯನ್ನು ಮುಂದಿನ ಜನಾಂಗವು ಮುನ್ನಡೆಸಿಕೊಂಡು ಹೋಗಬೇಕೆಂದು ಅವರು ಕರೆಯಿತ್ತರು.
ಮಂಗಳೂರು ಪ್ರಾಂತ ಉಪಾಧ್ಯಕ್ಷ, ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ವಿವಿಧ ಮಾಹಿತಿಗಳನ್ನು ನೀಡಿದರು. ಮಹಾಮಂಡಲದ ದಿಗ್ದರ್ಶಕ ಮಂಡಳಿಯ ಡಾ. ವೈ.ವಿ.ಕೃಷ್ಣಮೂರ್ತಿ ಮಾತನಾಡಿ, ಶ್ರೀರಾಮಚಂದ್ರಾಪುರ ಮಠದ ಪೂಜ್ಯ ಶ್ರೀಸವಾರಿಯಲ್ಲಿ ನಿತ್ಯ ಶ್ರೀರಾಮನಿಗೆ ಸಲ್ಲುವ ನೈವೇದ್ಯದ ಅಕ್ಕಿಯು ಶಿಷ್ಯರ ಬೆವರಿನಿಂದ ಬರಬೇಕು ಎಂಬುದು ಶ್ರೀಸಂಸ್ಥಾನದವರ ಆಶಯವಾಗಿದೆ. ಹಾಗಾಗಿಯೇ ಇದು ಭತ್ತದ ಭಕ್ತಿಯಾಗಿದೆ. ಮನೆಯಂಗಳದಲ್ಲಿಯೇ ಚಟ್ಟಿಯಲ್ಲಿ, ಗೋಣಿಯಲ್ಲಿ ಭತ್ತವನ್ನು ಬಿತ್ತಿ, ಸಿಕ್ಕಿದ ಅಕ್ಕಿಯನ್ನು ಸಮರ್ಪಿಸುವುದರಿಂದ ಸುರುವಾಗಿ ಎಕ್ರೆ ಗದ್ದೆಯಲ್ಲಿ ಸಾಮೂಹಿಕ ನೆಲೆಯಲ್ಲಿ ಬೇಸಾಯ ಮಾಡಿ ಸಮರ್ಪಿಸುವ ಪದ್ಧತಿಯೂ ಇದೆ. ಇದರೆಡೆಯಲ್ಲಿಯೇ ಒಂದಷ್ಟು ಸಮಯ ಹೊಂದಿಸಿ, ಸಮಯದ ಸದುಪಯೋಗ ಪಡಿಸಿಕೊಳ್ಳಲು ರಾಮ ನೈವೇದ್ಯವು ಅತ್ಯಂತ ಪ್ರಶಸ್ತ ಎಂದರು.
ಇತ್ತೀಚೆಗೆ ಜರಗಿದ ಜೀವನಬೋಧೆ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಭತ್ತದ ಕುರಿತು ವಿವಿಧ ಮಾಹಿತಿಗಳನ್ನು ನೀಡಲಾಯಿತು. ಮಾತೃತ್ವಮ್‌ನ ಈಶ್ವರಿ ಬೇರ್ಕಡವು, ಗುಂಪೆ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡೆಕ್ಕಾನ, ಪಳ್ಳತ್ತಡ್ಕ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಪೆರಡಾಲ ವಲಯ ಕಾರ್ಯದರ್ಶಿ ವಿಷ್ಣುಪ್ರಸಾದ ಕೋಳಾರಿ, ಎಣ್ಮಕಜೆ ವಲಯ ಅಧ್ಯಕ್ಷ ಶ್ಯಾಮಪ್ರಸಾದ ಕುಂಚಿನಡ್ಕ, ರಾಜಗೋಪಾ ಭಟ್ ಕಾನತ್ತಿಲ, ಡಾ| ಕೇಶವಪ್ರಸಾದ, ಡಾ| ಮಾಲತಿ, ವಾಣಿಟೀಚರ್, ಸರೋಜ ಕಾನತ್ತಿಲ ಶುಭಹಾರೈಸಿದರು. ವಿದ್ಯಾರ್ಥಿ ವಾಹಿನಿಯ ಸಂಚಾಲಕ ಶ್ಯಾಮಪ್ರಸಾದ ಕುಳಮರ್ವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಧರಣಿ ಸರಳಿ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ