ಹವ್ಯಕ ಮಹಾಸಭಾ ಮುಳ್ಳೇರಿಯ ಮಂಡಲ ಸಭೆ ಸಂಪನ್ನ

Upayuktha
0

ಕಾಸರಗೋಡು: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯಾ ಮಂಡಲ ಕಾಸರಗೋಡು ವಲಯ ಅಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ಟರ ನಿವಾಸದಲ್ಲಿ ಜರಗಿತು.


ಧ್ವಜಾರೋಹಣ ಶಂಖನಾದ ಗುರುವಂದನೆ ಗೋವಂದನೆಯೊಂದಿಗೆ ಸಭೆಯು ಪ್ರಾರಂಭವಾಯಿತು. ಸ್ವಾಗತದ ನಂತರ ಶ್ರೀ ಗಣೇಶ ಪಂಚ ರತ್ನ ಸ್ತೋತ್ರ ಪಠಣ ನಡೆಯಿತು. ಕೋಶಾಧ್ಯಕ್ಷರು ಲೆಕ್ಕಪತ್ರ ಮಂಡನೆ ಮಾಡಿದರು ಹಾಗೂ ಮಾಣಿಮಠದ ಶಿಲಾಮಯ ಗರ್ಭಗುಡಿ, ರಚನೆಯ ಆಯವ್ಯಯವನ್ನು ಸಭೆಯ ಮುಂದಿಟ್ಟರು.

ಸುಳ್ಯ ವಲಯದ ಕೋಶಾಧ್ಯಕ್ಷರಾದ ಶ್ರೀ ಈಶ್ವರ ಭಟ್ಟ ಇವರ ಮಗಳು ಅಶ್ವಿನಿ ಅವರು ದಕ್ಷಿಣ ಕೊರಿಯಾದಲ್ಲಿ ನಡೆಯುವ ಸ್ಕೌಟ್ ಗೈಡ್ ಅಂತಾರಾಷ್ಟ್ರೀಯ ಜಾಂಬೂರಿಗೆ ತೆರಳಲು ಶುಭಾಶಯ ಕೋರಲಾಯಿತು.


ಮಹಾಮಂಡಲದ ನೂತನ ಪದಾಧಿಕಾರಿಗಳ ಹೆಸರು ಪ್ರಕಟಗೊಂಡಿದ್ದು ಮುಳ್ಳೇರಿಯ ಮಂಡಲದ ಅಧ್ಯಕ್ಷರಾದ ಶ್ರೀ ಬಾಲಸುಬ್ರಮಣ್ಯ ಭಟ್ ಸರ್ಪಮಲೆಯವರು ಮಹಾಮಂಡಲದ ಉಪಾಧ್ಯಕ್ಷರಾಗಿ ನಿಯೋಜನೆಗೊಂಡಿರುತ್ತಾರೆ. ಕೇಶವಪ್ರಕಾಶ ಮುಣ್ಣಿಕ್ಕಾನ ಇವರು ಯುವ ವಿಭಾಗದ ಜವಾಬ್ದಾರಿಯನ್ನು ನಿರ್ವಹಿಸಲಿದ್ದು ಅಭಿನಂದನೆ ಸಲ್ಲಿಸಲಾಯಿತು.


ತಾರೀಕು 3.7.23 ರಿಂದ 29,9,2023ರ ತನಕ ಆಶೋಕೆಯಲ್ಲಿ ಶ್ರೀ ಸಂಸ್ಥಾನದವರು ಸಂಘಟನಾ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳುವ ವಿಚಾರವನ್ನು ಪ್ರಸ್ತಾಪಿಸಿ ಆಮಂತ್ರಣ ಪತ್ರಿಕೆ ಮತ್ತು ಸೇವಾ ವಿವರಗಳನ್ನು ತಿಳಿಸಲಾಯಿತು. ಪ್ರತಿವರ್ಷದಂತೆ ಮೂರು ದಿನಗಳಲ್ಲಿ ನಾಲ್ಕು ವಲಯಗಳಿಂದ ಭಿಕ್ಷಾ ಸೇವೆ, ಪಾದ ಪೂಜೆ, ಮಲ್ಲಿಕಾರ್ಜುನ ಪೂಜೆ ನಡೆಸಲು ತಿಳಿಸಲಾಯಿತು.


ಶ್ರೀಮಠದ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕೊಲ್ಲಂಪಾರೆ ಡಾಕ್ಟರ್ ಪುರುಷೋತ್ತಮ ಭಟ್ಟ ದಂಪತಿಗಳು, ಡಾಕ್ಟರ್ ಗಣಪತಿ ಭಟ್ಟ ಕುಳಮರ್ವ ಮತ್ತು ಹಿರಿಯ ಗುರಿಕ್ಕಾರರಾದ ಶ್ರೀ ಶಂಕರನಾರಾಯಣ ಭಟ್‌ ತೆಕ್ಕೆಕೆರೆ ಇವರನ್ನು ಶಾಲು ಹೊದಿಸಿ ಫಲ ಫಲಕ ನೀಡಿ ಗೌರವಿಸಲಾಯಿತು. ಸನ್ಮಾನಿತರು ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ದರು.


ಮಾಸದ ಮಾತೆಯರಾಗಿ ವೈಯಕ್ತಿಕವಾಗಿ ದೇಣಿಗೆ ನೀಡಿದ ಡಾ.ಪದ್ಮಾವತಿ ಪುರುಷೋತ್ತಮ ಭಟ್ ಇವರನ್ನೂ ಗೌರವಿಸಲಾಯಿತು.


ಸಭೆಗೆ ಆಗಮಿಸಿದ ಮಹಾಮಂಡಲದ ಅಧ್ಯಕ್ಷರಾದ ಆರ್ ಎಸ್ ಹೆಗಡೆ ಅವರು ಶ್ರೀ ಗುರುಗಳ ಚಾತುರ್ಮಾಸದ ಪೂರ್ಣ ವಿವರಗಳನ್ನು ನೀಡಿದರು. ಹಲವಾರು ವರ್ಷಗಳಿಂದ ಶ್ರೀಮಠದ ಜವಾಬ್ದಾರಿಯನ್ನು ನಿರ್ವಹಿಸಿದ್ದು ತಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದ ಅವರು ಶ್ರೀ ಗುರುಗಳ ಸಂಕಲ್ಪವನ್ನು ಸಾಕಾರಗೊಳಿಸಲು ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.


ಮಹಾಮಂಡಲದ ನಿಯೋಜಿತಾಧ್ಯಕ್ಷರಾದ ಮೋಹನ್ ಭಾಸ್ಕರ್ ಹೆಗಡೆಯವರು ಸ್ಫೂರ್ತಿದಾಯಕ ಮಾತುಗಳನ್ನಾಡಿ, ಮುಂದಿನ ಅವಧಿಯಲ್ಲಿ ಸಂಘಟಿತರಾಗಿ ಶ್ರೀ ಗುರುಗಳ ಮಾರ್ಗದರ್ಶನಂತೆ ಕಾರ್ಯನಿರ್ವಹಿಸುವ ಎಂದರು. ಚಾತುರ್ಮಾಸ್ಯ ಸಂದರ್ಭದಲ್ಲಿ ಹಮ್ಮಿಕೊಳ್ಳುವ ಸನ್ಮಾನ ಕಾರ್ಯಕ್ರಮ ಈಗಾಗಲೇ ಮಂಡಲ ವ್ಯಾಪ್ತಿಯಲ್ಲಿ ನಡೆದಿರುವುದು ಸಂತಸದ ವಿಚಾರ ತಮ್ಮೆಲ್ಲರ ಸಲಹೆ ಸೂಚನೆಗಳಿಗೆ ಸ್ವಾಗತ ಎಂದರು. ನಾಗರಾಜ ಭಟ್ಟ ಪೆದಮಲೆ ಮತ್ತು ನಿಯೋಜಿತ ಕಾರ್ಯದರ್ಶಿ, ಉದಯ ಶಂಕರ ಭಟ್ ಮಿತ್ತೂರು ಸಂದರ್ಭೋಚಿತ ಮಾಹಿತಿ ನೀಡಿದರು.


ಕುಂಬಳೆ ಸೀಮೆ ಕುಂಟಿಕಾನ ಮಠದ ಜೀರ್ಣೋದ್ಧಾರ ಸಮಿತಿ ಸದಸ್ಯರು ಶ್ರೀ ಗುರುಗಳನ್ನು ಭೇಟಿ ಮಾಡಿದ ವಿಚಾರವನ್ನು ಪ್ರಸ್ತಾಪಿಸಲಾಯಿತು ಮತ್ತು ಕುಂಟಿಕಾನ ಮಠದಲ್ಲಿ ಜೀರ್ಣೋದ್ದಾರ ಸಮಿತಿ ಮತ್ತು ಅಭಿವೃದ್ಧಿ ಟ್ರಸ್ಟ್‌ ಸಭೆ ನಡೆಸುವುದು ಎಂದು ತೀರ್ಮಾನಿಸಲಾಗಿದ್ದು ಶ್ರೀಮಠಕ್ಕೆ ಸಂಬಂಧಪಟ್ಟವರು ಈ ಸಭೆಯಲ್ಲಿ ಭಾಗವಹಿಸಲು ತಿಳಿಸಲಾಯಿತು.


ಸಭೆಯ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಶ್ರೀ ಭಾರತಿ ಪೀಠದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಅನ್ನದಾಸೋಹದ ಬಗ್ಗೆ ತಮ್ಮ ಹುಟ್ಟುಹಬ್ಬ/ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಒಂದು ದಿನದ ಅನ್ನದಾನಕ್ಕಾಗಿ ದೇಣಿಗೆ ನೀಡುವ ಯೋಜನೆ, ಶ್ರೀಮಠದ ಯೋಜನೆಗಳಾದ ಪೀಠದ ಹಾಲ್, ಅಹಿಚ್ಚತ್ರ ಇತ್ಯಾದಿಗಳಿಗೆ ಸಹಕಾರ ನೀಡಲು ವಿನಂತಿ ಮಾಡಿದರಲ್ಲದೆ, ಚಾತುರ್ಮಾಸ್ಯ ಸಂದರ್ಭದಲ್ಲಿ ನಮ್ಮ ಜವಾಬ್ದಾರಿಗಳ ವಿವರಗಳನ್ನು ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು. ಶ್ರೀಮಠದ ಯೋಜನೆಗಳಿಗೆ, ನೂತನ ಪದಾಧಿಕಾರಿಗಳಿಗೆ ನಮ್ಮ ಮಂಡಲದ ಪೂರ್ಣ ಸಹಕಾರ ಇದೆ ಎಂದರು.


ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದ ಸಮರ್ಪಿಸಲಾಯಿತು. ಸಭೆ ನಡೆಸಲು ಅನುಕೂಲ ಕಲ್ಪಿಸಿದ ಕಾಸರಗೋಡು ವಲಯ ಪದಾಧಿಕಾರಿಗಳಿಗೂ ಊಟ ಉಪಚಾರದ ವ್ಯವಸ್ಥೆ ನಡೆಸಿದ ವೈ.ಕೆ ಗೋವಿಂದ ಭಟ್ ಇವರಿಗೂ ಧನ್ಯವಾದ ಸಮರ್ಪಿಸಿ ಸ್ಮರಣೆಕೆಯನ್ನು ನೀಡಲಾಯಿತು. ಶ್ರೀರಾಮ ತಾರಕ ಮಂತ್ರ ಜಪ, ಶಾಂತಿ ಮಂತ್ರ, ಶಂಖನಾದ ಧ್ವಜಾವತರಣದೊಂದಿಗೆ ಸಭೆಯ ಮುಕ್ತಾಯವಾಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top