ಅನಂತ ಗಗನದಲ್ಲೋಡುವ ಮೇಘಗಳೇ ನಿಮಗೇಕೆ ಈ ರೀತಿಯ ಕೋಪ. ನಿಮ್ಮ ಕೋಪಕ್ಕೆ ಇಳೆ ತಡೆಯದೇ ದುಡುಂ ದುಡುಂ ಎಂದು ಗುಂಡು ಕಲ್ಲುಗಳು ಉರುಳುವಂತೆ ಗಟ್ಟಿ ಬೆಟ್ಟಗಳೇ ಉರುಳಿವೆ. ಕಡಿದ ಬಾಳೆಯ ಮರ ನೆಲಕ್ಕೆ ಬೀಳುವಂತೆ ಗುಡ್ಡಗಳು ಜಾರುತ್ತಿವೆ. ನಿಮಗೇಕೆ ಈ ಕೋಪ? ನಿಮಗೇಕೆ ಈ ತಾಪ. ನಿಮ್ಮ ಕೊನೆ ಮೊದಲಿಲ್ಲದ ಕೋಪ ತಾಪಗಳ ಆರ್ಭಟಕ್ಕೆ ನೆಲವೇ ನಡುಗಿದೆ, ಜಾರಿದೆ, ಕರಗಿದೆ. ಯಾವ ಕೋಪ ತಾಪಕ್ಕೆ ಹೀಗೆ ಒಂದೇ ಸಮನೆ ಅಳುತ್ತಾ ಕಣ್ಣೀರುಡುತ್ತಿದ್ದೀರಿ. ಅಥವಾ ಯಾವ ಮಾನವನ ಅಹಂಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾನಿಸಿ ಹೀಗೆ ಅಟ್ಟಹಾಸದಿಂದ ಮೆರೆಯುತ್ತಿದ್ದೀರಾ ಮುಗಿಲ ಮೋಡಗಳೇ? ನೀರಿನಲ್ಲಿ ಸುಣ್ಣ ಕರಗುವಂತೆ ಮೇಲ್ಭೂಮಿಯ ಮಣ್ಣು ಕರಗಿ ಕೊಚ್ಚಿ ಹೋಗುತ್ತಿದೆ. ಓ ಮೇಘಗಳೇ, ತಾಪದಿಂದ ಬೆಂದ ಭೂಮಿಯ ತಂಪು ಮಾಡುವುದು ನಿಮ್ಮ ಕರ್ತವ್ಯ. ಅಂದ ಮಾತ್ರಕ್ಕೆ ಹೊಳೆ ಹೊಳೆಗಳಲ್ಲಿ ಪ್ರವಾಹ ಉಂಟು ಮಾಡಿ, ಜನಜೀವನ ಅಸ್ತವ್ಯಸ್ತವಾಗುವಂತೆ ಮಾಡುವುದೂ ನಿಮ್ಮ ಕರ್ತವ್ಯವೇ, ಹೇಳಿ ನೋಡೋಣ. ಮುಗಿಲ ಮೇಘ ಮಹಾಶಯರೇ, ನಿಮ್ಮ ಈ ಆರ್ಭಟಕ್ಕೆ ಕೇವಲ ಮನುಷ್ಯನ ಜೀವನ ಮಾತ್ರ ಅಪಾಯಕ್ಕೆ ಸಿಕ್ಕಿಕೊಂಡಿಲ್ಲ, ಅದರೊಂದಿಗೆ ಕುರಿ, ಕೋಳಿ, ಕುದುರೆ, ಹಂದಿ, ನಾಯಿ, ಮೊಲ, ಬೆಕ್ಕು, ಮಂಗಗಳು ಮುಂತಾದ ಪ್ರಾಣಿಗಳು ಜೀವ ಬಿಟ್ಟಿವೆ. ಧರೆಗುರುಳಿದ ಮರಗಳಿಂದಾಗಿ ರಸ್ತೆ ಸಂಪರ್ಕ ಕಡಿದು ಹೋಗಿದೆ. ಮನುಷ್ಯ ತನ್ನ ಬುದ್ದಿಶಕ್ತಿಯನ್ನು ಉಪಯೋಗಿಸಿ ಸಂಪರ್ಕಕ್ಕಾಗಿ ನದಿಗಳಿಗೆ ಅಡ್ಡಲಾಗಿ ಸೇತುವೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾನೆ. ಈಗ ನಿಮಗೂ ಆ ಸೇತುವೆಗಳ ಮೇಲೆ ಕಣ್ಣು ಬಿತ್ತೆ ಮೋಡಗಳೇ. ನೀವು ಸುರಿಸುವ ನಿರಂತರ ಮಳೆಯಿಂದಾಗಿ ಭಾರತದ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿದರೆ ಚೆಂದ. ಆದರೆ ಅಪಾಯದ ಮಟ್ಟವನ್ನು ಮೀರಿ ನದಿಗಳಿಂದ ಉಕ್ಕಿದ ಪ್ರವಾಹಗಳು ದೊಡ್ಡ ದೊಡ್ಡ ನಗರಗಳನ್ನು ಜಲಾವೃತವನ್ನಾಗಿಸಿವೆ. ಭಯಾನಕ ಭೀಭತ್ಸ ರೌದ್ರ ನರ್ತನವನ್ನು ಮಾಡುತ್ತಿವೆ.
ಈ ಸಂದರ್ಭದಲ್ಲಿ ಜನರಲ್ಲಾ ಹೀಗೆನ್ನುತ್ತಿದ್ದಾರೆ.
ಓ ಮೋಡಣ್ಣಂದಿರಾ ನಿಮ್ಮ ಜೊತೆಗೆ ನಾವು ಸ್ವಲ್ಪ ಮಾತಾಡ್ಬೇಕೈತೆ. ಒಸಿ ನಮ್ಮ ಮನದ ಮಾತಗಳ್ನ ಕೇಳಿಸ್ಕೋಳ್ರಪ್ಪ. ನಿಮ್ಮ ಈ ಕ್ವಾಪಕ್ಕೆ ಮನೆಮನೆಗಳಲ್ಲೂ ನೀರು ತುಂಬೈತೆ. ಜನಜೀವನ ಅಯೋಮಯ ಆಗೈತೆ. ಕುಡಿಯೋಕೆ ನೀರಿಲ್ಲ;: ತಿನ್ನೋಕೆ ಅನ್ನ ಇಲ್ಲ; ಹಾಕ್ಕೊಳ್ಳೋಕೆ ಬಟ್ಟೆ ಇಲ್ಲ; ಇರೋಕೆ ಮಲಗೋಕೆ ಜಾಗ ಇಲ್ಲ. ಇದೆಲ್ಲಾ ನಿಮ್ದೆ ಪ್ರಭಾವ ಅಲ್ವೇನು ಮತ್ತೆ. ಕೊಚ್ಚಿ ಬಂದ ಪ್ರವಾಹದ ಪ್ರಭಾವಕ್ಕೆ ಮನೆಯಲ್ಲಿದ್ದ ಅಕ್ಕಿ, ಬೇಳೆ, ಕಾಳು, ಬೆಲ್ಲ, ಉಪ್ಪು, ಸೊಪ್ಪು, ಕಾಯಿ, ಕೊಬ್ರಿ, ತರಕಾರಿ ಎಲ್ಲಾನೂ ನೀವೆ ನುಂಗಿಬಿಟ್ರಿ. ನಾವೇನ್ ತಿನ್ನೋದು? ನಾವೇನ್ ಮಾಡೋದು? ಎಲ್ಲಾ ಜಲಮಯ ಆಗ್ಬಿಟ್ಟೈತೆ. ನಿಮ್ಮ ಜಾಲ ಭಾರೀ ಆಗೈತೆ.
ಯಾರ್ತಾವ ಹೇಳೋದು ನಮ್ ಗೋಳ್ನ. ನೀವೆ ಹೇಳಿ ಮೋಡಣ್ಣಂದಿರಾ ಇದು ಸರೀನಾ ನೀವು ಮಾಡಿದ್ದು? ಅಷ್ಟೋ ಇಷ್ಟೋ ಕಷ್ಟ ಪಟ್ಟು ತಂದು ಮನೇಲಿಟ್ಟಿದ್ದ ಸಾಮಾನೆಲ್ಲಾ ನಿಮ್ದೆ ಪಾಲಾಯ್ತು. ಹಸು, ಎಮ್ಮೆ, ದನ, ಕರುಗಳನ್ನೆಲ್ಲಾ ಎಲೆಗಳ ತರ ತೇಲಿಸ್ಕೊಂಡು ಹೋಗ್ತಿದ್ದೀರಿ. ಅವೇನ್ ಪಾಪ ಮಾಡಿದ್ವು ನಿಮಗೆ. ಪಾಪ ಮೂಕ ಪ್ರಾಣಿಗಳು. ಅನ್ನಂಗಿಲ್ಲ ಆಡಂಗಿಲ್ಲ. ಹೇಳ್ಕಳಕ್ಕೆ ಮೊದ್ಲೆ ಬಾಯಿಲ್ಲ. ಏನಂತ ಹೇಳೋದು ಮೋಡಣ್ಣಗಳಿರಾ? ಸ್ವಲ್ಪ ನಿಮ್ ಕ್ವಾಪಾನಾ ಕಮ್ಮಿ ಮಾಡ್ಕಳ್ಳಿ. "ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ " ಅಂತ ನಮ್ ಮನಸ್ನಲ್ಲಿ ಹಾಡಿದ್ದೆ ತಪ್ಪಾಗೋಯ್ತ. ಈ ಪಾಟಿ ಮಳೆ ಬರೋದಾ? ಈ ಪಾಟಿ ರಂಪ ರಾಡಿ ಮಾಡಿ ಹಾಕೋದ ಮೋಡಣ್ಣಂದ್ರಾ. ನಮ್ ಐಕ್ಳು "ಬಾರೋ ಬಾರೋ ಮಳೆರಾಯ ಬಾಳೆ ತೋಟಕೆ ನೀರಿಲ್ಲ. ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ" ಅಂತ ಆಟ ಆಡ್ತಾ ಕರೆದಿದ್ದೆ ತಪ್ಪಾಗೋಯ್ತಾ? ಮೋಡಣ್ಣಂದ್ರಾ. ನಾವು ಮನ್ಸುರು. ತಪ್ ಮಾಡಾದು ಸಹಜ ತಾನೆ. ಮನ್ಸುರು ಮೇಲಿನ ಕ್ವಾಪಾನಾ ಪ್ರಕೃತಿ ಮ್ಯಾಕೆ ತೋರ್ಬ್ಯಾಡಿ. ಒಸಿ ಅರ್ಥ ಮಾಡ್ಕಳಿ ಅಣ್ಣಂದ್ರಾ. ಮನ್ಸಾ ಬದುಕ್ಬೇಕು. ನೀವು ಮನ್ಸುನ್ನ ಬದುಕುಸ್ಬೇಕು ಕಾಣ್ರಪ್ಪ.
ಹೀಗೆ ಜನ ಮೋಡಗಳನ್ನು ನೋಡಿ ಮಾತಾಡ್ತಾ ಇದಾರೆ. ಮಾನ್ಸೂನ್ ಮಳೆಗಳ ಆರ್ಭಟದಿಂದಾಗಿ ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಭಾರತದ ನದಿಗಳಾದ ಸಿಂಧೂ, ಗಂಗಾ, ಯಮುನಾ, ಬ್ರಹ್ಮಪುತ್ರ, ಕೋಸಿ, ಮಹಾನದಿ ಗಳಂತಹ ದೊಡ್ಡ ದೊಡ್ಡ ನದಿಗಳೆಲ್ಲಾ ತುಂಬಿ ಹೋಗಿವೆ. ಉಪನದಿಗಳಾದ ಚೀನಾಬ್, ರಾವಿ, ಬಿಯಾಸ್, ಝೀಲಂ, ಸಟ್ಲೇಜ್, ಕೊತ್ವಾಲಿ ಮುಂತಾದವುಗಳು ತುಂಬಿ ಹರಿಯುತ್ತಿರುವುದರಿಂದಾಗಿ ಭೂತಾಯಿಯ ಮಡಿಲಲ್ಲಿ ಇರುವ ಎಲ್ಲಾ ಜಲಾಶಯಗಳಲ್ಲೂ ನೀರಿನ ಒಳ ಹರಿವು ಹೆಚ್ಚಾಗಿದೆ. ಮಳೆಯ ರಂಪಾಟಕ್ಕೆ ಕೊನೆಯಿಲ್ಲ. ಗುಡ್ಡ, ಬೆಟ್ಟ, ಕಾಡುಗಳ ಪ್ರದೇಶಗಳಲ್ಲಿ ವ್ಯಾಪಕವಾಗಿ ಯಥೇಚ್ಛವಾಗಿ ಮಳೆ ಆಗ್ತಾ ಇದೆ. ಅದರಿಂದಾಗಿಯೇ ಈ ರೀತಿಯ ಪ್ರವಾಹಗಳು ಉಂಟಾಗುತ್ತಿವೆ. ದಕ್ಷಿಣ ಭಾರತದ ನದಿಗಳಾದ ಗೋದಾವರಿ, ಕೃಷ್ಣಾ, ಘಟಪ್ರಭ, ಮಲಪ್ರಭ, ಭೀಮಾ, ಕಾವೇರಿ, ತುಂಗಾ-ಭದ್ರಾ, ಕಾಳಿ, ಹೇಮಾವತಿ, ನೇತ್ರಾವತಿ, ಕುಮುದ್ವತಿ, ಕಪಿಲ, ಕುಮಾರಧಾರ, ಬೇಡ್ತಿ, ಲಕ್ಷ್ಮಣತೀರ್ಥ, ಶಿಂಸಾ, ಪಂಪಾನದಿ, ಭವಾನಿ ಮುಂತಾದ ನದಿಗಳಲ್ಲೂ ನೀರು ಯಥೇಚ್ಛವಾಗಿ ಬರುತ್ತಿರುವುದರಿಂದಾಗಿ ಪ್ರವಾಹಗಳು ಉಂಟಾಗುತ್ತವೆ.
ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಜಾಗತಿಕ ತಾಪಮಾನ ದಿನೇ ದಿನೇ ಹೆಚ್ಚಾಗಿದ್ದು, ಉಷ್ಣಾಂಶದಲ್ಲಿಯೂ ಹೆಚ್ಚಳ ಕಂಡುಬಂದಿದೆ. ಭಾರೀ ಉಷ್ಣಾಂಶದಿಂದಾಗಿ ಸಮುದ್ರ ನೀರು ಆವಿಯಾಗಿ ಭಾಷ್ಪೀಭವಿಸಿ ಮೇಲಕ್ಕೇರಿ ಮೋಡಗಳಾಗಿ ಗಾಳಿ ಬೀಸುವ ಕಡೆಗೆ ಚಲಿಸಲು ಪ್ರಾರಂಭಿಸುತ್ತವೆ. ಭೂಗೋಳ ಶಾಸ್ತ್ರದಲ್ಲಿ ಅಧ್ಯಯನ ಮಾಡುವಂತೆ ಜೂನ್- ಜುಲೈ ತಿಂಗಳುಗಳಲ್ಲಿ ಭೂಮಿಯ ದಕ್ಷಿಣಾರ್ಧ ಗೋಳದಲ್ಲಿ ಉಷ್ಣಾಂಶ ಕಡಿಮೆ ಆಗಿ, ಹೆಚ್ಚು ಒತ್ತಡ ಪ್ರದೇಶಗಳಾಗಿ ಪರಿಣಮಿಸುತ್ತವೆ. ದಕ್ಷಿಣಾರ್ಧ ಗೋಳದಲ್ಲಿ ಆಗ್ನೇಯ ದಿಕ್ಕಿನಿಂದ ವಾಯುವ್ಯದ ಕಡೆಗೆ ಗಾಳಿಗಳು ಬೀಸಲು ಪ್ರಾರಂಭಿಸುತ್ತವೆ. ಈ ಗಾಳಿಗಳೇ ಮಾರುತಗಳು ಎನಿಸುತ್ತವೆ. ಭೂಮಿಯ ಮಧ್ಯೆ ರೇಖೆ ಎನಿಸಿಕೊಂಡಿರುವ ಸಮಭಾಜಕ ವೃತ್ತವನ್ನು ದಾಟಿದೊಡನೆಯೇ ಇದೇ ಮಾರುತಗಳು ಉತ್ತರಾರ್ಧ ಗೋಳದಲ್ಲಿ ನೈರುತ್ಯದಿಂದ ಈಶಾನ್ಯದ ದಿಕ್ಕಿನ ಕಡೆಗೆ ಬೀಸಲು ಪ್ರಾರಂಭಿಸುತ್ತವೆ. ಇವೇ ನೈರುತ್ಯ ಮಾನ್ಸೂನ್ ಮಳೆ ಮಾರುತಗಳಾಗಿ ಪರಿವರ್ತನೆ ಹೊಂದಿ ದಟ್ಟ ಮಳೆ ಮೋಡಗಳು ಘಟ್ಟಗಳ ಸಾಲಿನಲ್ಲಿ ಯಥೇಚ್ಛವಾಗಿ ಮಳೆಯನ್ನು ಸುರಿಸುತ್ತವೆ. ಇದೇ ಮಾರುತಗಳು ಭಾರತಕ್ಕೂ ಆಗಮಿಸುತ್ತವೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಿರಂತರ ಮತ್ತು ವ್ಯಾಪಕ ಮಳೆಯನ್ನು ಸುರಿಸುತ್ತವೆ. ಪಶ್ಚಿಮ ಘಟ್ಟಗಳಿಗೂ ತಾಗದೇ ಎತ್ತರದಲ್ಲಿ ಹಾದು ಹೋದಂತಹ ಮಳೆ ಮೋಡಗಳು ಹಿಮಾಲಯ ಪರ್ವತದ ಘಟ್ಟಗಳಿಗೆ ನೇರವಾಗಿ ಡಿಕ್ಕಿ ಹೊಡೆದು ಮಳೆ ಸುರಿಸಲು ಪ್ರಾರಂಭಿಸುತ್ತವೆ. ಈ ಮಳೆ ಮೋಡಗಳ ಪ್ರಭಾವವೇ ಎಲ್ಲಾ ನದಿಗಳೂ ಉಕ್ಕಿಹರಿದು ಪ್ರವಾಹಕ್ಕೆ ಕಾರಣವಾಗುತ್ತವೆ. ಇದರಿಂದಾಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳ ಹಾನಿಯನ್ನು ಉಂಟುಮಾಡುತ್ತವೆ.
ಜನಜೀವನ ಅಸ್ತವ್ಯಸ್ತವಾಗುತ್ತದೆ. ಭಾರೀ ಪ್ರಮಾಣದ ನಿರಂತರ ಮಳೆಯಿಂದಾಗಿ ಗುಡ್ಡ ಬೆಟ್ಟಗಳು ಜಾರುವ ಮೂಲಕ ಮಳೆಯ ಕಾರಣದಿಂದಾಗಿ ಇಳೆಯೂ ಕೊಚ್ಚಿ ಹೋಗವಂತಹ ಪರಿಸ್ಥಿತಿ ಉಂಟಾಗುತ್ತದೆ.
ಕೆ. ಎನ್. ಚಿದಾನಂದ, ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ