ಅಕ್ಷರ ಆರಾಧನೆ-8: ಕಳ್ಳ ಕೃಷ್ಣನ ತುಂಟಾಟ

Upayuktha
0


 

ಬಾಲ್ಯದಲ್ಲಿ ತುಂಟಾಟ ಮಾಡುವುದು ಮಕ್ಕಳ ಉತ್ತಮ ಆರೋಗ್ಯದ ಲಕ್ಷಣವೆಂದು ಹೇಳುತ್ತಾರೆ. ಈ ತುಂಟಾಟವನ್ನು ಕಂಡು ತಂದೆ, ತಾಯಿ, ಬಂಧುಬಳಗ ಸಂತಸ ಪಡುತ್ತಾರೆ. ಜಗದೊಡೆಯ ಶ್ರೀಕೃಷ್ಣನೂ ತನ್ನ ಬಾಲ್ಯದಲ್ಲಿ ತುಂಟಾಟಗಳನ್ನು ತೋರಿಸಿದ. 

ಕೃಷ್ಣನು ಹಾಲು, ಮೊಸರು, ಬೆಣ್ಣೆಗಳನ್ನು ಕದಿಯುತ್ತಿದ್ದ. ಅದನ್ನು ತಾನೂ ತಿನ್ನುತ್ತಿದ್ದ. ತನ್ನ ಸ್ನೇಹಿತರಿಗೂ ಕೊಡುತ್ತಿದ್ದ. ಕಳ್ಳತನದಲ್ಲಿ ಸಿಕ್ಕಿಬಿದ್ದಾಗ ಅಪರಾಧಿ ಮುಖನೋಟ ಬೀರುತ್ತಿದ್ದ. ಆ ನೋಟಕ್ಕೆ ನಂದಗೋಕುಲದ ಜನ ಮುಗ್ಧರಾಗಿ ಬಿಡುತ್ತಿದ್ದರು. ಎಲ್ಲವನ್ನು ಮರೆತು ಬಿಡುತ್ತಿದ್ದರು. ಆ ಮೇಲೆ ಮತ್ತೆ ಪ್ರಾರಂಭವಾಗುತ್ತಿತ್ತು. ಕೃಷ್ಣನ ಕಳ್ಳತನ ಇನ್ನೊಂದು ಮನೆಯಲ್ಲಿ. ಹೀಗೆ ಸಾಗುತ್ತಿತ್ತು ಬಾಲ ಕೃಷ್ಣನ ದಿನಚರಿ. ಹಾಲು ಮೊಸರು ಬೆಣ್ಣೆಗಳನ್ನು ಹೊರತುಪಡಿಸಿ ಬೇರೆ ಯಾವ ಬೆಲೆಬಾಳುವ ವಸ್ತುಗಳನ್ನು ಕೃಷ್ಣ ಕದಿಯುತ್ತಿರಲಿಲ್ಲ. ಬೆಣ್ಣೆಯಂತಹ ಮೃದುವಾದ ಮನಸ್ಸು ತಾನೆ ಕೃಷ್ಣನಿಗೆ ಬೇಕಾಗಿರೋದು? 

ಕೃಷ್ಣನು ಕಳ್ಳತನ ಮಾಡಿದಾಗ ನಂದಗೋಕುಲದ ಲಲನೆಯರು ಅವನನ್ನು ದೂರುತ್ತಿದ್ದರು. ಅವನಿಗೆ ಶಿಕ್ಷೆ ಕೊಡು ಎಂದು ಯಶೋದೆಯನ್ನು ಪೀಡಿಸುತ್ತಿದ್ದರು. ಆದರೆ ಒಂದು ದಿನ ಕೃಷ್ಣ ಆ ಗೋಪಿಯರ ಮನೆಗೆ ಹೋಗದಿದ್ದರೆ ಅವರು ಚಡಪಡಿಸುತ್ತಿದ್ದರು. ಏನನ್ನೋ ಕಳೆದುಕೊಂಡಂತೆ ಪರಿತಪಿಸುತ್ತಿದ್ದರು. ಕೃಷ್ಣನು ನಿತ್ಯ ತಮ್ಮಮನೆಗೆ ಬರಲಿ, ಬೇಕಾದ್ದು ಕದಿಯಲಿ ಎಂದು ಅವರ ಮನಗಳು ಸಾರಿ ಸಾರಿ ಹೇಳುತ್ತಿದ್ದವು. ಬೆಣ್ಣೆಯ ಗಡಿಗೆಗಳು ಕೃಷ್ಣನ ಕೈಗೆ ಸುಲಭವಾಗಿ ಸಿಗಲಿ ಎಂದೇ ಆದಷ್ಟು ಕಡಿಮೆ ಎತ್ತರದಲ್ಲಿ ಅವುಗಳನ್ನು ಇಟ್ಟಿರುತ್ತಿದ್ದರು.

ವಸ್ತು ಒಡವೆಗಳನ್ನು ಕದ್ದವರಿಗೆ ಶಿಕ್ಷೆಯಾಗಬೇಕು. ಆದರೆ ಮನಸ್ಸನ್ನು, ಹೃದಯವನ್ನು ಕದಿಯುವವರಿಗೆ ಯಾವ ಶಿಕ್ಷೆ? ಆ ಶಿಕ್ಷೆಯನ್ನು ಯಾರು ಕೊಡಬೇಕು? ಹೀಗೆ ನಡೆಯುತ್ತಿದ್ದವು ಕೃಷ್ಣನ ಬಾಲ್ಯದ ದಿನಗಳು. ಇದನ್ನು ನೋಡುವವರಿಗೂ ಚೆಂದ. ನೋಡಿಸಿಕೊಳ್ಳುವವರಿಗೂ ಚೆಂದ, ಅಲ್ಲವೇ? 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top