2015 ರಿಂದ ಪ್ರಾರಂಭವಾಗಿ ಪ್ರತಿ ವರ್ಷ ಜೂನ್ 21ರಂದು ಪ್ರಪಂಚದಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಯೋಗವು ಮಾನವನ ಆರೋಗ್ಯಕ್ಕೆ ಕೊಟ್ಟ ಭರವಸೆ. ಯೋಗವು ಶರೀರ ಮತ್ತು ಮನಸ್ಸನ್ನು ಜೋಡಿಸುವ ಕೊಂಡಿ ಇದ್ದಂತೆ. ಮನುಷ್ಯನ ಯೋಚನೆಗಳನ್ನು ನಿಗ್ರಹಿಸಿ ಏಕಾಗ್ರತೆಯನ್ನು ನೀಡುವ ಮಹಾನ್ ಶಕ್ತಿವಂತ ವಿದ್ಯೆಯೇ ಯೋಗ. ಇದಕ್ಕೆ 5,000 ವರ್ಷಗಳ ಇತಿಹಾಸವಿದೆ. ಇಡೀ ವಿಶ್ವಕ್ಕೆ ಅಷ್ಟಾಂಗ ಯೋಗವನ್ನು ಪರಿಚಯಿಸಿ ಕೊಟ್ಟ ಹೆಗ್ಗಳಿಕೆ ನಮ್ಮ ಭಾರತ ದೇಶದ್ದು. ಯೋಗವು ಮಾನವನ ಆರೋಗ್ಯವನ್ನು ಹದ್ದುಬಸ್ತಿನಲ್ಲಿಡಲು ಶ್ರಮಿಸುತ್ತದೆ.
ಅಷ್ಟಾಂಗ ಯೋಗದ ಎಂಟು ಮೆಟ್ಟಿಲುಗಳು- ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಎಂದು ಪತಂಜಲಿ ಮುನಿಗಳು ತಿಳಿಸಿದ್ದಾರೆ. 'ಯೋಗ ಕರ್ಮಸು ಕೌಶಲಂ' ಅರ್ಥಾತ್ ಯಾವುದೇ ಕೆಲಸವನ್ನು ಕುಶಲತೆಯಿಂದ ಯಶಸ್ವಿಯಾಗಿ ನಿರ್ವಹಿಸುವುದೂ ಯೋಗವೇ. ಎಂದು ಭಗವದ್ಗೀತೆ ವಿವರಿಸುತ್ತದೆ. ಇದರಲ್ಲಿ 84 ಆಸನಗಳಿವೆ ಎಂದೂ ಹೇಳಲಾಗಿದೆ.ಯೋಗದಿಂದ ಆರೋಗ್ಯಕ್ಕೆ ಆಗುವ ಅನುಕೂಲಗಳು ಬಹಳಷ್ಟಿವೆ. ದೈಹಿಕ ಹಾಗೂ ಮಾನಸಿಕರಾಗಿ ಸದೃಢರಾಗಿರಲು ಯೋಗದ ಕೊಡುಗೆ ಅಪಾರ. ವಿದ್ಯಾರ್ಥಿಗಳಿಗೆ ಏಕಾಗ್ರತೆಯನ್ನು ನೀಡುವುದರ ಜೊತೆಗೆ ಬದುಕಿಗೆ ಶಿಸ್ತನ್ನು ನೀಡುತ್ತದೆ. ಹೃದಯ, ಶ್ವಾಸಕೋಶ, ಮೆದುಳು ಮುಂತಾದ ದೇಹದ ಭಾಗಗಳನ್ನು ಸುಸ್ಥಿತಿಯಲ್ಲಿಡಲು ಯೋಗವು ಸಹಕಾರಿ.
ಕತ್ತಲಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಯೋಗದ ಕುರಿತು ಶ್ರೀ ಅರವಿಂದರು ಹೇಳುತ್ತಾರೆ "ಯೋಗದ ದಾರಿಯು ಬಹಳ ದೀರ್ಘವಾದದು. ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಪ್ರತಿಭಟನೆಗಳ ವಿರುದ್ಧ ಹೋರಾಡಿ ಗೆಲ್ಲಬೇಕಾಗುವುದು. ಎಲ್ಲಾ ಕಷ್ಟಗಳು ಅಡಚಣೆಗಳು ಹಾಗೂ ತೋರಿಕೆಯ ಸೋಲುಗಳನ್ನು ಎದುರಿಸಲು ಶ್ರದ್ಧೆ, ತಾಳ್ಮೆ ಹಾಗೂ ಏಕ ಮನಸ್ಸಿನ ದೃಢ ನಿಷ್ಠೆ- ಇವೇ ಬೇರಾವ ಗುಣಗಳಿಗಿಂತ ಅಧಿಕವಾಗಿ ಸಾಧಕನಿಗೆ ಬೇಕಾಗಿರುವುದು." ಇದು ಯೋಗದ ಮಹತ್ವ, ಅವಶ್ಯಕತೆಯನ್ನು ವಿವರಿಸುತ್ತದೆ. "ಸದಾ ನಿನ್ನ ಮನಸ್ಸು ಶಕ್ತಿ ಪೂರ್ಣವಾಗಿರುವಂತೆ ನೋಡಿಕೋ ನಿನ್ನ ಮಾತುಗಳಲ್ಲಿ ಸದಾ ಶಕ್ತಿಯೇ ಚಿಮ್ಮುತ್ತಿರಲಿ" ಎಂಬ ಸ್ವಾಮಿ ವಿವೇಕಾನಂದ ವಾಣಿಯಂತೆ ಅಂತಹ ಶಕ್ತಿಯನ್ನು ನೀಡುವ ಶಕ್ತಿಪೂರ್ಣ ವಿದ್ಯೆಯೇ ಯೋಗ. ಇಂತಹ ಶಕ್ತಿವಂತ ವಿದ್ಯೆಯಿಂದ ನಮ್ಮ ಆರೋಗ್ಯವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳೋಣ. ಯೋಗವನ್ನು ಪ್ರೀತಿಯಿಂದ ಸ್ವೀಕರಿಸೋಣ.
- ಸಂಶೀನ,
ಪ್ರಥಮ ಪತ್ರಿಕೋದ್ಯಮ,
ವಿವೇಕಾನಂದ ಕಾಲೇಜು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ