ಅಧಿಕ ಶ್ರಾವಣ ಮಾಸದಲ್ಲಿ ಭಗವಂತನ ಕುರಿತು ಅಕ್ಷರ ಆರಾಧನೆ: ಪ್ರತಿದಿನ ಉಪಯುಕ್ತ ನ್ಯೂಸ್ ನಲ್ಲಿ
ಶ್ರೀಕೃಷ್ಣನ ವ್ಯಕ್ತಿತ್ವದ ವೈವಿಧ್ಯತೆ ಅನೇಕ ರೂಪಗಳಲ್ಲಿ ಸಂದರ್ಭಕ್ಕೆ ಅನುಗುಣ ವಾಗಿ ಪ್ರಕಟವಾಗುತ್ತಾ ಹೋಗುತ್ತದೆ. ಆ ಕಾರಣದಿಂದಲೇ ವ್ಯಾಸರಿಂದ ಮೊದ ಲ್ಗೊಂಡು ಈ ಕಾಲದ ಬಹುಶ್ರುತ ವಿದ್ವಾಂಸ ನಾರಾಯಣಾಚಾರ್ಯರವರೆಗೆ ಮತ್ತು ಪರ್ವದಲ್ಲಿ ಇತರ ಪಾತ್ರಗಳ ಮುಖಾಂತರ ಭೈರಪ್ಪನವರು ಬಿಂಬಿಸಿದಂತೆ– ಕೃಷ್ಣ ನಾನಾ ವೇಷ ಗಳಲ್ಲಿ, ನಾನಾ ಬಗೆಯ ತತ್ವ ಚಿಂತನೆಯಲ್ಲಿ ವಿಜೃಂಭಿಸಿದ್ದಾನೆ.
ಬಾಲಕೃಷ್ಣನೆಂದರೆ ನಮ್ಮ ನೆರೆಯ ಮನೆಯ ಹುಡುಗನಷ್ಟು ಸಲುಗೆ, ಸದರ. ಗೋಪಿಕಾ ಸ್ತ್ರೀಯರೊಡನೆ, ರಾಧೆಯೊಡನೆ, ಬೃಂದಾವನದಲ್ಲಿ ಕೃಷ್ಣನ ದೈವಿಕ ರಾಸ ಲೀಲೆಗಳು ಅವನಿಗೆ ಮಾತ್ರ ಸಾಧ್ಯ. ರಾಮನಿಗೆ ಈ ಬಗೆಯ ಕಲ್ಪನೆಯೂ ಅಸಾಧ್ಯ!
ಕಂಸನ, ಚಾಣೂರ, ಮುಷ್ಟಿಕಾಸುರ, ಜರಾಸಂಧ, ಶಿಶುಪಾಲರ, ದುರ್ಯೋ ಧನಾದಿ ಎಲ್ಲಾ ಕೌರವರ, ಶಕುನಿ, ಕರ್ಣರ, ಆಕಾರ, ವೇಷ ಭೂಷಣಗಳಿಂದ ಅವರ ತಾಮಸೀ ಗುಣಗಳು ಪ್ರಕಟವಾಗುತ್ತಿರಲಿಲ್ಲ. ಅವರ ಸ್ವಭಾವ, ದುರ್ನಡತೆ, ಅಮಾನವೀಯ ವರ್ತನೆ ಮತ್ತು ದುಷ್ಟ ನಡವಳಿಕೆ ಇವುಗಳಿಂದ ಅವರ ರಾಕ್ಷಸಿ ಸ್ವಭಾವವನ್ನು ಅಳೆದು ಅದಕ್ಕೆ ತಕ್ಕಂತೆ ಅವರನ್ನು ನಾಶ ಮಾಡುವ ತಂತ್ರಗಾರಿಕೆ ಹೆಣೆಯಬೇಕಿತ್ತು. ಈ ಕಾರ್ಯದಲ್ಲಿ ಅವರೊಂದಿಗೆ ಕೈಜೋಡಿಸುವ ಇತರರನ್ನೂ ನಿರ್ಮಮತೆಯಿಂದ ಬಲಿ ಕೊಡಬೇಕಿತ್ತು. ಭೀಷ್ಮ, ದ್ರೋಣ, ಕೃಪಾಚಾರ್ಯರೂ ಇದಕ್ಕೆ ಹೊರತಾಗಲಿಲ್ಲ. ಅಷ್ಟೇ ಏಕೆ, ಕುರುಕ್ಷೇತ್ರದ ಯುದ್ಧದ ನಂತರ ಮದೋನ್ಮತ್ತರಾದ, ತನ್ನದೇ ಕುಲಬಾಂಧವರಾದ ಎಲ್ಲ ಯಾದವರನ್ನು ಸಮೂಲಾಗ್ರವಾಗಿ ನಾಶ ಮಾಡಬೇಕಾಗಿ ಬಂದ ಸಂಕಟ ಮಯ ಪರಿಸ್ಥಿತಿಯನ್ನು ಕೃಷ್ಣ ಎದುರಿಸಬೇಕಾಯಿತು. ಅದನ್ನು ಕೂಡ ತನ್ನ ಕರ್ತವ್ಯವೆಂದೇ ಭಾವಿಸಿ ನಿರ್ಮೋಹಿಯಂತೆ ಭೂಭಾರ ಇಳಿಸಿದ.
ಕೃಷ್ಣನ ವ್ಯಕ್ತಿತ್ವದ ಸಂಕೀರ್ಣತೆಯ ಪರಿಚಯವಾಗಬೇಕಾದರೆ ಅವನ ವಿಶಿಷ್ಟ ಚಿಹ್ನೆ ಗಳಾದ ಕೊಳಲು ಮತ್ತು ಸುದರ್ಶನ ಚಕ್ರಗಳ ಸಂಕೇತವನ್ನು ಅರ್ಥೈಸಿಕೊಂಡರೆ ಸಾಕು. ಮಧುರಭಾಷಿಯಾಗಿ, ಸುಕೋಮಲ, ಸುಂದರದೇಹಿಯಾಗಿ, ನಾಟ್ಯ ವಿಲಾಸಿಯಾಗಿ, ಸರ್ವಚುಂಬಕ, ಸರ್ವಾಕರ್ಷಕ, ಮನಮೋಹಕ ವೇಣು ವಾದಕನಾಗಿ ಗೋಕುಲದಲ್ಲಿ ವಿಹರಿಸಿದ ಕೃಷ್ಣ ಕಾಲ ಕೂಡಿ ಬಂದಾಗ ಕೊಳಲು ವಿಸರ್ಜಿ ಸಿದ, ಸುದರ್ಶನ ಚಕ್ರ ಧರಿಸಿದ. ಮುಂದಿನ ಸುದೀರ್ಘ ಜೀವನದಲ್ಲಿ ಒಮ್ಮೆಯೂ ಕೊಳಲು ಹಿಡಿಯಲಿಲ್ಲ.. ವೇಣುಗಾನ ಮಾಡಲಿಲ್ಲ.
ರಾಜಕೀಯ ಮುತ್ಸದ್ದಿಯಾಗಿ ಕೃಷ್ಣನ ಪರಿಭ್ರಮಣ ಅಂದಿನ ಭರತಖಂಡದ ಉದ್ದಗಲಕ್ಕೂ ನಡೆಯಿತು. ಅವನಿಗೆ ತಿಳಿಯದ ರಾಜ್ಯವಿಲ್ಲ, ಅವನು ಅರಿಯದ ಭೂ ಪ್ರದೇಶವಿಲ್ಲ. ಯಾವ ರಾಜ ಎಷ್ಟು ಶಕ್ತಿವಂತ, ಅವನ ದೋಷಗಳೇನು, ಅವನ ಕೊರತೆಗಳೇನು ಎಂಬುದನ್ನು ಥಟ್ಟನೆ ಗುರುತಿಸಬಲ್ಲವನಾಗಿದ್ದ. ಈ ಪರಿ ಜ್ಞಾನವೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ಸಹಾಯಕ ರಾಜರನ್ನು ಆರಿಸು ವಲ್ಲಿ ಉಪಯೋಗಕ್ಕೆ ಬಂತು.
ಲೀಲಾಮಾನುಷಹಾರಿ ಎಂದೆನಿಸಿಕೊಂಡಿದ್ದರೂ ತನ್ನ ದೈವತ್ವದ ಪ್ರಕಟಣೆಯನ್ನು ಸಾಧ್ಯವಾದಷ್ಟು ಮರೆಯಲ್ಲಿಟ್ಟಿದ್ದ. ಯಶೋದೆಗೆ ಬಾಯಲ್ಲಿ ಬ್ರಹ್ಮಾಂಡ ತೋರುವಾಗ, ಗೋವರ್ಧನ ಗಿರಿ ಕಿರುಬೆರಳಲ್ಲಿ ಎತ್ತುವಾಗ, ಪೂತನಿ ಶಕಟಾಸುರ ಮುಂತಾದ ರಕ್ಕಸರನ್ನು ಕೊಲ್ಲುವಾಗ ತೋರಿದ ದೈವೀ ಶಕ್ತಿ ಮುಂದೆ ಅನೇಕ ವರ್ಷಗಳವರೆಗೆ ಪ್ರಕಟ ಮಾಡಲಿಲ್ಲ. ಸಂಧಾನಕ್ಕೆ ಹೋಗಿ ಸೆರೆಯಾಗುವ ಸಂದರ್ಭದಲ್ಲಿ ತೋರಿದ ಬೃಹತ್ ರೂಪ ಮತ್ತು ಗೀತಾ ಬೋಧನೆಯ ಸಮಯ ದಲ್ಲಿ ಅರ್ಜುನನಿಗೆ ತೋರಿದ ವಿಶ್ವರೂಪ- ಈ ಎರಡೂ ಸಂದರ್ಭಗಳಲ್ಲಿ ತಾನು ಸಾಮಾನ್ಯ ಮನುಜ ಅಲ್ಲ ಎಂದು ಪ್ರಾಸಂಗಿಕವಾಗಿ ಪ್ರಕಟ ಮಾಡಿದ.
ಇದರರ್ಥ ಇಷ್ಟೆ. ಮನಸ್ಸು ಮಾಡಿ ಅವತಾರ ಲೀಲೆಗಳನ್ನು ತೋರುತ್ತಲೇ ಇದ್ದರೆ ದ್ರೌಪದಿ ವಸ್ತ್ರಾಪಹರಣ ಆಗುತ್ತಿರಲಿಲ್ಲ. ಅಭಿಮನ್ಯು ಅಸಹಾಯ ಶೂರನಾಗಿ ಹತ್ಯೆಯಾಗುತ್ತಿರಲಿಲ್ಲ. ಕುರುಕ್ಷೇತ್ರ ಯುದ್ಧದಲ್ಲಿ ಅಪಾರ ರಕ್ತಪಾತ ಆಗುತ್ತಿರ ಲಿಲ್ಲ, ಅಷ್ಟೇ ಏಕೆ? ಯಾದವೀ ಕಲಹದಲ್ಲಿ ತನ್ನ ಕುಲ ಬಾಂಧವರನ್ನೆಲ್ಲಾ ನಾಶ ಮಾಡುವ ಪ್ರಸಂಗ ಬರುತ್ತಿರಲಿಲ್ಲ.
ಈ ಕಾರಣದಿಂದಲೇ ಕುಮಾರವ್ಯಾಸ ಬರೆದಿದ್ದು:
ಈಸು ಮಹಿಮೆಯ ಮರೆಸಿ
ಲೋಕ ವಿಲಾಸ ಚೇಷ್ಟೆಯನುಸರಿಸಿ
ನರವೇಷವನ್ನು ನಟಿಸಿದನು ಹರಿ,
ಹೂಳಿದ ನಿಜೋನ್ನತಿಯ.
ಅವನೇ ಜಗನ್ನಾಟಕ ಸೂತ್ರಧಾರ ಎಂದುಕೊಂಡರೂ ತಾನೇ ಇಚ್ಛೆಪಟ್ಟು ಮಾನವ ಜೀವನದ ಹಂತಕ್ಕೆ ಇಳಿದು, ಮಾನಾಪಮಾನಗಳು ಸಾಮಾನ್ಯರಂತೆ ಸಹಿಸಿ, ಎಡಬಿಡದೆ ಕರ್ತವ್ಯ ಪಾಲಿಸುತ್ತಾ, ಹಂತ ಹಂತವಾಗಿ ಮೇಲೇರುತ್ತಾ ಸರ್ವೋನ್ನತ ಸ್ಥಾನವನ್ನು ನಿರ್ವಿವಾದವಾಗಿ ಅಲಂಕರಿಸಿದ ಶ್ರೀಕೃಷ್ಣ. ಶ್ರೀಕೃಷ್ಣನ ಜೀವನವೇ ಒಂದು ಸಂದೇಶ. ಪರಿಪೂರ್ಣ ಜೀವನವನ್ನು ಎಲ್ಲ ಏರುಪೇರುಗಳ ನಡುವೆ ಆನಂದದಿಂದ, ತನ್ಮಯತೆಯಿಂದ, ಜೀವ ಪ್ರೀತಿಯಿಂದ, ಜೀವ ಕಾರುಣ್ಯದಿಂದ, ಸ್ಥಿತಪ್ರಜ್ಞತೆಯಿಂದ, ನಿರ್ಮೋಹದಿಂದ, ಧೈರ್ಯಸ್ಥೈರ್ಯದಿಂದ ಹೇಗೆ ಅನುಭವಿಸಬೇಕು ಎಂದು ನಡೆದು ತೋರಿದ ಮಹಾಯೋಗಿ, ಮಹಾನುಭಾವಿ, ಜಗದ್ಗುರು ಶ್ರೀಕೃಷ್ಣ. ಭಗವದ್ಗೀತೆಯಲ್ಲಿ ತಾನು ಆಚರಿಸಿದ ಜೀವನ ವ್ರತವನ್ನೇ ಬೋಧಿಸಿದ. ತನ್ನೊಡನೆ ಎಲ್ಲಾ ಸದ್ಭಕ್ತರು ತನ್ನಂತೆಯೇ ಆಗಬಹುದು ಎಂದು ಮೇಲ್ಪಂಕ್ತಿ ಹಾಕಿ ತೋರಿದ.