ಸಪ್ತಸ್ವರಗಳು ಬ್ರಹ್ಮಾಂಡದ ವಿಭಿನ್ನ ಶಕ್ತಿ ಸ್ವರೂಪಗಳು

Upayuktha
0

                                  ಜೂನ್ 21 : ವಿಶ್ವ ಸಂಗೀತ ದಿನದ ನಿಮಿತ್ತ



ನಾದಮಯಾ ಈ ಲೋಕವೆಲ್ಲಾ

ಕೊಳಲಿಂದ ಗೋವಿಂದ ಆನಂದ ತಂದಿರಲು

ನದಿಯ ನೀರು ಮುಗಿಲ ಸಾಲು ಮುರಳಿಯ

ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು


ನಾದಮಯ ಈ ಲೋಕವೆಲ್ಲಾ ನಾದಮಯಾ ........ ಈ ಹಾಡನ್ನು ಕನ್ನಡಿಗರೆಲ್ಲರೂ ಕೇಳಿ ಆನಂದಿಸಿರುತ್ತಾರೆ. ಅಂತೆಯೇ ಎಲ್ಲೆಲ್ಲು ಸಂಗೀತವೇ. ಎಲ್ಲೆಲ್ಲು ಸೌಂದರ್ಯವೇ. ಕೇಳುವ ಕಿವಿ ಇರಲು ನೋಡುವ ಕಣ್ಣಿರಲು ಎಲ್ಲೆಲ್ಲು ಸಂಗೀತವೇ ..... ಎಂಬ ಕನ್ನಡದ ಹಾಡನ್ನು ಕೇಳದವರಿಲ್ಲ. ಹಾಗೇನೇ ಶಿಲೆಗಳು ಸಂಗೀತವ ಹಾಡಿವೆ ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ ಅನುದಿನ ಅನುಕ್ಷಣ ಕುಣಿಯುತಲೀ


ಶಿಲೆಗಳು ಸಂಗೀತವಾ ಹಾಡಿವೆ ........ ಎಂಬ ಹಾಡುಗಳು ಸಂಗೀತ ಲೋಕದಲ್ಲಿ ಅಜರಾಮರವಾಗಿ ಹೊಳೆವ ನಕ್ಷತ್ರಗಳಂತಿವೆ. ಸಂಗೀತ ಲೋಕವೇ ವಿಭಿನ್ನ, ವಿಶಿಷ್ಟ ಹಾಗೂ ವೈವಿಧ್ಯಮಯ. ಸಂಗೀತಗಾರರಿಗೆ ಸಂಗೀತ ಲೋಕವೇ ಪ್ರಪಂಚ ಎಂಬ ರೂಢಿ ಮಾತಿದೆ.


ಸಂಗೀತ ಒಂದು ವಿಶೇಷವಾದ ಕಲೆ. ಅದು ಅನಂತವಾದುದು. ಸಾಗರದಂತೆ ವಿಶಾಲವಾದುದು. ಮೊಗೆದಷ್ಟು ಭರ್ತಿಯಾಗುತ್ತೆ. ಕಲಿತಷ್ಟು ಹೆಚ್ಚಾಗುತ್ತದೆ. ಸಂಗೀತದ ಆರಾಧಕರು ಕಲಾ ರಸಿಕರು. ಸಂಗೀತವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಕಲಿತು ಅಭ್ಯಾಸ ಮಾಡುವವರು ಸಂಗೀತ ವಿದ್ವಾಂಸರೆನಿಸಿಕೊಳ್ಳುತ್ತಾರೆ. ಸಂಗೀತ ಜ್ಞಾನ ಸುಲಭವಾಗಿ ಲಭಿಸುವುದಿಲ್ಲ. ಸಂಗೀತ ಜ್ಞಾನದ ಸಿದ್ಧಿಗೆ ತಪಸ್ಸೇ ಮಾಡಬೇಕಾಗುತ್ತದೆ. ಸಂಗೀತವು ಸ್ವರಭಾರ, ಶೃತಿ, ರಾಗ, ತಾಳ, ಲಯ ಇವುಗಳ ಸಮತೂಲಿತ ಮಿಶ್ರಣವಾಗಿರುತ್ತದೆ. ಮಧುರವಾದ ಕಂಠದಿಂದ ಹೊರಹೊಮ್ಮಿದ ನಾದಗಾನವಾಗಿರುತ್ತದೆ ಸಂಗೀತ. ಇದು ಅನಂತ, ಅಮೋಘ, ಅದ್ಭುತ ಮತ್ತು ಅಚ್ಚರಿ. ಸೀಮಿತ ಕಾಲಾವಧಿಯಲ್ಲಿ ಈ ಮೇಲಿನ ಎಲ್ಲಾ ಭಾವನೆಗಳನ್ನು ಹಿಡಿದಿಟ್ಟು ವ್ಯಕ್ತಿ ಮತ್ತು ವ್ಯವಸ್ಥೆಯನ್ನು ಕುರಿತು ಮಾತುಗಳಲ್ಲಿ ಹೇಳುತ್ತಾ ಬಂಧಿಸಿ ನಲಿಸುತ್ತದೆ. ಸಂಗೀತವನ್ನು ಅನುಭವಿಸಿಯೇ ತಿಳಿಯಬೇಕು. ಸಪ್ತ ಸ್ವರಗಳು ಇಡೀ ಬ್ರಹ್ಮಾಂಡವನ್ನೆ ಬೆರಗುಗೊಳಿಸುತ್ತವೆ. ಸಂಗೀತವು ಅಸೀಮಾ. ಬಹಳ ವೇಗವಾಗಿ ಗಡಿಗಳನ್ನು ದಾಟಿ ಕಲಾರಸಿಕರನ್ನು ತಲುಪುತ್ತದೆ. ಸಂಗೀತಕ್ಕೆ ಜಾತಿ, ಮತ, ಧರ್ಮ, ವರ್ಣ, ಲಿಂಗ, ಭಾಷೆ, ದೇಶ, ಇವುಗಳ ಬೇಧ ಭಾವವಿಲ್ಲದೆ ಎಲ್ಲರ ಒಡನಾಡಿಯಾಗುತ್ತದೆ. ಸಂಗೀತವು ಕಾಲ ಮತ್ತು ದೇಶವನ್ನು ಮೀರಿ ನಿಂತಿರುತ್ತದೆ.


ಆದ್ದರಿಂದಲೇ ಪ್ರತಿವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವಾಗಿ ಆಚರಿಸಲ್ಪಡುತ್ತದೆ. ವಿಶ್ವ ಸಂಗೀತ ದಿನ 1982 ರಲ್ಲಿ ಆರಂಭವಾಯಿತು. 1982 ರಲ್ಲಿ, ಫ್ರಾನ್ಸಿನ ಸಾಂಸ್ಕೃತಿಕ ಮಂತ್ರಿ ಜ್ಯಾಕ್ ಲ್ಯಾಂಗ್ ಮತ್ತು ಫ್ರೆಂಚ್ ಸಂಯೋಜಕ ಮಾರಿಸ್ ಫ್ಲೆರೆಟ್ ಒಟ್ಟಾಗಿ ವಿಶ್ವ ಸಂಗೀತ ದಿನವನ್ನು ಆಚರಿಸುವ ಪರಿಕಲ್ಪನೆ ನೀಡಿದರು. ಪ್ಯಾರಿಸ್ ನಲ್ಲಿ ಬೇಸಿಗೆಯ ಆಯನ ಸಂಕ್ರಾಂತಿಯ ದಿನದಂದು ಇದು ಪ್ರಾರಂಭವಾಯಿತು. ಬೀದಿಗಳು, ನಿಲ್ದಾಣಗಳು, ವಸ್ತು ಸಂಗ್ರಹಾಲಯಗಳು ಮತ್ತು ಉದ್ಯಾನವನ ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಸಂಗೀತ ಕಚೇರಿಗಳೊಂದಿಗೆ 120 ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಈ ದಿನ, ಸಂಗೀತಗಾರರು ಸಾರ್ವಜನಿಕವಾಗಿ ನುಡಿಸುವುದರಲ್ಲಿ ಸಂತೋಷಪಡುತ್ತಾರೆ. 1982 ರಿಂದ ಆರಂಭಗೊಂಡು, ಜೂನ್ 21 ರ ಬೇಸಿಗೆಯ ಆಯನ ಸಂಕ್ರಾಂತಿಯ ದಿನವನ್ನು ವಿಶ್ವ ಸಂಗೀತ ದಿನವನ್ನಾಗಿ ಆಚರಿಸಲಾಯಿತು ಎಂಬುದು ಅಧ್ಯಯನದಿಂದ ತಿಳಿದು ಬರುತ್ತದೆ.


ಭಾರತ ದೇಶವಂತೂ ಸಂಗೀತದ ತವರಮನೆ. ಸಂಗೀತದ ಹಲವಾರು ಶೈಲಿಗಳನ್ನು ಹೊಂದಿದೆ. ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಶೈಲಿಯೇ ಅಲ್ಲದೆ, ಭಾಂಗ್ರಾ, ಭಜನೆ, ಕೀರ್ತನೆ, ಭಕ್ತಿಗೀತೆ, ಗಝಲ್‌, ಕವ್ವಾಲಿ, ಇಂಡಿ-ಪಾಪ್‌, ಜನಪದ, ಸಿನೆಮಾ ಹಾಡುಗಳು, ಸುಗಮ ಸಂಗೀತ, ರಿಮಿಕ್ಸ್‌, ಫ್ಯೂಶನ್‌ ಮುಂತಾದ ವೈವಿಧ್ಯಮಯ ಶೈಲಿಗಳೂ ಇವೆ. ಹಾಗೆಯೇ ಪಾಶ್ಚಿಮಾತ್ಯ ಪ್ರಾಕಾರಗಳಾದ ಮೆಟಲ್‌ ರಾಕ್‌, ಹಿಪ್‌ ಹಾಪ್‌, ಆಲ್ಟರ್‌ ನೇಟಿವ್‌, ಏಕ್ಸ್ಪೆರಿಮೆಂಟಲ್, ಕಂಟ್ರಿ, ಡಿಸ್ಕೋ, ಫೂಂತಕ್‌, ಕ್ಲಾಸಿಕಲ್, ಪ್ರೋಗ್ರೆಸ್ಸಿವ್‌, ಟ್ರಾನ್ಸ್‌, ಟೆಕ್ನೋ, ರೆಗ್ಗೆ ಮುಂತಾದ ಸಂಗೀತಗಳೂ ಇವೆ. ಸಂಗೀತ ಎಲ್ಲರಿಗೂ ಪ್ರಿಯ. ಸಂಗೀತ, ಸಂಗೀತಗಾರ, ಸಂಗೀತ ಅಧ್ಯಯನ, ಸಂಗೀತ ರಚನೆ, ಸಂಗೀತ ನಿರ್ದೇಶನ ಇಂಥವುಗಳ ವಿಚಾರ ತಿಳಿಯಲು ಒಂದು ವೇದಿಕೆ ಇದ್ದಂತೆ ಸಂಗೀತ ದಿನ. ಸಂಗೀತ ಪ್ರಿಯರ ಹಬ್ಬದ ದಿನವಿದು. 


ಭಾರತೀಯ ಸಂಗೀತದ ಹಿನ್ನೆಲೆಯನ್ನು ನೋಡುವುದಾದರೆ ವೇದಗಳಲ್ಲಿ ಒಂದು ಪ್ರಮುಖ ವೇದ ಸಾಮವೇದ. ಇದರಲ್ಲಿ ಸಂಗೀತದ ಕುರುಹುಗಳನ್ನು ಕಾಣಬಹುದು. ಸಾಮ ಎಂದರೆ ಗಾನ ಎಂದರ್ಥ. ಸಂಗೀತವು ಆರಂಭದಲ್ಲಿ ದೇವ ದೇವತೆಗಳ ಮೇಲೆ ಭಕ್ತಿಯಿಂದ ಹಾಡುವಂತಿದ್ದವು. ಹನ್ನೆರಡನೆಯ ಮತ್ತು ಹದಿಮೂರನೆಯ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಅವು ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತವಾಗಿ ಮುಖ್ಯವೆನಿಸಿದವು. ಸಪ್ತ ಸ್ವರಗಳು, ರಾಗಗಳು, ತಾಳಗಳು ಇವೆಲ್ಲ ಸಂಗೀತದ ಒಂದೊಂದು ಭಾಗಗಳಾಗಿವೆ ಎಂಬೆಲ್ಲಾ ವಿಚಾರಗಳು ಸಂಗೀತಶಾಸ್ತ್ರದ ಇತಿಹಾಸದಿಂದ ತಿಳಿದುಬರುತ್ತದೆ.


ಭಾರತದಲ್ಲಿ ಪ್ರಮುಖವಾದ ಸಂಗೀತಗಾರರು ಬಹಳಷ್ಟು ಜನರು ಇದ್ದಾರೆ. ಅವರಲ್ಲಿ ತುಂಬಾ ಹೆಸರು ಗಳಿಸಿದ್ದವರಲ್ಲಿ ಒಬ್ಬರು ಶ್ರೀ ಪುರಂದರದಾಸರು. ಅವರು "ಕರ್ನಾಟಕ ಸಂಗೀತ ಪಿತಾಮಹ" ಎಂದು ಹೆಸರಾದರು. ಅವರು ರಾಗ ಮಾಯಮಾಳವಗೌಳವನ್ನು ಪರಿಚಯಿಸಿದರು. ಶ್ರೀ ಪುರಂದರದಾಸರು, ಶ್ರೀಪಾದರಾಯರು, ಕನಕದಾಸರು, ಜಗನ್ನಾಥದಾಸರು ಮತ್ತು ವಿಜಯದಾಸರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು. 


ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ, ಗುರುತಿಸಲ್ಪಡುವ ಹಲವಾರು ಹಾಡುಗಾರರಲ್ಲಿ ಇವರುಗಳು ಸೇರಿದ್ದಾರೆ. ತಾನ್ ಸೇನ್ , ಕೇಸರಬಾಯಿ ಕೆರ್ಕರ್ , ರೋಶನ್ ಅರಾ ಬೇಗಂ , ಚೆಂಬೈ ವೈದ್ಯನಾಥ ಭಾಗವತರ್ , ಎಂ.ಎಸ್.ಸುಬ್ಬುಲಕ್ಷ್ಮಿ, ಗಂಗೂಬಾಯಿ ಹಾನಗಲ್, ಜಿ.ಎನ್.ಬಾಲಸುಬ್ರಮಣ್ಯಂ , ಡಾ. ಬಾಲಮುರಳಿ ಕೃಷ್ಣ, ಜಾನ್ ಬಿ . ಹಿಗ್ಗಿನ್ಸ್ , ಅರಿಯಾಕುಡಿ ರಾಮಾನುಜ ಅಯ್ಯಂಗಾರ್ , ಡಿ .ವಿ .ಪಲುಸ್ಕರ್ , ಅಬ್ದುಲ್ ಕರಿಂ ಖಾನ್ , ಅಬ್ದುಲ್ ವಾಹಿದ್ ಖಾನ್ , ಫೈಯಾಜ್ ಖಾನ್ , ಅಮೀರ್ ಖಾನ್ , ಬಡೇ ಗುಲಾಂ ಅಲಿ ಖಾನ್ , ಕುಮಾರ ಗಂಧರ್ವ , ನಾರಾಯಣರಾವ್ ವ್ಯಾಸ್ , ಮಲ್ಲಿಕಾರ್ಜುನ ಮನ್ಸೂರ್ , ಹಿರಿಯ ಮತ್ತು ಕಿರಿಯ ದಾಗರ್ ಸಹೋದರರು , ರಿತ್ವಿಕ್ ಸನ್ಯಾಲ್ , ಭೀಮಸೇನ್ ಜೋಷಿ , ಮೊಗು ಬಾಯಿ ಕುರ್ದಿಕರ್ , ಕಿಶೋರಿ ಅಮೋನ್ಕರ್ , ಪಂಡಿತ್ ಜಸರಾಜ್ , ಉಲ್ಲ್ಹಾಸ್ ಕಶಲ್ಕರ್ , ಸತ್ಯಶೀಲ್ ದೇಶಪಾಂಡೆ , ರಶೀದ್ ಖಾನ್ , ಮಧುಪ್ ಮುದ್ಗಲ್ , ವಿನಾಯಕರಾವ್ ಪಟವರ್ಧನ್ , ಮತ್ತು ಓಂಕಾರ್ ನಾಥ್ ಥಾಕುರ್ ಮುಂತಾದವರು.


ಭಾರತೀಯ ಸಿನೆಮಾ ರಂಗದಲ್ಲೂ ಸಂಗೀತ ಕ್ಷೇತ್ರಕ್ಕೆ ಕಾಣಿಕೆ ನೀಡಿದ ಫರಾನ್ ಅಖ್ತರ್, ಮೊಹಮ್ಮದ್‌ ರಫಿ, ಅನೂಪ್ ಸೀಳಿನ್, ಉದಿತ್ ನಾರಾಯಣ್, ಎಂ.ಎನ್.ಕೃಪಾಕರ್, ಲತಾ ಮಂಗೇಶ್ಕರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಾಸ್ಟರ್ ಕಿಶನ್, ಕೃಷ್ಣಕುಮಾರ್ ಕುನ್ನತ್, ಕೆ.ಜೆ.ಜೇಸುದಾಸ್, ಗುರುಕಿರಣ್, ಘಂಟಸಾಲ, ಪಿ.ಸುಶೀಲಾ, ಎಸ್.ಜಾನಕಿ, ವಾಣಿ ಜಯರಾಂ, ಎಲ್. ಆರ್. ಈಶ್ವರಿ, ಶ್ರೇಯಾ ಘೋಷಾಲ್, ಟಿ.ಎಮ್. ಸೌಂದರ್‍ರಾಜನ್, ಪಿ.ಕಾಳಿಂಗರಾಯರು, ಪಿ.ಬಿ.ಶ್ರೀನಿವಾಸ್, ಫಯಾಜ್ ಖಾನ್, ಮನ್ನಾ ಡೆ, ಮಹೇಂದ್ರ ಕಪೂರ್, ಮುಕೇಶ್ (ಗಾಯಕ), ರಾಜ್‌ಕುಮಾರ್, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ವಿಷ್ಣುವರ್ಧನ್, ಸಿ. ಅಶ್ವಥ್, ಶಂಕರ್ ಮಹಾದೇವನ್, ಶಿವಮೊಗ್ಗ ಸುಬ್ಬಣ್ಣ, ಶಿವರಾಜ್‍ಕುಮಾರ್, ಸೋನು ನಿಗಮ್ , ಹೇಮಂತ್ ಕುಮಾರ್ ಮುಂತಾದ ಗಣ್ಯಾತಿಗಣ್ಯರು ಇದ್ದಾರೆ. ದೂರದರ್ಶನ, ಬಾನುಲಿ, ಚಲನಚಿತ್ರಗಳು ಸಂಗೀತ ಕ್ಷೇತ್ರವನ್ನು ಉತ್ತುಂಗಕ್ಕೇರಿಸಿವೆ. ಈ ಸಂಗೀತ ದಿನದ ಉತ್ಸಾಹವು ಸಂಗೀತ ಪ್ರಿಯರ ಮನಸ್ಸಿನಲ್ಲಿ ಮೊಳಗುತ್ತಲೇ ಇರುತ್ತದೆ. ಆನ್ ಲೈನ್ ಸಂಗೀತ ಕಛೇರಿಗಳನ್ನು ಏರ್ಪಡಿಸಿ ಕೇಳಿ ಆನಂದಿಸಬಹುದಾಗಿದೆ. ಅದೆಷ್ಟೋ ಸಂಗೀತ ವಿದ್ವಾಂಸರು ಸಂಗೀತದಿಂದ ಮಳೆಯನ್ನೇ ಇಳೆಗೆ ಇಳಿಸಿದ್ದಾರೆ. ನಂದಿಹೋದ ದೀಪಗಳನ್ನು ಸಂಗೀತದಿಂದ ಪುನಃ ಹೊತ್ತಿಸಿದ ಸಾಧಕರಿದ್ದಾರೆ ಎನ್ನುತ್ತವೆ ಸಾಕ್ಷ್ಯಾಧಾರಗಳು.   


ಸಂಗೀತದ ಕುರಿತು ಕೆಲವು ಸ್ಪೂರ್ತಿದಾಯಕ ಉಲ್ಲೇಖಗಳು ಈ ಕೆಳಗಿನಂತಿವೆ. 


ವಿಶ್ವ ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ರವರು, "ನಾನು ಭೌತಶಾಸ್ತ್ರಜ್ಞನಲ್ಲದಿದ್ದರೆ, ನಾನು ಬಹುಶಃ ಸಂಗೀತಗಾರನಾಗಬಹುದು. ನಾನು ಆಗಾಗ್ಗೆ ಸಂಗೀತದಲ್ಲಿಯೇ ಯೋಚಿಸುತ್ತೇನೆ. ನಾನು ನನ್ನೆಲ್ಲಾ ಹಗಲುಗನಸುಗಳನ್ನು ಸಂಗೀತದಲ್ಲಿ ಕಾಣುತ್ತಾ ಬದುಕುತ್ತೇನೆ. ನನ್ನ ಜೀವನವನ್ನು ಸಂಗೀತದ ದೃಷ್ಟಿಯಿಂದ ನೋಡುತ್ತೇನೆ." ಎಂದಿದ್ದಾರೆ.  


ಜಗತ್ಪ್ರಸಿದ್ಧ ತತ್ವ ಜ್ಞಾನಿ ಪ್ಲೇಟೋರವರು, " ಸಂಗೀತವು ಬ್ರಹ್ಮಾಂಡಕ್ಕೆ ಒಂದು ಆತ್ಮವನ್ನು ನೀಡುತ್ತದೆ. ಮನಸ್ಸಿಗೆ ರೆಕ್ಕೆಗಳನ್ನು, ಕಲ್ಪನೆಗೆ ಹಾರಾಟ ಮತ್ತು ಎಲ್ಲದಕ್ಕೂ ಜೀವನ ನೀಡುತ್ತದೆ. " ಎಂದಿದ್ದಾರೆ.  


ಸಂಗೀತವನ್ನು ಯಾರೂ ಬೇಡ ಎನ್ನುವುದಿಲ್ಲ. ಹಾಗೇನಾದರೂ ಸಂಗೀತವನ್ನು ಆಸ್ವಾದಿಸದವನು ಪಶುವಿಗೆ ಸಮಾನನೇ ಸರಿ ಎನ್ನುತ್ತಾರೆ ಬಲ್ಲವರು. ಸಂಗೀತ ಹೃದಯವನ್ನು ಮುಟ್ಟುವ ಕಲೆ. ಸಪ್ತಸ್ವರಗಳ ಮಿಲನ ಸಂಗೀತ, ಸ-ರಿ-ಗ-ಮ-ಪ-ದ-ನಿ ಇವು ಈ ಏಳು ಸ್ವರಗಳು.


ಇವು ಬ್ರಹ್ಮಾಂಡದ ವಿಭಿನ್ನ ಶಕ್ತಿ ಸ್ವರೂಪಗಳಾಗಿವೆ. ಸಂಗೀತ ಕಲಾಸಾಗರದಲ್ಲಿ ಈಜುತಿರುವವರು ಅದೆಷ್ಟೋ ಮಹಾನುಭಾವರು. ಅವರೆಲ್ಲರಿಗೂ ನಮನಗಳನ್ನು ಸಲ್ಲಿಸೋಣ. ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತೆದೆ. ಆದರೆ ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ. ಸಂಗೀತವು ಮನೋಲ್ಲಾಸ ವನ್ನು ನೀಡಿ ಕಣಕಣದಲ್ಲೂ ಚೇತನವನ್ನುಂಟು ಮಾಡುತ್ತದೆ. ಸರ್ವರಿಗೂ ವಿಶ್ವ ಸಂಗೀತ ದಿನಾಚರಣೆಯ ಶುಭಾಶಯಗಳು. 

-ಕೆ.ಎನ್.ಚಿದಾನಂದ. ಸಾಹಿತಿ. ಹಾಸನ .


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top