‘ಆಧುನಿಕ ಜಗತ್ತಿನ ವಿದ್ಯಾರ್ಥಿಗಳ ಕೌಶಲ್ಯವನ್ನು ಸಜ್ಜುಗೊಳಿಸಲು ಸ್ಫರ್ಧೆಗಳನ್ನು ಏರ್ಪಡಿಸಬೇಕು'- ಕೆ.ಎಸ್. ನಾರಾಯಣಸ್ವಾಮಿ

Upayuktha
0


ಬೆಂಗಳೂರು:
‘ಆಧುನಿಕ ಜಗತ್ತಿನ ಔದ್ಯಮಿಕ ಸಂಸ್ಥೆಗಳ ನಿರೀಕ್ಷೆಗೆ ಅನುಗುಣವಾಗಿ ವಿದ್ಯಾರ್ಥಿಗಳ ಕೌಶಲ್ಯವನ್ನು ಸಜ್ಜುಗೊಳಿಸಬೇಕಾದರೆ, ಅವರ ಸೃಜನಶೀಲತೆಗೆ ಇಂಬು ಕೊಡುವಂತಹ ಸ್ಫರ್ಧೆಗಳನ್ನು ಏರ್ಪಡಿಸಬೇಕು – ಆಗ ಉದ್ಯಮವನ್ನಾಗಲಿ ಅಥವಾ ಸಂಸ್ಥೆಯನ್ನಾಗಲಿ, ಹೊಸ ಹಾದಿಯಲ್ಲಿ ಕೊಂಡೊಯ್ಯುವ ಸಮರ್ಪಕ ನಾಯಕತ್ವ ನೀಡುವ ಪರಿಣತರು ಸೃಷ್ಟಿಯಾಗುತ್ತಾರೆ’, ಎಂದು ಬೆಂಗಳೂರು ಮ್ಯಾನೇಜ್‍ಮೆಂಟ್ ಅಸೋಸಿಯೇಶನ್‍ನ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಕೆ.ಎಸ್. ನಾರಾಯಣಸ್ವಾಮಿ ನುಡಿದರು. ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‍ಮೆಂಟ್ ಅಧ್ಯಯನ ವಿಭಾಗ ಆಯೋಜಿಸಿದ್ದ ರಾಜ್ಯಮಟ್ಟದ ಸ್ಫರ್ಧೆ ‘ಅಧಿವೇಶನ-2023’ ಅನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು. 


ಮುಂದುವರಿದು ಶ್ರೀಯುತರು ‘ನಾವೀಗ ನಯಾಭಾರತ್ ಅಂದರೆ ಹೊಸ ಭಾರತದ ನಿರ್ಮಾಣದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೇವೆ. ಔದ್ಯಮಿಕ ಕ್ಷೇತ್ರದಲ್ಲಿ ದಾಪುಗಾಲುಗಳನ್ನಿಡುತ್ತಿದ್ದೇವೆ. ಹೊಸ ಹೊಸ ಸಂಶೋಧನೆಗಳಿಗೆ ವೇದಿಕೆ ಕಲ್ಪಿಸಿದ್ದೇವೆ. ಹೊಸ ತಂತ್ರಜ್ಞಾನ ಹಾಗೂ ಯಾಂತ್ರೀಕೃತ ಸ್ವಯಂ ಚಾಲನಾ ತಂತ್ರ (ಆಟೊಮೇಶನ್) ಗಳಿಂದ ನೂತನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಅದರಿಂದ ನಮ್ಮ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳ ದೃಷ್ಟಿಕೋನವೇ ವಿಭಿನ್ನವಾಗಿರಬೇಕು ಹಾಗೂ ಇಂದಿನ ಮತ್ತು ನಾಳಿನ ಅಗತ್ಯಗಳಿಗೆ ಸ್ಪಂದಿಸುವಂತಾಗಿರಬೇಕು’, ಎಂದರು.


‘ರಾಜ್ಯದ ವಿವಿಧ ಮ್ಯಾನೇಜ್‍ಮೆಂಟ್ ಕಾಲೇಜುಗಳಿಂದ ಬಂದಿರುವ ಒಟ್ಟು ನಲವತ್ತು ತಂಡಗಳ ನಡುವೆ – ಆರ್ಥಿಕ ನಿರ್ವಹಣೆ, ಮಾನವಸಂಪನ್ಮೂಲ ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ, ಪೂರೈಕೆ ಸರಪಳಿ ನಿರ್ವಹಣೆ, ತಂತ್ರಜ್ಞಾನದ ಸದ್ಬಳಕೆ ಹಾಗೂ ನವೀನ ವಿನ್ಯಾಸಗಳ ಬಗೆಗಿನ ಚಿಂತನೆ ಇತ್ಯಾದಿ ವಿಷಯಗಳಲ್ಲಿ ತಂಡಗಳು ವಿಷಯ ಮಂಡನೆ ಮಾಡಲಿವೆ. ರಾಜ್ಯದ ಆಯ್ದ ವಿದ್ವಾಂಸರು ಹಾಜರಿದ್ದು ಉತ್ತಮ ವಿಷಯ ಮಂಡನೆಗಳನ್ನು ಆಯ್ಕೆ ಮಾಡಲಿದ್ದಾರೆ. ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಗುವುದು’, ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‍ಮೆಂಟ್ ಡೀನ್ ಪೆÇ್ರ. ಎಸ್. ನಾಗೇಂದ್ರ ನುಡಿದರು. 


ಗೌರವಾನ್ವಿತ ಅತಿಥಿಗಳಾಗಿದ್ದ ಸಂಸ್ಥೆಯ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಅವರು ಮಾತನಾಡಿ – ‘ಈ ತೆರೆನ ಸ್ಫರ್ಧೆಗಳು ಪರಸ್ಪರ ಚಿಂತನೆಗಳ ವಿನಿಮಯಕ್ಕೆ ವೇದಿಕೆಯಾಗಲಿವೆ. ಇದರಿಂದ ವಿದ್ವತ್ಪೂರ್ಣ ಹಾಗೂ ಆರೋಗ್ಯಕರ ನೆಟ್‍ವರ್ಕಿಂಗ್ ಅಂದರೆ ಜಾಲ ವಿಸ್ತರಣೆಗೆ ನೆರವಾಗಲಿದೆ. ಇಲ್ಲಿ ಬಹುಮಾನಗಳನ್ನು ಗಳಿಸುವುದು ನಿಮಿತ್ತ ಮಾತ್ರ; ಸ್ಫರ್ಧೆಗಳಲ್ಲಿ ಪಾಲ್ಗೊಂಡು ವಿಷಯಗಳನ್ನು ಸಮರ್ಥವಾಗಿ ಮಂಡಿಸುವ ಧೈರ್ಯ ಬಹು ಮುಖ್ಯ’, ಎಂದರು.


ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಮಾತನಾಡಿ, ವಿದ್ಯಾರ್ಥಿಗಳನ್ನು ತರಗತಿಯಿಂದ ಆಗಾಗ್ಗೆ ಹೊರತಂದು ಅವರ ಪ್ರತಿಭೆಯನ್ನು ಒರೆಗೆ ಹಚ್ಚುವುದು ಅತ್ಯಂತ ಅಗತ್ಯ ಎಂದರು.


ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‍ಮೆಂಟ್ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪ ಅಜಯ್ ಸರ್ವರನ್ನೂ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top