ನಮ್ಮ ಭಾರತ ದೇಶದ ಸಂಸ್ಕೃತಿಯು ವಿಶ್ವದಲ್ಲೇ ಪುರಾತನವಾದುದು. ಪ್ರಾಚೀನತೆಯಿಂದ ಆಧುನಿಕ ನಾಗರೀಕತೆಯೆಡೆಗೆ ಬೆಳೆಯುವ ನಿಟ್ಟಿನಲ್ಲಿ ಮನುಷ್ಯ ಹಲವು ಕ್ಷೇತ್ರಗಳ ವಿಕಾಸ ಮತ್ತು ಬೆಳವಣಿಗೆಗೆ ಕಾರಣನಾಗಿದ್ದಾನೆ. ವಿಜ್ಞಾನ, ತಂತ್ರಜ್ಞಾನ, ವೈಮಾನಿಕ , ಖಗೋಳ, ರಾಜಕೀಯ , ಆರ್ಥಿಕ, ಸಾಮಾಜಿಕ , ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಿಡುವಿಲ್ಲದೆ ಕೆಲಸ ಮಾಡುವ ಭರದಲ್ಲಿ ತಾನು ತನಗರಿವಿಲ್ಲದಂತೆ ಒತ್ತಡದ ಜೀವನಕ್ಕೆ ಕಾಲಿಟ್ಟು ಬಿಟ್ಟಿದ್ದಾನೆ. ಎಲ್ಲ ಕ್ಷೇತ್ರಗಳ ವಿಕಾಸ ಮತ್ತು ಬೆಳವಣಿಗೆ ಒಂದೆಡೆಯಾದರೆ ಮತ್ತೊಂದೆಡೆ ಮನುಷ್ಯನು ಸಾಮಾಜಿಕ ಸಮಸ್ಯೆಗಳಿಗೂ ಕಾರಣನಾಗಿದ್ದಾನೆ ಮತ್ತು ಆ ಎಲ್ಲ ಸಮಸ್ಯೆಗಳಲ್ಲಿ ತಾನೂ ಸಿಲುಕಿಕೊಂಡಿದ್ದಾನೆ. ಇಂತಹ ಸಾಮಾಜಿಕ ಸಮಸ್ಯೆಗಳಿಗೆ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲೆ ದೋಷವಿರಬಹುದು. ಮಾನವನ ಮನೋ ದೌರ್ಬಲ್ಯವಿರಬಹುದು. ಬಡತನ ಮತ್ತು ಅನಕ್ಷರತೆ ಇರಬಹುದು. ಜನರ ಮೂಢನಂಬಿಕೆಗಳಿರಬಹುದು. ಆಧುನಿಕ ಜಗತ್ತಿನ ಕೆಲ ಪರಿಣಾಮಗಳೂ ಇರಬಹುದು. ನಮ್ಮ ಭಾರತೀಯ ಸಮಾಜದಲ್ಲಿನ ಸಾಮಾಜಿಕ ಸಮಸ್ಯೆಗಳೆಂದರೆ : ಬಡತನ , ಅನಕ್ಷರತೆ, ಮೂಢ ನಂಬಿಕೆ, ಅಂಧ ಶ್ರದ್ಧೆಗಳು, ಮದ್ಯಪಾನ - ಮಾದಕ ವಸ್ತುಗಳ ಸೇವನೆ, ಬಾಲ್ಯ ವಿವಾಹ ಪದ್ಧತಿ, ವರದಕ್ಷಿಣೆ, ಬಾಲಕಾರ್ಮಿಕರು ಮತ್ತು ಬಾಲಾಪರಾಧಗಳು, ಭಿಕ್ಷಾಟನೆ, ಕೌಟುಂಬಿಕ ವಿಘಟನೆ, ಯುವ ಸಮುದಾಯದ ಅಶಾಂತಿ, ಮಹಿಳೆಯರ ಮೇಲಿನ ದೌರ್ಜನ್ಯ ಮುಂತಾದವು.
ಮದ್ಯಪಾನ - ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುತ್ತಿರುವ ಗಂಭೀರ ಪರಿಣಾಮಗಳನ್ನು ಗಮನಿಸಿದ ಅನೇಕ ರಾಷ್ಟ್ರಗಳು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿದವು. ಪರಿಣಾಮವಾಗಿ 1987 ಡಿಸೆಂಬರ್ 7ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ "ಜೂನ್ 26 ಅನ್ನು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನ" ಎಂದು ಘೋಷಿಸಲಾಯಿತು. ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2023ರ ಥೀಮ್ ನ್ನು ನೀಡಿದ್ದು "ಜನರು ಮೊದಲು: ಕಳಂಕ ಮತ್ತು ತಾರತಮ್ಯವನ್ನು ನಿಲ್ಲಿಸಿ, ತಡೆಗಟ್ಟುವಿಕೆಯನ್ನು ಬಲಪಡಿಸಿ" [ PEOPLE FIRST : STOP STIGMA AND DISCRIMINATION, STRENGTHEN PREVENTION"] ಎಂಬುದಾಗಿದೆ.
ಮನುಷ್ಯನು ತನ್ನ ಒತ್ತಡಮಯ ಬದುಕಿನಲ್ಲಿ ಸಾಮಾನ್ಯವಾಗಿ ಅನೇಕ ಚಟ ಅಥವಾ ದುರಭ್ಯಾಸಗಳನ್ನು ಬೆಳೆಸಿಕೊಂಡಿರುತ್ತಾನೆ. ಇಲ್ಲಿ ಚಟ ಎಂದರೆ ಇಷ್ಟು ದೊರಕಿದರೆ ಅಷ್ಟು ಬೇಕೆಂಬ ಆಸೆ . ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆಯನ್ನು ಹುಟ್ಟಿಸುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಎ೦ದು ಹೇಳಬಹುದು. ಆ ವಸ್ತುವಿನ ಸೇವನೆಗೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಕ್ರಿಯೆಗಳೆಲ್ಲಾ ಹೊಂದಿಕೊಂಡು ಬಿಟ್ಟಿರುತ್ತವೆ. ಇಂದು ಇಂಥ ಅನೇಕ ಚಟಗಳಿಗೆ ನಮ್ಮ ಸಮಾಜವು ಬಲಿಯಾಗಿದೆ ಮತ್ತು ಬಲಿಯಾಗುತ್ತಿದೆ. ಕೆಲವು ಸಾಮಾನ್ಯವಾದ ಪರಿಣಾಮವನ್ನು ಉಂಟು ಮಾಡುವ ಚಟಗಳಾದರೆ, ಇನ್ನು ಕೆಲವು ತೀವ್ರವಾದ ರೀತಿಯಲ್ಲಿ ಉತ್ತೇಜನಕಾರಿಯಾದ ಚಟಗಳಾಗಿರುತ್ತವೆ. ಸಾಮಾನ್ಯವಾಗಿ ಜಗತ್ತಿನಾದ್ಯಂತ ಕಂಡುಬರುವ ಒಂದು ದೊಡ್ಡ ಪಿಡುಗು ಎಂದರೆ ಮಾದಕ ವಸ್ತುಗಳ ಸೇವನೆ. ಇದು ಗಂಡು – ಹೆಣ್ಣು , ಬಡವ – ಶ್ರೀಮಂತ ಎನ್ನುವ ತಾರತಮ್ಯವಿಲ್ಲದೆ ಎಲ್ಲೆಡೆಯೂ ಕಂಡುಬರುತ್ತದೆ. ಜನರು ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳೆಂದರೆ , ಕಾಫಿ , ಟೀ ಸೇವನೆ , ಎಲೆ ಅಡಿಕೆ , ಬೀಡಿ, ಸಿಗರೇಟು, ಹೊಗೆಸೊಪ್ಪು, ಅಫೀಮು, ಗಾಂಜಾ ಮೊದಲಾದವುಗಳು ವ್ಯಸನಿಗಳ ರಕ್ತನಾಳದಲ್ಲಿ ಹರಿಯುತ್ತಿದ್ದು ಚಟ ಹಿಡಿಸಿಬಿಟ್ಟಿವೆ. ಮದ್ಯ , ತಂಬಾಕು, ಗಾಂಜಾ , ಕೋಕೇನ್, ಓಪಿಯಮ್, ಆಂಫಿಟಮೈನ್, ಹೆರಾಯಿನ್, ಬ್ರೌನ್ ಶುಗರ್, ನಿದ್ದೆ ಮಾತ್ರೆಗಳು, ವೈಟ್ನರ್, ಪೆಟ್ರೋಲಿಯಮ್ ಉತ್ಪನ್ನಗಳು ಇತ್ಯಾದಿ. ಇಂದಿನ ಮಕ್ಕಳು ಮತ್ತು ಯುವಪೀಳಿಗೆ ಇವುಗಳ ಸೇವನೆಗೆ ಬಲಿಯಾಗಿ ಮತ್ತು ಅಥವಾ ಅಮಲಿನಲ್ಲಿ ತೇಲಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯನ್ನು ಮತ್ತೆ ಮತ್ತೆ ತಲುಪಬೇಕೆಂಬ ಆಸೆಯೇ ಚಟವಾಗಿದೆ. ಇವುಗಳಲ್ಲಿ ಕೆಲವು ಹೊರದೇಶಗಳಿಂದ ನಮ್ಮ ದೇಶಕ್ಕೆ ಬಂದಂತಹ ಚಟಗಳೂ ಆಗಿವೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಇಂಥ ವಸ್ತುಗಳ ಕಳ್ಳಸಾಗಣೆ ಮತ್ತು ಸೇವನೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಒಂದು ಸಲ ಸಿಕ್ಕಿಬಿದ್ದರೆ ಸಾಕು, ನಂತರ ಅವುಗಳ ದಾಸರಾಗಿ ಬಿಡುತ್ತಾರೆ. ಅವರು ಮತ್ತೆ ಅವುಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ . ಇಂದು ಶಾಲಾ – ಕಾಲೇಜಿನ ವಿದ್ಯಾರ್ಥಿಗಳು ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಒಟ್ಟಿನಲ್ಲಿ ಆಧುನಿಕ ದೇಶಗಳ ಎಲ್ಲೆಡೆಯಲ್ಲೂ ಕಾಡುತ್ತಿರುವ ಅಂದರೆ ವ್ಯಕ್ತಿಗತ ಕೌಟುಂಬಿಕ ಸಮಸ್ಯೆಯಿಂದ ಹಿಡಿದು ರಾಷ್ಟ್ರೀಯ ಅಂತರರಾಷ್ಟ್ರೀಯ ಸಮಸ್ಯೆಯೂ ಇದಾಗಿದೆ. ಈ ಕುರಿತಂತೆ ಮಾದಕ ವ್ಯಸನಿಗಳನ್ನು ವ್ಯಸನ ಮುಕ್ತರಾಗಿಸಲು ಚಿಂತಕರು, ವಿಜ್ಞಾನಿಗಳು, ಹಾಗೂ ಹಲವಾರು ರಾಷ್ಟ್ರಗಳ ಸರ್ಕಾರಗಳು ಚಿಂತನೆ ಮಾಡುತ್ತಿವೆ.
ಮಾದಕ ವಸ್ತು ಸೇವನೆಯು ಅನೇಕ ರೀತಿಯ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ. "ಅತಿಯಾದರೆ ಅಮೃತವೂ ವಿಷ" ಎಂಬ ಗಾದೆ ಮಾತು ಈ ವಿಚಾರಲ್ಲಿ ಅಕ್ಷರಶಃ ನಿಜವೆನಿಸುತ್ತದೆ.
* ಮಾದಕ ವಸ್ತುಗಳ ಸೇವನೆಯ ಚಟವು ಮಾನವನ ಮೆದುಳಿನ ಮೇಲೆ ದೀರ್ಘಕಾಲದ ಅನಾರೋಗ್ಯಕರ ಪರಿಣಾಮ ಬೀರುತ್ತದೆ. ನಮ್ಮ ಸಮಾಜವನ್ನು ಕಾಡುತ್ತಿರುವ ಇಂಥ ಚಟಗಳಲ್ಲಿ ಮುಖ್ಯವಾದವು ಡ್ರಗ್ಸ್ ಎಂಬ ಮತ್ತು ಬರಿಸುವ ಮಾದಕ ವಸ್ತು ಸೇವನೆ. ಇಲ್ಲಿ ಡ್ರಗ್ಸ್ ಎಂದರೆ ಮಾದಕ ಉತ್ತೇಜಕ ಪದಾರ್ಥ ಎಂದರ್ಥ. ಇವುಗಳನ್ನು ಸೇವಿಸುವುದರಿಂದ ವ್ಯಕ್ತಿಯು ಮಾನಸಿಕ ವಿಕೃತ ತನವನ್ನು ಹೊಂದಿ ಸಮಾಜಕ್ಕೆ ಕಂಟಕಪ್ರಾಯನಾಗುತ್ತಾನೆ. ಅದಲ್ಲದೆ ಇದರ ಸೇವನೆಯ ಪರಿಣಾಮವಾಗಿ ವ್ಯಕಿಯು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾನೆ.
* ಸಮಾಜವು ಒಪ್ಪಿಕೊಂಡಿರುವ ರೀತಿ – ನೀತಿಗಳ ವಿಷಯದಲ್ಲೂ ಅವನು ವಿಮುಖನಾಗುವಂತೆ ಅವನ ಚಟಗಳು ಮಾಡುತ್ತವೆ. ಅಮಲು ಪದಾರ್ಥಗಳ ಸೇವನೆಯು ಕೆಲವು ನಿಮಿಷಗಳ ಕಾಲ ಆನಂದವನ್ನು ನೀಡುತ್ತದೆ ಆದರೆ ಇದು ದೂರಗಾಮಿ ಅಡ್ಡ ಪರಿಣಾಮಗಳನ್ನು ಹೊಂದಿದೆ. ಅದು ವ್ಯಕ್ತಿಯನ್ನು ನಿಧಾನವಾಗಿ ನುಂಗುತ್ತದೆ ಮತ್ತು ಅವನ ಜೀವನವನ್ನು ಎಲ್ಲಾ ರೀತಿಯಲ್ಲಿ ಹಾಳುಮಾಡುತ್ತದೆ.
* ಮಾದಕ ವಸ್ತುಗಳ ಸೇವನೆಗೆ ಒಳಗಾದಂತಹ ಜನರು ಪ್ರತಿದಿನ ಬೇರೆ ಬೇರೆ ಜನರೊಂದಿಗೆ ಜಗಳವಾಡಲು ಪ್ರಾರಂಭಿಸುತ್ತಾರೆ, ಹೊಡೆಯಲು ಪ್ರಾರಂಭಿಸುತ್ತಾರೆ, ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.
* ಮಾದಕ ವಸ್ತುಗಳ ಸೇವನೆಯಿಂದಾಗಿ ಕೆಲಸ ಮಾಡುವಾಗ ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಮಾನತ್ತಿಗೊಳಪಡುವುದು, ಆಗಾಗ್ಗೆ ಕೆಲಸ ಬದಲಾಯಿಸುವುದು, ಕೆಲಸ ಬಿಡುವುದು, ಕೆರಳುವ ಮತ್ತು ಕೋಪದ ಸ್ವಭಾವವನ್ನು ತೋರಿಸುವುದು ಕಂಡುಬರುತ್ತದೆ.
* ಅಮಲು ಉಂಟು ಮಾಡುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
* ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
* ಶಾಲಾ- ಕಾಲೇಜು ಮಕ್ಕಳಲ್ಲಿ ಕಲಿಕಾ ನ್ಯೂನತೆ ಉಂಟಾಗಲು ಇದು ಕಾರಣವಾಗಿರಲೂ ಬಹುದು. ಮನೆಯಲ್ಲಿ ನಿತ್ಯವೂ ಜಗಳ, ಸರಿಯಾದ ಮಾರ್ಗದರ್ಶನ ಇಲ್ಲದೆ ಮಗು ಕಲಿಕೆಯಲ್ಲಿ ಹಿಂದುಳಿಯುತ್ತದೆ. ಮಕ್ಕಳಿಗೆ ಒಳಿತನ್ನು ಬಯಸುವವರು ಮೂಲಕಾರಣವನ್ನು ಕಂಡು ಹಿಡಿದು ಆ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು.
* ಮಾದಕ ವಸ್ತುಗಳ ಸೇವನೆಯಿಂದ ಮಕ್ಕಳು ಮನೆಯಲ್ಲಿ ಅನ್ಯಮನಸ್ಕರಾಗುವ ಸಾಧ್ಯತೆಯಿದ್ದು ಮತ್ತು ಸದಾ ನಿದ್ರೆಯ ಮಂಪರಿನಲ್ಲಿರುವಂತೆ ಕಾಣಿಸುತ್ತದೆ. ಮಾತಾಡಿದಾಗ ಸಿಟ್ಟು ಮಾಡಿಕೊಳ್ಳುವುದು, ಹಣ, ವಸ್ತುಗಳನ್ನು ಕಳ್ಳತನ ಮಾಡುವ ಮನಸ್ಥಿತಿಗೆ ತಲುಪುತ್ತಾರೆ.
* ಮಾದಕ ವ್ಯಸನ ಮನಷ್ಯನ ಇಡೀ ದೇಹವನ್ನು ಆವರಿಸಿ, ನಿತ್ರಾಣ, ನರದೌರ್ಬಲ್ಯ, ಮಿದುಳಿಗೆ ಹಾನಿ, ಶ್ವಾಸಕೋಶ, ಯಕೃತ್ತು ಎಲ್ಲವನ್ನೂ ನುಂಗಿ ಹಾಕುತ್ತದೆ. ಲೈಂಗಿಕ ದೌರ್ಬಲ್ಯ ಸಹ ಉಂಟಾಗುವ ಸಾಧ್ಯತೆಯಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳಿಗೆ ಒಂದು ಇಲ್ಲವೇ ಎರಡು ಮಕ್ಕಳು ಇದ್ದು ಇರುವ ಮಕ್ಕಳನ್ನು ಜೋಪಾನವಾಗಿ ನೋಡಿ ಕೊಳ್ಳ ಬೇಕೆಂದು ಮಿತಿಮೀರಿದ ಅಕ್ಕರೆ, ಪ್ರೀತಿ, ಕಾಳಜಿ ತೋರಿಸುತ್ತಾರೆ. ಇದು ಮಕ್ಕಳ ಬದುಕಿನ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ ಎಂಬ ಅರಿವು ಪೋಷಕರಿಗಿರುವುದಿಲ್ಲ. ಮನೆಯಲ್ಲಿ ಹಿರಿಯರು ಮಕ್ಕಳ ತಪ್ಪುಗಳನ್ನು ಕಂಡು ಹಿಡಿದು ಹೆದರಿಸಿದರೆ, ಶಾಲೆಯಲ್ಲಿ ಶಿಕ್ಷಕರು ಮಕ್ಕಳ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳುವ ಸಂದರ್ಭದಲ್ಲಿ ಶಿಕ್ಷಿಸಿದರೆ , ಪೋಷಕರು ಹೇಳಿದವರ ಮೇಲೆಯೇ ಹರಿಹಾಯುತ್ತಾರೆ. ಇದನ್ನೆಲ್ಲ ಗಮನಿಸುವ ಮಗುವಿಗೆ ಹೆದರಿಕೆ, ಭಯ ಯಾವುದೂ ಇಲ್ಲ. " ಆನೆ ನಡೆದದ್ದೇ ದಾರಿ " ಎಂಬ ಹಾಗೆ ''ತಾನು ಹೇಳಿದ್ದು, ತಾನು ಮಾಡಿದ್ದೇ ಸರಿ'' ಎಂಬ ಧೋರಣೆ ಮಕ್ಕಳಿಗೆ ಬಂದು ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಾ ದುಶ್ಚಟಗಳಿಗೆ ಬಲಿಯಾಗಿ ಸಮಾಜ ಪೀಡನೆಯಾಗುತ್ತದೆ.
ಇದಲ್ಲದೇ ಆಧುನೀಕರಣದ ಬೆಳವಣಿಗೆಯ ಭರಾಟೆಯಲ್ಲಿ ಕಿಟ್ಟಿ ಪಾರ್ಟಿಗಳೆಂಬ ಮೋಹದಿಂದ ಮಹಿಳೆಯರೂ ಸಹ ಈಗೀಗ ಈ ವ್ಯಸನಕ್ಕೆ ಗುರಿಯಾಗುತ್ತಿದ್ದಾರೆ. ಮೊದಲಿಗೆ ಶೋಕಿಗಾಗಿ ಪ್ರಾರಂಭವಾಗುವ ಈ ಅಭ್ಯಾಸ ಕ್ರಮೇಣ ಚಟವಾಗಿ ಬದಲಾಗುತ್ತದೆ. ಮಹಿಳೆಯರು ಈ ದುಶ್ಚಟಗಳಿಗೆ ಬೀಳುವುದರಿಂದ ಅವರಿಗೆ ಭವಿಷ್ಯದಲ್ಲಿ ಹುಟ್ಟುವ ಮಕ್ಕಳಿಗೆ ತೊಂದರೆಯಾಗುವುದು ಖಂಡಿತಾ.
ಮಾದಕವಸ್ತುಗಳ ವಿರೋಧಿ ದಿನವನ್ನು ಇಂದು ಅನೇಕ ರಾಷ್ಟ್ರಗಳಲ್ಲಿ ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಅಂದರೆ, ಆ ನಿಟ್ಟಿನಲ್ಲಿ ನಾವು ಏನು ಮಾಡಬಹುದೆಂಬ ಚಿಂತನ-ಮಂಥನವನ್ನು ಈ ಸಮಯದಲ್ಲಿ ಮಾಡಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ಬಳಕೆಯನ್ನು ನಿಲ್ಲಿಸುವಂಥ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬಹುದಾಗಿದೆ. ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ ತಿಳುವಳಿಕೆ ನೀಡಬಹುದು. ಅಂಗನವಾಡಿ, ಶಾಲೆ, ಆಶಾಕಾರ್ಯಕರ್ತೆಯರ ಮೂಲಕ ಸಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಪ್ರಸಕ್ತ ದಿನಗಳಲ್ಲಿ ಮದ್ಯವರ್ಜನ ಶಿಬಿರಗಳನ್ನು ಅಲ್ಲಲ್ಲಿ ಏರ್ಪಡಿಸಿ , ಆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸಂಘಸಂಸ್ಥೆಗಳು ಇದಕ್ಕೆ ಸಹಕರಿಸುತ್ತಿವೆ.
ಮಾದಕ ವಸ್ತುಗಳ ಸೇವನೆಯ ಚಟವನ್ನು ತಪ್ಪಿಸಲು ಕೆಲವೊಂದು ಕ್ರಮಗಳನ್ನು ಅನುಸರಿಸಬಹುದು.
* ಮೊದಲಿಗೆ ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಒಳಗಾದ ವ್ಯಕ್ತಿಗಳು ಮಾದಕ ವಸ್ತುಗಳನ್ನು ತ್ಯಜಿಸಲು ಸಿದ್ಧರಿರಬೇಕು ಮತ್ತು ಅವರಿಗೆ ಈ ಕುರಿತು ವ್ಯಸನ ಬಿಡಲು ಮನಸ್ಸು ಮಾಡಬೇಕು. ಮನಸ್ಸಿನಲ್ಲಿ ಬಲವಾಗಿ ಬದುಕುವ ಆಸೆಯನ್ನು ಹೊಂದಿರುವುದು ಅವಶ್ಯಕ.
* ಪುನರ್ವಸತಿ ಕೇಂದ್ರಗಳಲ್ಲಿ ಪ್ರವೇಶ ಪಡೆದು ವೈದ್ಯರ ಮೇಲ್ವಿಚಾರಣೆಯಲ್ಲಿ ಎಲ್ಲರಿಗೂ ಒಟ್ಟಿಗೆ ಚಿಕಿತ್ಸೆ ನೀಡಲಾಗುತ್ತದೆ. ವ್ಯಸನಿಗಳಿಗೆ ಗುಂಪು ಚಿಕಿತ್ಸಾ ವಿಧಾನ ಮತ್ತು ಮಾನಸಿಕ ವಿಧಾನದಿಂದ ಚಿಕಿತ್ಸೆ ನೀಡಲಾಗುತ್ತದೆ.
* ಯೋಗ ಮತ್ತು ಧ್ಯಾನ ಮೂಲಕವೂ ಮಾದಕ ವ್ಯಸನವನ್ನು ಬಿಡಬಹುದು.
* ವ್ಯಸನಿಗಳು ಎಲ್ಲಾ ಸಮಯದಲ್ಲೂ ವ್ಯಸನಿಗಳಲ್ಲದ ಸ್ನೇಹಿತರು ಮತ್ತು ಸಂಬಂಧಿಕರು ಹಾಗೂ ಹಿತೈಷಿಗಳೊಂದಿಗೆ ಇರುವ ಮೂಲಕ ಮದ್ಯವ್ಯಸನದಿಂದ ಮುಕ್ತರಾಗಬಹುದು.
* ಮಾದಕ ವ್ಯಸನದಿಂದ ಬಳಲುತ್ತಿರುವ ವ್ಯಸನಿಗಳು ತಮ್ಮ ಕಾರ್ಯ ಚಟುವಟಿಕೆಗಳ ಕುರಿತಂತೆ ಪ್ರತಿದಿನ ದಿನಚರಿ ಪುಸ್ತಕ ಬರೆಯುವುದು ಒಳ್ಳೆಯ ಅಭ್ಯಾಸ. ಇದನ್ನು ಮಾಡುವುದರಿಂದ ಹಲವಾರು ಉಪಯೋಗಗಳಿವೆ. ತಮ್ಮ ಬದುಕಿನ ಎಲ್ಲಾ ಮಜಲುಗಳನ್ನು ಬರೆಯುವ ಮೂಲಕ, ತಾವು ವ್ಯಸನ ಮುಕ್ತರಾದ ನಂತರದ ಪರಿಣಾಮಗಳನ್ನೂ ದಾಖಲಿಸುವ ಮೂಲಕ, ತಾನು ತನ್ನ ಬದುಕಿನಲ್ಲಿ ಮಾದಕತೆಯಿಂದ ಹೇಗೆ ಹಾಳಾಗುತ್ತಿದ್ದೆ ಎಂಬುದನ್ನು ಸ್ವಯಂ ಅರಿತುಕೊಳ್ಳುತ್ತಾನೆ.
ಹಾಸನ ನಗರದ ಭುವನಹಳ್ಳಿ ವ್ಯಾಪ್ತಿಯಲ್ಲಿ ಭುವನೇಶ್ವರಿ ಅಸೋಸಿಯೇಷನ್ ಸಂಸ್ಥೆಯ ಅಂಗ ಸಂಸ್ಥೆಯಾಗಿ *ಭುವನೇಶ್ವರಿ ಮಧ್ಯ ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರವನ್ನು* 2008- 2009 ನೇ ಸಾಲಿನಲ್ಲಿ ಆರಂಭಿಸಿದರು. ಈ ಕೇಂದ್ರವು 15 ಹಾಸಿಗೆಗಳನ್ನು ಹೊಂದಿರುವ ಕೇಂದ್ರವಾಗಿದ್ದು ಮಧ್ಯ ವ್ಯಸನಿಗಳಿಗೆ ಯೋಗ, ಪ್ರಾಣಾಯಾಮ, ಧ್ಯಾನ, ವೈದ್ಯಕೀಯ ಸೌಲಭ್ಯ ಊಟ, ವಸತಿ, ವೈಯಕ್ತಿಕ ಆಪ್ತ ಸಮಾಲೋಚನೆ, ಕೌಟುಂಬಿಕ ಆಪ್ತ ಸಮಾಲೋಚನೆ, ಗುಂಪು ಸಮಾಲೋಚನೆ, ಒಳಕ್ರೀಡೆಗಳು ಮತ್ತು ಮನೋರಂಜನೆ ಈ ಚಟುವಟಿಕೆಗಳು ವ್ಯಸನಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳಾಗಿವೆ. ಈ ಸಂಸ್ಥೆಯು ಸಾಕಷ್ಟು ಕೌಟುಂಬಿಕ ಸಮಸ್ಯೆಗಳನ್ನೊಳಗೊಂಡ ಸಂಸಾರಗಳನ್ನು ಸಮಾಜದಲ್ಲಿ ಉತ್ತಮವಾಗಿ ಬದುಕಲು ಅನುವು ಮಾಡಿಕೊಟ್ಟಿದೆ. ಈ ವ್ಯಸನವು ಸಮಾಜದ ಮೇಲ್ವರ್ಗ, ಕೆಳವರ್ಗ ಎಂಬ ಭೇದ ಭಾವವಿಲ್ಲದೆ ಎಲ್ಲಾ ವರ್ಗದವರಿಗೂ ಈ ವ್ಯಸನದ ವ್ಯಾಮೋಹ ಆವರಿಸಿಕೊಂಡಿದೆ. ಈ ಕೇಂದ್ರವು ಕೇವಲ ಒಳರೋಗಿಗಳಿಗೆ ಪುನರ್ವಸತಿ ಕಲ್ಪಿಸುತ್ತದೆ. ಶಾಲಾ-ಕಾಲೇಜುಗಳಲ್ಲಿ, ಗ್ರಾಮ ಸಭೆಗಳಲ್ಲಿ, ಸ್ತ್ರೀ ಶಕ್ತಿ ಮಹಿಳಾ ಸಂಘಗಳಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುತ್ತಿದೆ. ಈ ಕೇಂದ್ರವು ಪ್ರಾರಂಭದಲ್ಲಿ ಕೇವಲ 4 ವ್ಯಸನಿಗಳಿಂದ ಪ್ರಾರಂಭವಾಗಿದ್ದು 15 ವರ್ಷಗಳಲ್ಲಿ 2900 ವ್ಯಸನಿಗಳಿಗೆ ಪುನರ್ವಸತಿಯನ್ನು ಕಲ್ಪಿಸಿಕೊಟ್ಟು, ಸಮಾಜದಲ್ಲಿ ಉತ್ತಮವಾದ ವ್ಯಸನ ಮುಕ್ತ ಜೀವನವನ್ನು ಮಾಡಲು ಈ ಕೇಂದ್ರವು ಅವಕಾಶ ಕಲ್ಪಿಸಿಕೊಟ್ಟಿದೆ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಭುವನೇಶ್ವರಿ ಮದ್ಯವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರವು ಸಕ್ರಿಯವಾಗಿದ್ದು, ಇಲ್ಲಿ ದಾಖಲಾಗುವ ವ್ಯಸನಿಗಳನ್ನು ಮದ್ಯವ್ಯಸನ ಮುಕ್ತರನ್ನಾಗಿಸುವಲ್ಲಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಮಾರ್ಗದರ್ಶನ ನೀಡುತ್ತಿದೆ. ಆಗಿಂದಾಗ್ಗೆ ವಿವಿಧ ಕ್ಷೇತ್ರಗಳಲ್ಲಿನ ಸಂಪನ್ಮೂಲ ವ್ಯಕ್ತಿಗಳನ್ನು ಕೇಂದ್ರಕ್ಕೆ ಕರೆಸಿ ಉಪನ್ಯಾಸ ನೀಡಲಾಗುತ್ತಿದೆ. ಅಮಲು ಪದಾರ್ಥಗಳ ಸೇವನೆಯ ವಿರುದ್ಧ ಅರಿವು ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ. ವ್ಯಸನಿಯ ಮನಸ್ಸಲ್ಲಿ ಬದುಕುವ ಆತ್ಮವಿಶ್ವಾಸ ಹೆಚ್ಚುವಂತೆ ಪೂರಕ ವಾತಾವರಣ ನಿರ್ಮಾಣ ಮಾಡಿ ನಿಧಾನವಾಗಿ ವ್ಯಸನಿಯು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಎಲ್ಲರೂ ಇರುವುದರಲ್ಲಿಯೇ ಸಂತೃಪ್ತಿಯ ಆರೋಗ್ಯಕರ ಬದುಕು ನಡೆಸುವಂತಾಗಲಿ ಎಂದು ಹಾರೈಸಿ ಆಶಯ ವ್ಯಕ್ತಪಡಿಸೋಣ.
-ಕೆ. ಎನ್. ಚಿದಾನಂದ . ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ