ಅಧಿಕ ಮಾಸದ ವ್ರತಗಳು, ಪುಣ್ಯಪ್ರದ ಕಾರ್ಯಗಳು, ಅವುಗಳ ಹಿಂದಿರುವ ಶಾಸ್ತ್ರ

Upayuktha
2 minute read
0

ವರ್ಷ 18.07.2023 ರಿಂದ 16.08.2023 ಈ ಕಾಲಾವಧಿಯಲ್ಲಿ ಅಧಿಕ ಮಾಸವಿದೆ. ಈ ಅಧಿಕ ಮಾಸ ಅಧಿಕ ಶ್ರಾವಣ ಮಾಸವಾಗಿದೆ. ಅಧಿಕ ಮಾಸಕ್ಕೆ ಮುಂಬರುವ ಮಾಸದ ಹೆಸರನ್ನು ಕೊಡುತ್ತಾರೆ, ಉದಾ. ಶ್ರಾವಣ ಮಾಸದ ಮೊದಲು ಬರುವ ಅಧಿಕ ಮಾಸಕ್ಕೆ ಅಧಿಕ ಶ್ರಾವಣ ಮಾಸ ಎಂದು ಕರೆಯಲಾಗುತ್ತದೆ ಮತ್ತು ತದನಂತರ ಬರುವ ಮಾಸಕ್ಕೆ ನಿಜ ಶ್ರಾವಣ ಮಾಸ ಎನ್ನುತ್ತಾರೆ. ಅಧಿಕ ಮಾಸ ಒಂದು ದೊಡ್ಡ ಹಬ್ಬದಂತೆ ಇರುತ್ತದೆ. ಆದುದರಿಂದ ಈ ಮಾಸದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ, ಮತ್ತು ಅಧಿಕ ಮಾಸ ಮಹಾತ್ಮೆ ಗ್ರಂಥದ ವಾಚನ ಮಾಡುತ್ತಾರೆ.


ಅಧಿಕ ಮಾಸದಲ್ಲಿ ವ್ರತಗಳು ಮತ್ತು ಪುಣ್ಯದಾಯಕ ಕಾರ್ಯಗಳನ್ನು ಮಾಡುವುದರ ಹಿಂದಿರುವ ಶಾಸ್ತ್ರ:

ಪ್ರತಿಯೊಂದು ಮಾಸದಲ್ಲಿ ಒಂದೊಂದು ರಾಶಿಯಲ್ಲಿ ಸೂರ್ಯನ ಸಂಕ್ರಮಣವಾಗುತ್ತದೆ; ಆದರೆ ಅಧಿಕ ಮಾಸದಲ್ಲಿ ಸೂರ್ಯ ಯಾವುದೇ ರಾಶಿಯಲ್ಲಿ ಸಂಕ್ರಮಣ ಮಾಡುವುದಿಲ್ಲ, ಅಂದರೆ ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಮಣದಲ್ಲಿರುವುದಿಲ್ಲ. ಆದುದರಿಂದ ಚಂದ್ರ ಮತ್ತು ಸೂರ್ಯನ ವೇಗಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ವಾತಾವರಣದಲ್ಲಿಯೂ ಗ್ರಹಣಕಾಲದಂತೆ ಬದಲಾವಣೆಗಳಾಗುತ್ತವೆ. ಬದಲಾಗುತ್ತಿರುವ ಈ ಅನಿಷ್ಟ ವಾತಾವರಣದಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂದು ಈ ಮಾಸದಲ್ಲಿ ವ್ರತಗಳು ಮತ್ತು ಪುಣ್ಯದಾಯಕ ಕಾರ್ಯಗಳನ್ನು ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಿದ್ದಾರೆ.


ಅಧಿಕ ಮಾಸದಲ್ಲಿ ಮಾಡಬೇಕಾದ ವ್ರತಗಳು ಮತ್ತು ಪುಣ್ಯದಾಯಕ ಕಾರ್ಯಗಳು

ಅ. ಅಧಿಕ ಮಾಸದಲ್ಲಿ ಶ್ರೀ ಪುರುಷೋತ್ತಮಪ್ರೀತ್ಯರ್ಥ 1 ತಿಂಗಳು ಉಪವಾಸ, ಆಯಾಚಿತ ಭೋಜನ (ಆಕಸ್ಮಿಕವಾಗಿ ಯಾರದಾದರೂ ಮನೆಗೆ ಭೋಜನಕ್ಕೆ ಹೋಗುವುದು), ನಕ್ತ ಭೋಜನ (ಹಗಲಲ್ಲಿ ಊಟ ಮಾಡದೇ ಕೇವಲ ರಾತ್ರಿಯ ಮೊದಲನೇ ಪ್ರಹರದಲ್ಲಿ ಒಂದೇ ಬಾರಿ ಊಟ ಮಾಡುವುದು) ಮಾಡಬೇಕು ಅಥವಾ ಏಕಭುಕ್ತರಾಗಿರಬೇಕು (ದಿನದಲ್ಲಿ ಒಂದೇ ಬಾರಿ ಊಟ ಮಾಡುವುದು). ಅಶಕ್ತ ವ್ಯಕ್ತಿಯು ಈ ನಾಲ್ಕು ಪ್ರಕಾರಗಳಲ್ಲಿ ಒಂದು ಪ್ರಕಾರವನ್ನು ಕಡಿಮೆ ಪಕ್ಷ ಮೂರು ದಿನಗಳು ಅಥವಾ ಒಂದು ದಿನವಾದರೂ ಆಚರಿಸಬೇಕು.


ಈ ತಿಂಗಳಿನಲ್ಲಿ ಪ್ರತಿದಿನ ಶ್ರೀ ಪುರುಷೋತ್ತಮ ಕೃಷ್ಣನ ಪೂಜೆ ಮತ್ತು ನಾಮಜಪವನ್ನು ಮಾಡಬೇಕು. ದೇವರ ಅಖಂಡ ಅನುಸಂಧಾನದಲ್ಲಿರಲು ಪ್ರಯತ್ನಿಸಬೇಕು. ಪ್ರತಿದಿನ ಒಂದೇ ಬಾರಿ ಊಟ ಮಾಡಬೇಕು. ಊಟ ಮಾಡುವಾಗ ಮಾತನಾಡಬಾರದು. ಇದರಿಂದ ಆತ್ಮಬಲ ಹೆಚ್ಚಾಗುತ್ತದೆ. ಮೌನವಾಗಿದ್ದು ಭೋಜನ ಮಾಡುವುದರಿಂದ ಪಾಪಕ್ಷಾಲನವಾಗುತ್ತದೆ. ತೀರ್ಥಸ್ನಾನ ಮಾಡಬೇಕು. ಕಡಿಮೆಪಕ್ಷ ಒಂದು ದಿನವಾದರೂ ಗಂಗಾಸ್ನಾನವನ್ನು ಮಾಡಿದರೆ ಎಲ್ಲ ಪಾಪಗಳಿಂದ ನಿವೃತ್ತಿಯಾಗುತ್ತದೆ. ದೀಪದಾನ ಮಾಡಬೇಕು. ದೇವರ ಮುಂದೆ ಅಖಂಡ ದೀಪವನ್ನು ಹಚ್ಚಿಟ್ಟರೆ ಲಕ್ಷ್ಮಿ ಪ್ರಾಪ್ತವಾಗುತ್ತದೆ. ತೀರ್ಥಯಾತ್ರೆ ಮಾಡಬೇಕು. ದೇವರ ದರ್ಶನ ಪಡೆಯಬೇಕು. ತಾಂಬೂಲದಾನ ಮಾಡಬೇಕು. ಒಂದು ತಿಂಗಳು ತಾಂಬೂಲದಾನ ನೀಡಿದರೆ ಸೌಭಾಗ್ಯಪ್ರಾಪ್ತಿಯಾಗುತ್ತದೆ ಎಂದು ನಂಬಿಕೆಯಿದೆ. ಅಧಿಕ ಮಾಸದಲ್ಲಿ ಗೋಪೂಜೆ, ಗೋಗ್ರಾಸ ನೀಡುವುದು, ಅನಾರಸಗಳ ದಾನ ಈ ರೀತಿ ಪುಣ್ಯ ಕಾರ್ಯಗಳನ್ನು ಮಾಡಬೇಕು. ಇಡೀ ತಿಂಗಳಿನಲ್ಲಿ ದಾನ ನೀಡುವುದು ಸಾಧ್ಯವಿಲ್ಲದಿದ್ದರೆ, ಶುಕ್ಲ ಮತ್ತು ಕೃಷ್ಣ ದ್ವಾದಶಿ, ಹುಣ್ಣಿಮೆ, ಕೃಷ್ಣ ಅಷ್ಟಮಿ, ನವಮಿ, ಚತುರ್ದಶಿ, ಅಮಾವಾಸ್ಯೆ ಈ ತಿಥಿಗಳಂದು ಮತ್ತು ವ್ಯತಿಪಾತ ಹಾಗೂ ವೈಧೃತಿ ಈ ಯೋಗಗಳಲ್ಲಿ ವಿಶೇಷ ದಾನಧರ್ಮ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.


ಅಧಿಕ ಮಾಸದಲ್ಲಿ ಯಾವ ಕಾರ್ಯಗಳನ್ನು ಮಾಡಬೇಕು?

ಈ ಮಾಸದಲ್ಲಿ ದಿನನಿತ್ಯ ಮತ್ತು ನೈಮಿತ್ತಿಕ ಕರ್ಮಗಳನ್ನು ಮಾಡಬೇಕು. ಗತ್ಯಂತರವಿಲ್ಲದಂತಹ ಕರ್ಮಗಳನ್ನು ಮಾಡಬೇಕು. ಅಧಿಕ ಮಾಸದಲ್ಲಿ ನಿರಂತರ ನಾಮಸ್ಮರಣೆ ಮಾಡಿದರೆ ಶ್ರೀ ಪುರುಷೋತ್ತಮ ಕೃಷ್ಣ ಪ್ರಸನ್ನನಾಗುತ್ತಾನೆ. ಜ್ವರಶಾಂತಿ, ಪರ್ಜನ್ಯೇಷ್ಟಿ ಇತ್ಯಾದಿ ದೈನಂದಿನ ಸಕಾಮ ಕರ್ಮಗಳನ್ನು ಮಾಡಬೇಕು. ಈ ಮಾಸದಲ್ಲಿ ದೇವರ ಪುನಃ ಪ್ರತಿಷ್ಠಾಪನೆ ಮಾಡಬಹುದು. ಗ್ರಹಣಶ್ರಾದ್ಧ, ಜಾತಕರ್ಮ, ನಾಮಕರ್ಮ, ಅನ್ನಪ್ರಾಶನ ಇತ್ಯಾದಿ ಸಂಸ್ಕಾರಗಳನ್ನು ಮಾಡಬೇಕು. ಮನ್ವಾದಿ ಮತ್ತು ಯುಗಾದಿ ಸಂಬಂಧಿತ ಶ್ರಾದ್ಧಾದಿ ಕೃತಿಗಳನ್ನು ಮಾಡಬೇಕು. ತೀರ್ಥಶ್ರಾದ್ಧ, ದರ್ಶಶ್ರಾದ್ಧ ಮತ್ತು ನಿತ್ಯಶ್ರಾದ್ಧ ಮಾಡಬೇಕು.


ಅಧಿಕ ಮಾಸದಲ್ಲಿ ಯಾವ ಕೆಲಸಗಳನ್ನು ಮಾಡಬಾರದು?

ದೈನಂದಿನ ಕಾಮ್ಯ ಕರ್ಮಗಳನ್ನು ಹೊರತುಪಡಿಸಿ ಇತರ ಕಾಮ್ಯಕರ್ಮಗಳ ಆರಂಭ ಮತ್ತು ಸಮಾಪ್ತಿ ಮಾಡಬಾರದು. ಮಹಾದಾನಗಳು, ಅಪೂರ್ವ ದೇವದರ್ಶನ (ಮೊದಲು ಎಂದೂ ದರ್ಶನ ಪಡೆಯದಿರುವ ಸ್ಥಳಕ್ಕೆ ದೇವದರ್ಶನಕ್ಕೆ ಹೋಗುವುದು) ಗೃಹಾರಂಭ, ವಾಸ್ತುಶಾಂತಿ, ಸಂನ್ಯಾಸಗ್ರಹಣ, ಹೊಸ ವ್ರತ, ಗ್ರಹಣದೀಕ್ಷೆ, ವಿವಾಹ, ಉಪನಯನ, ಚೌಲ, ದೇವತಾಪ್ರತಿಷ್ಠೆ ಇತ್ಯಾದಿಗಳನ್ನು ಮಾಡಬಾರದು.


(ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು)


ಸಂಗ್ರಹ: ವಿನೋದ್ ಕಾಮತ್

ರಾಜ್ಯ ವಕ್ತಾರರು, ಸನಾತನ ಸಂಸ್ಥೆ

(ಸಂಪರ್ಕ: 9342599299)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
To Top