ಕೃಷ್ಣನದು ಒಂದು ಸರಳ ಜೀವನವಾಗಿತ್ತು. ಸಂಸಾರವೂ ಬಂಧನವೆಂಬುದನ್ನು ತೋರಿಸಲು ಬಂಧನದಲ್ಲಿಯೇ (ಕಾರಾಗೃಹ) ಜನಿಸಿದ. ಬಂಧನದಿಂದ ಮುಕ್ತನಾಗಲು ಏನು ಮಾಡಬೇಕು ಎಂಬುದನ್ನು ಕೇವಲ ಉಪದೇಶಿಸದೆ ಅದನ್ನು ತಾನು ಮಾಡಿಯೂ ತೋರಿಸಿದನು.
ಕಲ್ಲು ಸಕ್ಕರೆ ಸವಿಯಂತೆ ಗೋಪಾಲರ ಸ್ನೇಹ ಬೆಳೆಸಿದ. ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ನಡೆದ. ಇದಕ್ಕಾಗಿ ಎಲ್ಲರ ಮನ ಒಲಿಸಿದ. ಇವನ ಜೊತೆ ಬಂದವರು ಸಂಸಾರದಲ್ಲೂ ಗೆದ್ದರು. ಸಂಸಾರದಿಂದಲೂ ಗೆದ್ದರು. ಇವನ ಜೊತೆ ಬರಲೊಪ್ಪದವರು ಇಲ್ಲೂ ಜಯಿಸಲಿಲ್ಲ. ಅಲ್ಲೂ ಜಯಿಸಲಿಲ್ಲ.
ಕಷ್ಟಗಳನ್ನು ಕಂಡು ಹೆದರಬಾರದು. ಅವುಗಳನ್ನೇ ಹೆದರಿಸಬೇಕು. ಆಗ ಮಾತ್ರ ನಮಗೆ ಅವುಗಳಿಂದ ಮುಕ್ತಿ. ಇದನ್ನು ಕೃಷ್ಣ ತಾನೂ ಮಾಡಿ ತೋರಿಸಿದ. ಇತರರಿಗೂ ಮಾಡಲು ಹೇಳಿದ. ಅರಸೊತ್ತಿಗೆ ಪಡೆದರೂ ಸಾಮಾನ್ಯರ ಸಂಗ ಬಿಡಲಿಲ್ಲ. ಎಲ್ಲರೂ ಎಲ್ಲರಿಗಾಗಿ ಬದುಕುವ ಕಲೆಯನ್ನು ತೋರಿಸಿದ. ತಾನೂ ಅದರಂತೆ ಮಾಡಿ ತೋರಿಸಿದನು. ಬಡವನಾದ ಬಾಲ್ಯ ಸ್ನೇಹಿತನನ್ನೂ ಮರೆಯಲಿಲ್ಲ. ಒಳ್ಳೆ ಮನಸ್ಸೇ ಸಂಪತ್ತು. ಅದುವೇ ಪರಿಹರಿಸುವುದು ನಮ್ಮ ಎಲ್ಲ ಆಪತ್ತು. ದುಷ್ಟರಿಗೂ ಪರಿವರ್ತನೆಗೆ ಅವಕಾಶಕೊಟ್ಟ. ಅದನ್ನು ಸದುಪಯೋಗ ಪಡಿಸಿಕೊಂಡವರು ಉಳಿದರು, ಬಾಳಿದರು. ಇಲ್ಲದವರು ಅಳಿದರು, ನಾಶವಾದರು.
ಕೃಷ್ಣನು ಕೃಷ್ಣ ಬಣ್ಣದವ ಎಂದು ಹೇಳುತ್ತಾರೆ. ನಾವೇನೂ ಅವನನ್ನು ಆಗ ನೋಡುವ ಭಾಗ್ಯ ಪಡೆದಿರಲಿಲ್ಲ. ಆದರೆ ಕೃಷ್ಣನ ಮನಸ್ಸು ಕಪ್ಪಾಗಿರಲಿಲ್ಲ. ಸ್ಪಟಿಕದಂತೆ ಶುಭ್ರವಾಗಿತ್ತು. ಇದೂ ಕೆಲವರಿಗೆ ಹಿಡಿಸಲಿಲ್ಲ. ಅದು ಕೃಷ್ಣನ ತಪ್ಪಲ್ಲ! ರಾಜಸೂಯ ಯಾಗದಲ್ಲಿ ಬಂದ ಅತಿಥಿಗಳ ಕಾಲು ತೊಳೆದು ಸತ್ಕರಿಸಿದ. ಸೇವಕನ ಕಾರ್ಯದಲ್ಲೂ ಸಂತೃಪ್ತಿ, ಜೀವನದಲ್ಲೂ ಸಜ್ಜನಿಕೆಯನ್ನು ಮೀರಲಿಲ್ಲ. ತಾನೂ ಆದರ್ಶನಾದ. ಇತರರೂ ಆಗುವಂತೆ ಪ್ರೇರೇಪಿಸಿದ.
ಶ್ರೀಕೃಷ್ಣನ ಜೊತೆಗೆ ಇದ್ದ ಅವನ ಶಂಖದ ಹೆಸರು ಪಾಂಚಜನ್ಯ ಕುರುಕ್ಷೇತ್ರ ಯುದ್ಧದಲ್ಲಿ ವೈರಿಗಳಲ್ಲಿ ನಡುಕ ಹುಟ್ಟಿಸಿದ ಶಂಖ-ಪಾಂಚಜನ್ಯ. ಇದು ಹೇಗೆ ಶ್ರೀಕೃಷ್ಣನ ಕೈಸೇರಿತು ಎಂಬ ಬಗ್ಗೆ ಒಂದು ವೃತ್ತಾಂತವಿದೆ.
ಪಂಚಜನ ಎಂಬ ಒಬ್ಬ ರಾಕ್ಷಸನಿದ್ದ. ಶ್ರೀಕೃಷ್ಣನು ಅವನನ್ನು ಸಂಹಾರ ಮಾಡಿದನು. ಅವನ ದೇಹದಿಂದ ಪಡೆದ ಶಂಖವೇ ಪಾಂಚಜನ್ಯ.ಈ ಪಂಚಜನ ಎಂಬ ದೈತ್ಯ ಪ್ರಹ್ಲಾದನಮಗ. ಶ್ರೀಕೃಷ್ಣನ ಗುರುಗಳೂ ಸಾಂದೀಪನಿ ಋಷಿಗಳು. ಇವರ ಮಗನನ್ನು ಸಂಹ್ಲಾದನು ಅಪಹರಿಸಿದನು. ಈತನು ಸಮುದ್ರದಲ್ಲಿ ಅವಿತು ಕುಳಿತುಕೊಂಡ. ಆಗ ಶ್ರೀಕೃಷ್ಣ ಬಲರಾಮರು ಬಂದು ಈ ಪಂಚಜನ ರಕ್ಕಸನನ್ನು ಸಂಹಾರ ಮಾಡಿದರು. ಅವನಲ್ಲಿ ಈ ಶಂಖ ದೊರಕಿತು. ಆದರೆ ಇವರಿಗೆ ಗುರುಪುತ್ರ ಮಾತ್ರ ದೊರೆಯಲಿಲ್ಲ. ನಂತರ ಶ್ರೀಕೃಷ್ಣನು ಯಮಲೋಕಕ್ಕೆ ಹೋದನು. ಅಲ್ಲಿದ್ದ ಗುರುಪುತ್ರನನ್ನು ಮರಳಿ ಕರೆದುಕೊಂಡು ಬಂದು ತನ್ನ ಗುರುವಿಗೆ ಒಪ್ಪಿಸುತ್ತಾನೆ ಶ್ರೀಕೃಷ್ಣ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ