ಶ್ರೀಕೃಷ್ಣ ಮಾಡಿದಂತೆ ನಾವು ಮಾಡುತ್ತೇವೆ ಎನ್ನುವವರು ಮೊದಲು ಒಂದು ವಿಚಾರ ತಿಳಿದುಕೊಳ್ಳಬೇಕು. ಶ್ರೀಕೃಷ್ಣ ಕಿರು ಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿದ್ದಾನೆ, ಅಗ್ನಿಪಾನ ಮಾಡಿದ್ದಾನೆ, ಸುಧಾಮನಿಗೆ ಒಲಿದು ಒಂದು ಕ್ಷಣದಲ್ಲಿ ಸಂಪತ್ತು ಬರುವಂತೆ ಮಾಡಿದ್ದಾನೆ. ಆದರೆ ಸಾಮಾನ್ಯರಾದ ನಮ್ಮಿಂದ ಇವೆಲ್ಲಾ ಕೆಲಸಗಳು ಸಾಧ್ಯವೇ ಎನ್ನುವ ಚಿಂತನೆ ಮೊದಲು ಮಾಡಬೇಕು.
ಭಗವದ್ಗೀತೆಯಲ್ಲಿ ಧರ್ಮ, ನ್ಯಾಯ, ಕರ್ಮದ ಯಾವ ರಹಸ್ಯವನ್ನು ತಿಳಿಸಿದ್ದಾನೋ ಅದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹೆಜ್ಜೆ ಹೆಜ್ಜೆಗೂ ಪಾಲಿಸಬೇಕು.
ಆಚಾರ್ಯ ಮಧ್ವರ ಭಕ್ತಿಗೆ ಒಲಿದ ಶ್ರೀಕೃಷ್ಣ ಸಜ್ಜನರ ಸಾಧನೆಗೆ ಪ್ರತಿಬಂಧಕವಾದ ಅನೇಕ ವಿಘ್ನಗಳ ನಿವಾರಣೆಗಾಗಿ ಉಡುಪಿಯಲ್ಲಿ ನೆಲೆಸಿದ್ದಾನೆ.
ಶ್ರೀಕೃಷ್ಣ ದೇವರು ಭಗವದ್ಗೀತೆ ಮೂಲಕ ಸಾಮಾಜಿಕ ಕಾರ್ಯ ಮಾಡುವವರಿಗೆ ಪ್ರಮುಖ ಸಂದೇಶ ನೀಡಿದ್ದಾನೆ. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ (ಯಾವುದೇ ಕಾರ್ಯವನ್ನಾದರೂ ನೀನು ಫಲದ ಅಪೇಕ್ಷೆಯಿಲ್ಲದೆ ಮಾಡಬೇಕು) ನಿಸ್ವಾರ್ಥ ಸೇವೆ ಮಾಡುವುದರಿಂದ ನಿನಗೆ ಒಳಿತಾಗುತ್ತದೆ. ದೇವರ ಪರಿಪೂರ್ಣ ಅನುಗ್ರಹಕ್ಕೆ ನೀನು ಪಾತ್ರನಾಗುತ್ತಿ ಎನ್ನುವ ಸಂದೇಶದ ಮೂಲಕ ಸ್ವಾರ್ಥ ರಹಿತ ಸಮಾಜ ಸೇವೆಗೆ ಶ್ರೀಕೃಷ್ಣ ಒತ್ತು ನೀಡಿದ್ದಾನೆ. ಭಗವದ್ಗೀತೆ ಒಂದು ಮನಃಶಾಸ್ತ್ರ. ಮಾನಸಿಕ ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಗೆ ಬದುಕಿನಲ್ಲಿ ಉತ್ಸಾಹ ತುಂಬುವ, ಆತ್ಮವಿಶ್ವಾಸ ಬೆಳೆಸುವ ಒಂದು ಅಪೂರ್ವ ಟಾನಿಕ್ ಇದ್ದಂತೆ.
ಸಿಂಹ ಮಾಸದ ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ ಸಹಿತವಾದ ಚಂದ್ರೋದಯದಲ್ಲಿ ಶ್ರೀಕೃಷ್ಣನ ಅವತಾರದ ಹಿನ್ನೆಲೆಯನ್ನು ಸೋದೆ ಶ್ರೀವಾದಿರಾಜ ಸ್ವಾಮಿಗಳು ರುಕ್ಮಿಣೀಶ ವಿಜಯದಲ್ಲಿ ವರ್ಣಿಸಿದ್ದಾರೆ. ಅಷ್ಟ ದಿಕ್ಕಿನಲ್ಲೂ ಇರುವ ದುಷ್ಟರ ಸಂಹಾರವನ್ನು ಸೂಚಿಸುವುದು, ಎಚ್ಚರಿಸುವುದೇ ಶ್ರೀಕೃಷ್ಣಾವತಾರದ ಮುಖ್ಯ ಉದ್ದೇಶ. ಮಧ್ಯರಾತ್ರಿಯಲ್ಲಿ ದುಷ್ಟಶಕ್ತಿಗಳ ಸಂಚಾರ ಹೆಚ್ಚು. ಹೀಗಾಗಿ ದುಷ್ಟಶಕ್ತಿಗಳ ಹೆಚ್ಚು ಸಂಚಾರವಿರುವ ಹೊತ್ತಲ್ಲೇ ಅವತಾರವೆತ್ತಿದ್ದಾನೆ ಎನ್ನುವುದು ವರ್ಣನೆ ಹಿಂದಿನ ಸತ್ಯವಾಗಿದೆ. ದೇವರ ಜನ್ಮದಿನ ಆಚರಣೆ ಹಿಂದೆ ಸಮಾನ ಭಾವದ ತತ್ವವಿದೆ. ಪ್ರತಿಯೊಬ್ಬರೂ ತಮ್ಮೊಳಗಿನ ದುಷ್ಟಶಕ್ತಿಯನ್ನು ದಮನಿಸಬೇಕು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ