ಪ್ರತಿದಿನವೂ ಮನೆಯಲ್ಲಿ ಅಗ್ನಿಹೋತ್ರವನ್ನು ಆಚರಿಸುವ ನನಗೆ ಅದರ ಕುರಿತು ಬರೆಯಬಾರದೇಕೆ? ಎಂಬ ಆಲೋಚನೆ ಮೂಡಿದಾಗ ಬರೆದ ಲೇಖನವಿದು.
ಚಿಕ್ಕಂದಿನಲ್ಲಿ ದಿನಪತ್ರಿಕೆಯಲ್ಲಿ ಬಂದ ವಾರ್ತೆಯೊಂದು ಎಲ್ಲರನ್ನೂ ಸೋಜಿಗಕ್ಕೆ ಈಡು ಮಾಡಿತ್ತು. 1984ರಲ್ಲಿ ಮಧ್ಯ ಪ್ರದೇಶದ ಭೋಪಾಲದಲ್ಲಿ ನಡೆದ ಅನಿಲ ದುರಂತದ ಪರಿಣಾಮವಾಗಿ ಸುತ್ತಲ 10-15 ಕಿ.ಮೀ ವ್ಯಾಪ್ತಿಯ ಭೂಪ್ರದೇಶದ ಜನರು ಹಲವಾರು ಉಸಿರಾಟ ಮತ್ತಿತರ ದೈಹಿಕ ತೊಂದರೆಗಳಿಗೆ ಒಳಗಾಗಿದ್ದು ಇಂದಿಗೂ ಅದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಆದರೆ ಭೋಪಾಲಕ್ಕೆ ಕೇವಲ 15 ಕಿಲೋಮೀಟರ್ ದೂರದಲ್ಲಿರುವ ಗ್ರಾಮವೊಂದರಲ್ಲಿನ ಒಂದು ಮನೆಯ ಸದಸ್ಯರಿಗೆ ಮಾತ್ರ ಈ ಅನಿಲ ದುರಂತದ ಯಾವುದೇ ತೊಂದರೆಗಳು ತಟ್ಟಿರಲಿಲ್ಲ. ಇದಕ್ಕೆ ಕಾರಣ ಆ ಮನೆಯವರು ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವ ಅಗ್ನಿಹೋತ್ರ ಎಂಬ ಪ್ರಾಚೀನ ವಿಧಿ ಎಂದು ಬಿತ್ತರವಾಗಿತ್ತು.
ಅದೇ ಸಮಯದಲ್ಲಿ ಆಗ ಹೈದರಾಬಾದಿನಲ್ಲಿ ವಾಸವಾಗಿರುತ್ತಿದ್ದ ನನ್ನ ತಂದೆಯ ಬಾಲ್ಯಸ್ನೇಹಿತರಾದ ಶೇಷ ಭಟ್ಟರು ಬಂದಿದ್ದರು. ಮಾತುಕತೆಯ ಮಧ್ಯದಲ್ಲಿ ನನ್ನೂರಿನಲ್ಲಿ ಪೌರೋಹಿತ್ಯ ಕಾರ್ಯ ನಿರ್ವಹಿಸುತ್ತಿದ್ದ ಅವರ ಮಗನ ಸ್ನೇಹಿತನೋರ್ವ ಅಗ್ನಿಹೋತ್ರವನ್ನು ಆರಂಭಿಸಿದ್ದು, ಅದು ಅತ್ಯಂತ ಕಠಿಣವಾಗಿದೆ, ಇನ್ನೂ ಹರೆಯದ ಆ ಹುಡುಗ ಏಕೆ ಆರಂಭಿಸಿದ್ದಾನೋ ಎಂದು ಚಿಂತಿಸಿದರು. ಅವರ ಮಾತಿನಿಂದ ನನಗೆ ಅರಿವಾದದ್ದು ಇಷ್ಟು. ಹಿಂದಿನ ಕಾಲದಲ್ಲಿ ಅಗ್ನಿಹೋತ್ರವನ್ನು ಪ್ರಾರಂಭಿಸಿದ ವ್ಯಕ್ತಿಯು ಪ್ರತಿದಿನ ಮುಂಜಾನೆ ಸೂರ್ಯೋದಯ ಮತ್ತು ಸಾಯಂಕಾಲ ಸೂರ್ಯಾಸ್ತದ ಸಮಯದಲ್ಲಿ ಅಗ್ನಿಯನ್ನು ಪೂಜಿಸುವ ಪಂಚ ಯಜ್ಞಗಳಲ್ಲಿ ಒಂದಾದ ಪವಿತ್ರ ಅಗ್ನಿಪ್ರಕ್ಷಾಳನ ಕ್ರಿಯೆ. ಒಂದು ದಿನವೂ ತಪ್ಪದೇ ಈ ಕ್ರಿಯೆಯನ್ನು ಮಾಡುವ ವ್ಯಕ್ತಿಯು ಯಜ್ಞಕುಂಡದಲ್ಲಿ ಯಾವತ್ತೂ ಅಗ್ನಿ ಆರದಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಆತ ತನ್ನ ಜೀವನವನ್ನೇ ಮುಡುಪಾಗಿಡಬೇಕು. ತನ್ನ ಈ ಕ್ರಿಯೆಯಲ್ಲಿ ಆತನ ಪತ್ನಿಯೂ ಕೂಡ ಆತನ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಹಿಸಬಹುದು. ಇಂತಹ ಅಗ್ನಿಹೋತ್ರಿಗೆ ಎರಡೆರಡು ವಿವಾಹವಾಗಲು ಅವಕಾಶವಿದೆ. ಅಗ್ನಿ ಹೋತ್ರಿಯ ಮರಣಾನಂತರ ಈ ಹೋಮದ ಅಗ್ನಿಯಿಂದಲೇ ಆತನ ಅಂತ್ಯಕ್ರಿಯೆಗೆ ಬಳಸುತ್ತಾರೆ. ಆಗಿನಿಂದಲೂ ಅಗ್ನಿಹೋತ್ರದ ಕುರಿತು ಕುತೂಹಲ ಇದ್ದೇ ಇತ್ತು.
ಇತ್ತೀಚಿನ ಕೆಲ ವರ್ಷಗಳ ಹಿಂದೆ ನನ್ನ ಸ್ನೇಹಿತೆಯಾದ ಚೇತನಾ ತಿಮ್ಮರೆಡ್ಡಿ ಅವರು ತಾವು ಮನೆಯಲ್ಲಿ ಪ್ರತಿದಿನ ಅಗ್ನಿಹೋತ್ರವನ್ನು ಆಚರಿಸುತ್ತಿದ್ದು, ಅದರ ಕುರಿತ ವಿವರಣೆಗಳನ್ನು ನಾವು ನಡೆಸುವ ಸೌರಭ ಎಂಬ 'ಮಹಿಳೆಯರಿಂದ ಮಹಿಳೆಯರಿಗಾಗಿ'ನ ಪಾಕ್ಷಿಕ ಕಾರ್ಯಕ್ರಮದಲ್ಲಿ ಅಗ್ನಿಹೋತ್ರದ ಪ್ರಾತ್ಯಕ್ಷಿಕೆಯೊಂದಿಗೆ ವಿವರಣೆ ನೀಡಿದರು. ಹೆಣ್ಣು ಮಕ್ಕಳು ಕೂಡ ಅಗ್ನಿಹೋತ್ರವನ್ನು ಸರಳವಾಗಿ ಆಚರಿಸಬಹುದು ಎಂಬ ವಿಷಯವೇ ಮನಸ್ಸಿಗೆ ತುಂಬಾ ಸಂತಸವನ್ನುಂಟು ಮಾಡಿತು.
ಪಂಚ ಯಜ್ಞಗಳಲ್ಲಿ ಒಂದಾದ ಅಗ್ನಿಹೋತ್ರವು ಅಗ್ನಿ ದೇವರನ್ನು ಪೂಜಿಸುವ ಒಂದು ವಿಧವಾಗಿದೆ.
ಅಗ್ನಿಹೋತ್ರ ಹೋಮಕ್ಕೆ ಬೇಕಾಗುವ ಸಾಮಾನುಗಳ ವಿವರ ಇಂತಿದೆ.
ತಾಮ್ರದ ಹೋಮಕುಂಡ, ಶುದ್ಧ ಹಸುವಿನ ಸಗಣಿಯಿಂದ ತಯಾರಿಸಿದ ಬೆರಣಿ ಅಥವಾ ಕುಳ್ಳು. ಶುದ್ಧ ಹಸುವಿನ ತುಪ್ಪ, ಶುದ್ಧ ಕರ್ಪೂರ ಮತ್ತು ಪಾಲಿಶ್ ಮಾಡದ ಅಕ್ಕಿ.
ಹೋಮ ಮಾಡುವ ವಿಧಾನ: ಹೋಮಕುಂಡದಲ್ಲಿ ಒಂದೆರಡು ಬೆರಣಿಗಳನ್ನು ಒಂದರ ಮೇಲೆ ಒಂದನ್ನು ಇಟ್ಟು ಅದಕ್ಕೆ ಹಸುವಿನ ತುಪ್ಪವನ್ನು ಸವರಿ ಮೇಲೆ ಕರ್ಪೂರವನ್ನಿಟ್ಟು ಅಗ್ನಿ ಪ್ರಕ್ಷಾಳನ ಮಾಡಬೇಕು. ನಂತರ ತುಪ್ಪದಲ್ಲಿ ಕಲಸಿದ ಪಾಲಿಶ್ ಮಾಡದ ಕೆಂಪು ಅಕ್ಕಿಯನ್ನು ಹೆಬ್ಬೆರಳು, ಉಂಗುರ ಬೆರಳು ಮತ್ತು ಮಧ್ಯದ ಬೆರಳುಗಳಲ್ಲಿ ಬರುವಂತೆ ತೆಗೆದುಕೊಂಡು ಅಗ್ನಿಯ ಉರಿಯಲ್ಲಿ ಹಾಕಬೇಕು. ಹಾಕುವಾಗ ಮಂತ್ರವನ್ನು ಉಚ್ಚರಿಸಬೇಕು. ಒಟ್ಟು ಎರಡು ಬಾರಿ ಅಗ್ನಿಗೆ ಅಕ್ಕಿಯನ್ನು ಸಮರ್ಪಿಸಬೇಕು. ನಂತರ ಅಗ್ನಿಯು ನಂದುವ ವರೆಗೆ ಧ್ಯಾನಸ್ತರಾಗಿ ಕುಳಿತುಕೊಳ್ಳಬೇಕು. ಕೆಲವರು ಗಾಯತ್ರಿ ಮಂತ್ರವನ್ನು 11 ಬಾರಿ ಹೇಳಿಕೊಳ್ಳುತ್ತಾರೆ.
ಸೂರ್ಯೋದಯದ ಸಮಯದಲ್ಲಿ ಮಾಡುವ ಅಗ್ನಿಹೋತ್ರ ಹೋಮದಲ್ಲಿ
ಓಂ ನಮಃ ಸೂರ್ಯಾಯ ಸ್ವಾಹ
ಸೂರ್ಯಾಯ ಇದಂ ನ ಮಮ
ಓಂ ಪ್ರಜಾಪತಯೇ ಸ್ವಾಹ
ಪ್ರಜಾಪತಯೇ ಇದಂ ನ ಮಮ... ಎಂದು
ಸೂರ್ಯಾಸ್ತದ ಸಮಯದಲ್ಲಿ ಮಾಡುವ ಅಗ್ನಿಹೋತ್ರ ಹೋಮದಲ್ಲಿ
ಓಂ ನಮಃ ಅಗ್ನಯೇ ಸ್ವಾಹ
ಅಗ್ನಯೇ ಇದಂ ನ ಮಮ
ಓಂ ಪ್ರಜಾಪತಯೇ ಸ್ವಾಹಾ
ಪ್ರಜಾಪತಯೇ ಇದಂ ನ ಮಮ
ಎಂದು ಉಚ್ಚರಿಸಬೇಕು. ಪ್ರತಿ ಬಾರಿಯೂ ಸ್ವಾಹಾ ಎಂದು ಹೇಳುವಾಗ ತುಪ್ಪದಲ್ಲಿ ಕಲಸಿದ ಅಕ್ಕಿ ಕಾಳನ್ನು ಅಗ್ನಿಗೆ ಸಮರ್ಪಿಸಬೇಕು.
ಅಗ್ನಿಹೋತ್ರದಿಂದಾಗುವ ಪ್ರಯೋಜನಗಳು: ಅಗ್ನಿಹೋತ್ರದಿಂದ ಮನೆ ಮತ್ತು ಮನಸ್ಸಿನಲ್ಲಿ ನಕಾರಾತ್ಮಕ ಭಾವಗಳು ತೊಲಗಿ, ಸಕಾರಾತ್ಮಕತೆ ತುಂಬಿಕೊಳ್ಳುತ್ತದೆ. ನಂತರ ಮಾಡುವ ಧ್ಯಾನದಿಂದ ಮನಸ್ಸು ನೆಮ್ಮದಿ, ಶಾಂತಿಯನ್ನು ಕಂಡುಕೊಳ್ಳುವುದರಿಂದ ಸಮಾಧಾನ ಚಿತ್ತ ವನ್ನು ಹೊಂದುತ್ತೇವೆ. ಅಗ್ನಿಹೋತ್ರ ಮಾಡುವುದರಿಂದ ಮನೆಯಲ್ಲಿ ಹೋಮದ ಸುವಾಸನೆಯು ಹರಡಿ ಮನಸ್ಸನ್ನು ತನ್ಮಯವಾಗಿಸುತ್ತದೆ. ಮನೆಯಲ್ಲಿ ಸದಾ ಶಾಂತಿ ನೆಲೆಸುತ್ತದೆ. ಮನೆಯ ಸುತ್ತಲಿನ ವಾತಾವರಣ ಹಿತಕರವಾಗಿ ಬದಲಾಗುತ್ತದೆ. ಅಗ್ನಿಹೋತ್ರದ ಹೋಮದಲ್ಲಿ ಸುಟ್ಟುಹೋದ ಬೆರಣಿಯ ಬೂದಿಯನ್ನು ಗಿಡಗಳಿಗೆ ಹಾಕುವುದರಿಂದ ಅವು ಕೂಡ ತುಂಬಾ ಚೆನ್ನಾಗಿ ಬೆಳೆಯುತ್ತವೆ.
ಅಗ್ನಿಹೋತ್ರ ಹೋಮದ ಮಹತ್ವ: ಅಗ್ನಿಹೋತ್ರವು ವೈಜ್ಞಾನಿಕವಾಗಿ ಸಾಬೀತಾಗಿರುವ ವೇದ ವಿಜ್ಞಾನವಾಗಿದ್ದು ವಾತಾವರಣದ ಕಲುಷಿತತೆಯನ್ನು ಕಡಿಮೆ ಮಾಡುತ್ತದೆ. ಮನೋದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಪಶು ಪಕ್ಷಿ ಪ್ರಾಣಿಗಳೆನ್ನದೆ ಎಲ್ಲ ಚರಾಚರಗಳಲ್ಲಿ ಚೈತನ್ಯವನ್ನು ತುಂಬುತ್ತದೆ. ಅಗ್ನಿಹೋತ್ರದ ಹೊಗೆಯು ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶವಾಗುವಂತೆ ಮಾಡುತ್ತದೆ. ಅಗ್ನಿಹೋತ್ರದ ಹೊಗೆಯು ನಮ್ಮ ಶ್ವಾಸಕೋಶ ಮತ್ತು ರಕ್ತ ಪರಿಚಲನ ವ್ಯವಸ್ಥೆಯನ್ನು ಅತ್ಯಂತ ಶೀಘ್ರವಾಗಿ ತಲುಪಿ ದೇಹದ ಪರಿಚಲನ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಮೆದುಳಿನ ಕೋಶಗಳನ್ನು ನವೀಕರಿಸಿ ಚರ್ಮವನ್ನು ಕಾಪಾಡುತ್ತದೆ.
ಇತ್ತೀಚೆಗೆ ಕೋವಿಡ್ 19ರ ಸಮಯದಲ್ಲಿ ಮನೆಯಲ್ಲಿಯೇ ಉಳಿದ ಜನರು ಅಗ್ನಿಹೋತ್ರ ಹೋಮವನ್ನು ಆಚರಿಸಿ ತಮ್ಮ ಮನೋದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡ ಉದಾಹರಣೆಗಳಿವೆ. ಅದರಲ್ಲೂ ಕೋವಿಡ್ ನಂತಹ ವಿಷಮಕರ ಪರಿಸ್ಥಿತಿಯಲ್ಲಿ ಸಾಮೂಹಿಕವಾಗಿ ಅಗ್ನಿಹೋತ್ರದ ಅಭ್ಯಾಸ ಮಾಡುವುದರಿಂದ ವ್ಯಕ್ತಿಯ ಮನೋಬಲ ಹೆಚ್ಚಿದ ಸಾವಿರಾರು ಉದಾಹರಣೆಗಳನ್ನು ನಾವು ಕಾಣಬಹುದು.
ಅಗ್ನಿಹೋತ್ರ ಕ್ರಿಯೆಯಲ್ಲಿ ಸ್ವಲ್ಪವೇ ತುಪ್ಪವನ್ನು ಬಳಸಿ ಅಪಾರ ಪ್ರಮಾಣದ ಆಮ್ಲಜನಕದ ಉತ್ಪತ್ತಿಯನ್ನು ನಾವು ಕಾಣುತ್ತೇವೆ. ಇಂದಿನ ಕಲುಷಿತ ವಾತಾವರಣದಲ್ಲಿ ಶುದ್ಧ ಆಮ್ಲಜನಕವನ್ನು ಪಡೆಯುವುದು ಅದೆಷ್ಟು ಕಷ್ಟಕರ ಎಂಬುದು ಈ ಕೋವಿಡ್ ಕಾಲದಲ್ಲಿ ನಮ್ಮ ಅರಿವಿಗೆ ಬಂದಿದೆ. ಅಂತಹದರಲ್ಲಿ ಅಗ್ನಿಹೋತ್ರಕ್ರಿಯೆಯು ನಮಗೆ ಆಮ್ಲಜನಕ ಉತ್ಪತ್ತಿಯ ವಿಪುಲ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಮನುಕುಲದ ಸರ್ವಾಂಗೀಣ ಅಭಿವೃದ್ಧಿಗೆ ಅಗ್ನಿಹೋತ್ರದ ಆಚರಣೆ ಅತ್ಯಂತ ಸೂಕ್ತ.
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ