ಅಕ್ಷರ ಆರಾಧನೆ-11: ಶ್ರೀ ಕೃಷ್ಣ ಲೀಲಾ ಕಥಾಮೃತ

Upayuktha
0

|| ಅಗ್ನ್ಯಾಂತರ್ಗತ ಶ್ರೀ ಕೃಷ್ಣಾಯ ನಮಃ ||


ಕೃಷ್ಣರಹಸ್ಯವನ್ನು ಬಯಲು ಮಾಡುವ ತವಕದಲ್ಲಿ ಎಷ್ಟೋ ರಸಮಾರ್ಗಗಳು ಸೃಷ್ಟಿಯಾಗಿವೆ. ಕಾವ್ಯ, ನಾಟಕ, ಸಂಗೀತ, ಶಿಲ್ಪ, ನೃತ್ಯ, - ಹೀಗೆ ಕಲಾಪರಂಪರೆಯ ಮೂಲಸ್ತೋತ್ರವೇ ಕೃಷ್ಣ ಎನಿಸಿದ್ದಾನೆ. ಮಹಾಕಾವ್ಯವಾದ ಮಹಾಭಾರತದ ನಾಯಕನೂ, ಮಹಾಪುರಾಣವಾದ ಭಾಗವತದ ದೈವವೂ ಕೃಷ್ಣನೇ. ಸಂಸ್ಕೃತ ಕಾವ್ಯಪರಂಪರೆಯ ಎರಡು ವಿಶಿಷ್ಟ ಕೃತಿಗಳೆಂದರೆ ಜಯದೇವನ `ಗೀತಗೋವಿಂದ' ಮತ್ತು ಲೀಲಾಶುಕನ `ಶ್ರೀಕೃಷ್ಣಕರ್ಣಾಮೃತ'. ಗೀತಗೋವಿಂದ ಪ್ರಧಾನವಾಗಿ ಕೃಷ್ಣನ ಶೃಂಗಾರಭಾವಕ್ಕೆ ಮೀಸಲಾದುದು. ಕೃಷ್ಣತತ್ತ್ವದ ಎಲ್ಲ ಆಯಾಮಗಳನ್ನು ರಸಮಯವಾಗಿ ಸ್ಪರ್ಶಿಸಿರುವ ಕೃತಿಯೇ `ಶ್ರೀಕೃಷ್ಣಕರ್ಣಾಮೃತ'. ಬಿಡಿಪದ್ಯಗಳ ಗುಚ್ಛವಾದ ಈ ಕಲಾಖಂಡ ದಿಟವಾಗಿಯೂ ನಮ್ಮ ಭಾವ-ಬುದ್ಧಿಗಳಿಗೆ ಅಮೃತಪ್ರಾಯವೇ ಹೌದು. ಕೃಷ್ಣನ ಒಂದೊಂದು ಅವಸ್ಥೆಯ ಹಿನ್ನೆಲೆಯಲ್ಲಿರುವ ಮಹೋನ್ನತ ತಾತ್ತ್ವಿಕತೆಯನ್ನು ರಸಮಯವಾಗಿ ನಿರೂಪಿಸಿರುವ ಕ್ರಮ ಸಾಹಿತ್ಯಲೋಕದಲ್ಲಿಯೇ ಅನನ್ಯವಾದುದು. 


ಭಾರತೀಯ ಸಾಹಿತ್ಯ, ಸಂಗೀತ, ಧಾರ್ಮಿಕತೆ, ಆಧ್ಯಾತ್ಮಿಕತೆ, ರಾಜನೀತಿ, ಜೀವನಾದರ್ಶ -ಹೀಗೆ ಸಂಸ್ಕೃತಿಯ ಎಲ್ಲ ಆಯಾಮಗಳನ್ನೂ ಕೃಷ್ಣ ಆವರಿಸಿಕೊಂಡಿದ್ದಾನೆ. ಏಕೆಂದರೆ ಅವನಲ್ಲಿ ಸಲುಗೆಯಿಂದ ಒಡನಾಡಬಹುದು. ಕೃಷ್ಣನು ಮಾತ್ರ ಪ್ರತಿ ಕ್ಷಣವೂ ಮನುಷ್ಯನಾಗುವುದಕ್ಕಾಗಿಯೇ ಹಂಬಲಿಸಿದವನು. ಆದುದರಿಂದಲೇ ನಮಗೆ ಕೃಷ್ಣನಲ್ಲಿ ಸಲುಗೆಯೂ ಹೆಚ್ಚು. ಪ್ರೀತಿಯೂ ಹೆಚ್ಚು. ಯಾರ ಮೇಲೆ ನಮಗೆ ಸಲುಗೆ ಮತ್ತು ಪ್ರೀತಿ ಇರುತ್ತವೆಯೋ ಅಂಥವರನ್ನೇ ಅಲ್ಲವೆ ನಾವು ಮುಕ್ತವಾಗಿ ಆಲಿಂಗಿಸಿಕೊಳ್ಳುವುದು? ಹೀಗಾಗಿಯೇ ನಮ್ಮ ಜೀವನದ ಎಲ್ಲ ಭಾವಗಳಲ್ಲೂ ` ಕೃಷ್ಣತ್ವ'ದ ಸ್ಪರ್ಶವಿರುವುದು ಸೂಕ್ತ. 

ಶ್ರೀಕೃಷ್ಣನದು ಪೂರ್ಣಾವತಾರವೆಂದು ನಮ್ಮ ಪಾರಂಪರಿಕ ವಿಶ್ವಾಸವಿದೆ. ಮನುಷ್ಯ ಪ್ರವೃತ್ತಿ ವಿಕಟತೆಗಳ ಎದುರಿನಲ್ಲಿ ಅತ್ಯಂತಿಕಧರ್ಮದ ಸಂಸ್ಥಾಪನೆ ಒಬ್ಬ ಅವತಾರಪುರುಷನಿಂದ ಹೇಗೆ ಆಯಿತು ಎನ್ನುವುದನ್ನು ಶ್ರೀಕೃಷ್ಣಚರಿತ್ರೆಯಲ್ಲಿ ಕಾಣುತ್ತೇವೆ. ಭಾಗವತದಲ್ಲಿ ಶ್ರೀಕೃಷ್ಣನದೇ ಮಾತಿದೆ :  ಬ್ರಹ್ಮನ್ ಧರ್ಮಸ್ಯ ವಕ್ತಾಹಂ ಕರ್ತಾ ತದನುಮೋದಿತಾ| ತಚ್ಛಕ್ಷಯಂಲ್ಲೋಕಮಿಮಂ ಆಸ್ಥಿತಃ ಪುತ್ರ ಮಾ ಖಿದಾ || "ಜನರಿಗೆ ಶಿಕ್ಷಣ ಕೊಡುವುದಕ್ಕಾಗಿಯೇ ನಾನು ನಿಂತಿದ್ದೇನೆ" ಎಂದು ಶ್ರೀಕೃಷ್ಣನು ನಾರದರಿಗೆ ಹೇಳುತ್ತಾನೆ. ಆ ಶಿಕ್ಷಣವಷ್ಟೂ ಹರಳುಗಟ್ಟಿರುವುದು ಭಗವದ್ಗೀತೆಯಲ್ಲಿ. ಅವನ ಜೀವನದ ಮಿಕ್ಕೆಲ್ಲ ಸಾಧನೆಗಳನ್ನು ಪಕ್ಕಕ್ಕಿಟ್ಟರೂ ಅವನಿಗೆ ಅತ್ಯುಜ್ವಲ ದೀಪಧಾರಿಯ ಸ್ಥಾನವನ್ನು ದೃಢಪಡಿಸುವುದಕ್ಕೆ ಭಗವದ್ಗೀತೆಯೊಂದೇ ಸಾಕಾಗುತ್ತದೆ.


ಬಾಲಕೃಷ್ಣ ಹೇಗೆ ಮಲಗಿದ್ದಾನೆ? ಲೀಲಾಶುಕ ಹೀಗೆ ಕಂಡಿದ್ದಾನೆ: ಅದು ಬಾಲಕೃಷ್ಣನಿಗೆ ಕಥೆಯನ್ನು ಹೇಳುವ ಸಮಯ. ಅಮ್ಮ ಅವನಿಗೆ ಕಥೆ ಹೇಳುತ್ತಿದ್ದಾಳೆ – ಅದು ರಾಮಾಯಣದ ಕಥೆ. ಕೃಷ್ಣನಿಗೆ ಅವನ ಹಿಂದಿನ ಅವತಾರದ ಕಥೆ; ರಾಮ ಮತ್ತು ಕೃಷ್ಣ. ಇಬ್ಬರೂ ಮಹಾವಿಷ್ಣು ಅವತಾರ ಎಂದೇ ಎಣಿಕೆಯಲ್ಲವೆ? ಲೀಲಾಶುಕನು ಈ ಕಥಾಪ್ರಸಂಗವನ್ನು ಕಾಣಿಸಿರುವ ಪರಿಯನ್ನು ನೋಡಿ: `ರಾಮೋ ನಾಮ ಬಭೂವ'  `ಹುಂ' `ತದಬಲಾ ಸೀತೇತಿ' `ಹುಂ' `ತಾಂಪಿತು-ವಾರ್ಚಾಚಾ ಪಂಚವಟೀತಟೇ ವಿಹರತಃ ತಸ್ಕಾಹರದ್ರಾವಣ!!' ನಿದ್ರಾರ್ಥಂ ಜನನೀ ಕಥಾಮಿತಿ ಹರೇರ್ಹುಂಕಾರತಃ ಶ್ರುಣ್ವತಃ  `ಸೌಮಿತ್ರೇ ಕ್ವ ಧನುರ್ಧನುರ್ಧನು' ರೀತಿ ವ್ಯಗ್ರಾಗಿರಃ ಪಾತು ವಃ ||ಕೃಷ್ಣನಿಗೆ ತಾಯಿ ಕಥೆಯನ್ನು ಹೇಳುತ್ತಿದ್ದಾಳೆ: ಹೂಂಗುಟ್ಟಿದ್ದಾನೆ: `ಹುಂ'. `ಅವನ ಹೆಂಡತಿ ಸೀತೆ'. `ಹುಂ'. `ತಂದೆಯ ಮಾತಿನಂತೆ ಅವನು ಪಂಚವಟೀ ಅರಣ್ಯಪ್ರದೇಶದಲ್ಲಿ ಓಡಿಯಾಡುತ್ತಿದ್ದ. ಆ ರಾಮನ ಹೆಂಡತಿಯಾದ ಸೀತೆಯನ್ನು ರಾವಣನು ಎತ್ತಿಕೊಂಡು ಹೋದವನು'. ಹೀಗೆ ನಿದ್ರೆ ಮಾಡಲಿ ಎಂದು ತಾಯಿ ಹೇಳುತ್ತಿದ್ದ ಕಥೆಯನ್ನು ಮಗು ಹೂಂಗುಟ್ಟುತ್ತ ಕೇಳುತ್ತಿತ್ತು. ಸೀತೆಯ ಅಪಹರಣದ ಕಥಾಭಾಗವನ್ನು ಕೇಳುತ್ತಿದ್ದಂತೆಯೇ ಬಾಲಕೃಷ್ಣ `ಓ ಲಕ್ಷ್ಮಣಾ ! ಎಲ್ಲಿ ನನ್ನ ಬಿಲ್ಲು, ಬಿಲ್ಲು, ಬಿಲ್ಲು' ಎಂದು ಉದ್ಗರಿಸಿದನಂತೆ. ಆ ಬಾಲಕೃಷ್ಣ ನಮ್ಮನ್ನು ಕಾಪಾಡಲಿ. 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top